ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆಯವರ ‘ಉಯ್ಯಾಲೆ’

ಹಳತುಹೊನ್ನು
Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ದ.ರಾ. ಬೇಂದ್ರೆ ಅವರ ‘ಉಯ್ಯಾಲೆ’ ಕವನ ಸಂಕಲನವು ಮೊದಲು ಪ್ರಕಟಗೊಂಡಿದ್ದು 1938ರಲ್ಲಿ. ಭೀಮಾಚಾರ್ಯ ಗೋವಿಂದಾಚಾರ್ಯ ಚಿಮ್ಮಲಗಿ ಅವರ ಹೈದರಾಬಾದಿನ ಗೌಳಿಗುಡ್ಡದ ‘ಕರ್ನಾಟಕ ಬುಕ್ ಡಿಪೋ’ ಮೂಲಕ ಪ್ರಕಾಶನಗೊಂಡ ಈ ಕೃತಿ, ಧಾರವಾಡದ ಶೇಷಗಿರಿ ಗೋವಿಂದರಾವ ಕುಲಕರ್ಣಿ ಅವರ ‘ಸಾಧನ ಪ್ರೆಸ್‌’ನಲ್ಲಿ ಮುದ್ರಣಗೊಂಡಿದೆ.

‘ಉಯ್ಯಾಲೆ’ ಸಂಕಲನವನ್ನು ಬೇಂದ್ರೆಯವರು ‘ಬಾಲ್ಯದಿಂದ ಇದುವರೆಗೂ ಸ್ನೇಹಿತರಾಗಿರುವ, ಸಹೃದಯರಾಗಿ ನನ್ನ ಕವನದ ಸಸಿಗೆ ನೀರೆರೆದ, ಕವಿಗಳಾದ ಗೆಳೆಯ, ಶ್ರೀಧರ ಶಿವರಾಮ ಖಾನೋಳಕರ ಇವರಿಗೆ ಅತ್ಯಂತ ಮಮತೆಯಿಂದ’ ಎಂದು ಅರ್ಪಣೆ ಮಾಡಿರುತ್ತಾರೆ. ಈ ಖಾನೋಳಕರರು ‘ಗೆಳೆಯರ ಗುಂಪು’ ಬಳಗದ ಮುಖ್ಯ ಸದಸ್ಯರಲ್ಲೊಬ್ಬರು.

120 ಪುಟಗಳ ಈ ಕೃತಿಯ ಬೆಲೆ ಒಂದು ರೂಪಾಯಿ. ಸಂಕಲನದ ಮೊದಲನೆಯ ಭಾಗ ‘ಉಯ್ಯಾಲೆ’ಯಲ್ಲಿ 31 ಅಷ್ಟಷಟ್ಪದಿಗಳು, 2ನೇಯ ಭಾಗ ‘ತರಂಗ’ದಲ್ಲಿ 23 ಸೀಸಪದ್ಯಗಳು, 3ನೆಯ ಭಾಗ ‘ಏರಿಳಿತ’ದಲ್ಲಿ 21 ಹಾಡುಗಳು ಹಾಗೂ 4ನೆಯ ಭಾಗ ‘ಕರುಳಿನ ವಚನ’ಗಳಲ್ಲಿ 23 ವಚನಗಳು ಎಂದು ಒಟ್ಟು 108 ಕವಿತೆಗಳಿವೆ. ‘ಅಷ್ಟಷಟ್ಪದಿ’ ಎನ್ನುವ ಕಾವ್ಯ ಪ್ರಕಾರವು ಇಂಗ್ಲಿಷ್ ಸಾಹಿತ್ಯದ ‘ಸಾನೆಟ್’ ಎನ್ನುವ ರೂಪಕ್ಕೆ ಕನ್ನಡದಲ್ಲಿ ಸಂವಾದಿಯಾದ ಆರಂಭಿಕ ಪದ. ಇದನ್ನು ಗೋವಿಂದ ಪೈ ಅವರು ‘ಚತುರ್ದಶಪದಿ’ ಎಂದೂ, ಬೇಂದ್ರೆಯವರು ‘ಉಯ್ಯಾಲೆ’ ಎಂದೂ, ಮಾಸ್ತಿಯವರು ‘ಸುನೀತ’ ಎಂದೂ, ಕುವೆಂಪು ಅವರು ‘ಕೃತ್ತಿಕೆ’ ಎಂದೂ ಕರೆದರು.

‘ಸಾನೆಟ್’ ಎಂದರೆ ಇಂಗ್ಲಿಷಿನಲ್ಲಿ 14 ಸಾಲಿನ ಪದ್ಯ. ಇದನ್ನು ‘ಒಂದು ಕ್ಷಣದ ಸ್ಮಾರಕ’ ಎಂದು ಕರೆಯಲಾಗಿದೆ. ಕನ್ನಡದಲ್ಲಿ ಕೀರ್ತನೆಕಾರರು 400 ವರ್ಷಗಳ ಹಿಂದೆಯೇ 14 ಸಾಲುಗಳ ಕೀರ್ತನೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ರಚಿಸಿರುತ್ತಾರೆ. ಆದರೆ ಕೀರ್ತನೆಗಳಲ್ಲಿ ಮೊದಲಿಗೆ ಎರಡು ಸಾಲಿನ ಪಲ್ಲವಿ, ಅನುಪಲ್ಲವಿ, ನಂತರ ನಾಲ್ಕು ಸಾಲಿನ ಮೂರು ಚರಣಗಳು ಸಾಮಾನ್ಯ. ಆದರೆ ಸಾನೆಟ್‌ನಲ್ಲಿ– ನಾಲ್ಕು ಸಾಲಿನ ಮೂರು ಚರಣ ಹಾಗೂ ಕೊನೆಯಲ್ಲಿ ಎರಡು ಸಾಲಿನ ದ್ವಿಪದಿಯು ಷೇಕ್ಸ್‌ಪಿಯರ್ ಶೈಲಿಯ ಸಾನೆಟ್‌ಗಳಲ್ಲಿಯೂ, ಎಂಟು ಸಾಲಿನ ಅಷ್ಟಪದಿ (ಆಕ್ಟೇವ್) ಹಾಗೂ ಆರು ಸಾಲಿನ ಷಟ್ಪದಿ (ಸೆಸ್ಟೆಟ್) ಪೆಟ್ರಾರ್ಕನ್ ಶೈಲಿಯ ಸಾನೆಟ್ಟುಗಳಲ್ಲಿಯೂ ಇರುತ್ತದೆ.

ನವೋದಯ ಹಾಗೂ ನಂತರದ ಕನ್ನಡ ಕವಿಗಳು ನೂರಾರು ಸಮರ್ಥ ಸಾನೆಟ್‌ಗಳನ್ನು ರಚಿಸಿರುತ್ತಾರೆ. ಅವರಲ್ಲಿ ಬೇಂದ್ರೆಯವರೂ ಒಬ್ಬರು. ‘ಉಯ್ಯಾಲೆ’ ಸಂಕಲನದ ಅಷ್ಟಷಟ್ಪದಿಗಳಲ್ಲಿ ‘ಅಷ್ಟಷಟ್ಪದಿ’, ‘ಗುಮ್ಮ’, ‘ಕವಿಶಿಷ್ಯ’, ‘ಅಲ್ಲಮಪ್ರಭು’ ಹಾಗೂ ‘ಗಾರುಡಿಗ’ ಇಂತಹ ಕನ್ನಡದ ಅತ್ಯುತ್ತಮ ಷಟ್ಪದಿಗಳಿವೆ. ‘ಗಾರುಡಿಗ’ ಕವಿತೆಯಂತೂ ಕನ್ನಡದ ಸರ್ವ ಶ್ರೇಷ್ಠ ಕವಿತೆಗಳಲ್ಲೊಂದು. ಇದರಲ್ಲಿ ಕವಿ– ಸೃಜನಶೀಲ ಪ್ರತಿಭೆಯ ಕವಿ ಹಾಗೂ ಕವಿತಾವಲಂಬಿಯಾದ ವಿಮರ್ಶಕ ಇವರುಗಳ ಬಗ್ಗೆ ಎಂಟು ಹಾಗೂ ಆರು ಸಾಲುಗಳಲ್ಲಿ ಮಾರ್ಮಿಕವಾಗಿ ನಿರೂಪಿಸಿದ್ದಾರೆ. ಕವಿತೆ ಎಂಬುದು–

ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;                                                                  
ತಾನೆ ತಾನೆ ಸಮರ್ಥಛಂದ; ದೃಗ್ಬಂಧ; ದಿ-                                                                                
ಗ್ಬಂಧ; ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ                                                                           
ಹೆದೆಗೆ ಹೂಡಿದ ಗರಿಯು ಗುರಿಯ ನಿರಿಯಿಟ್ಟು ತೂರಿ ಬರು–                                                                      
ತಿದೆ ಲೀಲೆಯಲನಾಯಾಸ...
ಎಲೆ ಹಾವೆ! ಹೊಟ್ಟೆ ಹೊಸೆಯುವ ಜಂತು,! ನಿನಗೆ ಕಿವಿ–                                                                                
ಯಿಲ್ಲ. ನಾಲಿಗೆಯೆರಡು; ಹಲ್ಲೊಳಿದೆ ವಿಷವು; ನಿ–                                                                          
ನ್ನನ್ನ ಗಾಳಿಯು; ನೀನು ಪಾತಾಳಕಿಳಿದರೂ                                                                                           
ಮತ್ತೆ ಕಾಡುವೆ; ರಸಿಕನೆನೆ ಚಂದ ತಲೆದೂಗಿ                                                                                     
ನಾಳೆ ಕಾರುವೆ ಗರಳ!...

ಸೃಜನಶೀಲ ಪ್ರತಿಭೆಯು ವಿಮರ್ಶನ ಪ್ರಜ್ಞೆಗಿಂತ ದೊಡ್ಡದು ಎನ್ನುವ ಅಂಶವನ್ನು ಬೇಂದ್ರೆಯವರು ಗರುಡ ಹಾಗೂ ಹಾವುಗಳ ರೂಪಕಗಳ ಮೂಲಕ ಮಾರ್ಮಿಕವಾಗಿ ಮನೋಜ್ಞವಾಗಿ ನಿರೂಪಿಸಿರುತ್ತಾರೆ. ಇನ್ನು ಡಿ.ವಿ. ಗುಂಡಪ್ಪನವರ ನಂತರ ಬೇಂದ್ರೆಯವರು ರಚಿಸಿದ ಒಳ್ಳೆಯ ಸೀಸಪದ್ಯಗಳು ಇಲ್ಲಿವೆ. ಸೀಸಪದ್ಯಗಳಲ್ಲಿ ಸಾನೆಟ್ಟಿಗಿಂತ ಎರಡು ಸಾಲು ಕಡಿಮೆ ಇರುತ್ತದೆ. ‘ರಸಿಕ’, ‘ಸಾಹಿತ್ಯ–ಕೇಳಿ’, ‘ಒಲವೆಂಬ ಹೊತ್ತಿಗೆ’, ‘ಆದಿಕವಿ’, ‘ತೊಗಲ ಚೀಲ’ – ಮುಂತಾದ ಪದ್ಯಗಳು ಇಲ್ಲಿ ಗಮನಾರ್ಹ. ‘ಲಕ್ಷ್ಯ’, ‘ಸುಖ ದುಃಖ’, ‘ಶ್ರಾವಣದ ಹಗಲು’, ‘ಗೀತಾಂಜಲಿಯನ್ನೋದಿ’, ‘ಪಂಪಾಯಾತ್ರೆ ಮತ್ತು ವೀ. ಸೀ’ ಇವು ಈ ಸಂಕಲನದ ಮಹತ್ವದ ಹಾಡುಗಳು.

ಕೊನೆಯ ಭಾಗದಲ್ಲಿರುವ ‘ಕರುಳಿನ ವಚನಗಳು’ 1924ರ ಹೊತ್ತಿಗೇನೇ ರಚಿತವಾಗಿ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಗೊಂಡಂಥವು. ಈ ವಚನಗಳನ್ನು ಕುರಿತು ಕವಿ ಮುನ್ನುಡಿಯಲ್ಲಿ ‘‘ಫ್ರೀ ವರ್ಸಿಗೆ ಸರಿಯಾಗುವ ಸ್ವಚ್ಛಂದ ಗೀತಪ್ರಕಾರವನ್ನು ಹುಟ್ಟಿಸಿಕೊಳ್ಳಲು, ನಾನು ಇ.ಸ. 1920-21ರಲ್ಲಿ ಯೋಚಿಸಿ ನೋವಿನ ಬೆಲೆ, ಹಿಗ್ಗಿನ ನೆಲೆ ಮೊದಲಾದ ವಚನಗಳನ್ನು ಬರೆದೆ... ಬೇರೆ ಕವಿಗಳೂ ವಚನ ಶೈಲಿಯನ್ನು ಹೊಸಕಾಲಕ್ಕೆ ತಕ್ಕ ಹಾಗೆ ಹೊಸ ರೀತಿಯಲ್ಲಿ ಉಪಯೋಗಿಸಿದ್ದಾರೆ’’ ಎಂದು ಹೇಳಿರುವಲ್ಲಿ ಕನ್ನಡದಲ್ಲಿ ಇಂಗ್ಲಿಷ್ ಗೀತಗಳಿಗೂ ಮೊದಲು ಹೇಗೆ ಬೇರೆ ಬೇರೆ ರೀತಿಯಲ್ಲಿ ಪ್ರಯೋಗಗಳು ನಡೆಯುತ್ತಿದ್ದವು ಹಾಗೂ ವಚನಗಳ ಅನನ್ಯತೆಯ ಸಾಧ್ಯತೆಗಳಿಗೆ ನಿದರ್ಶನವಾಗಿದೆ.

ಆ ಕಾಲದ ಹೊತ್ತಿಗೇ ತಮ್ಮ ಕವನಗಳನ್ನು ಪ್ರಕಟಿಸಿದ ‘ಜಯಕರ್ನಾಟಕ’, ‘ಪ್ರಬುದ್ಧ ಕರ್ನಾಟಕ’, ‘ವಿಶ್ವವಾಣಿ’, ‘ಕಥಾಕುಂಜ’, ಮುಂತಾದ ಪತ್ರಿಕೆಗಳನ್ನು ಬೇಂದ್ರೆಯವರು ಮುನ್ನುಡಿಯಲ್ಲಿ ಸ್ಮರಿಸಿಕೊಂಡಿದ್ದಾರೆ. 1931ರಲ್ಲಿ ಪೇಜಾವರ ಸದಾಶಿವ ರಾವ್ ಅವರು ತಾವು ಸಂಕಲಿಸಿದ ‘ಅಲರು’ ಎನ್ನುವ ಕಾವ್ಯಗುಚ್ಛದಲ್ಲಿ ‘ಉಯ್ಯಾಲೆ’ ಕವನಸಂಕಲನದ ‘ಅಂದು–ಇಂದು’ ಎನ್ನುವ ಕವಿತೆಯ ಸಾಲುಗಳನ್ನು ನಾಂದಿಯ ಸಾಲುಗಳನ್ನಾಗಿ ಬಳಸಿಕೊಂಡಿದ್ದಾರೆ. ಆಶಯ–ಆಕೃತಿಗಳ ಸಂಬಂಧ, ಕಾವ್ಯದ ನೂತನ ಪ್ರಯೋಗ, ಸೃಜನಶೀಲತೆಯ ಪ್ರಾತಿಭ್ಯ, ಕಾವ್ಯದ ಅನನ್ಯತೆ – ಎಲ್ಲ ನೆಲೆಗಳಿಂದಲೂ ಬೇಂದ್ರೆಯವರ ‘ಉಯ್ಯಾಲೆ’ ಕನ್ನಡದ ಮಹತ್ವದ ಕವಿತಾಸಂಕಲನಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT