ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ಶಾಶ್ವತ ಪರಿಹಾರ

Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇವು ಅನ್ನದಾತನ ಸಂಕಷ್ಟ ಮತ್ತು ಹತಾಶ ಮನಸ್ಥಿತಿಯನ್ನು ಬಿಂಬಿಸುತ್ತವೆ. ರೈತರ ಸರಣಿ ಆತ್ಮಹತ್ಯೆಯು ರಾಜ್ಯ ಮತ್ತು ದೇಶಕ್ಕೆ ಹೊಸದಲ್ಲದಿದ್ದರೂ ಅದು ಮರುಕಳಿಸುತ್ತಿರುವುದು ವಿಷಾದನೀಯ. ಇದು ನಮ್ಮ ಕೃಷಿಕರ ಸಮಸ್ಯೆ, ಅವುಗಳ ಪರಿಹಾರಕ್ಕೆ ನಿರ್ದಿಷ್ಟವಾದ ಶಾಶ್ವತ ಪರಿಹಾರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹುಡುಕದೇ ಇರುವುದನ್ನು ಸ್ಪಷ್ಟಪಡಿಸುತ್ತದೆ.

ಸಮಸ್ಯೆಗಳಿಗೆ ಪರಿಹಾರದ ಜೊತೆಗೆ ರೈತರಲ್ಲಿ ಮಾನಸಿಕ ಸ್ಥೈರ್ಯ ತುಂಬುವುದು ತುರ್ತಾಗಿ ಆಗಬೇಕಾದ ಕೆಲಸ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ, ರೈತ ಸತ್ತಾಗ ಪರಿಹಾರ ಘೋಷಿಸುವುದು ಶಾಶ್ವತ ಕ್ರಮವಲ್ಲ. ಕೆಲವು ವೇಳೆ ಅತಿ ಸ್ಪಂದನೆ ಮತ್ತು ಅಧಿಕ ಮೊತ್ತದ ಪರಿಹಾರವೇ ಸರಣಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪಾಯ ಇರುತ್ತದೆ.

ಕೃಷಿ ಕ್ಷೇತ್ರದ ಸುಧಾರಣೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಕೆಯ ಪ್ರಯತ್ನಗಳು ಅನೇಕ ವರ್ಷಗಳಿಂದಲೂ ನಡೆಯುತ್ತಿವೆ. ಆದರೂ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಜನಸಂಖ್ಯಾ ಬೆಳವಣಿಗೆ ಮತ್ತು ಹಿಡುವಳಿಗಳ ವಿಭಜನೆಯಿಂದ ಗ್ರಾಮೀಣ ಕೃಷಿ ಕುಟುಂಬಗಳಲ್ಲಿ ಸಣ್ಣ, ಅತಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ.

ಉದಾಹರಣೆಗೆ ಹೇಳುವುದಾದರೆ, ಮಂಡ್ಯ ಜಿಲ್ಲೆಯಲ್ಲೇ ನೀರಾವರಿ ಮತ್ತು ಖುಷ್ಕಿ ಪ್ರದೇಶದಲ್ಲಿ ಬಹುತೇಕ ಕುಟುಂಬಗಳು ತಲಾ ಸುಮಾರು ಅರ್ಧ ಎಕರೆಯಿಂದ 2 ಎಕರೆವರೆಗಿನ ಜಮೀನನ್ನು ಮಾತ್ರ ಹೊಂದಿವೆ. ಇಂತಹ ಸಣ್ಣ ಮತ್ತು ಅತಿಸಣ್ಣ ಹಿಡುವಳಿಗಳಲ್ಲಿ ಅವರು ಬೆಳೆಯುವ ಬೆಳೆಗಳಿಗೆ ಉತ್ಪಾದನಾ ವೆಚ್ಚ ಅಧಿಕವಾಗಿರುತ್ತದೆ.

ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಹಾಗೂ ಕೃಷಿ ಕಾರ್ಮಿಕರ ವೇತನವೂ ಅಧಿಕವಾಗಿರುವುದರಿಂದ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ಬಹುತೇಕ ರೈತರು ನಷ್ಟ ಅನುಭವಿಸುತ್ತಿರುತ್ತಾರೆ. ಕೆಲವು ವೇಳೆ ಉತ್ಪಾದನಾ ವೆಚ್ಚ, ತಮ್ಮ ಪರಿಶ್ರಮ ಸೇರಿದಂತೆ ಕೂಲಿಗಾಗಿ ಖರ್ಚು ಮಾಡಿದ ವೆಚ್ಚವೂ ಉತ್ಪನ್ನಗಳಿಂದ ಬರುವ ಆದಾಯಕ್ಕೆ ಹೊಂದಿಕೆಯಾಗದೆ ನಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಇದರಿಂದಾಗಿ ರೈತರು ಸಾಲದ ಬಾಧೆಗೆ ಒಳಗಾಗಿ ದಿನನಿತ್ಯ ಸಂಕಷ್ಟದಲ್ಲಿ ತೊಳಲಾಡುವುದು ಸಾಮಾನ್ಯ. 

ರೈತರು ತಮ್ಮ ಅಲ್ಪ ಆದಾಯದಲ್ಲಿ ಸಂಸಾರ ನಿರ್ವಹಣೆ, ಹಬ್ಬ ಹರಿದಿನಗಳ ಖರ್ಚು, ಮಕ್ಕಳ ವಿದ್ಯಾಭ್ಯಾಸ ಮುಂತಾದವುಗಳಿಗಾಗಿ ಮಾಡಿದ ಸಾಲ, ಅದರ ಮೇಲಿನ ಬಡ್ಡಿಯನ್ನು ಭರಿಸಲಾಗದೇ, ಇರುವ ಅಲ್ಪ ಜಮೀನನ್ನು ಮಾರಿ ಕೃಷಿ ಕಾರ್ಮಿಕರಾಗುತ್ತಾರೆ, ಇಲ್ಲವೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಸರ್ಕಾರ ಆಗಾಗ್ಗೆ ಘೋಷಿಸುವ ಸಾಲ ಮನ್ನಾ ಯೋಜನೆಯಿಂದಲೂ ರೈತರನ್ನು  ಪೂರ್ಣವಾಗಿ ಸಾಲದಿಂದ ಮುಕ್ತಗೊಳಿಸಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ  ಸಂಕಷ್ಟ ಪರಿಹಾರ ಸೂತ್ರಗಳನ್ನು ಜಾರಿಗೊಳಿಸಬೇಕಾದುದು ಅತ್ಯವಶ್ಯಕ.

ಮೊದಲನೆಯದಾಗಿ, ರೈತರ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಉಪಕರಣ ಮುಂತಾದವನ್ನು ಕಡಿಮೆ ಬೆಲೆಯಲ್ಲಿ ಒದಗಿಸಬೇಕು. ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ನಿಗದಿಪಡಿಸಿ ರೈತರ ಪರಿಶ್ರಮಕ್ಕೆ ಪ್ರತಿಫಲ ಸಿಗುವಂತೆ ಮಾಡಬೇಕು. ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಯಾವ ಬೆಳೆ ಬೆಳೆದರೆ ಲಾಭದಾಯಕವಾಗಿ ಉತ್ತಮ ಬೆಲೆ ಪಡೆಯಲು ಸಾಧ್ಯ ಎಂಬ ಮಾಹಿತಿ ನೀಡಿ, ಅದನ್ನು  ಅನುಸರಿಸುವಂತೆ ಮಾಡಬೇಕಾದದ್ದು ಬಹು ಮುಖ್ಯ. 

ಕಳಪೆ ಬಿತ್ತನೆ ಬೀಜ, ಕಳಪೆ ಕ್ರಿಮಿನಾಶಕ ಮತ್ತು ನಕಲಿ ಗೊಬ್ಬರ ಮಾರಾಟ ಮಾಡುವ ಮಾರಾಟಗಾರರ ಬಗ್ಗೆ ಎಚ್ಚರಿಕೆ ನೀಡುವುದು, ಉತ್ತಮ ಬಿತ್ತನೆ ಬೀಜಗಳನ್ನು ಸರ್ಕಾರದ ಸಂಸ್ಥೆಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪ್ರಾದೇಶಿಕವಾಗಿ ಬೆಳೆಯುವ ಕೃಷಿ ಉತ್ಪನ್ನಗಳಿಂದ ರೈತರಿಗೆ ಅಲ್ಪ ಪ್ರಮಾಣದಲ್ಲಾದರೂ ಲಾಭ ಆಗುವ ರೀತಿಯಲ್ಲಿ ಬೆಲೆ ನಿಗದಿ ಮಾಡಬೇಕು.

ಒಂದು ವೇಳೆ ಅತಿವೃಷ್ಟಿ, ಅನಾವೃಷ್ಟಿ ಮತ್ತು ಕೀಟಬಾಧೆಯಿಂದ ಬೆಳೆ ಹಾಳಾಗುವ ಪರಿಸ್ಥಿತಿ ಬಂದರೆ ವಿಮಾ ಸೌಲಭ್ಯದ ಮೂಲಕ ರೈತರಿಗಾಗುವ ನಷ್ಟವನ್ನು ಭರಿಸಿಕೊಡಬೇಕು. ಸರಳ ವಿಮಾ ಸೌಲಭ್ಯವನ್ನು ಪರಿಚಯಿಸಿ ಕಡ್ಡಾಯವಾಗಿ ಎಲ್ಲ ರೈತರೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.

ಈಗಿರುವ ಬೆಳೆ ವಿಮಾ ಪದ್ಧತಿಯಿಂದ ವ್ಯಾಪಕವಾಗಿ ರೈತರಿಗೆ ಅನುಕೂಲವಾಗುವ ಪರಿಸ್ಥಿತಿ ಇಲ್ಲ. ಉತ್ಪಾದನಾ ವೆಚ್ಚ ಅಧಿಕವಾಗಿರುವ ಬೆಳೆಗಳಿಗೆ ಪೂರ್ಣವಾಗಿ ನಷ್ಟ ತುಂಬಿಸಿಕೊಡುವ ಯಾವ ವ್ಯವಸ್ಥೆಯೂ ಇಲ್ಲ. ಒಂದು ವೇಳೆ ಪೂರ್ಣವಾಗಿ ನಷ್ಟ ತುಂಬಿಸಿಕೊಡಲು ಸಾಧ್ಯವಾಗದಿದ್ದಲ್ಲಿ, ರೈತರು ವಿಮಾ ಕಂತುಗಳನ್ನು ಕಡಿಮೆ ಪ್ರಮಾಣದಲ್ಲಿ ತುಂಬಿ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವಂತೆ, ವಿಮಾ ಕಂಪೆನಿಗಳು ಬೆಳೆ ನಷ್ಟ ತುಂಬಿಕೊಡುವಂತೆ ಯೋಜನೆ ರೂಪಿಸಬೇಕು.

ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಸಕ್ಕರೆ ಕಾರ್ಖಾನೆಗಳು ನಿಗದಿತ ಬೆಲೆಯನ್ನು ಕೂಡಲೇ ರೈತರಿಗೆ ಪಾವತಿಸುವಂತೆ ತುರ್ತು ವ್ಯವಸ್ಥೆ ಮಾಡಬೇಕು. ಈಗ ರೈತರಿಗೆ ನೀಡಬೇಕಾಗಿರುವ ಮೂರು ಸಾವಿರ ಕೋಟಿಗಿಂತಲೂ ಹೆಚ್ಚು ಹಣವನ್ನು ಸರ್ಕಾರವೇ ತನ್ನ ಮೂಲಗಳಿಂದ ನೀಡಿ, ನಂತರ ಕಾರ್ಖಾನೆಗಳು ಮಾರಾಟ ಮಾಡುವ ಸಕ್ಕರೆಯ ಮೂಲಕ ವಸೂಲಿ ಮಾಡಿಕೊಳ್ಳಬಹುದು.

ಮುಂದೆ ಇಂತಹ ಪರಿಸ್ಥಿತಿ ಬರದಂತೆ ಕಾರ್ಖಾನೆಯ ಮಾಲೀಕರು ಹಾಗೂ ರೈತ ಪ್ರತಿನಿಧಿಗಳ ನಡುವೆ ಸಮಾಲೋಚನೆ ಏರ್ಪಡಿಸಿ ಸಕಾಲದಲ್ಲಿ ಕಬ್ಬಿನ ಬೆಲೆ ರೈತರಿಗೆ ತಲುಪುವಂತೆ ಮಾಡಬೇಕಾಗಿದೆ. ರಾಜ್ಯದಾದ್ಯಂತ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರೊಡನೆ ಸಮಾಲೋಚನೆ ಏರ್ಪಡಿಸಿ ಅವರ ಸಂಕಷ್ಟಗಳನ್ನು ಆಲಿಸಿ ಅದಕ್ಕೆ ಸೂಕ್ತ ಸಲಹೆ ಮತ್ತು ಪರಿಹಾರ ಒದಗಿಸಬೇಕು. 

ಈ ಕಾರ್ಯಕ್ಕೆ ಪೂರಕವಾಗಿ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೂ ಪರಿಣತ ಸಮಾಲೋಚಕರು, ಸಲಹೆಗಾರರನ್ನು ನೇಮಕ ಮಾಡಬೇಕು. ಅನ್ನದಾತನ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಆತನಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಉಂಟಾಗುವಂತೆ ಮಾಡುವುದು ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ. ಇಂತಹ ಸಾಮಾಜಿಕ ಜವಾಬ್ದಾರಿಯನ್ನು ಎಲ್ಲರೂ ತಕ್ಷಣದಿಂದ ನಿರ್ವಹಿಸಬೇಕಾಗಿದೆ.

ಲೇಖಕ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ
ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT