ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ಬೀಸಣಿಗೆ

ಅರಿವು ಹರಿವು
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಏಪ್ರಿಲ್‌ ತಿಂಗಳ ಮಧ್ಯದಲ್ಲಿದ್ದೇವೆ. ಉಷ್ಣತಾ ಮಾಪಕದಲ್ಲಿ ಪಾದರಸದ ಚಲನೆ ಏರು ಗತಿಯಲ್ಲಿದೆ. ಬಿಸಿಲಿನ ಝಳವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅಪರೂಪಕ್ಕೆ ಸಂಜೆ ಧೋ ಎಂದು ಸುರಿದು ಮಾಯವಾಗುವ ಮಳೆ ಬಿಸಿಲ ಬೇಗೆಯನ್ನು ಹೆಚ್ಚುತ್ತಿದೆಯೇ ವಿನಃ ಕುಗ್ಗಿಸುತ್ತಿಲ್ಲ. ವಿದ್ಯುತ್‌ ಬೇರೆ ಕಣ್ಣಾಮುಚ್ಚಾಲೆ­ಯಾಡುತ್ತಿದೆ.

ಮೈಯಿಂದ ಬೆವರು ನದಿಯಂತೆ ಹರಿಯುತ್ತಿರು­ವಾಗ, ಮನೆ ಜಗಲಿಯಲ್ಲಿ ಕಾಲು ನೀಡಿ ಕುಳಿತು ‘ಬೀಸಣಿಗೆ’ಯನ್ನು ಬೀಸುತ್ತಿದ್ದರೆ ಮೈಗೆ ಸೋಕುವ ತಂಗಾಳಿ ದೇಹವನ್ನು ಮಾತ್ರವಲ್ಲ ಮನಸ್ಸನ್ನೂ ತಣಿಸುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಮೂಲೆ­ಗುಂಪಾಗುವ ‘ಬೀಸಣಿಗೆ’ಗೆ ಬೇಸಿಗೆ ಕಾಲದಲ್ಲಿ ಎಲ್ಲಿಲ್ಲದ ಬೇಡಿಕೆ. ವಿದ್ಯುತ್‌, ಸೋಲಾರ್‌ ಸಂಪರ್ಕ ಇಲ್ಲದ ಊರು­ಗಳಲ್ಲಿ, ಮನೆಗಳಲ್ಲಿ ಸುಡು ಬೇಸಿಗೆ­ಯಲ್ಲಿ ‘ಬೀಸಣಿಗೆ’ ಇರಲೇಬೇಕು.

ನಿಮಗೆ ಗೊತ್ತಾ? ಅಂಗೈಯಷ್ಟು ದೊಡ್ಡದಾಗಿರುವ ಬೀಸಣಿಗೆ ಹಿಂದಿನ ಕಾಲದಲ್ಲಿ ರಾಜತ್ವ ಮತ್ತು ಶ್ರೇಷ್ಠತೆಯ ಸಂಕೇತವಾಗಿತ್ತು. ಬೀಸಣಿಗೆಯನ್ನು ಹೊಂದಿ­ರು­ವುದು ಆಗ ಘನತೆಯ ವಿಷಯವಾಗಿತ್ತು. ಕೇವಲ ರಾಜ ಕುಟುಂಬಗಳಲ್ಲಿ, ಸಿರಿವಂತರ ಮನೆ­ಗಳಲ್ಲಿ ಇದನ್ನು ಕಾಣಬಹುದಿತ್ತು.

ಬೀಸಣಿಗೆಯ ಇತಿಹಾಸದ ಹರಿವಿನ ಮೂಲ 4,000 ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಸಿಗುತ್ತದೆ. ಈಜಿಪ್ಟ್‌ನ ರಾಜಪರಂಪರೆಯ 18ನೇ ರಾಜ ಟುಟಾಂಖಮುನ್‌ನ ಸಮಾಧಿಯಲ್ಲಿ ಎರಡು ಬೀಸಣಿಗೆಗಳು ಪತ್ತೆಯಾಗಿದ್ದವು. ಆಸ್ಟ್ರಿಚ್‌ ಪಕ್ಷಿಯ ಗರಿಗಳಿಂದ ಮಾಡಿದ್ದ ಒಂದು ಬೀಸಣಿಗೆಯು ಚಿನ್ನದ ಹಿಡಿ­ ಹೊಂದಿತ್ತು. ಮತ್ತೊಂದು ಬೀಸಣಿಗೆಯನ್ನು ಬೆಲೆ ಬಾಳುವ ರತ್ನ, ಹವಳ ಹಾಗೂ ಚಿನ್ನದಿಂದ ಮಾಡ­ಲಾಗಿತ್ತು.

ಉಳಿದಂತೆ ಹೀಬ್ರೂ ಜನಾಂಗ­ದ­ವರು, ಪರ್ಷಿಯನ್ನರು, ಗ್ರೀಕರು ಮತ್ತು ರೋಮನ್ನರು ಕೂಡ ವಿವಿಧ ಬಗೆಯ ಬೀಸಣಿಗೆಗಳನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸುತ್ತಿದ್ದರು. ಗ್ರೀಕ್‌, ರೋಮನ್‌ ದಾಖಲೆಗಳು ಹಾಗೂ ಬೈಬಲ್‌ಗಳಲ್ಲೂ ಇವುಗಳ ಬಗ್ಗೆ ಉಲ್ಲೇಖಗಳಿವೆ.
ಕ್ರಿ.ಪೂ 2ನೇ ಶತಮಾನದಲ್ಲಿ ಚೀನಾದಲ್ಲಿ ಬಿದಿರಿನಿಂದ ಮಾಡಿದ ಬೀಸಣಿಗೆಗಳು ಬಳಕೆಯಲ್ಲಿದ್ದವು. ಆರಂಭದ ದಿನಗಳಲ್ಲಿ ಬೀಸಣಿಗೆಗಳು ಬಳಕೆಯಾಗುತ್ತಿದ್ದುದು ಧಾರ್ಮಿಕ ಕಾರ್ಯಕ್ರಮಗಳಲ್ಲಿ. ವಿಶೇಷವಾಗಿ ಯುರೋಪಿನಾದ್ಯಂತ ಚರ್ಚುಗಳಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು. ಭಾರತದಲ್ಲೂ ಇದು ಜಾರಿಯಲ್ಲಿದೆ.  

ಬೀಸಣಿಗೆಗಳು ಹೊಸ ಮಜಲಿಗೆ ತೆರೆದುಕೊಂಡಿದ್ದು ಮಡಚುವ ಬೀಸಣಿಗೆ­ಗಳ ಆವಿಷ್ಕಾರದ ನಂತರ. ಜಪಾನ್‌ ಮತ್ತು ಚೀನಾದಲ್ಲಿ ಮಡಚುವ ಬೀಸಣಿಗೆಗಳು ರೂಪುಗೊಂಡವು. ಬಾವಲಿಯ ಮಡಚುವ ರೆಕ್ಕೆಯನ್ನು ಆಧರಿಸಿ ಜಪಾನಿನ ಬುದ್ಧಿವಂತ ಜನ ಮಡಚುವ ಬೀಸಣಿಗೆಯನ್ನು ಅಭಿವೃದ್ಧಿಪಡಿಸಿದರು ಎಂಬ ವಾದ ಇದೆ. ಚೀನಾದಲ್ಲಿ ಇದರ ಸೃಷ್ಟಿಯ ಹಿಂದಿನ ಕಥೆ ಕುತೂಹಲಕಾರಿಯಾಗಿದೆ. ಉತ್ಸವ­ದಲ್ಲಿ ಮಹಿಳೆಯೊಬ್ಬರು ತಮ್ಮ ಮುಖವಸ್ತ್ರದಿಂದ ಗಾಳಿ ಹಾಕಿ­ಕೊಳ್ಳು­ತ್ತಿದ್ದುದು ಮಡಚುವ ಬೀಸಣಿಗೆ ರೂಪು ತಳೆಯಲು ಕಾರಣವಾಯಿತಂತೆ!

1,500ರ ವೇಳೆಗೆ ಮಡಚುವ ಬೀಸಣಿಗೆ­ಗಳು ಯೂರೋಪ್‌ಗೆ ಕಾಲಿ­ಟ್ಟವು. 17ನೇ ಶತಮಾನದಲ್ಲಿ ಇವುಗಳು ಯೂರೋಪಿನಾದ್ಯಂತ ಭಾರಿ ಪ್ರಸಿದ್ಧಿಗೆ ಬಂದವು. ಬ್ರಿಟನ್‌ ರಾಜಮನೆತನದಲ್ಲೂ ಇವುಗಳ ಬಳಕೆ ಆರಂಭವಾಯಿತು. ವಿವಿಧ ವಿನ್ಯಾಸಗಳ, ಆಕರ್ಷಕ ಕಲಾತ್ಮಕ ಚಿತ್ರಗಳನ್ನು ಹೊಂದಿರುವ, ವಸ್ತ್ರ, ನವಿಲುಗರಿ, ಪಕ್ಷಿಗಳ ಗರಿ, ಬಿದಿರು, ದಪ್ಪ ಕಾಗದ, ಆನೆ ದಂತ, ಮುತ್ತು ರತ್ನ ಹವಳ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಬಳಸಿ ಮಾಡಿದ ಬೀಸಣಿಗೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲು ಆರಂಭವಾದವು.

ಗಾಳಿಯನ್ನು ಸೃಷ್ಟಿಸುವ ಬೀಸಣಿಗೆಯ ಉಪಯೋಗಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅಚ್ಚರಿ­ಯಾ  ಗುತ್ತದೆ. ಹಿಂದಿನ ಕಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಇವನ್ನು ಬಳಸುತ್ತಿದ್ದರಂತೆ. ಆಹಾರದ ಮೇಲೆ ನೊಣ ಹಾಗೂ ಇತರ ಕೀಟಗಳು ಕುಳಿತುಕೊಳ್ಳುವುದನ್ನು ತಪ್ಪಿಸಲೂ ಬೀಸಣಿಗೆಗಳು ಬೇಕಾಗಿದ್ದವು. ಅತಿಥಿ ಸತ್ಕಾರಕ್ಕೂ ಬಳಸಲಾಗುತ್ತಿತ್ತು. ಇಂಗ್ಲೆಂಡ್‌ ಸೇರಿದಂತೆ ಕೆಲವು ರಾಷ್ಟ್ರಗಳ ನ್ಯಾಯಾಲಯಗಳಲ್ಲಿ ರಹಸ್ಯ ಸಂಕೇತಗಳ ಸೂಚಕವಾಗಿಯೂ ಇವು ಕಾರ್ಯ­ನಿರ್ವಹಿಸುತ್ತಿದ್ದ­ವಂತೆ! ಮತ್ತೊಬ್ಬ­ರೊಂದಿಗೆ ಮಾತನಾಡು­ವಾಗ ಬಾಯಿಗೆ ಬೀಸಣಿಗೆಯನ್ನು ಅಡ್ಡ ಹಿಡಿಯು­ತ್ತಿದ್ದರಂತೆ.

ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಮುಖ ಮುಚ್ಚಿಕೊಳ್ಳಲು ಯೂರೋಪಿನ ಮಹಿಳೆ­ಯರು ಮೊರೆ ಹೋಗುತ್ತಿದ್ದುದು ಬೀಸ­ಣಿ­ಗೆ­ಗಳಿಗೆ. ರಂಗಭೂಮಿ ಪ್ರದರ್ಶನ­ಗಳಲ್ಲೂ ಇವುಗಳ ಬಳಕೆ ಇದೆ. ಕೆಲವು ನೃತ್ಯ ಪ್ರಕಾರಗಳಲ್ಲೂ  (ಕೊರಿಯಾದ ಸಾಂಪ್ರದಾಯಿಕ ಬುಚಾಯೆಚುಮ್‌ ನೃತ್ಯ) ನೃತ್ಯ ಪಟುಗಳು ಬೀಸಣಿಗೆಯನ್ನು ಬಳಸು­ತ್ತಾರೆ. ಜಪಾನಿನಲ್ಲಿ ಬೀಸಣಿಗೆಯ ಆಯುಧಗಳೇ ಇವೆ!

20ನೇ ಶತಮಾನದಲ್ಲಿ ಜಾಹೀರಾತು ಉದ್ದೇಶಕ್ಕೂ ಇವುಗಳನ್ನು ಉಪ­ಯೋ­ಗಿಸು­ತ್ತಿದ್ದರು. ರೆಸ್ಟೋರೆಂಟ್‌, ಹೋಟೆಲ್‌­, ವಿವಿಧ ಮಳಿಗೆಗಳ ಮಾಲೀಕರು ತಮ್ಮ ಉದ್ಯಮದ ಪ್ರಚಾರಕ್ಕಾಗಿ ಬೀಸಣಿಗೆಗಳನ್ನು ಬಳಸುತ್ತಿದ್ದರು. ರಾಜಕಾರಣಿಗಳೂ ಇವುಗಳ ಮೂಲಕ ಪ್ರಚಾರ ಮಾಡುತ್ತಿ­ದ್ದರು. ಈ  ಬೀಸಣಿಗೆಗಳನ್ನು ಅಗ್ಗದ ಕಾಗದದಿಂದ ಮಾಡಲಾಗುತ್ತಿತ್ತು.

18ನೇ ಶತಮಾನದಲ್ಲಿ ಯಾಂತ್ರೀಕೃತ ಬೀಸಣಿಗೆ (ಫ್ಯಾನ್‌) ಅಭಿವೃದ್ಧಿ­ಗೊಳ್ಳು­ತ್ತಿದಂತೆ ಬೀಸಣಿಗೆಗಳ ಬಳಕೆ ಕುಗ್ಗಿತು. ಈಗ ಆಧುನಿಕ ಫ್ಯಾನ್‌, ಕೂಲರ್‌, ಹವಾ­ನಿಯಂತ್ರಣ ವ್ಯವಸ್ಥೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಬೀಸಣಿಗೆಯನ್ನು ಕೇಳುವವರೇ ಇಲ್ಲ.
ಅತಿಥಿ ಸತ್ಕಾರದ ಭಾಗ!

ಬೀಸಣಿಗೆಗಳ ಇತಿಹಾಸವನ್ನು ಗಮನಿಸಿದಾಗ ಇವುಗಳು ಅತಿಥಿ ಸತ್ಕಾರದ ಶಿಷ್ಟಾಚಾರದ ಭಾಗವಾಗಿದ್ದವು ಎಂದು ತಿಳಿಯುತ್ತದೆ. ಅತಿಥಿಗಳು ಮನೆಗೆ ಬಂದಾಗ ಅವರನ್ನು ಬರಮಾಡಿ­ಕೊಳ್ಳುವ ಸಂದರ್ಭದಲ್ಲಿ ಬೀಸಣಿಗೆ­ಗಳನ್ನು ಬಳಸುತ್ತಿದ್ದರು. ಈಗಲೂ ಈ ಸಂಪ್ರದಾಯ ಮುಂದು­ವರಿದಿದೆ. ಮದುವೆ ಅಥವಾ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಮನೆಯ ಯಜಮಾನ ಅತಿಥಿಗಳನ್ನು ಸತ್ಕರಿಸುವಾಗ ಬೀಸಣಿಗೆ ಉಪ­ಯೋಗಿ­ಸುತ್ತಾರೆ.

ನಮ್ಮಲ್ಲೂ ಅಡಿಕೆ ಹಾಳೆ, ತಾಳೆಗರಿ, ನವಿಲು ಗರಿ, ಪ್ಲಾಸ್ಟಿಕ್‌ ಬೀಸಣಿಗೆ ವಿದ್ಯುತ್‌ ಆಗಾಗ ಕೈಕೊಡುತ್ತಿರುವ ನಮ್ಮ ಹಳ್ಳಿ ಪ್ರದೇಶಗಳಲ್ಲಿ ಈಗಲೂ ಬೀಸಣಿಗೆಗಳ ಬಳಕೆ ಇದೆ. ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಮರದ ಹಾಳೆಯಿಂದ ಮಾಡಿದ ಸರಳ, ಸುಂದರ ಬೀಸಣಿಗೆಗಳು ಬೇಸಿಗೆಗಾಲದಲ್ಲಿ ಜನರ ಕೈಯಲ್ಲಿರುತ್ತವೆ. ಇನ್ನೂ ಕೆಲವು ಕಡೆಗಳಲ್ಲಿ ತಾಳೆಗರಿ, ನವಿಲು ಗರಿ ಹಾಗೂ ಪ್ಲಾಸ್ಟಿಕ್‌ ಬೀಸಣಿಗೆಗಳನ್ನು ಬಳಸಲಾಗುತ್ತದೆ.
                                                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT