ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವು ನೆಟ್ಟು ಮಾವಿನ ನಿರೀಕ್ಷೆ!

Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ಮಹಿಳೆಯರ ಬಗ್ಗೆ ಶಿಕ್ಷಕರ ಮನೋಭಾವ ಬದಲಾಗಬೇಕೆಂದು ಬಯಸುವ ನಾವು, ಮಕ್ಕಳ ಪುಸ್ತಕಗಳಲ್ಲಿ ಇರುವ ಅಸಮಾನತೆಯನ್ನು ಅಲಕ್ಷಿಸಿದರೆ ಹೇಗೆ?

ಚಿಕ್ಕಂದಿನಲ್ಲಿ ನಾನು, ಅಣ್ಣ ಯಾವಾಗಲೂ ಜೋಡಿ. ಮನೆಯಿಂದ ಒಂದು ಫರ್ಲಾಂಗು  ದೂರವಷ್ಟೇ ನಮ್ಮ ಶಾಲೆ. ಅಡಿಕೆ ತೋಟದಲ್ಲಿ ಶಾಲೆ ಹುಡುಗರೇ ನಿತ್ಯ ನಡೆದು ನಡೆದು ಮಾಡಿದ ಕಾಲ್ದಾರಿ. ಎಲ್ಲರೂ ಆ ಕಾಲ್ದಾರಿಯಲ್ಲೇ ನಡೆದು ಹೋಗುತ್ತಿದ್ದರೆ ನಮ್ಮಿಬ್ಬರಿಗೆ ಮಾತ್ರ ಬೇರೆಯೇ ಹಾದಿ. ಬೇರೆಯದೆಂದರೇನು, ಹಾದಿಯೇ ಇಲ್ಲ, ನಾವು ಹೋಗಿದ್ದೇ ಹಾದಿ. ಗುಡ್ಡ ಬೆಟ್ಟಗಳ ಹತ್ತಿ ಇಳಿದು ಹಳ್ಳದಲ್ಲಿ ನೀರಾಟ ಆಡಿಯೇ ನಾವು ಶಾಲೆಗೆ ಪ್ರವೇಶ ಮಾಡುತ್ತಿದ್ದುದು. ತಡವಾಗಿ ಹೋಗಿದ್ದಕ್ಕೆ ಬೆತ್ತದೇಟು ತಪ್ಪಿದ್ದಲ್ಲ. ನನಗೆ ಒಂದೇ ಏಟಾದರೆ ಅಣ್ಣನಿಗೆ ನಾಲ್ಕು. ಯಾಕೆಂದರೆ ಅವನು ಹುಡುಗ, ಎಲ್ಲೆಲ್ಲಿಗೋ ಈ ಮುಗ್ಧ ಹುಡುಗಿಯನ್ನು ಕರೆದುಕೊಂಡು ಹೋಗುವವ.

ಮತ್ತೆ ಶಾಲೆಯಿಂದ ಹಿಂದಿರುಗುವಾಗಲೂ ಅಷ್ಟೇ. ಬೆತ್ತದ ಏಟಿಗೆ ಕೆಂಪಾದ ಹಸ್ತ ಮರಳಿ ತನ್ನ ಬಣ್ಣಕ್ಕೆ ಬರುವುದರೊಳಗೆ ನಮಗದು ಮರೆತೇ ಹೋಗಿರುತ್ತಿತ್ತು. ಮತ್ತೆ ಮರಗಳನ್ನು ಹತ್ತಿ ಇಳಿದು, ಮರಕೋತಿಯಂತೆ ಉಯ್ಯಾಲೆ ಆಡಿಕೊಂಡು ಮನೆ ಮುಟ್ಟುವವರು ನಾವು. ಅಲ್ಲಿ ಆಯಿಯ ಬಯ್ಗಳು ಅಣ್ಣನಿಗಿಂತ ನನಗೆ ಜಾಸ್ತಿ. ‘ಅವನಂತೂ ಗಂಡು ಹುಡುಗ. ನೀನು ಹುಡುಗಿ. ಹಾಗೆಲ್ಲ ಪುಂಡು ಪೋಕ್ರಿ ಹಾಂಗೆ ಅಲೆದಾಡಿ ಬರ್ತೀಯಲ್ಲ’ ಎಂದು. ಅವನಿಗೆ ಗಂಡು ಹುಡುಗ ಎಂದು ಮಾಸ್ತರರಿಂದ ಹೆಚ್ಚು ಬೆತ್ತದೇಟು. ನನಗೆ ಹೆಣ್ಣು ಹುಡುಗಿಯೆಂದು ಆಯಿಯಿಂದ ಹೆಚ್ಚು ಬಯ್ಗಳು! ಏಕೆ? ಇದೇಕೆ? ಅರ್ಥವೇ ಆಗುತ್ತಿರಲಿಲ್ಲ. ಪಾಠದಲ್ಲೂ ಅಷ್ಟೇ, ನನ್ನಂಥದ್ದೇ ಲಂಗ ಹಾಕಿದ ಹುಡುಗಿ ಅಮ್ಮನಿಗೆ ಮಾತ್ರ ನೆರವಾಗಬೇಕು. ಅಣ್ಣನಂತೆ ಚಡ್ಡಿ ಹಾಕಿಕೊಂಡ ಹುಡುಗ ಅಪ್ಪನಿಗೆ ಗಿಡ ನೆಡುವುದರಲ್ಲಿ ಸಹಾಯ ಮಾಡಬೇಕು.`‘ನೀನೂ ಗದ್ದೆ ನೆಟ್ಟಿ ಮಾಡ್ತೀಯಲ್ಲ, ಆದ್ರೆ ಪುಸ್ತಕದಲ್ಲಿ ಅಮ್ಮ ಅಡುಗೆ ಮಾಡುತ್ತಾಳೆ ಎಂದು ಮಾತ್ರ ಬರೆದಿದ್ದಾರಲ್ಲ?’ ಎಂಬ ನನ್ನ ಪ್ರಶ್ನೆಗೆ, ‘ಅವೆಲ್ಲ ಬಯಲು ಸೀಮೆಯ ಉದಾಹರಣೆಗಳು ಬಿಡು’ ಎಂದು ಆಯಿ ಸಮಾಧಾನದಲ್ಲಿದ್ದಾಗ ಉತ್ತರಿಸುತ್ತಿದ್ದಳು.

ಇಂಗ್ಲಿಷಿನಲ್ಲಿ ಹಾಡೊಂದಿತ್ತು. ‘ಫಾದರ್ ಬ್ರಿಂಗ್ಸ್ ಹೋಮ್ ಮನಿ, ಮದರ್ ಲೇಸ್ ಔಟ್ ದ ಮನಿ’ ಎಂದು. ಅದಕ್ಕೆ ನಮ್ಮ ಮಾಸ್ತರರು ‘ಅಪ್ಪ ಕಷ್ಟಪಟ್ಟು ದುಡಿದು ಮನೆಗೆ ಹಣ ತರುತ್ತಾನೆ, ಅಮ್ಮ ಅದನ್ನು ಖರ್ಚು ಮಾಡುತ್ತಾಳೆ’ ಎಂದು ಅರ್ಥ ಹೇಳಿದ್ದಾಗ ಆ ಬಾಲ್ಯದ ಮುಗ್ಧತೆಯಲ್ಲೂ ನನಗೆ ಸಿಟ್ಟು ತಡೆಯದಾಗಿತ್ತು. ಅವರು ತಪ್ಪು ಅರ್ಥ ಹೇಳಿದ್ದಾರೆಂದೇ ನಿರ್ಧಾರ ಮಾಡಿಕೊಂಡಿದ್ದೆ. ಇಂಗ್ಲಿಷ್ ಸರಿಯಾಗಿ ಕಲಿತ ಮೇಲೆ ಆ ಸಾಲಿನ ಅರ್ಥವಾಯಿತು ಬಿಡಿ. ಆದರೆ ಆ ಸಾಲನ್ನು ಹೆಣ್ಣಿನ ಬಗ್ಗೆ ತುಚ್ಛವಾಗಿ ಅರ್ಥೈಸಿದ ಮಾಸ್ತರರ ಮೇಲೆ ಇಂದಿಗೂ ಸಿಟ್ಟಿದೆ.

ಇತ್ತೀಚೆಗೆ ಶಾಲೆಗೆ ಹೋಗುವ ಇಬ್ಬರು ಹುಡುಗಿಯರನ್ನು ಹುಡುಗರಿಬ್ಬರು ಚುಡಾಯಿಸಿದರೆಂದು ಪೊಲೀಸ್ ಸ್ಟೇಷನ್‌ಗೆ ಒಯ್ದಿದ್ದರು. ಒಯ್ದಿದ್ದು ಯಾರನ್ನು? ಚುಡಾಯಿಸಿದ ಹುಡುಗರನ್ನಲ್ಲ, ಚುಡಾಯಿಸಿಕೊಂಡ ಶಾಲೆ ಹುಡುಗಿಯರನ್ನು! ಬಲಾತ್ಕಾರದ ಕೇಸ್ ಬಂದರೂ ಹುಡುಗಿಯರ ಮೇಲೇ ತಪ್ಪು ಹೊರೆಸುವ ಈ ಸಮಾಜದ ಒಂದು ಭಾಗ ತಾನೇ ಆ ಪೊಲೀಸರು?

‘ಮಹಿಳಾ ದೌರ್ಜನ್ಯ ಮತ್ತು ಪೊಲೀಸರು’ ಎಂಬ ವಿಷಯವಾಗಿ ಮಾತನಾಡಲು ವೇದಿಕೆಯೇರಿದ್ದ ಒಬ್ಬ ಪೊಲೀಸ್ ಅಧಿಕಾರಿ ‘ನಿಮ್ಮ ನಿಮ್ಮ ಮನೆಗಳಲ್ಲಿ ಹುಡುಗಿಯರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಸಾಕಿ. ಅಂದರೆ ಸಮಾಜದಲ್ಲಿ ದೌರ್ಜನ್ಯಗಳು ಕಡಿಮೆ ಆಗುತ್ತವೆ’ ಎಂದು ಭಾಷಣ ಮಾಡಿದಾಗ ಮುಖ್ಯ ಅತಿಥಿಯಾಗಿದ್ದರಿಂದ ಪ್ರತಿಭಟಿಸಲೂ ಆಗದಂಥ ಪರಿಸ್ಥಿತಿ.

ಯಾರ್‍ಯಾರಿಗೆಂದು ಲಿಂಗ ಸಮಾನತೆಯನ್ನು ಕಲಿಸುವುದು?, ಯಾವ ಯಾವ ರೀತಿಯಲ್ಲಿ ಪ್ರತಿಭಟಿಸುವುದು ಎನ್ನುವುದು ಲಿಂಗ ಸಮಾನತೆ ತರಬೇತಿಯಲ್ಲಿ ಭಾಗಿಗಳಾಗಿರುವ ನಮ್ಮನ್ನು ಮತ್ತೆ ಮತ್ತೆ ಕಾಡುವ ಪ್ರಶ್ನೆ. ಕೆಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಮಹಿಳೆಯರು ಸಂಘಗಳನ್ನು ಮಾಡಿಕೊಂಡು ಬ್ಯಾಂಕಿಗೆ ಪ್ರವೇಶ ಮಾಡಿದಾಗ ಬ್ಯಾಂಕ್‌ ಅಧಿಕಾರಿಗಳಿಗೆ ಅವರನ್ನು ಒಪ್ಪಿಕೊಳ್ಳಲು ಲಿಂಗತ್ವ ತರಬೇತಿಯನ್ನು ಕೊಡಬೇಕಾಯಿತು. ಹಾಗೆಯೇ ಜಲಾನಯನ ಅಧಿಕಾರಿಗಳಿಗೆ, ಅರಣ್ಯ ಇಲಾಖೆಯವರಿಗೆ, ಹೈನುಗಾರಿಕೆ ಸಿಬ್ಬಂದಿಗೆ, ಕಡೆಗೆ ಪೊಲೀಸರಿಗೆ ಕೂಡ ಲಿಂಗ ಸಮಾನತೆಯ ತರಬೇತಿಗಳನ್ನು ಕೊಡಬೇಕಾಯಿತು. ಇಂದಿಗೂ ಅಭಿವೃದ್ಧಿಯ ಯಾವುದೇ ತರಬೇತಿಯಲ್ಲಿ ಲಿಂಗ ಸಮಾನತೆಯು ಒಂದು ಮುಖ್ಯ ವಿಷಯವಾಗಿರುತ್ತದೆ. ಮಹಿಳಾ ಸಬಲೀಕರಣ ತರಬೇತಿಗಳೆಂದು ಇವನ್ನು ಕರೆದರೂ ಆಯಾ ಪಾತ್ರಗಳಲ್ಲಿ ಎದುರಿಗೆ ಬರುತ್ತಿರುವ ಮಹಿಳೆಯನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಕ್ಕೆ ಈ ಅಧಿಕಾರಿಗಳಿಗೆ ಕೊಡುವ ತರಬೇತಿಗಳು ಇವಾಗಿವೆ.

ಹಲವು ವರ್ಷಗಳ ಹಿಂದೆ ಧಾರವಾಡದಲ್ಲಿ ನವ ಸಾಕ್ಷರರಿಗೆಂದು ಪುಸ್ತಕ ರಚನಾ ಸಮಿತಿಯಲ್ಲಿ ನಾನೂ ಒಬ್ಬಳಾಗಿದ್ದೆ. ಆಗ ಪುಸ್ತಕದಲ್ಲಿ ಇದ್ದ ಲಿಂಗಾಧಾರಿತ ಪಾತ್ರಗಳ ಬಗ್ಗೆ ನಾನು ಮತ್ತು ಶಾಂತಾ ಹಿರೇಮಠ ತೀವ್ರವಾಗಿ ಪ್ರತಿಭಟಿಸಿದೆವು. ಮತ್ತೆ ಅಡುಗೂಲಜ್ಜನ ಕಾಲದ, ‘ಕಮಲವ್ವ ನೀರು ತರುತ್ತಾಳೆ, ಬಸಪ್ಪ ಎತ್ತು ಕಟ್ಟುತ್ತಾನೆ’ ಎಂಬ ಪಾಠಗಳೇ ಇದ್ದಾಗ, ಅಕ್ಷರ ಕಲಿತು ಹೊರಜಗತ್ತಿಗೆ ತೆರೆದುಕೊಳ್ಳುತ್ತಿರುವ ನವಸಾಕ್ಷರರಿಗೆ ಮಹಿಳೆಯ ಬೇರೆ ಬೇರೆ ಪಾತ್ರಗಳ ಪರಿಚಯವನ್ನು ಈ ಪಾಠ ಮತ್ತು ಅದರಲ್ಲಿರುವ ಚಿತ್ರಗಳ ಮೂಲಕ ಪರಿಚಯಿಸಬೇಕು ಎಂದು ನಮ್ಮ ವಾದ. ಇದಕ್ಕೆ ಉಳಿದವರನ್ನು ಒಪ್ಪಿಸುವಾಗ ನಮಗಿಬ್ಬರಿಗೆ ಸಾಕು ಸಾಕಾಗಿ ಹೋಗಿತ್ತು.


ತಪ್ಪು ಇವರ್‍ಯಾರದ್ದೂ ಅಲ್ಲ, ಇವರ ತಪ್ಪು ಹೇಗಾದೀತು ಹೇಳಿ? ಯಾವ ಮಾಧ್ಯಮದಲ್ಲೇ ಓದಿರಲಿ, ಶಾಲೆಯ ಮೊದಲ ಪಾಠದಿಂದಲೇ ಲಿಂಗಾಧಾರಿತ ಪಾತ್ರಗಳನ್ನು ಅಚ್ಚುಕಟ್ಟಾಗಿ ಚಿತ್ರ, ಬರಹ, ಪ್ರಶ್ನೋತ್ತರ ಎಲ್ಲ ರೀತಿಯಲ್ಲೂ ಮನದಲ್ಲಿ ಗಟ್ಟಿಗೊಳಿಸಿರುವಾಗ, ದೊಡ್ಡವರಾದ ಮೇಲೆ ನೀವು ಬೇರೆ ರೀತಿಯಲ್ಲಿ ವರ್ತಿಸಿ  ಎಂದು ಯಾರನ್ನಾದರೂ ಕೇಳಿದರೆ ಅವರು ಹೇಗೆ ಬದಲಾಯಿಸಿಕೊಳ್ಳಬೇಕು? ಈ ನಿಟ್ಟಿನಲ್ಲಿ ಸ್ವರಾಜ್ ಸಂಘಟನೆ ಮತ್ತು`ಆ್ಯಕ್ಷನ್ ಏಡ್‌ ಇತ್ತೀಚೆಗೆ ಮಾಡಿರುವ ಸಂಶೋಧನೆ ಕಣ್ಣು ತೆರೆಸುವಂತಿದೆ. ಬಾಲ್ಯದಿಂದ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಒಮ್ಮೆಗೇ ಉತ್ತರ ಸಿಕ್ಕಂತಾಗಿದೆ.

ಸರ್ವ ಶಿಕ್ಷಣ ಅಭಿಯಾನದಡಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ತರಬೇತಿ ಪುಸ್ತಕವೊಂದನ್ನು ಹೊರತಂದಿದೆ. ಶಾಲೆಯಲ್ಲಿ ಶಿಕ್ಷಕರು ಸಮಾನತೆಯನ್ನು ಹೇಗೆ ರೂಢಿಸಿಕೊಳ್ಳಬಹುದು, ಶಿಕ್ಷಕರ ಮನೋಭಾವ ಹೇಗಿರಬೇಕು ಎಂದು ತರಬೇತಿ ನೀಡಲಿಕ್ಕಾಗಿ ತಯಾರಿಸಿದ ಹೊತ್ತಿಗೆ ಇದು. ಇದರಲ್ಲಿ  ಬೇರೆ ಬೇರೆ ರಂಗಗಳಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ಚರ್ಚಿಸಲಾಗಿದೆ. ಆದರೆ ಮೂಲತಃ ಪಾಠಗಳಲ್ಲಿಯೇ ಅಸಮಾನತೆ ತುಂಬಿರುವುದರ ಬಗ್ಗೆ ಚರ್ಚೆ ಆಗಿಲ್ಲ. ಶಿಕ್ಷಕರ ಧೋರಣೆಗಳು, ಮನೋಭಾವ ಬದಲಾಗಬೇಕೆಂದು ಬಯಸುವ ಆ ಪುಸ್ತಕ, ಮಕ್ಕಳು ಕಲಿಯುವ ಪಾಠಗಳಲ್ಲೇ ಇರುವಂಥ ಅಸಮಾನತೆಯ ಧೋರಣೆಯನ್ನು ಅಲಕ್ಷಿಸಿತೇ?

ಕಹಿ ಬೇವಿನ ಗಿಡ ನೆಟ್ಟು ಸಿಹಿ ಮಾವನ್ನು ಬಯಸಿದರೆ ಆದೀತೇ? ಮರ ಬೆಳೆದ ನಂತರ ಟೊಂಗೆಗಳಿಗೆ ಜೆಂಡರ್ ತರಬೇತಿಯ ಕಸಿ ಮಾಡುತ್ತಿದ್ದೇವೆ ನಾವು. ಕಸಿ ಮಾಡಿದ್ದು ನಿಲ್ಲುತ್ತಿಲ್ಲ. ಮಕ್ಕಳಿಗೆ ಮನೆಯಲ್ಲಿ ರೂಢಿಸುವ ಕೆಲಸಗಳು, ಕಲಿಸುವ ಹಾಡುಗಳು, ಗಾದೆ ಮಾತುಗಳು, ನಾಣ್ನುಡಿಗಳು, ಆಚರಣೆಗಳು, ಸಿನಿಮಾ ಗೀತೆಗಳು, ಸಿನಿಮಾ ಹೆಸರುಗಳು, ಕತೆಗಳು ಎಲ್ಲವೂ ತಾರತಮ್ಯವನ್ನೇ ಬೋಧಿಸುತ್ತಿರುವಾಗ ಯಾವ ವ್ಯಕ್ತಿಯಲ್ಲಿ ಬೇರೆ ನಿಲುವನ್ನು ನಿರೀಕ್ಷಿಸೋಣ? ಪಠ್ಯಪುಸ್ತಕ ಸಮಿತಿಯು ತೀರಾ ಗಂಭೀರವಾಗಿ ಸ್ವರಾಜ್ ಸಂಘಟನೆ ಮಾಡಿರುವ ಅಧ್ಯಯನವನ್ನು ಪರಿಶೀಲಿಸಬೇಕು. ತೀರಾ ತುರ್ತಾಗಿ ಎಲ್ಲ ಪುಸ್ತಕಗಳಲ್ಲೂ ಬದಲಾವಣೆಗಳನ್ನು ತರಲೇಬೇಕು. ಈ ಪೀಳಿಗೆಯವರೆಗೆ ನಾವೆಲ್ಲ ಅನುಭವಿಸಿದ್ದು ಸಾಕು. ನಮ್ಮ ಮಕ್ಕಳಲ್ಲ, ಮೊಮ್ಮಕ್ಕಳಾದರೂ ಸರಿಯಾದ ಪಾಠಗಳನ್ನು ಕಲಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT