ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ಆರೋಗ್ಯ ಸೇವಾ ಶ್ರೇಣಿ

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಡೆಂಗಿ ಹಾವಳಿಯನ್ನು ತೋರಿಸುವ ದೇಶದ ನಕ್ಷೆಯ ಮೇಲೊಮ್ಮೆ ಕಣ್ಣು ಹಾಯಿ ಸಿದರೆ ದಕ್ಷಿಣ ಭಾರತದ ವ್ಯಾಪ್ತಿಗೊಳಪಡುವ ಪ್ರದೇಶ ಬಹುತೇಕ ಕೆಂಪಾಗಿದೆ. ರಾಜ್ಯದ ನಕ್ಷೆಯಲ್ಲಿ ಹುಡುಕಿದರೂ ಈ ಕಾಯಿಲೆಯ ಅಸ್ತಿತ್ವವಿಲ್ಲದ ಒಂದು ಬಿಳಿ ಚುಕ್ಕೆ ಕೂಡ ಕಾಣುವುದಿಲ್ಲ. ಹೌದು, ಎಲ್ಲೆಡೆ ಅತ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಸೋಂಕಿದು. ಅದರ ನಿಯಂತ್ರಣಕ್ಕೆ ಸರ್ಕಾರಗಳು ಪ್ರತಿವರ್ಷ ಯೋಜನೆಗಳನ್ನು ರೂಪಿಸುತ್ತಲೇ ಇವೆ. ಡೆಂಗಿ ಮಾತ್ರ ಯಾವ ಅಡೆತಡೆಯಿಲ್ಲದೆ ದಂಡಯಾತ್ರೆ ಹೊರಟಿದೆ!

‘ಡೆಂಗಿ ಹಾಗೂ ಚಿಕೂನ್‌ಗುನ್ಯದಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಯಲು ವೈರಾಣು ನಿರೋಧಕ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಹೀಗಾಗಿ ಉತ್ಪತ್ತಿ ತಾಣಗಳಲ್ಲಿ ಸೊಳ್ಳೆಗಳ ನಿಯಂತ್ರಣವೊಂದೇ ಸದ್ಯಕ್ಕಿರುವ ಪರಿಹಾರ’ ಎನ್ನುತ್ತಾರೆ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ನಿರ್ದೇಶಕ ಡಾ. ಎಚ್‌.ಸುದರ್ಶನ. ಆದರೆ, ಆರೋಗ್ಯ ಇಲಾಖೆಗೆ ಸೊಳ್ಳೆಗಳ ನಿಯಂತ್ರಣಕ್ಕಿಂತಲೂ ಹೊಸ ಯೋಜನೆಗಳನ್ನು ರೂಪಿಸುವತ್ತಲೇ ಹೆಚ್ಚು ಮುತುವರ್ಜಿ. ‘india fights dengue’ ಎಂಬಂತಹ ಆ್ಯಪ್‌ ಅಭಿವೃದ್ಧಿಪಡಿಸಿದ ಮಾತ್ರಕ್ಕೆ ಸೊಳ್ಳೆಗಳ ಸಂಹಾರವೇನೂ ಆಗುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಇದುವರೆಗೆ ಹಾಕಿಕೊಂಡ ವಿವಿಧ ಬಗೆಯ ಯೋಜನೆಗಳು ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ಅದಕ್ಕೆ ಕೆಂಪಾಗಿರುವ ದೇಶದ ನಕ್ಷೆಯೇ ಸಾಕ್ಷ್ಯ ಹೇಳುತ್ತದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ (ಐಪಿಎಚ್‌) ವತಿಯಿಂದ ಸಮುದಾಯ ಆರೋಗ್ಯ ವ್ಯವಸ್ಥೆಯ ನಿರ್ವಹಣೆ ಕುರಿತು ರಾಜ್ಯದಾದ್ಯಂತ ಅಧ್ಯಯನ ನಡೆಸಲಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಹಲವು ಲೋಪಗಳ ಮೇಲೆ ಅಧ್ಯಯನವು ಬೆಳಕು ಚೆಲ್ಲಿದೆ. ಯಾವುದೇ ಸಮಸ್ಯೆ ವಿರುದ್ಧ ಹೋರಾಡುವಾಗ ನಮಗೆ ಅದರ ಸ್ವರೂಪ ಏನು ಎಂಬುದು ನಿಖರವಾಗಿ ಗೊತ್ತಿರಬೇಕು. ಕಾಯಿಲೆಗಳಿಗೆ ಸಂಬಂಧಿಸಿದಂತೆ ಸಮರ್ಪಕ ದತ್ತಾಂಶ ಸಂಗ್ರಹ ವ್ಯವಸ್ಥೆಯೇ ಇಲ್ಲದಿರುವ ಕಾರಣ ಯಾವ ಕಾಯಿಲೆಯಿಂದ, ಎಲ್ಲಿ, ಎಷ್ಟು ಜನ ಬಳಲುತ್ತಿದ್ದಾರೆ ಎಂಬ ನಿಖರ ಮಾಹಿತಿ ಆರೋಗ್ಯ ಇಲಾಖೆಯ ಬಳಿಯಿಲ್ಲ.

ಖಾಸಗಿ ಆಸ್ಪತ್ರೆಗಳ ಪ್ರಕರಣಗಳು ಲೆಕ್ಕಕ್ಕೇ ಸಿಗುತ್ತಿಲ್ಲ. ಸಾರ್ವಜನಿಕ ವಲಯದ ಬಹುತೇಕ ಆಸ್ಪತ್ರೆಗಳಲ್ಲಿ ರೋಗಪತ್ತೆಗೆ ಸೂಕ್ತ ಸೌಲಭ್ಯಗಳಿಲ್ಲ. ಖಾಸಗಿ ಲ್ಯಾಬ್‌ಗಳಲ್ಲಿ ದುಡ್ಡು ಖರ್ಚು ಮಾಡಲಾಗದ ಅಸಂಖ್ಯ ಬಡವರು ಕಾಯಿಲೆಯಿಂದ ಬಳಲುತ್ತಿದ್ದರೂ ಅಂತಹ ಪ್ರಕರಣಗಳು ಅಧಿಕೃತವಾಗಿ ಖಚಿತಪಡದೆ ಎಲ್ಲಿಯೂ ದಾಖಲು ಆಗುವುದಿಲ್ಲ. ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಆರೋಗ್ಯ ಇಲಾಖೆ ನೀಡುವ ಅಂಕಿ–ಅಂಶಗಳು ಹಾಸ್ಯಾಸ್ಪದ. ಬೆಂಗಳೂರಿನ ಉದಾಹರಣೆ ಕೊಡುವುದಾದರೆ ನಿತ್ಯ ನೂರಾರು ಡೆಂಗಿ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿವೆ. ಆದರೆ, ಬಿಬಿಎಂಪಿ ದಾಖಲೆ ಪ್ರಕಾರ, ಈ ವರ್ಷ ವರದಿಯಾದ ಡೆಂಗಿ ಪ್ರಕರಣಗಳು ಬರಿ 68!

ತುಮಕೂರು ಜಿಲ್ಲೆಯ ಕೊರಟಗೆರೆ, ಗುಬ್ಬಿ ಹಾಗೂ ಕುಣಿಗಲ್‌ ತಾಲ್ಲೂಕುಗಳ ಪ್ರತಿ ಹಳ್ಳಿಯಲ್ಲೂ ಓಡಾಡಿ ಅಧ್ಯಯನ ನಡೆಸಿರುವ ಐಪಿಎಚ್‌ನ ಡಾ. ಎನ್‌.ಎಸ್‌.ಪ್ರಶಾಂತ್‌, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾ ಆಸ್ಪತ್ರೆವರೆಗೆ ಎಲ್ಲೆಡೆ ಮನೆಮಾಡಿರುವ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲದ ಕೊರತೆಯಿಂದಾಗಿ ಇಡೀ ಗ್ರಾಮೀಣ ಭಾಗ ಅನಾರೋಗ್ಯದ ದವಡೆಯೊಳಗೆ ಸಿಕ್ಕಿದೆ ಎಂದು ಹೇಳುತ್ತಾರೆ.

ಸಮುದಾಯದ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕಾರ್ಯಕರ್ತೆಯರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಸೊಳ್ಳೆಗಳ ಉತ್ಪತ್ತಿ ತಾಣಗಳ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸುವವರು ಅವರೆ. ಸದ್ಯ ಅವರ ಕೊರತೆಯೂ ಹೆಚ್ಚಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್‌ ಇದ್ದರೆ ಟೆಕ್ನೀಷಿಯನ್‌ಗಳ ಕೊರತೆ. ಟೆಕ್ನೀಷಿಯನ್‌ ಇದ್ದಲ್ಲಿ ಲ್ಯಾಬ್‌ ಕೆಟ್ಟಿರುತ್ತದೆ.

‘ಚಿಕೂನ್‌ಗುನ್ಯದಿಂದ ಬಳಲುವವರಿಗೆ ಕೀಲುನೋವು ಹೆಚ್ಚಾಗಿ ತಿಂಗಳು ಪರ್ಯಂತ ಹಾಸಿಗೆ ಹಿಡಿಯಬೇಕಾಗುತ್ತದೆ. ಇದರಿಂದ ಹಳ್ಳಿಗಳಲ್ಲಿ ಎಂತಹ ಅಪಾಯಕಾರಿ ಬೆಳವಣಿಗೆ ನಡೆದಿದೆ ಗೊತ್ತಾ’ ಎಂದು ಕೇಳುತ್ತಾರೆ ಡಾ. ಪ್ರಶಾಂತ್‌. ‘ಅಪ್ಪ ಹಾಸಿಗೆ ಹಿಡಿದರೆ ಮಗ ಶಾಲೆಯನ್ನೇ ತೊರೆದು ಗದ್ದೆಗೆ ಹೋಗುತ್ತಿರುವ ನೂರಾರು ಉದಾಹರಣೆಗಳು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳಲ್ಲಿ ಸಿಗುತ್ತವೆ. ಇಂತಹ ಸಾಮಾಜಿಕ–ಆರ್ಥಿಕ ಸಮಸ್ಯೆಯತ್ತ ನೀತಿ ನಿರೂಪಕರು ಕಣ್ತೆರೆದು ನೋಡಬೇಕಿದೆ’ ಎನ್ನುತ್ತಾರೆ.

ತಮಿಳುನಾಡಿನಲ್ಲಿ ಇರುವಂತೆ ರಾಜ್ಯದಲ್ಲೂ ಸಮುದಾಯ ಆರೋಗ್ಯ ನಿರ್ವಹಣೆಗೆ ಪ್ರತ್ಯೇಕ ಶ್ರೇಣಿಯೊಂದರ ಅಗತ್ಯವಿದೆ. ನಿವೃತ್ತಿ ಅಂಚಿನವರೆಗೆ ಶಸ್ತ್ರಚಿಕಿತ್ಸೆ ಕೊಠಡಿಯಲ್ಲೋ ಲೇಬರ್‌ ವಾರ್ಡ್‌ಗಳಲ್ಲೋ ಕಳೆದವರು ಜಿಲ್ಲಾ ಆರೋಗ್ಯಾಧಿಕಾರಿಗಳಾಗಿ ಬಂದು ಕುಳಿತರೆ ಅವರಿಗೆ ಸಮುದಾಯ ಆರೋಗ್ಯ ನಿರ್ವಹಣೆ ಕುರಿತು ಯಾವ ಅನುಭವವೂ ಇರುವುದಿಲ್ಲ.

ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾದಾಗ ನಮ್ಮ ಆರೋಗ್ಯ ವ್ಯವಸ್ಥೆ ಕುಂಟುವುದಕ್ಕೆ ಇದೇ ಕಾರಣ. ಆದ್ದರಿಂದ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ನಿರ್ವಹಣೆಗೆ ಪ್ರತ್ಯೇಕವಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಡಾ. ಶ್ರೀಧರ್‌ಬಾಬು ಅವರಂತಹ ಪರಿಣತರು ತುಂಬಾ ಹಿಂದೆಯೇ ಈ ಸಲಹೆ ನೀಡಿದ್ದಾರೆ. ಆರೋಗ್ಯ ನೀತಿಯಲ್ಲಿ ಅದಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳದ ಸರ್ಕಾರ, ಹೊಸ ಯೋಜನೆಗಳನ್ನು ಸೃಜಿಸುತ್ತಲೇ ಹೊರಟಿದೆ.
ಫಾಗಿಂಗ್‌ನಿಂದ ಸೊಳ್ಳೆಗಳಿಗೆ ಮಂಪರು ಬಂದಂತಾಗಿ ಒಂದೆರಡು ದಿನ ಹಾವಳಿ ಕಡಿಮೆ ಆಗುತ್ತದೆ. ಆದರೆ, ಅವು ಮತ್ತೆ ದಾಳಿ ಇಡುತ್ತವೆ. ಹೀಗಾಗಿ ಮೂಲ ತಾಣಗಳನ್ನು ಗುರುತಿಸಿ ಸಂಹಾರ ಮಾಡಲು ಡಿಡಿಟಿಯಂತಹ ರಾಸಾಯನಿಕ ಸಿಂಪಡಣೆ ಅಗತ್ಯವಿದೆ. ಕೆರೆಯಂತಹ ಜಲಮೂಲಗಳಲ್ಲಿ ಗಂಬುಸಿಯಾ ಮೀನುಗಳನ್ನು ಬಿಟ್ಟರೆ ಅವು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಲಾರ್ವಾಗಳನ್ನು ತಿಂದು ಮುಗಿಸುತ್ತವೆ.

ಕಾಯಿಲೆ ಸಿಂಡ್ರೋಮ್‌ನಿಂದ ಬಳಲುವವರಲ್ಲಿ ಜಾಗೃತಿಯನ್ನೂ ಉಂಟು ಮಾಡಬೇಕಿದೆ. ರೋಗ ಪತ್ತೆಗೆ ಪ್ರತಿ ಆರೋಗ್ಯ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಸಾರ್ವಜನಿಕ–ಖಾಸಗಿ ಆಸ್ಪತ್ರೆಗಳ ದತ್ತಾಂಶವನ್ನು ಸಮಗ್ರವಾಗಿ ಸಂಗ್ರಹಿಸಬೇಕಿದೆ. ಈ ಚಟುವಟಿಕೆಗಳು ಪರಿಹಾರ ಒದಗಿಸಬಲ್ಲವೇ ವಿನಾ ಅಂಗೈಯಲ್ಲಿ ಆಕಾಶ ತೋರುವಂತಹ ಯೋಜನೆಗಳಲ್ಲ. ಅದಕ್ಕೇ ಅಲ್ಲವೆ, ಮಲೇರಿಯಾ ನಿಯಂತ್ರಣಕ್ಕೆ 1970ರಷ್ಟು ಹಿಂದೆಯೇ ಯೋಜನೆ ರೂಪಿಸಿದರೂ ಆ ಕಾಯಿಲೆಗೆ ಇನ್ನೂ ಲಗಾಮು ಹಾಕಲು ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT