ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ಜಿಲ್ಲೆಯ ಜನರಿಗಿಲ್ಲ ಈಜುಕೊಳ

ಏಳು ವರ್ಷವಾದರೂ ಮುಗಿಯದ ಕಾಮಗಾರಿ
Last Updated 22 ಮಾರ್ಚ್ 2016, 8:53 IST
ಅಕ್ಷರ ಗಾತ್ರ

ರಾಮನಗರ: ಮತ್ತೊಂದು ಬೇಸಿಗೆ ಎದುರಾಗಿದೆ. ದಿನೇ ದಿನೇ ಬಿಸಿಲು ಏರತೊಡಗಿದ್ದು, ಭೂಮಿಯೂ ಸುಡಲಾರಂಭಿಸಿದೆ. ಝಳಕ್ಕೆ ಮನುಷ್ಯರ ನೆತ್ತಿಯೂ ಬಿಸಿಯಾಗುತ್ತಿದೆ. ಈ ವೇಳೆ ದೇಹವನ್ನು ಸ್ವಲ್ಪವಾದರೂ ತಣ್ಣಗೆ ಮಾಡಿಕೊಳ್ಳಲು ಈಜಾಡಬೇಕು ಎಂದು ಮನಸ್ಸು ಹೇಳುತ್ತದೆ. ಅದರೆ, ದುರಂತ ಎಂದರೆ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಒಂದೇ ಒಂದು ಈಜು ಕೊಳವೂ ಇಲ್ಲ !

ರಾಮನಗರವು 2007ರ ಆಗಸ್ಟ್‌ನಲ್ಲಿಯೇ ಜಿಲ್ಲೆಯಾಗಿ ರಚನೆಯಾಗಿದೆ. ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಲು 2008ರಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಕಾಮಗಾರಿ ಕುಂಠುತ್ತಾ, ಆಮೆಗತಿಯಲ್ಲಿ ಸಾಗಿದೆ. ಇದರ ಪರಿಣಾಮ ಈ ಬೇಸಿಗೆಯಲ್ಲಿಯೂ ಜಿಲ್ಲೆಯ ಜನರಿಗೆ ಈಜು ಕೊಳ ಲಭ್ಯವಿಲ್ಲ !

ಏಳು ವರ್ಷವಾದರೂ ಆಗದ ಕಾಮಗಾರಿ:  ಅಂದಹಾಗೆ, ಜಿಲ್ಲೆಯಲ್ಲಿ 2008ರಲ್ಲಿಯೇ ಈಜುಕೊಳಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ₹ 1.50 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಯಿತು. ರಾಯರದೊಡ್ಡಿ (1.05 ಎಕರೆ) ಬಳಿ ಜಾಗ ಗುರುತಿಸುವುದಕ್ಕೆ ಜಿಲ್ಲಾಡಳಿತವು ಒಂದೂವರೆ ವರ್ಷ ಸಮಯ ತೆಗೆದುಕೊಂಡಿತು. 2009ರಲ್ಲಿ ಕಾಮಗಾರಿಗೆ ಚಾಲನೆಯೂ ದೊರೆಯಿತು. ಆದರೆ ಏಳು ವರ್ಷವಾದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ₹ 1.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೊಡುವಂತೆ ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ವಹಿಸಿ ₹1.20 ಕೋಟಿ ಬಿಡುಗಡೆ ಮಾಡಿತ್ತು. ಶೇ 75ರಷ್ಟು ಕಾಮಗಾರಿ ಮುಗಿಸಿದ ಲೋಕೋಪಯೋಗಿ ಇಲಾಖೆಯು ಕಾಮಗಾರಿ ಸ್ಥಗಿತಗೊಳಿಸಿ ಕೈಚೆಲ್ಲಿತು.

ಈಜು ಕೊಳದಲ್ಲಿ ನೆಲ ಹಾಸು, ನೀರು ಶುದ್ಧೀಕರಣ ಘಟಕ ಹಾಗೂ ಅಂತಿಮ ಸ್ಪರ್ಶ ನೀಡುವ ಕೆಲಸಗಳು ಬಾಕಿ ಇವೆ.  ಇಷ್ಟು ಕೆಲಸವನ್ನು ಉಳಿದ ₹ 30 ಲಕ್ಷದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಲೋಕೋಪಯೋಗಿ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಇದರಿಂದ ಈಜುಕೊಳ ನಿರ್ಮಾಣ ಕಾರ್ಯ ಅನಗತ್ಯವಾಗಿ ವಿಳಂಬವಾಗಿದೆ.

ಮೂರನೇ ವ್ಯಕ್ತಿಯಿಂದ ಪರಿಶೀಲನೆ: ಈ ನಡುವೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಹಾಗಾಗಿ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ನಡೆಸಲಾಗಿದ್ದು, ವರದಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಬಾಕಿ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಮಾನವ ಹಕ್ಕು ಆಯೋಗಕ್ಕೆ ದೂರು: ಸರ್ಕಾರವು ಒಂದು ಕೋಟಿಗೂ ಅಧಿಕ ಹಣವನ್ನು ಈಜುಕೊಳ ನಿರ್ಮಾಣಕ್ಕೆ ವ್ಯಯಿಸಿದೆ. ಆದರೆ ಆರು– ಏಳು ವರ್ಷದಿಂದ ಇಲ್ಲಿನ ನಾಗರಿಕರಿಗೆ ಈಜುಕೊಳದ ಸೌಲಭ್ಯ ದೊರೆತಿಲ್ಲ ಎಂದು ಆರೋಪಿಸಿ ನಾಗರಿಕರೊಬ್ಬರು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಆಯೋಗದ ಸದಸ್ಯ ಸಿ.ಜಿ.ಹುನಗುಂದ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಅಲ್ಲದೆ ಆದಷ್ಟು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಈಜುಕೊಳವನ್ನು ಒದಗಿಸುವಂತೆ ಸೂಚಿಸಿದ್ದಾರೆ.

ಅಧಿಕಾರಿ ಪ್ರತಿಕ್ರಿಯೆ: ಈಜುಕೊಳದ ಬಾಕಿ ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆಯು ಸದ್ಯದಲ್ಲಿಯೇ ಟೆಂಡರ್‌ ಕರೆಯಲಿದೆ. ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆ ನಂತರ ಕಾಮಗಾರಿ ಪುನರಾರಂಭವಾಗುತ್ತದೆ. ಆದಷ್ಟು ಶೀಘ್ರವಾಗಿ ಈ ಎಲ್ಲ ಪ್ರಕ್ರಿಯೆ ಮುಕ್ತಾಯಗೊಳಿಸಿ ರಾಮನಗರದ ನಾಗರಿಕರಿಗೆ ಈಜುಕೊಳವನ್ನು ಅರ್ಪಿಸುವುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಯಲಕ್ಷ್ಮಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT