ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾ ಹೊನಲು ಬೆಳಕಿನ ಟೆಸ್ಟ್‌...

Last Updated 24 ಮೇ 2015, 19:30 IST
ಅಕ್ಷರ ಗಾತ್ರ

ಟೆಸ್ಟ್‌ನ ಸೌಂದರ್ಯದಿಂದಲೇ ಕ್ರಿಕೆಟ್ ತುಂಬಾ ಇಷ್ಟ ವಾಗುತ್ತಾ ಹೋಗುತ್ತದೆ. ಅದರ ಮುಂದೆ ಏಕದಿನ ಹಾಗೂ ಟ್ವೆಂಟಿ–20 ಇನ್ನೂ ಶಿಶುಗಳು! ಟೆಸ್ಟ್ ಆಡು ವುದೇ ಎಲ್ಲರ ಪರಮ ಗುರಿ. ಡಾನ್ ಬ್ರಾಡ್ಮನ್, ಗ್ಯಾರಿ ಸೋಬರ್ಸ್, ಸುನಿಲ್‌ ಗಾವಸ್ಕರ್, ಜಿ.ಆರ್. ವಿಶ್ವನಾಥ್, ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ವಿ.ವಿ.ಎಸ್‌.ಲಕ್ಷ್ಮಣ್‌ ಅವರನ್ನು ಪದೇ ಪದೇ ನೆನಪಿಸಿಕೊಳ್ಳಲು ಕಾರಣ ಟೆಸ್ಟ್ ಕ್ರಿಕೆಟ್.

‘ಟೆಸ್ಟ್ ಕ್ರಿಕೆಟ್ ಸ್ಕಾಚ್ ಇದ್ದಂತೆ, ಏಕದಿನ ಕ್ರಿಕೆಟ್ ವಿಸ್ಕಿ ರೀತಿ, ಟ್ವೆಂಟಿ-20 ಕಂಟ್ರಿ ಲಿಕ್ಕರ್ ಇದ್ದಂತೆ’ ಎಂದು ದ್ರಾವಿಡ್‌ ಹೇಳಿದ ಮಾತು ನೆನಪಾಗುತ್ತದೆ. ಈಗ ಕಾಲ ಬದಲಾಗಿದೆ. ಟೆಸ್ಟ್‌ನಲ್ಲೂ ಬದಲಾವಣೆಗೆ ಸಮಯ ಕೂಡಿಬಂದಿದೆ. 

‘ವಿನೂತನ ಪ್ರಯೋಗಗಳಿಗೆ ಒಡ್ಡಿಕೊಳ್ಳದಿದ್ದರೆ ಟೆಸ್ಟ್‌ ಕ್ರಿಕೆಟ್‌ಗೆ ಖಂಡಿತ ಭವಿಷ್ಯ ಇರುವುದಿಲ್ಲ. ಕ್ರಿಕೆಟ್‌ ಆಟವನ್ನು ತುಂಬಾ ಪ್ರೀತಿಸುವ ಏಷ್ಯಾ ಖಂಡದಲ್ಲಿಯೇ ಟೆಸ್ಟ್‌ ವೀಕ್ಷಿಸಲು ಜನ ಕ್ರೀಡಾಂಗಣಕ್ಕೆ ಬರುತ್ತಿಲ್ಲ. ಶಾಲಾ ಮಕ್ಕಳಿಗೆ ಉಚಿತವಾಗಿ ಟೆಸ್ಟ್‌ ವೀಕ್ಷಿಸಲು ಅವಕಾಶ ಮಾಡಿಕೊಡಿ. ಆಟದಲ್ಲಿ ಕೆಲ ಬದಲಾವಣೆ ಮೂಲಕ ಪ್ರೇಕ್ಷಕರನ್ನು ಸೆಳೆಯಬೇಕು’ –ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ ಸಚಿನ್‌ ತೆಂಡೂಲ್ಕರ್‌ ನೀಡಿದ ಸಲಹೆ ಇದು.

ನಿಜ, ಐದು ದಿನಗಳ ಕಾಲ ಬಿಸಿಲಿನಲ್ಲಿ ಕುಳಿತು ಆಟವನ್ನು ನೋಡುವ ತಾಳ್ಮೆಯನ್ನು ಪ್ರೇಕ್ಷಕರು ಕಳೆದುಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಖಾಲಿ ಕ್ರೀಡಾಂಗಣದಲ್ಲಿ ಟೆಸ್ಟ್‌ ಪಂದ್ಯಗಳು ನಡೆಯುತ್ತಿವೆ. ಟ್ವೆಂಟಿ–20 ಕ್ರಿಕೆಟ್‌ನ ಅಬ್ಬರ, ಐಪಿಎಲ್ ಕ್ರಿಕೆಟ್‌ನ ಮನರಂಜನೆ ಸೆಳೆತಕ್ಕೆ ಮಾರು ಹೋಗಿರುವ ಪ್ರೇಕ್ಷಕರು ಟೆಸ್ಟ್‌ ಪಂದ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ನೇರ ಪ್ರಸಾರ ಮಾಡಲು ಚಾನೆಲ್‌ಗಳು ಕೂಡ ಹಿಂದೇಟು ಹಾಕುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹೊರತುಪಡಿ ಸಿದರೆ ಉಳಿದ ದೇಶಗಳಲ್ಲಿ ಟೆಸ್ಟ್‌ನಿಂದ ಯಾವುದೇ ಆದಾಯ ಬರುತ್ತಿಲ್ಲ.

ಇದೇ ಕಾರಣಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹೊಸ ದಾರಿ ಕಂಡುಕೊಳ್ಳಲು ಹಲವು ಪ್ರಯೋಗ ಮಾಡುತ್ತಿದೆ. ಅದರಲ್ಲೊಂದು ಹೊನಲು ಬೆಳಕಿನ ಟೆಸ್ಟ್‌ ಆಯೋಜನೆ. ಟೆಸ್ಟ್ ಕ್ರಿಕೆಟ್ ಬಗ್ಗೆ ಇಂದಿನ ಯುವ ಪೀಳಿಗೆ ಆಸಕ್ತಿ ಕಳೆದು ಕೊಳ್ಳದಂತೆ ಮಾಡುವುದು ಇದರ ಉದ್ದೇಶ.

ಇಂಥದ್ದೊಂದು ಶಿಫಾರಸು ಮಾಡಿರುವುದು ಅನಿಲ್ ಕುಂಬ್ಳೆ ಸಾರಥ್ಯದ ಐಸಿಸಿ ಕ್ರಿಕೆಟ್‌ ಸಮಿತಿ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ನಡುವೆ ಹೊನಲು ಬೆಳಕಿನ ಮೊದಲ ಟೆಸ್ಟ್‌ ನಡೆಯಲಿದೆ. ಮಧ್ಯಾಹ್ನ ಆರಂಭವಾಗಿ ರಾತ್ರಿ 10ರವರೆಗೆ ಪಂದ್ಯ ಜರುಗಲಿದೆ.

ಈ ಯೋಜನೆ ಹೊಸದೇನಲ್ಲ. ನಾಲ್ಕು ವರ್ಷ ಗಳ ಹಿಂದೆ ದ್ರಾವಿಡ್‌ ಕೂಡ ಹೊನಲು ಬೆಳಕಿನ ಟೆಸ್ಟ್‌ ಆಯೋಜನೆಗೆ ಸಲಹೆ ನೀಡಿದ್ದರು. ಟೆಸ್ಟ್‌ ಕ್ರಿಕೆಟ್‌ಗೆ ಹೊಸ ರೂಪ ನೀಡುವುದರಿಂದ ಈ ಮಾದರಿಯ ಆಟವನ್ನು ಜೀವಂತವಾಗಿರಿಸಿಕೊಳ್ಳ ಬಹುದು ಎಂಬುದು ಅವರ ಸಲಹೆ. ಈ ಸಲಹೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

‘ಟ್ವಿಂಟಿ–20 ರೆಂಬೆ ಕೊಂಬೆಗಳಿದ್ದಂತೆ. ಟೆಸ್ಟ್ ಕ್ರಿಕೆಟ್ ಮರದ ಗಟ್ಟಿಯಾದ ಬೇರುಗಳಿದ್ದಂತೆ. ಎಷ್ಟೇ ಕಾಲ ಉರುಳಿದರೂ ಬೇರು ಗಟ್ಟಿಯಾಗಿರು ತ್ತದೆ. ಮತ್ತಷ್ಟು ಬಲಗೊಳ್ಳುತ್ತಾ ಸಾಗುತ್ತದೆ. ದೀರ್ಘ ಕಾಲ ಉಳಿಯುತ್ತದೆ. ಆದರೆ, ಜನಪ್ರಿಯತೆ ಉಳಿ ಸಲು ಕೆಲವೊಂದು ಪ್ರಯೋಗ ಅಗತ್ಯ’ ಎಂದು ದ್ರಾವಿಡ್‌ ನುಡಿದಿದ್ದರು.

ಚೆಂಡಿನ ಬಣ್ಣದ ಸಮಸ್ಯೆ
ಪ್ರೇಕ್ಷಕರನ್ನು ಸೆಳೆಯಲು ಇದೊಂದು ವಿನೂತನ ಪ್ರಯೋಗ ನಿಜ. ಟೆಸ್ಟ್‌ ಕ್ರಿಕೆಟ್‌ ಇಷ್ಟಪಡುವ ದೊಡ್ಡ ಸಮುದಾಯವೇ ಇದೆ. ಟೆಸ್ಟ್‌ನಲ್ಲಿ ಸಿಗುವ ಕೌಶಲದ ಆಟ, ಹೊಡಿಬಡಿ ಟ್ವೆಂಟಿ–20ಯಲ್ಲಿ ಸಿಗಲಾರದು. ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ರಾತ್ರಿ ವೇಳೆ ಟೆಸ್ಟ್‌ ವೀಕ್ಷಿಸ ಬಹುದು ಎಂಬುದು ಈ ಯೋಜನೆಯ ಉದ್ದೇಶ. ಆದರೆ, ಬಳಸುವ ಚೆಂಡು ಯಾವ ಬಣ್ಣದ್ದಿರಬೇಕು ಎಂಬ ಗೊಂದಲಕ್ಕೆ ಇನ್ನೂ ತೆರೆಬಿದ್ದಿಲ್ಲ. ಸದ್ಯಕ್ಕೆ ನಸುಗೆಂಪು ಬಣ್ಣದ ಚೆಂಡಿನ ಬಗ್ಗೆ ಚರ್ಚೆ ನಡೆದಿದೆ.

ಟೆಸ್ಟ್ ಪಂದ್ಯಗಳಲ್ಲಿ ಪ್ರಸ್ತುತ ಕೆಂಪು ಚೆಂಡನ್ನು ಬಳಸಲಾಗುತ್ತಿದೆ. ರಾತ್ರಿ ವೇಳೆ ಕೆಂಪು ಚೆಂಡು ಬಳಸಲು ಸಾಧ್ಯವಿಲ್ಲ. ಬಿಳಿ ಚೆಂಡನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಳಸಲಾಗುತ್ತಿದೆ. ಆದರೆ ಟೆಸ್ಟ್‌ನಲ್ಲಿ ಬಿಳಿ ಚೆಂಡು ಹೆಚ್ಚು ಬಾಳಿಕೆ ಬರುವುದಿಲ್ಲ. ಹಾಗಾಗಿ ಕಿತ್ತಲೆ ಮತ್ತು ಹಳದಿ ಬಣ್ಣದ ಚೆಂಡು ಬಳಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.

ಇನ್ನೊಂದು ಸಮಸ್ಯೆ ಎಂದರೆ ಉಪಖಂಡದ ಇಬ್ಬನಿ. ಸಂಜೆಯಾಗುತ್ತಿದ್ದಂತೆ ಇಬ್ಬನಿ ಬೀಳುವು ದರಿಂದ ಚೆಂಡು ಒದ್ದೆಯಾಗಲಿದ್ದು, ಸ್ಪಿನ್ನರ್‌ಗಳಿಗೆ ಸಮಸ್ಯೆ ನೀಡುತ್ತದೆ. ಈಗಾಗಲೇ ಏಕದಿನ ಕ್ರಿಕೆಟ್‌ ನಲ್ಲಿ ಈ ಸಮಸ್ಯೆ ಪದೇ ಪದೇ ಸಂಭವಿಸುತ್ತಿದೆ.

ಪ್ರಾಯೋಗಿಕವಾಗಿ ಅಬುದಾಬಿಯಲ್ಲಿ ನಾಲ್ಕು ದಿನಗಳ ಪ್ರಥಮ ದರ್ಜೆ ಪಂದ್ಯ ಆಡಿಯಾಗಿದೆ. ಅಲ್ಲದೆ, ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ನಲ್ಲಿ ಕೂಡ ಹಗಲು ರಾತ್ರಿ ಪಂದ್ಯಗಳ ಪ್ರಯೋಗ ನಡೆದಿದೆ. ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯಲ್ಲಿ ಗುಲಾಬಿ ಬಣ್ಣದ ಚೆಂಡು ಬಳಸಿ ಆಡಲಾಗಿತ್ತು.

ಹೊನಲು ಬೆಳಕಿನ ಟೆಸ್ಟ್‌ ಪಂದ್ಯವನ್ನು ನಾಲ್ಕು ದಿನಗಳಿಗೆ ಇಳಿಸುವ ಬಗ್ಗೆ ಕೆಲ ಸದಸ್ಯರು ಪ್ರಸ್ತಾಪಿ ಸಿದ್ದರು. ಆದರೆ, ಅದಕ್ಕೆ ಕುಂಬ್ಳೆ ಸಾರಥ್ಯದ ಸಮಿತಿ ಒಪ್ಪಿಲ್ಲ. ಇದು ಒಳ್ಳೆಯ ನಿರ್ಧಾರ ಕೂಡ. ಇಲ್ಲವೆಂ ದರೆ ಟೆಸ್ಟ್‌ ಸ್ವರೂಪಕ್ಕೆ ಕುತ್ತುಬರಬಹುದು.

ಹೊನಲು ಬೆಳಕಿನ ಟೆಸ್ಟ್‌ ಆಯೋಜನೆ ಇವ ತ್ತಿನ ಚಿಂತನೆ ಅಲ್ಲ. 1980ರಲ್ಲಿ ಮೊದಲ ಬಾರಿಗೆ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಕೆಲ ಪ್ರಯೋಗಗಳು ವಿಫಲವಾಗಿದ್ದವು. ಆದಾಗ್ಯೂ ಹೊನಲು ಬೆಳಕಿನ ಟೆಸ್ಟ್‌ಗೆ ಐಸಿಸಿ 2012ರಲ್ಲಿಯೇ ಶಿಫಾರಸು ಮಾಡಿತ್ತು. ಬದಲಾವಣೆ ದೃಷ್ಟಿಯಿಂದ ಹೊನಲು ಬೆಳಕಿನ ಟೆಸ್ಟ್‌ ಸ್ವಾಗತಾರ್ಹ ನಿರ್ಧಾರ. ಆದರೆ, ಆಟದ ಸ್ವರೂಪಕ್ಕೆ ಧಕ್ಕೆಯಾಗಬಾರದು ಎಂಬುದು  ಪ್ರೇಕ್ಷಕರ ಅಭಿಪ್ರಾಯ.

ಹೊನಲು ಬೆಳಕಿನ ಆ ರಣಜಿ...
ಭಾರತದಲ್ಲಿ ಕೂಡ ದೇಸಿ ಕ್ರಿಕೆಟ್‌ ನಲ್ಲಿ ಹೊನಲು ಬೆಳಕಿನ ಪ್ರಯೋಗ ಮಾಡಲಾಗಿತ್ತು. ಆದರೆ, ಆ ಪ್ರಯೋಗ ಯಶಸ್ವಿಯಾಗಿರಲಿಲ್ಲ. ಹಾಗಾಗಿ ಹೊನಲು ಬೆಳಕಿನ ಟೆಸ್ಟ್‌ಗೆ ಬಿಸಿಸಿಐ ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ.

1997ರ ಏಪ್ರಿಲ್‌ನಲ್ಲಿ ಮುಂಬೈ ಮತ್ತು ದೆಹಲಿ ತಂಡಗಳ ನಡುವೆ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಗ್ವಾಲಿಯರ್‌ನ ಕ್ಯಾಪ್ಟನ್‌ ರೂಪ್‌ ಸಿಂಗ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಆಯೋಜಿಸಲಾಗಿತ್ತು. ವಿಪರೀತ ಇಬ್ಬನಿಯಿಂದಾಗಿ ಬೌಲರ್‌ಗಳು ತೊಂದರೆ ಅನುಭವಿಸಿದರೆ, ಫೀಲ್ಡರ್‌ಗಳಿಗೆ ಚೆಂಡನ್ನು ಸರಿಯಾಗಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಎರಡೂ ತಂಡಗಳ ನಾಲ್ವರು ಬೌಲರ್‌ಗಳು 100ಕ್ಕೂ ಅಧಿಕ ರನ್‌ ಬಿಟ್ಟುಕೊಟ್ಟಿದ್ದರು. ಮೊದಲು ಬ್ಯಾಟ್ ಮಾಡಿದ್ದ ಮುಂಬೈ 630 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇನಿಂಗ್ಸ್‌ ಆರಂಭಿಸಿದ್ದ ದೆಹಲಿ ಅಂತಿಮ ದಿನ 559 ರನ್‌ಗಳಿಗೆ ಆಲೌಟಾಗಿತ್ತು. ಎರಡು ಇನಿಂಗ್ಸ್‌ ಮುಗಿಯಲು ಐದು ದಿನ ಬೇಕಾಗಿತ್ತು.

ಎಲ್ಲಿ ಬದಲಾವಣೆ..?
138 ವರ್ಷಗಳ ಇತಿಹಾಸ ಇರುವ ಟೆಸ್ಟ್‌ ಕ್ರಿಕೆಟ್‌ ಆರಂಭವಾಗಿದ್ದು 1877ರಲ್ಲಿ. ಅಲ್ಲಿಂದೀಚೆಗೆ ಹಲವು ಬದಲಾವಣೆಗಳಾಗಿವೆ. ಫೀಲ್ಡಿಂಗ್ ನಿರ್ಬಂಧ ಇರಬಹುದು, ಹೆಲ್ಮೆಟ್‌ ಬಳಕೆ ಆಗಿರಬಹುದು, ಚೆಂಡಿನ ಬದಲಾವಣೆ ಇರಬಹುದು. ಏಕದಿನ ಕ್ರಿಕೆಟ್‌ ಬಂದಾಗಲೇ ಟೆಸ್ಟ್‌ಗೆ ಮೊದಲ ಅಪಾಯ ಎದುರಾಯಿತು. ಬಣ್ಣದ ಸಮವಸ್ತ್ರ, ಹೊನಲು ಬೆಳಕು, ಬಿಳಿ ಚೆಂಡಿನ ಬಳಕೆ ಟೆಸ್ಟ್‌ನ ಪಾರಮ್ಯಕ್ಕೆ ಪೆಟ್ಟು ನೀಡಿತು. ಏಕದಿನ ಕ್ರಿಕೆಟ್‌ಗೆ ಪ್ರೇಕ್ಷಕರು ಮಾರು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT