ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕೆಂದ ಕಡೆ ಕೊಳವೆಬಾವಿ ಕಷ್ಟ: ಸಿಇಒ ಬಿ.ಬಿ.ಕಾವೇರಿ

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ
Last Updated 25 ಏಪ್ರಿಲ್ 2015, 10:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಾಧಕ–ಬಾಧಕ ಪರಿಶೀಲಿಸದೆ ಕೊಳವೆಬಾವಿಗಳನ್ನು ಕೊರೆಸಲು ಸಾಕಷ್ಟು ಪ್ರಮಾಣದಲ್ಲಿ ಅನುದಾನ ಇಲ್ಲ. ಒಂದು ವೇಳೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತದೆ ಎಂಬುದು ಖಾತ್ರಿಯಿಲ್ಲ. ಇದರಿಂದ ಹಣ ವ್ಯಯವಾಗುತ್ತದೆ ಅಷ್ಟೆ’.

–ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆಯಲ್ಲಿ ಸದಸ್ಯ ಷೇಕ್‌ ಮೌಲಾ ಸೇರಿಕೆಲ ಸದಸ್ಯರು ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದಾಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಉತ್ತರಿಸಿದರು.

ನಿಮ್ಮ ಕೈ ಮುಗಿಯುತ್ತೇನೆ: ನೀರಿನ ಸಮಸ್ಯೆ ನಿವಾರಣೆ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ ಷೇಕ್‌ ಮೌಲಾ,‘ಗ್ರಾಮಗಳಲ್ಲಿ ಅತ್ತ ಕೊಳವೆಬಾವಿ ಕೊರೆಸುತ್ತಿಲ್ಲ, ಇತ್ತ ನೀರಿನ ಸಮಸ್ಯೆ ಪರಿಹರಿಸುತ್ತಿಲ್ಲ. ಇಂಥಿಂಥ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಸುವಂತೆ ಕೋರಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಹೀಗಾದರೆ ನಾವು ಜನರಿಗೆ ಏನೆಂದು ಉತ್ತರಿಸಬೇಕು. ನಿಮ್ಮ ಕೈ ಮುಗಿಯುತ್ತೇನೆ. ದಯವಿಟ್ಟು ನೀರಿನ ಸಮಸ್ಯೆ ಪರಿಹರಿಸಿ’ ಎಂದು ಮನವಿ ಮಾಡಿದರು.

‘ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ಬಿಡುಗಡೆಯಾದ ₨ 20 ಕೋಟಿ ಪೈಕಿ ₨ 9 ಕೋಟಿಯಲ್ಲಿ  ಕೊಳವೆಬಾವಿ ಕೊರೆಸಲಾಗಿದೆ. ಉಳಿದ ಹಣ ಪಂಪ್‌–ಮೋಟರ್‌ಗೆ ಖರ್ಚಾಗುತ್ತಿದೆ. ಬತ್ತಿರುವ ಕೊಳವೆಬಾವಿಗಳ ಪಕ್ಕದಲ್ಲೇ ಹೊಸ ಕೊಳವೆಬಾವಿ ಕೊರೆಸಲು ಹಣ ಎಲ್ಲಿದೆ? ಲಭ್ಯವಿರುವ ಸರ್ಕಾರಿ ಅಥವಾ ಖಾಸಗಿ ಕೊಳವೆಬಾವಿ, ಟ್ಯಾಂಕರ್‌ ಬಳಸುವಂತೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದ್ದು, ಹೊಸ ಕೊಳವೆಬಾವಿ ಕೊರೆಸಲು ಆಗುವುದಿಲ್ಲ’ ಎಂದು ಬಿ.ಬಿ.ಕಾವೇರಿ ಉತ್ತರಿಸಿದರು.

ವಾಟರ್‌ಮೆನ್‌, ಪಿಡಿಒಗಳೇ ಕಾರಣ: ಈ ಚರ್ಚೆ ಮಧ್ಯೆಯೇ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್‌.ಮುನೇಗೌಡ, ನೀರಿನ ಸಮಸ್ಯೆ ಸೃಷ್ಟಿಗೆ ಗ್ರಾಮಗಳಲ್ಲಿನ ವಾಟರ್‌ಮೆನ್‌, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳೇ ಕಾರಣ. ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣದಿಂದ ಸಮಸ್ಯೆ ಉದ್ಭವಿಸಿದೆ. ಮೂವರಿಗೂ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಬಹುತೇಕ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಕಾರ್ಯದರ್ಶಿಗಳಿಗೆ ತಮ್ಮ ಕರ್ತವ್ಯಗಳೇನು ಎಂದು ಸರಿಯಾಗಿ ಗೊತ್ತಿಲ್ಲ. ನೀರಿನ ಸಮಸ್ಯೆ ಗಮನಕ್ಕೆ ಬರುವುದೇ ಇಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾತುಗಳನ್ನು ಸಹ ಅವರು ಕೇಳುವುದಿಲ್ಲ. ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ಮೇರೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಭೆ ಕರೆಯಬೇಕು ಎಂದು ‌ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ– ಜಿಲ್ಲಾಧಿಕಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪಂಚಾಯತಿ ಅಧಿಕಾರಿಗಳ ಮಟ್ಟದಲ್ಲೂ ಶೀಘ್ರವೇ ಸಭೆ ಕರೆದು ನೀರಿನ ಸಮಸ್ಯೆ ನಿವಾರಣೆಗೆ ಉಪಾಯ ಕಂಡುಕೊಳ್ಳಲಾಗುವುದು ಎಂದರು. ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಉಪಕಾರ್ಯದರ್ಶಿ ಸಿದ್ದರಾಮಯ್ಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT