ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಬಾಡಿದ ಮಾವು

Last Updated 26 ಏಪ್ರಿಲ್ 2015, 20:35 IST
ಅಕ್ಷರ ಗಾತ್ರ

ಚಿಂತಾಮಣಿ (ಚಿಕ್ಕಬಳ್ಳಾಪುರ ಜಿಲ್ಲೆ): ಮಳೆ ಕೊರತೆ ಮತ್ತು ವಾತಾವರಣದ ಏರುಪೇರಿನಿಂದ ಹಣ್ಣುಗಳ ರಾಜ ಮಾವಿನ ಉತ್ಪಾದನೆ ಈ ಬಾರಿ ತೀವ್ರವಾಗಿ ಕುಸಿಯುವ ಲಕ್ಷಣಗಳಿವೆ. ಆದರೆ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ಜನವರಿ, ಫೆಬ್ರವರಿ ತಿಂಗಳಲ್ಲಿ ಮಾವು ಹೂ ಬಿಡುತ್ತದೆ. ಬರೀ ಹೂಗಳನ್ನು ಆಧರಿಸಿ ಉತ್ತಮ ಫಸಲು ನಿರೀಕ್ಷಿಸುವುದು ಕಷ್ಟ. ಕಾರಣ, ಫಸಲು ಪಡೆಯಲು  2ರಿಂದ 3 ಹಂತ ದಾಟಬೇಕಾಗುತ್ತದೆ. ಬೇಸಿಗೆ ಹವಾಮಾನದ ಏರುಪೇರು, ಮುಂಗಾರು ಮಳೆ, ಗಾಳಿ, ರೋಗ ರುಜಿನುಗಳು ಫಸಲಿನ ಇಳುವರಿಯ ಮೇಲೆ ಪ್ರಭಾವ ಬೀರುತ್ತವೆ.

ಮಾವಿನ ತೋಟಗಳಲ್ಲಿ ಕೆಲ ಮರಗಳು ಒಣಗುತ್ತಿವೆ. ಬಹುತೇಕ ಮರಗಳಲ್ಲಿ ಕಾಯಿಗಳೇ ಇಲ್ಲ. ಕೆಲ ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಯಿಗಳು ಮಾತ್ರ ಕಾಣುತ್ತಿವೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಉತ್ಪಾದನೆ ತೀವ್ರವಾಗಿ ಕುಸಿಯಲಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಮಾವಿಗೆ ಸ್ವಲ್ಪ ಅನುಕೂಲವಾಯಿತು. ಇದರಿಂದ ಕಾಯಿಗಳ ಗಾತ್ರ ವೃದ್ಧಿಯಾಗುತ್ತದೆ. ಜನರಿಗೆ ಇಷ್ಟವೂ ಆಗುತ್ತದೆ ಎಂದು ಬೆಳೆಗಾರ ಲಕ್ಷ್ಮಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಪ್ರಮಾಣ ಕಡಿಮೆಯಾಗಿ ಭೂಮಿಯಲ್ಲಿ ತೇವಾಂಶವಿಲ್ಲ. ಮರಗಳು ಒಣಗುತ್ತಿವೆ. ಬಿಸಿಲಿನ ತಾಪ, ಒಣಹವೆಯಿಂದ ಬಿಟ್ಟಿದ್ದ ಹೂವು ಕಾಯಿ ಕಚ್ಚದೆ ಉದುರಿ ಹೋಗಿದೆ.  ಇದಲ್ಲದೆ ಜಿಗಿಹುಳು ಬಾಧೆ, ಬೂದಿರೋಗವೂ ಹೆಚ್ಚಾಗಿದೆ. ಇದರಿಂದಾಗಿ ಇಳುವರಿ ಕುಸಿದಿದೆ.  ಪ್ರಸಕ್ತ ವರ್ಷ ಕೇವಲ ಶೇ 20ರಷ್ಟು ಮಾತ್ರ ಇಳುವರಿ ನಿರೀಕ್ಷಿಸಬಹುದು ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಡುತ್ತಾರೆ.

ತಾಲ್ಲೂಕಿನಲ್ಲಿ ತೋತಾಪುರಿ, ಬಾದಾಮಿ, ಬಂಗನಪಲ್ಲಿ(ಗಣೇಶ), ಮಲ್ಲಿಕಾ,  ನೀಲಂ ಪ್ರಮುಖ ತಳಿಗಳು. ರಾಜಗೀರ್‌, ಸಕ್ಕರೆಗುತ್ತಿ, ಮಲಗೋವಾ, ಮತ್ತಿತರ ತಳಿಗಳು ಇವೆ. ಬಾದಾಮಿ, ನೀಲಂ ಅತ್ಯಂತ ಕನಿಷ್ಠ ಇಳುವರಿಯ ನಿರೀಕ್ಷೆಯಿದ್ದು, ತೋತಾಪುರಿ, ಬೆಂಗಳೂರು ತಳಿಗಳ ಇಳುವರಿ ಕೊಂಚ ಉತ್ತಮವಿದೆ. ಆದರೆ ಉತ್ತಮ ಮಳೆಯಾಗುವವರೆಗೆ ಮತ್ತು ಬೆಳೆ ಬರುವವರೆಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಮಾವು ಬೆಳೆಗಾರರು ಹೇಳುತ್ತಾರೆ.

ಅಂತರ್ಜಲ ಕುಸಿತ, ವಿದ್ಯುತ್‌ ಪೂರೈಕೆ ಕೊರತೆ, ಉತ್ಪಾದನಾ ವೆಚ್ಚ ಏರಿಕೆ ಬೆಲೆಗಳ ಕುಸಿತ, ರೋಗರುಜಿನುಗಳ ಬಾಧೆ ಮುಂತಾದ ಸಮಸ್ಯೆಗಳಿಂದ ನಷ್ಟ ಹೆಚ್ಚಾಗಿದೆ. ಇಳುವರಿ ಕಡಿಮೆಯಾಗುವ ಕಾರಣ ಬೆಲೆ ಏರಿಕೆಯಾಗಬಹುದು. ಆದರೆ ದಲ್ಲಾಳಿಗಳ ಕಪಿಮುಷ್ಟಿಯಲ್ಲಿ ಮಾವು ಮಾರುಕಟ್ಟೆ ಸಿಲುಕಿ ನಲುಗುತ್ತಿದೆ. ಬೇಡಿಕೆ ಇದ್ದರೂ ದಲ್ಲಾಳಿಗಳೆಲ್ಲ ಒಂದಾಗಿ ರೈತರಿಗೆ ಕಡಿಮೆ ಬೆಲೆ ನಿಗದಿ ಮಾಡಿ, ತಾವು ಹೆಚ್ಚಿನ ಲಾಭಗಳಿಸುತ್ತಾರೆ. ಮಾವಿಗೆ ಇ–ಟೆಂಡರ್‌ ಕರೆಯಬೇಕೆಂದು ಸಂಘದ ಒತ್ತಾಯದ ಫಲವಾಗಿ ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಪ್ರಾರಂಭವಾದರೂ ಪೂರ್ಣವಾಗಿ ಅನುಷ್ಠಾನವಾಗಲಿಲ್ಲ ಎಂದು ಅವರು ಹೇಳುತ್ತಾರೆ.

ದಲ್ಲಾಳಿಗಳ ಹಿಡಿತ ತಪ್ಪಿಸಿ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗುವ ಮತ್ತು ಪಾರದರ್ಶಕವಾಗಿ ತೂಕ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಶ್ರೀನಿವಾಸಪುರ ಮತ್ತು ಚಿಂತಾಮಣಿಯ ಮಾವು ಬೆಳೆಗಾರರು ಒತ್ತಾಯಿಸಿದ್ದಾರೆ.

ಉತ್ಪಾದನೆಎಲ್ಲೆಲ್ಲಿ ಎಷ್ಟು?
ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲಿ ಶೇ 40ರಷ್ಟು ಮಾವು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೊಡುಗೆ. 

ಕೋಲಾರ ಜಿಲ್ಲೆಯಲ್ಲಿ  ಶ್ರೀನಿವಾಸಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಚಿಂತಾಮಣಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದ್ದು, ಮಾವಿನ ಮಡಿಲುಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ 15778 ಹೆಕ್ಟೇರ್‌ನಷ್ಟು ಇದ್ದರೆ, ಚಿಂತಾಮಣಿಯಲ್ಲಿ 6947 ಹೆಕ್ಟೇರ್‌ ಪ್ರದೇಶವಿದೆ.

ಅವಳಿ ಜಿಲ್ಲೆಯಲ್ಲಿ ಸುಮಾರು 7ರಿಂದ 8 ಲಕ್ಷ ಟನ್‌ ಇಳುವರಿ ಬರಬೇಕು. ಸುಮಾರು 40ರಿಂದ 50 ಸಾವಿರ ಎಕೆರೆಯಲ್ಲಿ ಮರಗಳು ಒಣಗಿಹೋಗಿವೆ. 3 ರಿಂದ 4 ಸಾವಿರ ಎಕರೆಯಲ್ಲಿ ಈಗಾಗಲೇ ಮರಗಳನ್ನು ಕಡಿದುಹಾಕಲಾಗಿದೆ.

ನೀರಾವರಿ ಇರುವ ತೋಟಗಳಲ್ಲಿ ಮಾತ್ರ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಿದರೂ ಒಟ್ಟಾರೆ 2 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿದೆ ಎಂದು ಮಾವು ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

*
ಮಾವು ಬೆಳೆಗಾರರಿಗೆ ಒಂದೆಡೆ ಮಳೆ ಕೊರತೆಯಿದ್ದರೆ, ಮತ್ತೊಂದೆಡೆ ದಲ್ಲಾಳಿಗಳ ಕಾಟವಿದೆ. ಪಾರದರ್ಶಕವಾಗಿ  ಮಾರಾಟ ನಡೆದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ.
ಶ್ರೀನಿವಾಸಗೌಡ, ಅಧ್ಯಕ್ಷರು, ಜಿಲ್ಲಾ ಮಾವು ಬೆಳೆಗಾರರ ಸಂಘ

ಮುಖ್ಯಾಂಶಗಳು
* ಮಾವು ಬೆಳೆಗಾರರಲ್ಲಿ ಆತಂಕ

* ಮಳೆ ಕೊರತೆ, ಒಣಗಿದ ಮರ
* ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT