ನಾನು, ಸರ್ಕಾರಿ ಕನ್ನಡ ಶಾಲಾ ಅತಿಥಿ ಮಾಸ್ತರಾಗಿ ಐದು ವರ್ಷಗಳಿಂದಲೂ, ತಿಂಗಳಿಗೆ ಐದು ಸಾವಿರ ರೂಪಾಯಿ ಪಗಾರದಂತೆ, ಶಾಲಾ ದಿನಗಳಲ್ಲಿ ಒಂದು ದಿನವೂ ಬಿಡುವಿಲ್ಲದಂತೆ ಪಾಠ ಮಾಡಿದ್ದೇನೆ. ಕನ್ನಡ ಶಾಲೆಗಳಿಗೆ ಸರ್ಕಾರ ನೇಮಿಸಿದ ಮಾಸ್ತರರು ಈ ತಿಂಗಳ 7ರಂದು ಡ್ಯೂಟಿಗೆ ಹಾಜರಾದ ಕಾರಣ ನಾವೆಲ್ಲರೂ ಈಗ ಬೀದಿಪಾಲಾಗಿದ್ದೇವೆ.
ಮುಂದಿನ ವಾರ ಹೈಸ್ಕೂಲ್‌ಗಳಿಗೂ ಹೊಸ ಮಾಸ್ತರರು ಬರಲಿದ್ದಾರೆ. ಪರಿಣಾಮವಾಗಿ ಅಲ್ಲಿಂದಲೂ ಅತಿಥಿ ಶಿಕ್ಷಕರು ಹೊರ ಬರುತ್ತಾರೆ. ಇದು ನಮ್ಮಂಥವರ ಗೋಳು.
ಕಾಲೇಜುಗಳಲ್ಲಿ ತಿಂಗಳಿಗೆ 12 ಸಾವಿರ ರೂಪಾಯಿ ಪಗಾರ ಪಡೆಯುವ ಅತಿಥಿ ಉಪನ್ಯಾಸಕರ ಬಗೆಗೆ ಕೆಲವು ಸಾಹಿತಿ–ಹೋರಾಟಗಾರರು ಮಾನವೀಯ ಮಾತು ಆಡಿದ್ದಾರೆ. ಅದೇ ಮಾತು ನಮಗ್ಯಾಕೆ ಅನ್ವಯವಾಗುವುದಿಲ್ಲ?