ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ಕಾಂಗ್ರೆಸ್‌ ಬಂಡಾಯ ಶಮನ

ಎಸ್‌.ಎಂ. ಆನಂದ್‌ ಮಧ್ಯಸ್ಥಿಕೆ: ಚುನಾವಣಾ ಪ್ರಚಾರ ನಡೆಸಲು ವೈ.ಎನ್‌. ರುದ್ರೇಶ್‌ಗೌಡ ಸಮ್ಮತಿ
Last Updated 12 ಫೆಬ್ರುವರಿ 2016, 7:24 IST
ಅಕ್ಷರ ಗಾತ್ರ

ಬೇಲೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಟಿಕೆಟ್‌ ಹಂಚಿಕೆಯಲ್ಲಿ ಕಡೆಗಣನೆಯಿಂದಾಗಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಇಲ್ಲಿನ ಶಾಸಕ ವೈ.ಎನ್‌. ರುದ್ರೇಶ್‌ಗೌಡ ಜತೆ ಕೆಪಿಸಿಸಿ ಕಾರ್ಯದರ್ಶಿ ಮತ್ತು ಆಹಾರ ನಿಗಮದ ಅಧ್ಯಕ್ಷ ಎಸ್‌.ಎಂ. ಆನಂದ್‌ ಗುರುವಾರ ಮಾತುಕತೆ ನಡೆಸಿ ಶಾಸಕರ ಅಸಮಾಧಾನವನ್ನು ಶಮನಗೊಳಿಸಿದರು.

ತಾಲ್ಲೂಕು ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಬಂಡಾಯ ಶಮನಗೊಂಡಿದ್ದು, ಶಾಸಕ ವೈ.ಎನ್‌. ರುದ್ರೇಶ್‌ಗೌಡ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಒಪ್ಪಿಗೆ ಸೂಚಿಸಿದ್ದು ಶುಕ್ರವಾರದಿಂದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಸ್‌.ಎಂ. ಆನಂದ್‌ ಪತ್ರಕರ್ತರ ಬಳಿ ಸ್ಪಷ್ಟಪಡಿಸಿದರು.

ಈ ಕಾರಣ ಹೆಬ್ಬಾಳು ಜಿ.ಪಂ. ಕ್ಷೇತ್ರದಿಂದ ಬಂಡಾಯವಾಗಿ ಕಣಕ್ಕಿಳಿದಿದ್ದ ರುದ್ರೇಶ್‌ಗೌಡರ ಬೆಂಬಲಿಗ ಜೀಪ್‌ ಚಂದ್ರಶೇಖರ್‌ ನಾಮಪತ್ರ ಹಿಂಪಡೆದರು. ಹೆಬ್ಬಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ತಮ್ಮ ಬೆಂಬಲಿಗ ಚಂದ್ರಶೇಖರ್‌(ಜೀಪ್‌ ಚಂದ್ರು) ಎಂಬುವವರಿಗೆ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದ ಶಾಸಕ ರುದ್ರೇಶ್‌ಗೌಡ 5 ಜಿ.ಪಂ. ಮತ್ತು 17 ತಾ.ಪಂ. ಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಿಲ್ಲ ಎಂದು ಹೇಳಿದ್ದರಲ್ಲದೆ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆಯೂ ಗೈರು ಹಾಜರಾಗಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಶಾಸಕ ವೈ.ಎನ್. ರುದ್ರೇಶ್‌ಗೌಡರ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯದರ್ಶಿ ಎಸ್‌.ಎಂ. ಆನಂದ್‌ ಶಾಸಕ ರುದ್ರೇಶ್‌ಗೌಡ ಮತ್ತು ಅವರ ಸಹೋದರ ವೈ.ಎನ್‌. ಕೃಷ್ಣಕುಮಾರ್‌ ಜೊತೆಗೆ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಶಾಸಕರ ನೇತೃತ್ವದಲ್ಲೇ ಪ್ರಚಾರ: ಮಾತುಕತೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಎಸ್‌.ಎಂ. ಆನಂದ್‌ ‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಗೊಂದಲ ಆಗುವುದು ಎಲ್ಲಾ ಪಕ್ಷದಲ್ಲೂ  ಸಾಮಾನ್ಯ. ಅದೇ ರೀತಿ ಬೇಲೂರು ಕಾಂಗ್ರೆಸ್‌ ಪಕ್ಷದಲ್ಲೂ ಸಣ್ಣಪುಟ್ಟ ಗೊಂದಲ ಉದ್ಭವಿಸಿತ್ತು.

ಹೆಬ್ಬಾಳು ಕ್ಷೇತ್ರದ ಟಿಕೆಟ್‌ ಹಂಚಿಕೆಯಲ್ಲಿನ ಗೊಂದಲದಿಂದ ಶಾಸಕ ರುದ್ರೇಶ್‌ಗೌಡರು ಅಸಮಾಧಾನಗೊಂಡಿದ್ದರು. ಜಿಲ್ಲೆಗೆ ಬಂದಿದ್ದ ಚುನಾವಣಾ ವೀಕ್ಷಕರಾದ ನಾರಾಯಣಸ್ವಾಮಿ ಅವರು ರುದ್ರೇಶ್‌ಗೌಡರೊಂದಿಗೆ ಮಾತುಕತೆ ನಡೆಸುವಂತೆ ತಿಳಿಸಿದ್ದರು. ಅದರಂತೆ ಇಂದು ಮಾತುಕತೆ ನಡೆಸಿ ರುದ್ರೇಶ್‌ಗೌಡರನ್ನು ಅಸಮಾಧಾನವನ್ನು ಶಮನಗೊಳಿಸಲಾಗಿದೆ ಎಂದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಶಾಸಕ ವೈ.ಎನ್‌. ರುದ್ರೇಶ್‌ಗೌಡರ ನೇತೃತ್ವದಲ್ಲಿಯೇ ನಡೆಸಲಾಗುವುದು. ಇಂದು ಸಂಜೆ ಅಥವಾ ನಾಳೆಯೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ. ಶಿವರಾಂ ಸಹ ರುದ್ರೇಶ್‌ಗೌಡರೊಂದಿಗೆ ಮಾತನಾಡಲಿದ್ದಾರೆ. ಒಟ್ಟಾರೆ ಬೇಲೂರು ಕಾಂಗ್ರೆಸ್‌ನಲ್ಲಿದ್ದ ಬಿನ್ನಾಭಿಪ್ರಾಯ ಶೇಕಡ 100ರಷ್ಟು ಬಗೆಹರಿದಿದೆ ಎಂದರು.

ಪ್ರಚಾರ ನಡೆಸುವೆ: ಬಳಿಕ ಮಾತನಾಡಿದ ಶಾಸಕ ವೈ.ಎನ್‌. ರುದ್ರೇಶ್‌ಗೌಡ ‘ಟಿಕೆಟ್‌ ಹಂಚಿಕೆಯಲ್ಲಿ ಸಣ್ಣಪುಟ್ಟ ಗೊಂದಲ ಉಂಟಾಗಿತ್ತು. ತಮ್ಮನ್ನು ಕಡೆಗಣಿಸಿದ್ದರಿಂದ ಮನಸ್ಸಿಗೆ ಬೇಸರವಾಗಿತ್ತು. ಅದೆಲ್ಲಾ ಈಗ ಬಗೆಹರಿದಿದೆ. ಶುಕ್ರವಾರದಿಂದ ತಾವು ಮತ್ತು ತಮ್ಮ ಬೆಂಬಲಿಗರು ಪ್ರಚಾರ ನಡೆಸಲಿದ್ದೇವೆ‘ ಎಂದು ಸ್ಪಷ್ಪಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ಮುಖಂಡ ಪ್ರೇಮ್‌ಕುಮಾರ್‌, ಜಿ.ಪಂ. ಮಾಜಿ ಸದಸ್ಯ ವೈ.ಎನ್‌. ಕೃಷ್ಣಕುಮಾರ್‌, ಪುರಸಭಾ ಸದಸ್ಯ ಬಿ.ಎಲ್‌. ಧರ್ಮೇಗೌಡ ಇದ್ದರು.

***
ಟಿಕೆಟ್‌ ಹಂಚಿಕೆಯಲ್ಲಿ ಸಣ್ಣಪುಟ್ಟ ಗೊಂದಲ ಉಂಟಾಗಿತ್ತು. ತಮ್ಮನ್ನು ಕಡೆಗಣಿಸಿದ್ದರಿಂದ ಮನಸ್ಸಿಗೆ ಬೇಸರವಾಗಿತ್ತು, ಈಗ ಬಗೆಹರಿದಿದೆ.
-ವೈ.ಎನ್‌. ರುದ್ರೇಶ್‌ ಗೌಡ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT