ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡದ ಭೂಮಿಯಲಿ ಮತ್ಸ್ಯ ಕೃಷಿ

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಛಲವೊಂದಿದ್ದರೆ ಸಾಕು, ಮಾಡುವ ಪ್ರತಿ ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಉದಾಹರಣೆ ಎಂಬಂತೆ ರೈತ ಮಹಿಳೆಯೊಬ್ಬರು ಮೀನುಕೃಷಿ ಪ್ರಯೋಗ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇವರೇ ಅಫಜಲಪುರದ ಕೆರಕನಹಳ್ಳಿ ಗ್ರಾಮದ ಶೋಭಾ ವೀರಭದ್ರಪ್ಪ ಪಾಟೀಲ್.

 ಎಲ್ಲವೂ ಸರಿಯಾಗಿದ್ದನ್ನು ಸಮರ್ಥವಾಗಿ ಬಳಸಿಕೊಂಡು ಕೃಷಿ ಮಾಡುವವರೇ ಬಹು ವಿರಳ. ಅಂಥದ್ದರಲ್ಲಿ ಸವಳು ಭೂಮಿಯಲ್ಲಿ ಇವರು ಮೀನುಕೃಷಿಯತ್ತ ಚಿತ್ತ ಹರಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಭೀಮಾ ನದಿ ತಟದಲ್ಲಿ ಇವರದ್ದು ಒಟ್ಟು 40 ಎಕರೆ ಭೂಮಿ ಇದೆ. ಇದರಲ್ಲಿ 20ಎಕರೆ ಸಂಪೂರ್ಣ ಸವಳು ಭೂಮಿ ಮತ್ತು ನಿರುಪಯುಕ್ತವಾಗಿದೆ. ಆದ್ದರಿಂದ ಕಳೆದ ಹತ್ತು ವರ್ಷಗಳಿಂದ ಈ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆದಿರಲಿಲ್ಲ. ಅಷ್ಟೇ ಅಲ್ಲದೇ ಈ ಜಮೀನಿನಿಂದ ಅಕ್ಕಪಕ್ಕದ ಭೂಮಿಯ ಬೆಳೆಗಳಿಗೂ ಹಾನಿ ಆಗುತ್ತಿತ್ತು. ಇದರಿಂದ ಶೋಭಾ ಹತಾಶರಾಗಿದ್ದರು. ಮೀನುಕೃಷಿ ಬಗ್ಗೆ ಕೆಲವೆಡೆ ಕೇಳಿ ತಿಳಿದುಕೊಂಡಿದ್ದ ಶೋಭಾ, ತಾವೂ ಅದನ್ನು ಕೈಗೊಳ್ಳಲು ನಿಶ್ಚಯ ಮಾಡಿಕೊಂಡರು. ಸವಳು ಜಮೀನಿನಲ್ಲಿ ಈ ಕೃಷಿ ಮಾಡುವ ಬಗ್ಗೆ ಆತಂಕವೂ ಇತ್ತು. ಆದರೂ ಧೈರ್ಯ ಮಾಡಿದರು. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ತಾಂತ್ರಿಕ ಮಾರ್ಗದರ್ಶನ ಪಡೆದರು. 

ಇದರ ಪರಿಣಾಮವಾಗಿ ಎರಡು ಹೆಕ್ಟೇರ್ ಸವಳು ಭೂಮಿಯಲ್ಲಿ ನಾಲ್ಕು ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ.  ಕಟ್ಲಾ, ರೂಹು, ಮೃಗಾಲ್, ಕಾಮನ್ ಕಾರ್ಪ್ ತಳಿಯ 20 ಸಾವಿರ ಮೀನು ಮರಿಗಳನ್ನು ಬಿಟ್ಟಿದ್ದಾರೆ. ಪತಿ ವೀರಭದ್ರಪ್ಪ ಹಾಗೂ ಇಲಾಖಾಧಿಕಾರಿಗಳ ಬೆಂಬಲ ಮತ್ತು ಮಾರ್ಗದರ್ಶನದಲ್ಲಿ  ಸುಮಾರು  ಹತ್ತು ತಿಂಗಳುಗಳ ಕಾಲ ಈ ಮೀನು ಮರಿಗಳ ಸಾಕಾಣಿಕೆಯನ್ನು ಯೋಗ್ಯರೀತಿಯಲ್ಲಿ ಕೈಗೊಂಡಿದ್ದಾರೆ. ಇದರಿಂದ ವರ್ಷಕ್ಕೆ 14-15 ಲಕ್ಷ ರೂಪಾಯಿ ಆದಾಯವನ್ನು  ಪಡೆಯುವ ಆತ್ಮವಿಶ್ವಾಸ ಹೊಂದಿದ್ದಾರೆ.

ಈ ಮೂಲಕ ಸವಳು ಜಮೀನಿನಲ್ಲಿಯೂ ಮೀನುಕೃಷಿ ಕೈಗೊಳ್ಳಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ‘ಮೀನುಕೃಷಿಗೆ ಫಲವತ್ತಾದ ಭೂಮಿ ಬೇಕಿಲ್ಲ. ಸಾಂಪ್ರದಾಯಿಕ ಕಬ್ಬು, ತೊಗರಿ ಮುಂತಾದ ಬೆಳೆಗಳಿಗೆ ಪರ್ಯಾಯವಾಗಿ ಮೀನುಕೃಷಿ ಕೈಗೊಂಡು ಹೆಚ್ಚು ಲಾಭ ಪಡೆಯಬಹುದು.

ಒಂದು ಹೆಕ್ಟೇರ್ ಮೀನು ಕೃಷಿ ಕೈಗೊಳ್ಳಲು ನಾಲ್ಕು ಲಕ್ಷ ರೂಪಾಯಿ ಅಗತ್ಯವಿದೆ. ಕೃಷಿ ಕಾರ್ಯದ ನಿರ್ವಹಣೆಗೆ ಒಬ್ಬ ಕಾರ್ಮಿಕ ಸಾಕು’ ಎನ್ನುವುದು ಅವರ ಅನುಭವದ ನುಡಿ. ರೈತ ಸಮುದಾಯ ಕೇವಲ ಸಾಂಪ್ರದಾಯಿಕ ಬೆಳೆಗಳನ್ನೇ ಅವಲಂಬಿಸದೆ ಕೃಷಿ ಪೂರಕವಾದ ಲಾಭದಾಯಕ ಮೀನು ಕೃಷಿಯನ್ನು ಕೈಗೊಳ್ಳಬೇಕು. ಇದಕ್ಕಾಗಿ ಮೀನುಗಾರಿಕೆ ಇಲಾಖೆಯು ರಾಷ್ಟ್ರೀಯ ಪ್ರೊಟೀನ್ ಪೂರೈಕೆ ಅಭಿಯಾನ ಯೋಜನೆಯಡಿ(ಎನ್ಎಂಪಿಎಸ್) ಸಾಮಾನ್ಯ ವರ್ಗದವರಿಗೆ ಶೇ40 ರಷ್ಟು ಅಂದರೆ 1.60 ಲಕ್ಷ ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ50ರಷ್ಟು ಅಂದರೆ, ಎರಡು ಲಕ್ಷ ರೂಪಾಯಿ, ಕನಿಷ್ಠ ಒಂದು ಎಕರೆಯಿಂದ ಗರಿಷ್ಠ 12.50 ಎಕರೆವರೆಗೆ ಸಹಾಯಧನ ನೀಡುತ್ತದೆ.

‘ಶೋಭಾ ಪಾಟೀಲ್ ಅವರಿಗೆ 3.20 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದ್ದು ಇಲಾಖೆಯಿಂದ ಕಾಲಕಾಲಕ್ಕೆ ಎಲ್ಲ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ಒದಗಿಸಲಾಗುವುದು. ಈ ಮೂಲಕ ಇದನ್ನು ಜಿಲ್ಲೆಯ ಮಾದರಿ ಪ್ರಾತ್ಯಕ್ಷಿಕೆ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಹಿರಿಯ ಸಹಾಯಕ ನಿರ್ದೇಶಕ ಹರೀಶಕುಮಾರ ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕ ಶರಣಪ್ಪ ಬಿರಾದಾರ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 64 ಇಲಾಖಾ ಕೆರೆಗಳು, ಐದು ಜಲಾಶಯಗಳು ಹಾಗೂ ಒಂಬತ್ತು ನದಿ ಪ್ರದೇಶಗಳಿದ್ದು, ಒಟ್ಟು 7,550 ಹೆಕ್ಟೇರ್ ಜಲ ಪ್ರದೇಶ ಮೀನುಕೃಷಿ ಕೈಗೊಳ್ಳಲು ಯೋಗ್ಯವಿದೆ. ಮೀನುಕೃಷಿ ಒಂದು ಉದ್ಯಮವಾಗಿದ್ದು, ಉದ್ಯೋಗ ಸೃಷ್ಟಿಗಾಗಿ, ಪೌಷ್ಟಿಕ ಆಹಾರ ಉತ್ಪಾದನೆಗಾಗಿ, ಜನರ ಆರೋಗ್ಯ ರಕ್ಷಣೆಗಾಗಿ ಹಾಗೂ ಗೃಹ ಅಲಂಕಾರಕ್ಕಾಗಿ ಮೀನುಕೃಷಿಯು ಸಹಾಯಕವಾಗಿದೆ.

ಜಿಲ್ಲೆಯಲ್ಲಿ ಒಟ್ಟು 18 ಮೀನುಗಾರಿಕೆ ಸಹಕಾರ ಸಂಘಗಳಿದ್ದು, ಜಿಲ್ಲೆಯ ಕೆರೆ, ನದಿ ಹಾಗೂ ಜಲಾಶಯಗಳನ್ನು ಗುತ್ತಿಗೆ/ಹರಾಜಿನಲ್ಲಿ ಪಡೆದು ಇಲಾಖೆಯಿಂದ ಮೀನು ಮರಿಗಳನ್ನು ಖರೀದಿಸಿ ಬಿತ್ತನೆ ಮಾಡಿ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೂನ್‌ದಿಂದ ಸೆಪ್ಟೆಂಬರ್‌ವರೆಗೆ ಮೀನುಕೃಷಿ ಕೈಗೊಳ್ಳಬಹುದು. ಸೊಲ್ಲಾಪುರ ಮತ್ತು ಹೈದರಾಬಾದ್‌ಗಳಲ್ಲಿ ಮೀನು ಮಾರುಕಟ್ಟೆ ಸೌಲಭ್ಯವಿರುತ್ತದೆ. ಜಿಲ್ಲೆಯಲ್ಲಿ 2 ಸಾವಿರ ಮೀನುಗಾರರ ಕುಟುಂಬಗಳಿದ್ದು, ಮೀನುಗಾರಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ.
 ಶೋಭಾ ಅವರ ಸಂಪರ್ಕಕ್ಕೆ 87222 62724.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT