ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ರಜೆಯೂ ಕಾಡಿನ ಹಣ್ಣುಗಳೂ...

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈಗೆಲ್ಲ ಬೇಸಿಗೆ ರಜೆ ಬಂತೆಂದರೆ ಬೇಸಿಗೆ ಶಿಬಿರಗಳದ್ದೇ ಮಾತು. ಆದರೆ ನಾವೆಲ್ಲ ಕನ್ನಡ ಶಾಲೆಯಲ್ಲಿ ಓದುವಾಗ ಬೇಸಿಗೆ ಶಿಬಿರದ ಹೆಸರೂ ಇರಲಿಲ್ಲ. ಪರೀಕ್ಷೆ ಮುಗಿದು ಏಪ್ರಿಲ್ 10ರಂದು ಫಲಿತಾಂಶ ಬರುವವರೆಗೂ ಕಡ್ಡಿ ಆಟ ಆಡಲೆಂದೇ ಶಾಲೆಗೆ ಹೋಗೋದು; ಮಧ್ಯಾಹ್ನದವರೆಗೂ ಆಟ ಆಡಿ ಮನೆಗೆ ಬರುವುದು. ಯಾವಾಗ ಏಪ್ರಿಲ್ 11 ಶುರುವಾಯಿತೋ ನಮ್ಮ ರಜಾ ಮಜಾ ಆರಂಭವಾಯಿತು ಎಂದರ್ಥ.

ಬೇಸಿಗೆ ರಜೆ ಎಂದರೆ ಮನೆಯವರು ನಮಗೆ (ಅವಿಭಕ್ತ ಕುಟುಂಬವಾದ್ದರಿಂದ ಮೂರ್‍ನಾಲ್ಕು ಮಕ್ಕಳು ಒಂದೇ ವಯಸ್ಸಿನವರು ಇರುವುದು ಸಾಮಾನ್ಯ) ಕೊಟ್ಟಿಗೆ ತುಂಬಾ ಇರೋ ಎಮ್ಮೆ, ದನಗಳ ಮೇಯಿಸುವ ಕೆಲಸ. ನಿಜ ಹೇಳಬೇಕೆಂದರೆ ನಮಗೆ ಬೇಕಿದ್ದದ್ದೂ ಅದೇ! ದನ ಮೇಯಿಸೋ ನೆಪದಲ್ಲಿ ಕಾಡು ಮೇಡು, ಹೊಳೆಸಾಲಲ್ಲಿ ಸ್ವಚ್ಛಂದವಾಗಿ ಅಲೆಯಬಹುದಲ್ಲ!

ಬೆಳಗು ಆಗುವುದನ್ನೇ ಕಾಯುತ್ತ ಮಲಗುತ್ತಿದ್ದ ನಾವು ಸೂರ್ಯ ಮೂಡುತ್ತಲೇ ಎದ್ದು ತಿಂಡಿ ತಿಂದು ದನ ಹೊಡೆದುಕೊಂಡು ಕಾಡಿಗೆ ಹೋಗುತ್ತಿದ್ದೆವು. ಅಲ್ಲಿ ನಮ್ಮದೇ ಪಾರುಪತ್ಯ. ಪ್ರತಿ ರಜೆಯಲ್ಲೂ ಕಾಡಿನ ಜೊತೆ ಕಾಲ ಕಳೆಯುವ ನಮಗೆ ಕಾಡಿನ ಒಂದಷ್ಟು ಹಣ್ಣಿನ ಮರಗಳು ಪರಿಚಿತ. ನೇರಳೆ, ನುರುಕಲು, ಮುರುಗಲು, ರಂಜಲ, ಸಂಪಿಗೆ (ಚಾಪೆ ಹಣ್ಣು), ಕವಳಿ, ಬಿಳೆಮುಳ್ಳಣ್ಣು, ಹಲಗೆ ಹಣ್ಣು, ಹೊಳೆ ದಾಸವಾಳ, ಮುರುಗಲು, ಚಳ್ಳೆ ಹಣ್ಣು ಒಂದೇ ಎರಡೇ... ಅವುಗಳಿರುವ ಜಾಗಕ್ಕೇ ಸೀದಾ ದನಗಳ ಅಟ್ಟಿಸಿಕೊಂಡು ಹೋದರೆ ಮುಗಿಯಿತು. ದನಗಳಿಗೆ ನೆಲದ ಮೇಲಿನ ಮೇವು; ನಮಗೋ ಮರಗಳ ಮೇಲಿನ ಮೇವು!

ಸಂಪಿಗೆ ಮರಗಳಲ್ಲಿ ಇರುವ ಮುಳ್ಳುಗಳು ಚುಚ್ಚಿದರೂ ಕ್ಯಾರೇ ಇಲ್ಲ. ನುರುಕಲು ಹಣ್ಣು ತಿಂದಿದ್ದಲ್ಲದೇ ಮರದ ಬುಡದಲ್ಲಿ ಉದುರಿ ಬಿದ್ದು ಒಣಗುವ ಹಣ್ಣುಗಳ ಒಳಗಿನ ಬೀಜ ಬಾದಾಮಿ ಬೀಜದ ರುಚಿ ಮೀರಿಸುತ್ತದೆ. ನೇರಳೆ ಮರದಲ್ಲಿ ಬಿಡುವ ಹಣ್ಣುಗಳ ಗೊಂಚಲಿಗೆ ಕೋಲೋ, ಕಲ್ಲೊ ಕುಟ್ಟಿದರೆ ಕೆಳಗೆ ಬೀಳುವ ಹಣ್ಣು ತಿನ್ನಲು ಪೈಪೋಟಿ. ಎತ್ತರದ ಮರವಾದ ರಂಜಲ ಮರದಿಂದ ಹಣ್ಣುಗಳು ಬಿದ್ದರೆ ಮಾತ್ರ ನಮಗೆ ಸಿಗೋದು.

ಅತ್ತ ಮರವೂ ಅಲ್ಲದ ಇತ್ತ ಕಂಟಿ ಪೊದೆಯೂ ಅಲ್ಲದಂತಿರುವ ಬಿಳೆಮುಳ್ಳಣ್ಣು, ಕವಳಿ ಕಾಯಿ, ಹಣ್ಣು ಕೊಯ್ಯುವುದರಲ್ಲಿ ಸಿಗುವ ಖಷಿ ಅಷ್ಟಿಷ್ಟಲ್ಲ. ಬಳ್ಳಿ ಗಿಡದಲಿ ಬಿಡುವ ಸಿಹಿ-ಹುಳಿ ಸಮ್ಮಿಳಿತದ ಹಲಗೆ (ಹುಳಗೆ) ಹಣ್ಣು ಕೊಯ್ಯುವುದು ಅಷ್ಟು ಕಷ್ಟದ ಕೆಲಸವಲ್ಲ.
ಕಾಡಿನ ಹಣ್ಣುಗಳನ್ನೆಲ್ಲ ಜಾಲಾಡಿದ ಮೇಲೆ ನೆನಪಾಗೋದು ಪಾಪದ ದನಗಳದ್ದು. ಕಳ್ಳ ಬೀಳುವ ದನಗಳು ಕೆಲವು ಇರುತ್ತಿದ್ದವು. ಅವು ಯಾರ ತೋಟ, ಗದ್ದೆಗೆ ನುಗ್ಗಿರಬಹುದು ಎಂಬ ಅರಿವು ನಮಗಿರುತ್ತಿತ್ತು. ಅವುಗಳಿರುವ ಜಾಗಕ್ಕೇ ಹೋಗಿ  ಒಟ್ಟುಗೂಡಿಸಿ ಸೀದಾ ಹೊಳೆ ಕಡೆ ದಾರಿ ಹಿಡಿಯುವುದು. ಹೊಳೆ ಅಂಚಿನ ಜಿರಿಗೆ ಅಪ್ಪೆ ಮರದ ಕೆಳಗೆ ಕಣ್ಣಾಡಿಸಿದರೆ ಒಂದಷ್ಟು ಮಿಡಿ ಮಾವು ನಮ್ಮ ಮಡಿಲು ಸೇರುತ್ತಿದ್ದವು. ಮನೆಯಿಂದ ಪೇಪರ್‌ನಲ್ಲಿ ಸುತ್ತಿ ತರುವ ಉಪ್ಪು ಸೇರಿಸಿ ತಿಂದರೆ ಕೇಳಬೇಕೆ? ಈಗಲೂ ಬಾಯಲ್ಲಿ ನೀರೂರುತ್ತದೆ.

ಹೊಳೆದಂಡೆಯಲ್ಲಿ ಮೇಯಲು ಅವಕಾಶ ಸಿಕ್ಕರೆ ದನಗಳ ಸಂತಸ ಹೇಳತೀರದು. ಎಮ್ಮೆಗಳೋ ಮೂಗಿನ ಹೊಳ್ಳೆಗಳನ್ನು ಮಾತ್ರ ಹೊರಗೆ ಬಿಟ್ಟು ಹೊಳೆಯಲ್ಲಿ ಮುಳುಗಿರುತ್ತಿದ್ದವು. ಅವುಗಳ ಮೈಗಂಟಿದ್ದ ಸೆಗಣಿ ನೆನೆದು ನಮಗೆ ಅವುಗಳನ್ನು ತಿಕ್ಕಿ ತೊಳೆಯಲು ಅನುಕೂಲವಾಗುತ್ತಿತ್ತು. ಎಮ್ಮೆಗಳ ಮೈ ತೊಳೆಸುವ ನೆಪದಲ್ಲಿ ನಮಗೂ ಹೊಳೆಗುಂಡಿಯಲ್ಲಿ ಈಜಲು ಅವಕಾಶ ಸಿಗುತ್ತಿತ್ತು. ಗುಂಡಿ ಪಕ್ಕದ ಕಲ್ಲು ಪೊಟರೆಯೊಳಗೆ ಇರುವ ಏಡಿ ಹಿಡಿಯಲು ಹೋಗಿ ಹಾವು ಎಳೆದು ನೀರೊಳಗೂ ಬೆವತಿದ್ದು ನೆನಪಾದರೆ ಈಗಲೂ ಮೈ ಜುಂ ಜುಂ.

ಮಧ್ಯಾಹ್ನ ಊಟ ಮಾಡಿದ ಮೇಲೆ ಕೂಡುವ ಕೆಲಸವಿಲ್ಲ. ಗದ್ದೆಯಂಚಿನ ಪೇರಲ ಮರವೇರಿ ಹಣ್ಣು ತಿಂದ ಮೇಲೆ ಒಂದೊಂದು ಕೊಂಬೆ ಮೇಲೆ ಒಬ್ಬೊಬ್ಬರು ಏರಿ ಕುಳಿತರೆ... ಟೇಪ್‌ರೆಕಾರ್ಡ್‌ನಲ್ಲಿ ಕೇಳುತ್ತಿದ್ದ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಹೊಮ್ಮುತ್ತಿತ್ತು. ವಾಲಿ–ಸುಗ್ರೀವ ನಮ್ಮ ನೆಚ್ಚಿನ ಪ್ರಸಂಗ. ಒಬ್ಬ ರಾಮನಾದರೆ, ಒಬ್ಬ ಲಕ್ಷ್ಮಣ. ಇನ್ನೊಬ್ಬ ವಾಲಿಯಾದರೆ ಮತ್ತೊಬ್ಬ ಸುಗ್ರೀವ, ಒಬ್ಬಳು ತಾರೆ...
ಪೇರಲ ಮರ ಇಳಿದ ನಂತರ ನಾವಿರುವುದು ಮನೆ ಹಿಂದಿನ ಗೇರು ಮರದ ಮೇಲೆ. ಹಣ್ಣು ತಿಂದ ಮೇಲೆ ಗೇರು ಬೀಜ ಹೆಕ್ಕುವುದು. ಗೇರು ಮರದ ಕೊಂಬೆಗೆ ಹಗ್ಗ ಕಟ್ಟಿ ಜೋಕಾಲಿ ಆಡುತ್ತಿದ್ದರೆ ಸಮಯ ಜಾರಿದ್ದೇ ತಿಳಿಯುತ್ತಿರಲಿಲ್ಲ. ಮನೆಯಿಂದ ಚಹಾ ಕುಡಿಯಲು ಕೂಗು ಬಿದ್ದಾಗಲೇ ಮನೆ ಕಡೆ ಓಡುವುದು. ಚಹಾ ಕುಡಿದ ನಂತರವೂ ನಮ್ಮ ದಿನಚರಿ ಮುಗಿಯುತ್ತಿರಲಿಲ್ಲ. ಗೇರು ಬೀಜಗಳ ಇಟ್ಟು ಬೆಟ್ಟೆ ಆಟ (ಲಗೋರಿ ಆಟವೆನ್ನಬಹುದು) ಆಡುತ್ತಿದ್ದೆವು.

ಅಂದ ಹಾಗೆ, ಈಗ ಮಕ್ಕಳಿಗೆ ಬೇಸಿಗೆ ರಜೆ ಸಮಯ. ಒಂದಷ್ಟು ಮಕ್ಕಳು ಬೇಸಿಗೆ ಶಿಬಿರಗಳಲ್ಲಿರಬಹುದು. ಕೆಲವು ಮಕ್ಕಳಿಗಾದರೂ ಹೊಲ, ಹೊಳೆ, ಕಾಡಲ್ಲಿ ಸುತ್ತುವ ಅವಕಾಶ ದೊರೆಯಬಹುದು. ಹಾಂ, ಕಾಡಲ್ಲಿ ಸುತ್ತುವ ಅವಕಾಶ ಸಿಕ್ಕರೆ ಅಲ್ಲಿನ ಹಣ್ಣುಗಳನ್ನು ಸವಿಯಲು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT