ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ಮೇಕಪ್‌ ಬೇಡ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ಚಂದ ಕಾಣುವುದೆಂದರೆ ಅತಿಯಾದ ಲೋಷನ್‌ ಮತ್ತು ಪೌಡರ್‌ ಬಳಕೆ ಸಾಮಾನ್ಯವಾಗಿರುತ್ತದೆ. ಆದರೆ ಇವೆಲ್ಲವೂ ನಮ್ಮ ಚರ್ಮದ ಮೇಲೊಂದು ಪದರವನ್ನು ಸೃಷ್ಟಿಸುತ್ತವೆ. ಇದರಿಂದ ನೈಸರ್ಗಿಕ ಕಾಂತಿಯು ಕಣ್ಮರೆಯಾಗುತ್ತದೆ. ಸಹಜ ಸುಂದರವಾದ ಮೈಕಾಂತಿಗೆ ಇಲ್ಲಿವೆ ಕೆಲವು ಸರಳ ಉಪಾಯಗಳು. ಹೆಚ್ಚು ಖರ್ಚಿಲ್ಲದೆ ನಿಮ್ಮ ಚರ್ಮದ ಹೊಳಪನ್ನು ಬೇಸಿಗೆಯಲ್ಲಿಯೂ ಕಾಪಿಡಬಹುದಾದ ವಿಧಾನಗಳಿವು.

ಚರ್ಮವನ್ನುಜ್ಜಿ ತೊಳೆಯಿರಿ: ಪ್ರತಿ ದಿನ ಪ್ರತಿ ಕ್ಷಣವೂ ನಮ್ಮ ದೇಹವು ಚರ್ಮದ ಸತ್ತ ಕೋಶಗಳನ್ನು ಹೊರನೂಕುತ್ತದೆ. ಅಸಂಖ್ಯಾತ ಕೋಶಗಳನ್ನು. ಅಂದಾಜಿಗೆ ಬರದಷ್ಟು. ಕೆಲವೊಮ್ಮೆ ಅದೆಲ್ಲವೂ ಉದುರಿ ಹೋದರೆ ಇನ್ನೂ ಕೆಲವೊಮ್ಮೆ ಚರ್ಮದ ಮೇಲ್ಪದರದ ಮೇಲೆ ಹೊದಿಕೆಯಂತೆ ಕೂರುತ್ತವೆ. ಆಗ ನಿಮ್ಮ ಚರ್ಮವು ಡಲ್‌ ಆಗಿಯೂ ಒಣಗಿದಂತೆಯೂ ಕಾಣುತ್ತದೆ.

ನೀವೆಷ್ಟೇ ಲೋಷನ್‌ ಬಳಿದುಕೊಂಡರೂ ನಿಮ್ಮ ಚರ್ಮದಲ್ಲಿ ತೇವಾಂಶ ಕಳೆದು ಹೋಗಿದೆಯೇನೋ ಎಂಬಂತೆ ಕಾಣುತ್ತದೆ. ಆದ್ದರಿಂದ ಆಗಾಗ ನಿಮ್ಮ ಚರ್ಮವನ್ನು ಉಜ್ಜಿ ಉಜ್ಜಿ ತೊಳೆಯಬೇಕು. ವಾರಕ್ಕೆ ಎರಡರಿಂದ ಮೂರು ಸಲ, ಸ್ಕ್ರಬರ್‌ನಿಂದ ಭುಜದ ಕೆಳಭಾಗದಲ್ಲಿರುವ ದೇಹವನ್ನು ವೃತ್ತಾಕಾರದಲ್ಲಿ ಉಜ್ಜುತ್ತ ಚರ್ಮದ ಮೇಲ್ಪದರವನ್ನು ಸ್ವಚ್ಛಗೊಳಿಸಬೇಕು. ಕತ್ತು ಹಾಗೂ ಮುಖಕ್ಕೆ ನಿಯಮಿತವಾಗಿ ಫೇಷಿಯಲ್‌ ಮಾಡಿಸಿಕೊಂಡರೆ ಒಳಿತು.

ತಾಜಾ ಸನ್ಸ್‌ಸ್ಕ್ರೀನ್‌ ಬಳಸಿ: ಸನ್‌ಸ್ಕ್ರೀನ್‌ ಲೋಷನ್‌ ಖರೀದಿಸುವ ಮುನ್ನ ಅದು ತಯಾರಾದ ವರ್ಷವನ್ನು ಗಮನಿಸಿ. ಸಾಧ್ಯವಾದಷ್ಟು ಹೊಸತನ್ನೇ ಖರೀದಿಸಿ. ಖರೀದಿಸುವಾಗ ಯುವಿಎ ಹಾಗೂ ಯುವಿಪಿ ಅಂಶಗಳು ಅದರಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.  SPF 30 ಮತ್ತು SPF 70 ಇರುವುದನ್ನು ಗಮನಿಸಿ. ಇಡೀ ದೇಹಕ್ಕೆ ಲೋಷನ್‌ ಬಳಸಿ. ಸೂರ್ಯನ ನೇರ ಬಿಸಿಲಿಗೆ ಮೈ ಒಡ್ಡುವ ಕೆಲಸದಲ್ಲಿದ್ದರೆ ತಾಸೆರಡು ತಾಸುಗಳಿಗೆ ಒಮ್ಮೆ ದೇಹದ ಮೇಲೆ ಲೋಷನ್‌ ಲೇಪಿಸಿಕೊಳ್ಳಿ. ಮುಖಕ್ಕೆ ಒಂದು ಚಮಚದಷ್ಟು ಲೋಷನ್‌ ಹಚ್ಚಿಕೊಂಡು, ವೃತ್ತಾಕಾರದಲ್ಲಿ ಚರ್ಮದ ಆಳಕ್ಕೆ ಇಳಿಯುವಂತೆ ಮಜ್ಜನ ಮಾಡಿಕೊಳ್ಳಬೇಕು. ಹೆಚ್ಚುವರಿ ಕ್ರೀಂ ಅನ್ನು ಒರೆಸಿ ತೆಗೆಯಬೇಕಾಗಿಲ್ಲ. ಅದು ಅಲ್ಲಲ್ಲೇ ಇಂಗಿ ಹೋಗುತ್ತದೆ. ಇಂಗುವವರೆಗೂ ಮುಖದ ಮೇಲೆ ಮಸಾಜ್‌ ಮಾಡಿಕೊಳ್ಳಿ.

ತಾಜಾ ಹಣ್ಣಿನ ಲೋಷನ್‌: ಚಳಿಗಾಲಕ್ಕೆ ತೆಗೆದುಕೊಂಡಿದ್ದ ಎಲ್ಲ ಲೋಷನ್‌ಗಳನ್ನು ಈಗ ಬಳಸುವ ಅಗತ್ಯವಿಲ್ಲ. ಬೇಸಿಗೆಯಲ್ಲೇನಿದ್ದರೂ ಚರ್ಮದಾಳಕ್ಕೆ ಬಲುಬೇಗನೆ ಇಳಿಯಬಲ್ಲ ಪ್ಯುರಿ ಅಥವಾ ಜೆಲ್‌ಗಳನ್ನು ಬಳಸುವುದು ಉತ್ತಮ. ಇದರಿಂದ ಬಿಸಿಲಿನ ಬೇಗೆಗೆ ಬೆವತರೂ ಚರ್ಮದ ಮೇಲೊಂದು ಪದರ ಕೂರುವ ಆತಂಕವಿರುವುದಿಲ್ಲ.

ಪಾದಗಳ ಮರೆಯಬೇಡಿ: ಚಳಿಗಾಲದಲ್ಲಿ ಕಾಲುಚೀಲದಲ್ಲಿ ಅವಿತಿದ್ದ ಪಾದಗಳೀಗ ಹೊರ ಬಂದಿರುತ್ತವೆ. ಆದರೆ ದೂಳಿನ ಅಲಂಕಾರ ಅವಕ್ಕೆ ತಪ್ಪಿದ್ದಲ್ಲ. ಇದರಿಂದಾಗಿ ಬಿರುಕುಬಿಟ್ಟ ಪಾದದ ಹಿಮ್ಮಡಿಯ ಮೇಲೆ ಒಣ ಚರ್ಮ ಕಂಡುಬರುತ್ತದೆ. ಚೆಲುವೆಲ್ಲ ಪಾದಗಳೇ ನುಂಗಿದವು ಎಂಬಂತೆ ಆಗುತ್ತದೆ. ಇದಕ್ಕೆ ನಿಯಮಿತವಾಗಿ ಪೆಡಿಕ್ಯೂರ್‌ ಮಾಡಿಸಿಕೊಳ್ಳಿ. ಬಚ್ಚಲು ಮನೆಯಲ್ಲಿ ಸ್ಕ್ರಬರ್‌ ಇಟ್ಟುಕೊಂಡರಾಯಿತು.

ಪ್ರತಿ ಸ್ನಾನದಲ್ಲೂ ಈ ಡೆಡ್‌ಸ್ಕಿನ್‌ ಉಜ್ಜುವುದರಿಂದ ಪಾದದ ಚರ್ಮವು ನುಣುಪಾಗುತ್ತದೆ. ಕೇವಲ ಸ್ವಚ್ಛಗೊಳಿಸುವುದಷ್ಟೇ ಅಲ್ಲ ಅಂದದ ಪಾದಕ್ಕೆ ಅಕ್ಕರೆಯ ಆರೈಕೆಯೂ ಬೇಕು. ಹಗುರವೆನಿಸುವ ಮಾಯಿಶ್ಚರೈಸರ್‌ ಬಳಸಿ. ನಿಧಾನವಾಗಿಯಾದರೂ ನಿಮ್ಮ ಪಾದಗಳು ತಮ್ಮ ಸೌಂದರ್ಯವನ್ನು ಮರಳಿ ಪಡೆಯುತ್ತವೆ.

ಮೇಕಪ್‌ ಹೀಗಿರಲಿ: ಸೂರ್ಯನ ಪ್ರಖರ ಬಿಸಿಲಿನಲ್ಲಿ ಸಹಜವಾಗಿದ್ದಷ್ಟೂ ಸುಂದರವಾಗಿ ಕಾಣುವಿರಿ. ಸಾಧ್ಯವಿದ್ದಷ್ಟೂ ಮೇಕಪ್‌ ಅನ್ನು ದೂರವಿಡಿ. ಮೇಕಪ್‌ ಇಲ್ಲದೇ ಆಗುವುದೇ ಇಲ್ಲ ಎನ್ನುವುದಾದಲ್ಲಿ ಫೌಂಡೇಶನ್‌ ಬಳಸಿದರೆ ಜೊತೆಗೆ ಪೌಡರ್‌ನ ಲೇಪನವೂ ಇರಲಿ. ತುಟಿ ರಂಗಿನೊಂದಿಗೆ ಗ್ಲಾಸ್‌ ಬಳಸಿ.

ಇಲ್ಲವೇ ಎಸ್‌ಪಿಎಫ್‌ 15 ಇರುವ ಲಿಪ್‌ ಬಾಮ್‌ ಬಳಸಿದರೂ ಆದೀತು. ಆದಷ್ಟೂ ಸಹಜವೆನಿಸುವ ಬಣ್ಣಗಳನ್ನು ಬಳಸಿ. ಕಣ್ಣಿನಂದಕ್ಕೆ... ಏನೂ ಬೇಡ. ಬೇಸಿಗೆಯಲ್ಲಿ ಆದಷ್ಟು ಕಣ್ಣಿನಲಂಕಾರವನ್ನು ಮಾಡದೇ ಇರುವುದೇ ಲೇಸು. ನಿಮ್ಮ ಕಣ್ಣಿನ ಮಿಂಚು ಬಿಸಿಲಿಗಿಂತ ಕಡಿಮೆಯೇನಲ್ಲ ಎನ್ನುವುದು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT