ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಸೂರ್ಯ ಕಾಂತಿ ನುಂಗದಿರಲಿ

Last Updated 10 ಮೇ 2015, 19:30 IST
ಅಕ್ಷರ ಗಾತ್ರ

ಬೇಸಿಗೆಯ ಪ್ರಖರ ಬಿಸಿಲಿಗೆ ಅದೆಷ್ಟೇ ಸನ್‌ಸ್ಕ್ರೀನ್‌ ಲೋಷನ್‌ಗಳನ್ನು ಬಳಸಿದರೂ ಚರ್ಮದ ಕಾಂತಿ ಕಳೆಹೀನವಾಗುವುದಂತೂ ನಿಜ. ಆದರೆ ಬಿಸಿಲಿಗೇ ಸೆಡ್ಡು ಹೊಡೆಯುವಂಥ ಮಿನುಗುವ, ನುಣುಪಿನ ಚರ್ಮದ ಕಾಂತಿ ಪಡೆಯಬೇಕೆಂದರೆ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ಸ್ವಲ್ಮ ಸಮಯ, ತಾಳ್ಮೆ ಹಾಗೂ ಒಂದಿನಿತು ಆಸಕ್ತಿ ಇದ್ದರೆ ನಿಮ್ಮ ಚರ್ಮಕ್ಕೆ ವಯಸ್ಸಾಗುವುದಿಲ್ಲ. ಮನಸೂ ಲವಲವಿಕೆಯಿಂದ ಕೂಡಿರುತ್ತದೆ.

ಎಲೆಕೋಸಿನಿಂದ ಹೂಮೃದು ಚರ್ಮ
ಎಲೆಕೋಸಿನ ತಣ್ಣನೆಯ ಎಲೆಗಳನ್ನು ಚರ್ಮದ ಮೇಲಿನ ಕಪ್ಪು ಕಲೆಯ ಮೇಲಿಡಿ. ಹದಿನೈದು ನಿಮಿಷಗಳವರೆಗೂ ಸುಮ್ಮನೆ ಬಿಟ್ಟುಬಿಡಿ. ಕಲೆಯ ಮೇಲೆ ಕುಳಿತ ಎಲೆಕೋಸಿನ ಹಸಿರೆಲೆ, ಕಲೆಯನ್ನು ಹೀರುತ್ತದೆ. ಚರ್ಮಕ್ಕೆ ತೇವಾಂಶವನ್ನೂ ನೀಡುತ್ತದೆ. ಚಮತ್ಕಾರೀ ಔಷಧದಂತೆ ಕೆಲವೇ ವಾರಗಳಲ್ಲಿ ವ್ಯತ್ಯಾಸನವನ್ನು ನೋಡಬಲ್ಲಿರಿ. ವಾರಕ್ಕೆರಡು ಸಲ ಈ ಚಿಕಿತ್ಸೆ ಮಾಡಿಕೊಂಡರೂ ಸಾಕು.

ವಿಕ್ಸ್‌ ಲೇಪನ: ತಲೆನೋವು, ಶೀತ, ಮೂಗು ಕಟ್ಟುವುದಕ್ಕೆ ಬಳಸುವ ವಿಕ್ಸ್‌ ಅನ್ನೇ ಕಲೆ ಇರುವ ಜಾಗದಲ್ಲಿ ವರ್ತುಲಾಕಾರದಲ್ಲಿ ನೀವುತ್ತಿರಿ. ಸೂರ್ಯನಿಂದ ಕಳೆಗುಂದಿದ ಚರ್ಮದ ಕೋಶಗಳು ಉದುರುತ್ತವೆ. ಸಾಧಾರಣ ಕಲೆ ಇದ್ದರೆ ವಾರಕ್ಕೆ ಒಂದು ಸಲ ಇದನ್ನು ಮಾಡಬಹುದು. ಅತಿ ಗಾಢವಾದ ಕಲೆ ಇದ್ದರೆ ವಾರಕ್ಕೆರಡು ಸಲ ಮಾಡಬಹುದು.

ಮಂಜಿನಿಂದ ಮಿದು ಸ್ಪರ್ಶ
ತಣ್ಣೀರಿಗಾಗಿ, ತಂಪು ಪಾನೀಯಕ್ಕಾಗಿ ಫ್ರಿಜ್‌ನಲ್ಲಿ ಐಸ್‌ ಮಾಡಲು ಇಟ್ಟಿರುತ್ತೇವೆ. ಆ ಐಸ್‌ ಕ್ಯೂಬ್‌ ಅನ್ನು ತೆಳುವಾದ ಮಸ್ಲಿನ್‌ ಅಥವಾ ಮಲ್‌ಮಲ್‌ ಬಟ್ಟೆಯಲ್ಲಿಟ್ಟುಕೊಂಡು ಕಲೆಯಾದ ಜಾಗದಲ್ಲೆಲ್ಲ ಐಸ್‌ ಸ್ಪರ್ಶ ನೀಡುತ್ತ ಹೋಗಿ. ಒಂದುವೇಳೆ ಟ್ಯಾನ್‌ ಜಾಸ್ತಿ ಪ್ರಮಾಣದಲ್ಲಿದ್ದರೆ ಐಸ್‌ ಅನ್ನು ನೇರವಾಗಿಯೇ ಲೇಪಿಸಬಹುದು. ತಾಜಾತನದೊಂದಿಗೆ ಚರ್ಮದ ತೇವಾಂಶವನ್ನೂ ಕಾಪಿಡುತ್ತದೆ.

ಕೆನೆ ಕೇಸರಿಯ ಲೇಪನ: ಹಾಲು ಕಾಯಿಸಿ, ಫ್ರಿಜ್‌ನಲ್ಲಿಟ್ಟಾಗ ದಪ್ಪದಾದ ಕೆನೆಯ ಪದರವೊಂದು ಬಂದಿರುತ್ತದೆ. ಈ ಕೆನೆ ಪದರಿಗೆ ಕೇಸರಿಯ ಎಸಳುಗಳನ್ನು ಬೆರೆಸಿ ನುಣ್ಣಗೆ ಪೇಸ್ಟ್‌ ತಯಾರಿಸಿಕೊಳ್ಳಿ. ಮುಖಕ್ಕೆ ತೆಳುವಾದ ಲೇಪನ ಮಾಡಿಕೊಂಡು ರಾತ್ರಿ ಇಡಿ ಬಿಟ್ಟು ಬಿಡಿ. ಇದನ್ನು ವಾರಕ್ಕೆ ಮೂರು ಸಲ ಪುನರಾವರ್ತನೆ ಮಾಡಿ. ಕಲೆ ಇರುವ ಚರ್ಮ ತೆಳು ವರ್ಣಕ್ಕೆ ಬರುತ್ತದೆ. ಅಷ್ಟೇ ಅಲ್ಲ ಇಡೀ ಮುಖ ಕಾಂತಿಯಿಂದ ನಳನಳಿಸುತ್ತದೆ. ಮಗುವಿನಂಥ ಮೃದು ಚರ್ಮ ನಿಮ್ಮದಾಗುತ್ತದೆ.

ಮೊಸರು, ಚರ್ಮಕ್ಕೆ ಉಸಿರು: ಟೀವಿ ನೋಡುವಾಗ, ಓದಲು ಕೂರುವಾಗ ಕಲೆ ಇರುವ ಜಾಗ ಹಾಗೂ ಮುಖಕ್ಕೆ ಮೊಸರನ್ನು ಲೇಪಿಸಿಕೊಳ್ಳಿ. ನಿಧಾನವಾಗಿ ವರ್ತುಲಾಕಾರ ದಲ್ಲಿ ಉಜ್ಜಿಕೊಳ್ಳಿ. ಮೊಸರೆಲ್ಲ ಒಣಗಿದಂತೆ ಅನಿಸಿದ ನಂತರವೂ ಹದಿನೈದು ನಿಮಿಷಗಳವರೆಗೂ ಚರ್ಮದ ಮೇಲೆಯೇ ಬಿಟ್ಟುಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಚಿಕಿತ್ಸೆಯನ್ನು ಆಗಾಗ ಪುನರಾವರ್ತಿಸಬಹುದು.

ಸಹಜ ಸೌಂದರ್ಯಕ್ಕೆ ಸೋರೆಕಾಯಿ ರಸ: ಸೋರೆಕಾಯಿಯನ್ನು ಸಿಪ್ಪೆಯೊಂದಿಗೆ ಮಿಕ್ಸರ್‌ಗೆ ಹಾಕಿ ರಸ ತಯಾರಿಸಿಕೊಳ್ಳಿ. ಈ ರಸವನ್ನು ದಿನದಲ್ಲಿ ಮೂರು ನಾಲ್ಕು ಸಲ ಕಲೆ ಇದ್ದೆಡೆ ಹಚ್ಚಿಕೊಳ್ಳಿ. ಒಣಗಿದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ವ್ಯತ್ಯಾಸ ನಿಮಗೇ ಗೊತ್ತಾಗುತ್ತದೆ.

ಮಸೂರ್‌ ಬೇಳೆ ಪೇಸ್ಟ್‌: ಒಂದು ಚಮಚ ಮಸೂರ್ ಬೇಳೆಯನ್ನು ನೀರಿನಲ್ಲಿ ನೆನೆಸಿ. ಟೊಮೆಟೊ ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಈ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ತಣ್ಣೀರಿನಿಂದ ತೊಳೆದರೆ ಸಾಕು. ಚರ್ಮ ಲಕಲಕ ಹೊಳೆಯುವಂತೆ ಆಗುತ್ತದೆ. ಚರ್ಮದ ಸತ್ತ ಜೀವಕೋಶಗಳ ಪದರವನ್ನು ತೆಗೆದು ತಾಜಾ ಕಾಣುವಂಥ ಕೆಲಸವನ್ನು ಈ ಪೇಸ್ಟ್‌ ಮಾಡುತ್ತದೆ. ವಾರದಲ್ಲಿ ಮೂರು ಸಲ ಈ ಲೇಪನ ಮಾಡಿದರೆ ಚರ್ಮಕ್ಕೆ ವಯಸ್ಸಾಗದು.

ಚರ್ಮದ ಆರೋಗ್ಯಕ್ಕೆ ಬದಾಮಿ: ಮೂರು ನಾಲ್ಕು ಬದಾಮಿಗಳನ್ನು ಮೂರರಿಂದ ನಾಲ್ಕು ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಇವನ್ನು ಜಜ್ಜಿ, ಮುಖಕ್ಕೆ ಸ್ಕ್ರಬ್‌ನಂತೆ ಬಳಸಿ. ವಾರದಲ್ಲಿ ಮೂರು ಸಲ ಇದನ್ನು ಪುನರಾವರ್ತನೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಜೊತೆಗೆ ಆರೋಗ್ಯದಿಂದ ನಳನಳಿಸುತ್ತದೆ.

ಮಜ್ಜಿಗೆ ಮರ್ದನ: ಮೂರು ಚಮಚ ಮಜ್ಜಿಗೆಗೆ ಒಂದು ಚಮಚ ಓಟ್‌ಮಿಲ್‌ ಬೆರೆಸಿ, ಗಟ್ಟಿಯಾದ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಮುಖ ಮತ್ತು ಕತ್ತಿನ ಮೇಲೆ ವರ್ತುಲಾಕಾರದಲ್ಲಿ ಮಸಾಜ್‌ ಮಾಡುತ್ತ ಬನ್ನಿ. ಮಜ್ಜಿಗೆಯಂಶ ಚರ್ಮದಾಳಕ್ಕೆ ಇಳಿದು, ಓಟ್‌ಮಿಲ್‌ ಒಣಗಿದಂತೆ ಚರ್ಮಕ್ಕೆ ಅಂಟಿಕೊಳ್ಳುವವರೆಗೂ ಮಸಾಜ್‌ ಮಾಡಿ, ನಂತರ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಕಲೆ ತಿಳಿಯಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT