ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಗಿದೆ ಜನಸ್ನೇಹಿ ಸಮೂಹ ಸಾರಿಗೆ

ಬದಲಾವಣೆ ಬೇಕಾಗಿದೆ
Last Updated 2 ಜುಲೈ 2015, 19:26 IST
ಅಕ್ಷರ ಗಾತ್ರ

ಅಂಕೆ ತಪ್ಪಿ ಬೆಳೆದಿರುವ ಬೆಂಗಳೂರು ನಗರ ಈಗ ಬಲು ಸಂಕಷ್ಟದ ಸನ್ನಿವೇಶ ಎದುರಿಸುತ್ತಿದೆ. ಕಳೆದ ಒಂದು ದಶಕದಲ್ಲಿ ಜನ ಮತ್ತು ವಾಹನಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದ್ದು ಅದರ ಫಲವನ್ನು ನಾವೀಗ ಉಣ್ಣಬೇಕಿದೆ. ಸಮರ್ಪಕ ಯೋಜನೆ ಹಾಕಿಕೊಳ್ಳಲು ಎಡವಿದ್ದರಿಂದ ಮೂಲ ಸೌಕರ್ಯಗಳ ವಿಷಯದಲ್ಲಿ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ.

ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಗರದಲ್ಲಿ ತುಂಬಿರುವ ಜನ ಮತ್ತು ವಾಹನಗಳ ಅಗತ್ಯ ಪೂರೈಸಲು ಎಷ್ಟು ಸೌಕರ್ಯ ಕಲ್ಪಿಸಿದರೂ ಸಾಲುತ್ತಿಲ್ಲ. ರಸ್ತೆಗಳ ಸಾಮರ್ಥ್ಯಕ್ಕೂ ಜನರ ಅಗತ್ಯಗಳಿಗೂ ಹೊಂದಾಣಿಕೆ ಆಗುತ್ತಿಲ್ಲ. ವಾಹನಗಳ ಸಂಖ್ಯೆ 50 ಲಕ್ಷ ದಾಟಿದ್ದರೆ, ರಸ್ತೆಗಳ ಜಾಲಕ್ಕೆ ಅದರ ಅರ್ಧದಷ್ಟು ವಾಹನಗಳ ಧಾರಣಶಕ್ತಿ ಇಲ್ಲದಾಗಿದೆ. ಆದ್ದರಿಂದಲೇ ನಗರದ ಸಂಚಾರ ವೇಗ ಗಂಟೆಗೆ 10 ಕಿ.ಮೀ.ಗಿಂತಲೂ ಕಡಿಮೆ ಪ್ರಮಾಣಕ್ಕೆ ಇಳಿದಿದೆ.

ತುರ್ತು ಸೇವೆ ನೀಡಬೇಕಾದ ಆಂಬುಲೆನ್ಸ್‌ಗಳು ಇತ್ತೀಚಿನ ಕೆಲವು ವರ್ಷಗಳಲ್ಲಿ ದಟ್ಟಣೆಯೊಳಗೆ ಸಿಲುಕಿ, ರಸ್ತೆ ಮಧ್ಯೆ ನಿಂತ ವಾಹನಗಳಲ್ಲಿ ರೋಗಿಗಳು ನರಳುವುದು ಸಾಮಾನ್ಯವಾಗಿದೆ. ನಾವೇ ಸೃಷ್ಟಿಸಿಕೊಂಡ ಸೌಲಭ್ಯಗಳು ನಮ್ಮ ಜೀವಕ್ಕೆ ಹೇಗೆ ಮಾರಕವಾಗುತ್ತಿವೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ರೋಗಿಗಳನ್ನು ತುರ್ತಾಗಿ ಆಸ್ಪತ್ರೆ ತಲುಪಿಸುವಂತೆ ಮಾಡಲು ನಿಮ್ಹಾನ್ಸ್‌ನಂತಹ ಸಂಸ್ಥೆ ಹೆಲಿಕಾಪ್ಟರ್‌ ಬಳಕೆ ಮಾಡುವ ಮಾತುಗಳನ್ನಾಡುತ್ತಿದೆ. ಅಂದರೆ, ರಸ್ತೆಗಳ ಸ್ಥಿತಿ ಎಲ್ಲಿಗೆ ಹೋಗಿ ತಲುಪಿದೆ ಎಂಬುದನ್ನು ಊಹಿಸಬಹುದು.

ಸದಾ ಏರುಗತಿಯಲ್ಲಿ ಸಾಗಿರುವ ಸಂಚಾರದಟ್ಟಣೆ, ಹೆಚ್ಚುತ್ತಿರುವ ರಸ್ತೆ ಅಪಘಾತ, ಅಪಾಯದ ಮಟ್ಟ ತಲುಪಿದ ವಾಯು ಮತ್ತು ಶಬ್ದ ಮಾಲಿನ್ಯ ಮೊದಲಾದ ಸಮಸ್ಯೆಗಳು ಖಾಸಗಿ ವಾಹನಗಳ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಿ ಸಮೂಹ ಸಾರಿಗೆ ವ್ಯವಸ್ಥೆ ಹೆಚ್ಚಿಸಬೇಕು ಎಂಬುದರತ್ತ ಬೊಟ್ಟು ಮಾಡುತ್ತವೆ.
ಒಂದು ವಿಶ್ವದರ್ಜೆ ನಗರಕ್ಕೆ ಇರಬೇಕಾದಂತಹ ರಸ್ತೆ ಸಂಪರ್ಕ ಜಾಲ ನಮ್ಮ ಬೆಂಗಳೂರಿಗೆ ಇಲ್ಲ. ನಗರದ ಬಹುತೇಕ ಮುಖ್ಯ ರಸ್ತೆಗಳು ನಾಲ್ಕು ಲೇನ್‌ಗಳನ್ನಷ್ಟೇ ಹೊಂದಿದ್ದು, ವಿಸ್ತರಣೆಗೆ ಹೆಚ್ಚಿನ ಅವಕಾಶ ಇಲ್ಲ. ಈ ಕಾರಣದಿಂದ ಲಭ್ಯವಿರುವ ರಸ್ತೆ ಸೌಲಭ್ಯವನ್ನೇ ನ್ಯಾಯಯುತವಾಗಿ ಬಳಕೆ ಮಾಡಿಕೊಳ್ಳಬೇಕಿದೆ.

ಹೀಗಾಗಿ ಸಂಚಾರ ವ್ಯವಸ್ಥೆ ನಿರ್ವಹಣೆ ಮತ್ತು ಚತುರ ಸಾರಿಗೆ ವ್ಯವಸ್ಥೆಗಳ ಮೂಲಕ ರಸ್ತೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ.
ನಗರದ ಸಂಚಾರದಟ್ಟಣೆ ಕಡಿಮೆ ಮಾಡುವ ಹೊಣೆ ರಾಜ್ಯ ಸರ್ಕಾರದ ಜತೆ, ಜತೆಗೆ ಸ್ಥಳೀಯ ಆಡಳಿತವಾದ ಬಿಬಿಎಂಪಿ ಮೇಲೂ ಇದೆ. ಸಂಚಾರದಟ್ಟಣೆ ಸಮಸ್ಯೆ ಹೋಗಲಾಡಿಸಲು ನಗರದಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳು ಇವು:
* ಬಸ್‌ಗಳಿಗಾಗಿಯೇ ಮೀಸಲಾದ ಪ್ರತ್ಯೇಕ ಲೇನ್‌ಗಳ ವ್ಯವಸ್ಥೆ (ಬಸ್‌ ಕ್ಷಿಪ್ರ ಸಾರಿಗೆ–ಬಿಎಸ್‌ಟಿ) ಮಾಡಬೇಕು. ಬಸ್‌ಗಳ ಓಡಾಟದ ಸಂಖ್ಯೆಯನ್ನು ಸಾಧ್ಯವಾದ ಮಟ್ಟಿಗೆ ಹೆಚ್ಚಿಸಬೇಕು. ಬಸ್‌ ಪ್ರಯಾಣ ಸುರಕ್ಷಿತ, ಸಮಯಪಾಲಕ ಮತ್ತು ವಿಶ್ವಾಸಾರ್ಹ ಎಂಬುದು ಸಾರ್ವಜನಿಕರಿಗೆ ಮನದಟ್ಟು ಆಗುವಂತೆ ಅವುಗಳು ಕಾರ್ಯಾಚರಣೆ ನಡೆಸಬೇಕು.

* ಮೆಟ್ರೊ ರೈಲುಗಳ ಓಡಾಟಕ್ಕೆ ಪೂರಕವಾಗಿ ಬಸ್‌ ಹಾಗೂ ಇತರ ಸಮೂಹ ಸಾರಿಗೆಗಳ ಮಾರ್ಗ ರೂಪಿಸಬೇಕು. ಈ ಸಾರಿಗೆ ವ್ಯವಸ್ಥೆಗಳು ಒಂದಕ್ಕೊಂದು ಸ್ಪರ್ಧೆಗಿಳಿಯುವ ಅಗತ್ಯವಿಲ್ಲ. ಪೂರಕವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಗರಿಷ್ಠ ಸೇವೆ ಒದಗಿಸಬೇಕು.

* ತುಮಕೂರು, ಹೊಸೂರು ಮತ್ತು ರಾಮನಗರಗಳಿಗೆ ಉಪನಗರ ರೈಲು ಸಾರಿಗೆ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ತರಬೇಕು.

* ಪಾದಚಾರಿಗಳಿಗೆ ಗುಣಮಟ್ಟದ, ಸುರಕ್ಷಿತ ಹಾಗೂ ಬಳಕೆಗೆ ಯೋಗ್ಯವಾದ ಫುಟ್‌ಪಾತ್‌ಗಳ ವ್ಯವಸ್ಥೆ ಮಾಡಬೇಕು. ರಸ್ತೆ ದಾಟುವ ಸ್ಥಳಗಳಲ್ಲಿ ಪಾದಚಾರಿಗಳ ಸುರಕ್ಷತೆಯೇ ಮೊದಲ ಆದ್ಯತೆ ಆಗಬೇಕು. ನಗರದ ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪಾದಚಾರಿಗಳಿಗೆ ಮಾತ್ರ ಅವುಗಳನ್ನು ಮೀಸಲಿಡಬೇಕು.

* ಹೊಸ ರಸ್ತೆಗಳನ್ನು ನಿರ್ಮಾಣ ಮಾಡುವಾಗ ನಮ್ಮ ನೀತಿ ಹೊರಗಿನಿಂದ ಒಳಕ್ಕೆ (‘ಔಟ್‌ಸೈಡ್‌ ಇನ್‌’) ಎಂದಾಗಿರಬೇಕೇ ಹೊರತು ಒಳಗಿನಿಂದ ಹೊರಕ್ಕೆ (‘ಇನ್‌ಸೈಡ್‌ ಔಟ್‌’) ಎಂದಲ್ಲ. ‘ಔಟ್‌ಸೈಡ್‌ ಇನ್‌’ ಎಂದರೆ ಮೊದಲು ಫುಟ್‌ಪಾತ್‌, ಬಳಿಕ ಸೈಕಲ್‌ ಲೇನ್‌ಗೆ ಅವಕಾಶ ಕಲ್ಪಿಸಿ ಮಿಕ್ಕ ಜಾಗವನ್ನು ವಾಹನಗಳ ಓಡಾಟಕ್ಕೆ ಮೀಸಲಿಡುವುದು. ಆದರೆ, ಬೆಂಗಳೂರಿನಲ್ಲಿ ಪಾಲನೆ ಆಗುತ್ತಿರುವುದು ‘ಇನ್‌ಸೈಡ್‌ ಔಟ್‌’ ನೀತಿ. ಈ ನೀತಿಯಂತೆ ರಸ್ತೆಯಲ್ಲಿ ಲಭ್ಯವಿರುವ ಬಹುತೇಕ ಜಾಗವನ್ನು ವಾಹನಗಳ ಸಂಚಾರಕ್ಕೆ ಮೀಸಲಿಟ್ಟು, ಮಿಕ್ಕ ಸ್ವಲ್ಪ ಜಾಗದಲ್ಲಿ, ಅದೂ ಲಭ್ಯವಿದ್ದ ಕಡೆ ಮಾತ್ರ, ಫುಟ್‌ಪಾತ್‌ ನಿರ್ಮಾಣ ಮಾಡಲಾಗಿದೆ. ಟೆಂಡರ್‌ ಶ್ಯೂರ್‌ ರಸ್ತೆಗಳ ಮೂಲಕ ಆ ಪರಿಕಲ್ಪನೆ ಬದಲಾಗುತ್ತಿರುವ ಆಶಾವಾದ ವ್ಯಕ್ತವಾಗಿದೆ.

* ಜನ ಸಂಚಾರವೇ ಸಾರಿಗೆ ನೀತಿಯ ಕೇಂದ್ರಬಿಂದು ಆಗಬೇಕೇ ಹೊರತು ವಾಹನ ಸಂಚಾರವಲ್ಲ. ಆದರೆ, ಸದ್ಯದ ನೀತಿಗಳು ತದ್ವಿರುದ್ಧವಾಗಿವೆ.

* ನಿಲುಗಡೆಗೆ ಸ್ಥಳಾವಕಾಶ ಇರುವುದನ್ನು ಖಾತರಿ ಮಾಡಿಕೊಳ್ಳದ ಹೊರತು ಹೊಸ ವಾಹನಗಳ ಖರೀದಿಗೆ ಅವಕಾಶ ಕೊಡಲೇಬಾರದು.

* ನಗರದ ಅಂಚಿನ ಮನೆಗಳಿಗೆ ಹತ್ತಿರದ ಬಸ್‌ ಇಲ್ಲವೆ ಮೆಟ್ರೊ ನಿಲ್ದಾಣಗಳಿಂದ ಸಾರಿಗೆ ಸಂಪರ್ಕದ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು.

* ನಗರದ ಎಲ್ಲ ಪ್ರಮುಖ ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಬೇಕು.

* ಉಪನಗರಗಳಿಂದ ಕೇಂದ್ರ ವಾಣಿಜ್ಯ ಪ್ರದೇಶಕ್ಕೆ (ಸಿಬಿಡಿ) ಸಮೂಹ ಸಾರಿಗೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಜನ ಉಪನಗರದ ಬಸ್‌ ನಿಲ್ದಾಣಗಳಲ್ಲೇ ತಮ್ಮ ವಾಹನ ನಿಲುಗಡೆ ಮಾಡಿ, ಬಸ್‌ನಲ್ಲಿ ಓಡಾಡುವಂತಹ ವ್ಯವಸ್ಥೆ ಮಾಡಬೇಕು.

* ಸಮೂಹ ಸಾರಿಗೆ ಸೌಲಭ್ಯ ಒದಗಿಸಿದ ಮೇಲೂ ಜನ ಖಾಸಗಿ ವಾಹನಗಳನ್ನೇ ಅವಲಂಬಿಸಿದರೆ, ಅಂತಹ ವಾಹನಗಳಿಗೆ ಗರಿಷ್ಠ ಪ್ರಮಾಣದ ಶುಲ್ಕ ವಿಧಿಸಬೇಕು. ಸಾಧ್ಯವಿದ್ದ ಕಡೆಗಳಲ್ಲಿ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಗಳ ವ್ಯವಸ್ಥೆ ಮಾಡಬೇಕು. ರಸ್ತೆ ಮತ್ತು ಪಾರ್ಕಿಂಗ್‌ ಸಮಸ್ಯೆಗೆ ಸಮೂಹ ಸಾರಿಗೆಯೇ ಶಾಶ್ವತ ಪರಿಹಾರ ಎಂಬುದನ್ನು ಗಮನಿಸಬೇಕು.

* ಖಾಸಗಿ ವಾಹನಗಳ ಸಂಖ್ಯೆ ಇದೇ ಪ್ರಮಾಣದಲ್ಲಿ ಏರುತ್ತಾ ಹೋದರೆ ನಗರದಲ್ಲಿ ಎಷ್ಟು ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಿದರೂ ಸಂಚಾರದಟ್ಟಣೆ ಕಡಿಮೆ ಆಗುವುದಿಲ್ಲ. ರೆಸಿಡೆನ್ಸಿ ರಸ್ತೆ, ವಿಮಾನ ನಿಲ್ದಾಣ ರಸ್ತೆ ಮತ್ತು ಹೊಸೂರು ರಸ್ತೆ ಮೇಲ್ಸೇತುವೆಗಳಲ್ಲಿ ಓಡಾಡಿದವರು ಈ ಮಾತಿನ ಮರ್ಮವನ್ನು ಚೆನ್ನಾಗಿ ತಿಳಿಯಬಲ್ಲರು.

* ಸುಸ್ಥಿರ ಸಾರಿಗೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ನಡಿಗೆ, ಸೈಕಲ್, ಬಸ್‌ ಮತ್ತು ಮೆಟ್ರೊಗಳ  ಬಳಕೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಬಹು ವಿಧದ, ಒಂದಕ್ಕೊಂದು ಪೂರಕವಾದ, ತಂತ್ರಜ್ಞಾನ ಆಧಾರಿತ ವೇಗದ ಸಾರಿಗೆ ವ್ಯವಸ್ಥೆ ರೂಪಿಸಿದರೆ, ಖಾಸಗಿ ವಾಹನಗಳ ಬಳಕೆ ತಂತಾನೆ ಕಡಿಮೆಯಾಗಿ ದಟ್ಟಣೆ ತಗ್ಗುತ್ತದೆ.

* ಪ್ರಯಾಣದ ಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಮೇಲಿಂದ ಮೇಲೆ ಟಿಕೆಟ್‌ ತೆಗೆಸುವ ಕಿರಿಕಿರಿ ತಪ್ಪಿಸಲು ಸ್ಮಾರ್ಟ್‌ ಕಾರ್ಡ್‌ ಸೌಲಭ್ಯ ಒದಗಿಸಬೇಕು. ಸರ್ಕಾರದ ನೀತಿ, ಮೂಲಸೌಲಭ್ಯ ಒದಗಿಸುವ ವಿಧಾನ, ನಿಗದಿಪಡಿಸುವ ಪ್ರಯಾಣದರ ಮೊದಲಾದವುಗಳು ಖಾಸಗಿ ವಾಹನಗಳ ಬಳಕೆಯನ್ನು ಉತ್ತೇಜಿಸುವಂತೆ ಇರಬಾರದು.

* ನಗರದ ಪ್ರಮುಖ ರಸ್ತೆಗಳು, ಉಪರಸ್ತೆಗಳು ಹಾಗೂ ಗಲ್ಲಿ ರಸ್ತೆಗಳು ಅಡೆತಡೆ ಇಲ್ಲದ ಸಂಪರ್ಕ ಹೊಂದಿರಬೇಕು. ನಗರದ ಎಲ್ಲ ‘ಮಿಸ್ಸಿಂಗ್‌ ಲಿಂಕ್’ಗಳನ್ನು ಜೋಡಿಸಿ ಸಂಪರ್ಕದ ಕೊರತೆ ನೀಗಿಸಬೇಕು. ಸಾಧ್ಯವಾದ ಕಡೆಗಳಲ್ಲಿ ರಸ್ತೆ ವಿಸ್ತರಣೆ ಮಾಡಬೇಕು. ಜಂಕ್ಷನ್‌ಗಳಲ್ಲಿ ಸಿಗ್ನಲ್‌ಮುಕ್ತ ಸೌಕರ್ಯ ಕಲ್ಪಿಸಬೇಕು.

(ಲೇಖಕ: ವಿಶ್ವಬ್ಯಾಂಕ್‌ಗೆ ರಸ್ತೆ ಸುರಕ್ಷತೆ ಕುರಿತಂತೆ ಸಲಹೆಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT