ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕರಿ ತಿನಿಸು ಮಾಡಿ, ರುಚಿ ನೋಡಿ

ನಳಪಾಕ
Last Updated 20 ಮೇ 2016, 19:41 IST
ಅಕ್ಷರ ಗಾತ್ರ

ತಮಿಳುನಾಡಿನ ಮದುರೆಯಲ್ಲಿ ಜನಿಸಿದ ಪಿಚ್ಚೈಮಣಿ ಭೂಪೇಶ್‌ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿದರು. 1997ರಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಕ್ಯಾಟರಿಂಗ್‌ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ಚೆನ್ನೈನಲ್ಲಿಯೇ ಹಾಟ್‌ ಬ್ರೆಡ್ಸ್‌ ಕ್ಯಾಟರಿಂಗ್‌ ಇಂಡಸ್ಟ್ರಿಯಲ್ಲಿ ಕೆಲಸ ನಿರ್ವಹಿಸಿದರು.

ಇದಾದ ನಂತರ ಅಮೆರಿಕಾದಲ್ಲಿ ಕಾರ್ನಿವಲ್‌ ಕ್ರ್ಯೂಸ್‌ ಲೈನ್ಸ್‌ನ ಹೋಟೆಲ್‌ನಲ್ಲಿ ಪೇಸ್ಟ್ರೀಸ್‌ ಶೆಫ್‌ಗಳಿಗೆ ಮುಖ್ಯಸ್ಥರಾದರು. ಪೇಸ್ಟ್ರೀಸ್‌, ಬೇಕರಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸುವ ಕೆಲಸವನ್ನೂ ಇವರು ಮಾಡುತ್ತಿದ್ದರು. ಅಲ್ಲಿ 11ವರ್ಷ ಉದ್ಯೋಗ ಮಾಡಿದ ಭೂಪೇಶ್‌ ನಂತರ ಯುರೋಪಿನ ಅನೇಕ ದೇಶಗಳಲ್ಲಿ ಮುಖ್ಯ ಬಾಣಸಿಗರಾಗಿಯೂ ಕೆಲಸ ಮಾಡಿದರು.

ತವರಿಗೆ ಮರಳಿದ ಮೇಲೆ ‘ದ ಫ್ರೆಂಚ್‌ ಲೂಫ್‌’ನಲ್ಲಿ ಕಾರ್ಪೊರೇಟ್‌ ಶೆಫ್‌ ಆಗಿ ಕೆಲಸ ನಿವರ್ಹಿಸುತ್ತಿದ್ದಾರೆ. ಆರು ವರ್ಷಗಳಿಂದ ಫ್ರೆಂಚ್‌ ಲೂಫ್‌ನಲ್ಲಿ ಬಾಣಸಿಗರಾಗಿ ವಿವಿಧ ಬಗೆಯ ಕೇಕ್‌ಗಳು, ಕಾಫಿ, ಟೀ, ಸ್ಯಾಂಡ್‌ವಿಚ್‌, ಪಿಜ್ಜಾ, ಬರ್ಗರ್‌ ಹಾಗೂ ಪಾಸ್ತಾಗಳ ಸವಿರುಚಿಯನ್ನು ಉಣಬಡಿಸುತ್ತಿದ್ದಾರೆ.

‘ನಮ್ಮಲ್ಲಿ ಯಾವುದೇ ರಾಸಾಯನಿಕ ಬಳಸದೇ ಕೇಕ್‌ ಹಾಗೂ ಬೇಕರಿ ತಿನಿಸುಗಳನ್ನು ಮಾಡಲಾಗುತ್ತದೆ. ಮಕ್ಕಳಿಗಾಗಿ ಹಾಲಿನ ಬ್ರೆಡ್‌, ಯುವಕರಿಗೆ ಗೋಧಿ, ಮಲ್ಟಿಗ್ರೇನ್‌ ಬ್ರೆಡ್‌ ತಯಾರಿಸಲಾಗುತ್ತದೆ. ಮನೆಯಲ್ಲೂ ಕೆಲವು ಕೇಕ್‌ಗಳನ್ನು ಮಾಡಿ ಸವಿಯಬಹುದು.

ಕೇಕ್‌ ಮಾಡಲು ಬಯಸುವವರಿಗೊಂದು ಕಿವಿಮಾತು; ನೀವು ಯಾವುದೇ ಕೇಕ್‌ ಮಾಡಲು ಪ್ರಯತ್ನಿಸಿದರೂ ಕ್ರಮಬದ್ಧವಾಗಿ ಮಾಡಿ.
ಉದಾಹರಣೆಗೆ ಯಾವುದೇ ಕರ್ರಿ ಮಾಡುವಾಗ ಉಪ್ಪು, ಖಾರ ಸರಿಯಾಗಿ ಹಾಕಿದರೆ ರುಚಿ ಚೆನ್ನಾಗಿರುತ್ತದೆ, ಹಾಗೆಯೇ ಕೇಕ್‌ ಮಾಡುವಾಗಲೂ ಪ್ರತಿಯೊಂದು ಹಂತದಲ್ಲೂ ಪ್ರಮಾಣಬದ್ಧವಾಗಿ ಮಾಡಿದರೆ ಫಲಿತಾಂಶವೂ ಚೆನ್ನಾಗಿರುತ್ತದೆ.

ಕೇಕ್‌ ಅಲ್ಲದೇ ಬೇಕರಿ ತಿನಿಸುಗಳಿಗೂ ಇದು ಅನ್ವಯಿಸುತ್ತದೆ. ಸಾಮಾನ್ಯವಾಗಿ ಕೇಕಿಗೆ ಮೊಟ್ಟೆ ಬಳಸುವುದರಿಂದ ಮೃದು ಆಗುತ್ತದೆ. ಮೊಟ್ಟೆ ರಹಿತ ಕೇಕ್‌ ತಿನ್ನುವವರು ಹಾಲಿನ ಪುಡಿ ಮತ್ತು ಮಿಲ್ಕ್‌ ಮೇಡ್‌ ಬಳಸಿದರೆ ಕೇಕ್‌ ಮೆದುವಾಗಿರುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಭೂಪೇಶ್‌.

*
ತರಕಾರಿ ಮತ್ತು ಚೀಸ್ ಸ್ಯಾಂಡ್‌ವಿಚ್‌
ಸಾಮಗ್ರಿ:
ಸ್ಯಾಂಡ್‌ವಿಚ್‌ ಬ್ರೆಡ್‌ ಪೀಸ್‌ 2, ಬೆಣ್ಣೆ ಸ್ವಲ್ಪ, ಚೀಸ್‌ ಸ್ವಲ್ಪ, ಟೊಮೆಟೊ ಒಂದು, ಕಾಳು ಮೆಣಸು ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು ಸೌತೇಕಾಯಿ ತುಣುಕು.

ವಿಧಾನ: ಬ್ರೆಡ್‌ನ ಒಂದು ಭಾಗಕ್ಕೆ ಚೀಸ್‌ ಹಚ್ಚಿ, ಮತ್ತೊಂದು ಬ್ರೆಡ್ ತುಣುಕಿನ ಮೇಲೆ ತರಕಾರಿಗಳನ್ನ ಇಟ್ಟು, ಉಪ್ಪು ಮತ್ತು ಪೆಪ್ಪರ್‌ಅನ್ನು ಹಾಕಿ, ಅದರ ಮೇಲೆ ಒಂದು ಚೀಸ್ ತುಣುಕು ಇಟ್ಟು ಇನ್ನೊಂದು ಸ್ಲೈಸ್ ಬ್ರೆಡ್ ನಿಂದ ಅದನ್ನು ಮುಚ್ಚಿ, ಎರಡೂ ಬದಿಗೆ ಬೆಣ್ಣೆಯನ್ನು ಹಚ್ಚಿ, ಅದು ಕಂದು ಬಣ್ಣಕ್ಕೆ ಬರುವವರೆಗೂ ಗ್ರಿಲ್ ಮಾಡಿ. ಈಗ ವೆಜ್‌ ಮತ್ತು ಚೀಸ್ ಸ್ಯಾಂಡ್‌ವಿಚ್‌ ಸಿದ್ಧವಾದಂತೆ.

*
ಸ್ಪಾಂಜ್ ಕೇಕ್ಸಾ
ಮಗ್ರಿ: ಮೈದಾ 200 ಗ್ರಾಂ, ಸಕ್ಕರೆ ಪುಡಿ 200 ಗ್ರಾಂ, ವನಸ್ಪತಿ 200ಗ್ರಾಂ, ಬೇಕಿಂಗ್ ಪುಡಿ ಕಾಲು ಟೀ ಚಮಚ, ಮೊಟ್ಟೆ 4, ಹಾಲು 100 ಎಂ.ಎಲ್‌, ವೆನಿಲ್ಲಾ ಎಸೆನ್ಸ್ ಕೆಲವು ಹನಿಗಳು.

ವಿಧಾನ: ಮೈದಾ ಹಿಟ್ಟು ಮತ್ತು ಬೇಕಿಂಗ್ ಪುಡಿಯನ್ನು ಜೊತೆಯಲ್ಲಿ ಚೆನ್ನಾಗಿ ಜರಡಿ ಹಿಡಿಯಿರಿ. ಮೊಟ್ಟೆ ಹಾಗೂ ವೆನಿಲ್ಲಾ ಎಸೆನ್ಸ್‌ಅನ್ನು ಚೆನ್ನಾಗಿ ಕಲೆಸಿಕೊಳ್ಳಿ. ವನಸ್ಪತಿಯನ್ನು ಸಾಟಿಮಾಡಿ ಮಾಡಿ (ಕ್ರೀಮಿಂಗ್) ನಂತರ ಸ್ವಲ್ಪ ಸ್ವಲ ಪ್ರಮಾಣದಲ್ಲಿ ಸಕ್ಕರೆ ಪುಡಿಯನ್ನು ಬೆರೆಸಿ ಸಾಟಿಮಾಡಿ, ತದನಂತರ  ಕಲೆಸಿದ ಮೊಟ್ಟೆಯನ್ನು ಸ್ವಲ್ಪ ಸ್ವಲ್ಪವಾಗಿ ಸಾಟಿಯೊಳಗೆ ಸೇರಿಸಿ ಚೆನ್ನಾಗಿ ಬೆರಸಿ. ನಂತರ ಇದ್ದಕೆ ಮೈದಾ ಹಿಟ್ಟನ್ನು ನಿಧಾನವಾಗಿ ಬೆರೆಸಿ ತಕ್ಕಷ್ಟು ಹಾಲನ್ನು ಸೇರಿಸಿ.

ಹದವಾದ ಹಿಟ್ಟು ಸೌಟಿನಲ್ಲಿ ಹಿಡಿದರೆ ಕೆಳಗೆ ಬೀಳುವ ತನಕ ಹಾಲು ಬೆರಸಬೇಕು. ಹೀಗೆ ಬೆರೆಸಿದ ಮಿಶ್ರಣವನ್ನು  ಸ್ವಲ್ಪ ವನಸ್ಪತಿ ಸವರಿ ಬಟರ್ ಪೇಪರ್ ಹಾಕಿದ ಕೇಕ್ ತಟ್ಟೆಯಲ್ಲಿ ಹಾಕಿ. ಮೈಕ್ರೋ ಓವನ್‌ನಲ್ಲಿ  180 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ 25 ರಿಂದ 30 ನಿಮಿಷಗಳ ಕಾಲ ಬೇಯಿಸಿ.

ನಂತರ ಕೇಕ್‌ ಸರಿಯಾಗಿ ಬೆಂದಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಲು ನಿಧಾನವಾಗಿ ಮುಟ್ಟಿ ನೋಡಿ, ಸ್ಪ್ರಿಂಗ್‌ ರೀತಿ ಒಳಗೆ ಹೋಗಿ, ಮೇಲೆ ಬಂದರೆ ಕೇಕ್‌ ಸಿದ್ಧವಾಗಿದೆ ಎಂದರ್ಥ. ಸಂಪೂರ್ಣವಾಗಿ ತಣ್ಣಗಾದ ನಂತರ ಸ್ಪಾಂಜ್ ಕೇಕ್‌ನ್ನು ಕತ್ತರಿಸಿ ಸೇವಿಸಿ.

*
ಚಾಕೊಲೇಟ್ ಚಿಪ್ ಕುಕ್ಕೀಸ್‌
ಸಾಮಗ್ರಿ:
ಬೆಣ್ಣೆ 200 ಗ್ರಾಂ, ಹಿಟ್ಟು 270 ಗ್ರಾಂ, ಮೊಟ್ಟೆ 1, ಸಕ್ಕರೆ 120 ಗ್ರಾಂ, ಬ್ರೌನ್‌ ಶುಗರ್‌ 100 ಗ್ರಾಂ, ಬೇಕಿಂಗ್‌ ಪೌಡರ್‌ ಸ್ವಲ್ಪ, ಚಾಕೊ ಚಿಪ್ಸ್‌ 80 ಗ್ರಾಂ, ಗೋಡಂಬಿ 50 ಗ್ರಾಂ.

ವಿಧಾನ: ಬೆಣ್ಣೆ , ಸಕ್ಕರೆ ಹಾಗೂ ಬ್ರೌನ್ ಶುಗರ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅದಕ್ಕೆ ನಿಧಾನವಾಗಿ ಮೊಟ್ಟೆಯನ್ನು ಸೇರಿಸುತ್ತ ಮತ್ತೆ ಮಿಶ್ರಣ ಮಾಡುವುದನ್ನು ಮುಂದುವರಿಸಿ, ನಂತರ ಹಿಟ್ಟು, ಬೇಕಿಂಗ್ ಪೌಡರ್, ಗೋಡಂಬಿ ತುಣುಕು ಮತ್ತು ಚಾಕೊ ಚಿಪ್ಸ್ ಗಳನ್ನು ಹಾಕಿ ಒಟ್ಟಿಗೆ ಮಿಶ್ರಣ ಮಾಡಿ.

​ಕೊನೆಯಲ್ಲಿ ಹಿಟ್ಟಿನ ಮಿಶ್ರಣದಲ್ಲಿ ಅದನ್ನು ಮಡಚಿ, ಅವುಗಳನ್ನು ಒಂದು ಆಕಾರಕ್ಕೆ ರೋಲ್ ಮಾಡಿ ಮತ್ತು ಟ್ರೇನಲ್ಲಿ ಇರಿಸಿ.15 ರಿಂದ 18 ನಿಮಿಷಗಳ ಕಾಲ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಓವೆನ್‌ನಲ್ಲಿ ಬೇಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT