ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ರಜೆ: ಉದ್ಯಾನಗಳಿಗೆ ಜನರ ಲಗ್ಗೆ

Last Updated 25 ಏಪ್ರಿಲ್ 2014, 6:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ನಗರದ ಉಷ್ಣಾಂಶದ ಪ್ರಮಾಣ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಕಾದ ರಸ್ತೆಗಳ ಮೇಲೆ ಕಾಲಿಡಲೂ ಹೆದರುವಷ್ಟು ಬಿಸಿಲು. ತಾಪ ಶಮನಕ್ಕೆ ಜನ ತಂಪಾದ ಪಾನೀಯಗಳ ಮೊರೆ ಹೋಗಿದ್ದಾರೆ. ಮಕ್ಕಳೊಂದಿಗೆ ಮನೆಮಂದಿಯೂ ಉದ್ಯಾನಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಹೌದು. ಬೇಸಿಗೆಯ ಹಿನ್ನೆಲೆಯಲ್ಲಿ ಉದ್ಯಾನಗಳಿಗೆ ಹೋಗುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಪಾರ್ಕಿನಲ್ಲಿ ಸಮಯ ಕಳೆಯುವವರ ಸಂಖ್ಯೆ ಬೆಳೆಯುತ್ತಿದೆ. ನೆಂಟರಿಷ್ಟರ ಮನೆಗೆ ರಜೆ ಕಳೆಯಲೆಂದು ಬಂದ ಮಕ್ಕಳು, ಹಿರಿಯರಾದಿಯಾಗಿ ಎಲ್ಲರೂ ಉದ್ಯಾನಗಳತ್ತ ಆಕರ್ಷಿತರಾಗುತ್ತಿದ್ದಾರೆ.

ನಗರದ ಮಂದಿ ಹೆಚ್ಚು ಭೇಟಿ ನೀಡುವ ಪಾರ್ಕುಗಳಲ್ಲಿ ಮಹಾತ್ಮಗಾಂಧಿ ಉದ್ಯಾನಕ್ಕೆ (ಇಂದಿರಾ ಗಾಜಿನ ಮನೆ)ಗೆ ಮೊದಲ ಸ್ಥಾನ. ಬೆಳಿಗ್ಗೆ ಗಾಜಿನಮನೆ ಆವರಣದಲ್ಲಿ ಯೋಗಾಸನ ಮಾಡುವವರು, ವಾಕಿಂಗಿಗೆಂದು ಬರುವವರಿಂದ ಹಿಡಿದು, ರಂಜನೆ, ವಿಶ್ರಾಂತಿಗೆಂದು ಬರುವವರಿಗೂ ಇದು ಪ್ರಶಸ್ತ ತಾಣ. ಹೀಗಾಗಿ ಹೆಚ್ಚೆಚ್ಚು ಮಂದಿ ಕುಟುಂಬದೊಂದಿಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಪುಟಾಣಿ ರೈಲು ಇನ್ನೂ ಆರಂಭ ಗೊಂಡಿಲ್ಲದಿರುವುದು ಮಕ್ಕಳಿಗೆ ಬೇಸರ ತಂದಿದೆಯಾದರೂ ರಂಜನೆಗೆಂದೇ ಇನ್ನಿತರ ಆಟಿಕೆಗಳು ಉದ್ಯಾನದೊಳಕ್ಕೆ ಕಾಲಿರಿಸಿರುವುದು ಸಮಾಧಾನ ತಂದಿದೆ. ನಿತ್ಯ ಸರಾಸರಿ 400–500 ಮಂದಿ ಭೇಟಿ ನೀಡುತ್ತಿದ್ದಾರೆ.

ಉಣಕಲ್‌ ಕೆರೆ ದಡದಲ್ಲಿ ಅಲೆಯೋ ಅಲೆ....
ಕೆರೆಯಿಂದ ಬೀಸಿ ಬರುವ ತಂಗಾಳಿ, ಮರಗಳ ನೆರಳಿನ ಕೆಳಗೆ ಹುಲ್ಲುಹಾಸಿನ ಹಾಸಿಗೆ... ಡಕ್‌ನಲ್ಲಿ ನಿಂತು ಕೆರೆಯ ಅಲೆಗಳನ್ನು ನೀಡುವ ಭಾಗ್ಯ ಸಿಗುವುದು ಉಣಕಲ್ ಕೆರೆಯ ಉದ್ಯಾನದಲ್ಲಿ ಮಾತ್ರ. ಹೀಗಾಗಿ ಇಲ್ಲಿ ಬಿಸಿಲ ಹೊತ್ತಲ್ಲೂ ಹೆಚ್ಚು ಮಂದಿ ಆಗಮಿಸುತ್ತಿದ್ದು, ಬಿಸಿಲು ಹೆಚ್ಚಾದಷ್ಟೂ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ನಿತ್ಯ ಸರಾಸರಿ 300ಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ ಎನ್ನುತ್ತಾರೆ ಉದ್ಯಾನದ ಟಿಕೆಟ್‌ ಸಂಗ್ರಹಕರು.

‘ಮನೆಗಳ ಒಳಗೆ ವಿಪರೀತ ಸೆಖೆ. ಮಕ್ಕಳು ಇದರಿಂದ ಹೆಚ್ಚು ಬಳಲುತ್ತಾರೆ. ಹಾಗೆಂದು ಅವರನ್ನು ಹೊರಗೆ ಬಿಡಲೂ ಆಗುವುದಿಲ್ಲ. ಹೀಗಾಗಿ ಅವರನ್ನು ಉದ್ಯಾನಕ್ಕೆ ಕರೆತರುತ್ತೇವೆ. ಇಲ್ಲಿ ಅವರು ಸ್ವಚ್ಛಂದವಾಗಿ ಆಡಬಹುದು. ನೆರಳು ಇರುವುದರಿಂದ ನಮಗೂ ಭಯವಿಲ್ಲ. ಅವರೊಂದಿಗೆ ನಾವೂ ಆರಾಮವಾಗಿ ಕಾಲ ಕಳೆಯಬಹುದು’ ಎನ್ನುತ್ತಾರೆ ಸಾಯಿನಗರದ ನಿವಾಸಿ ಶಕುಂತಲಾ.

ನೃಪತುಂಗ ಬೆಟ್ಟದ ಮೇಲಿರುವ ಉದ್ಯಾನವೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಸಂಜೆಯ ಹೊತ್ತಲ್ಲಿ ಸಮಯ ಕಳೆಯಲು ಮನೆಮಂದಿ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಸಂಜೀವಿನಿಯಲ್ಲೂ ಮಕ್ಕಳ ಕಲರವ..
ಅವಳಿನಗರದ ಮಧ್ಯೆ ಇರುವ ‘ಸಂಜೀವಿನಿ’ ಉದ್ಯಾನ ಪ್ರೇಮಿಗಳ ಪಾಲಿನ ಸಂಜೀವಿನಿ ಎಂದೇ ಹೆಸರುವಾಸಿ. ಇಲ್ಲಿನ ಒಂದೊಂದು ಮರದ ಕೆಳಗೂ ಜೋಡಿಹಕ್ಕಿಗಳು ಕಾಣುತ್ತವೆ. ಇದರೊಂದಿಗೆ ಈ ಉದ್ಯಾನಕ್ಕೆ ಬರುವ ಮಕ್ಕಳು, ಕುಟುಂಬದವರ ಸಂಖ್ಯೆಯೂ ಹೆಚ್ಚುತ್ತಿದೆ. ಮನೆಮಂದಿಯೆಲ್ಲ ಬಂದು ವಿಶ್ರಮಿಸಿ, ಬುತ್ತಿ ಬಿಚ್ಚಿ ತಂದದ್ದನ್ನು ಮೆದ್ದು ಹೋಗಲು ಸಾಕಷ್ಟು ಸ್ಥಳಾವಕಾಶವೂ ಇದೆ.

ಉದ್ಯಾನಕ್ಕೆ ವಿದ್ಯಾರ್ಥಿಗಳಿಗೆ ₨5 ಹಾಗೂ ವಯಸ್ಕರಿಗೆ ₨10 ಪ್ರವೇಶ ಶುಲ್ಕವಿದೆ. ಇದೇ ವರ್ಷ ಜನವರಿ–ಫೆಬ್ರುವರಿಯಲ್ಲಿ ದಿನವೊಂದಕ್ಕೆ ಸರಾಸರಿ ₨1500–2000 ಪ್ರವೇಶ ಶುಲ್ಕ ಸಂಗ್ರಹವಾಗಿದ್ದರೆ, ಮಾರ್ಚ್‌ ಏಪ್ರಿಲ್‌ನಲ್ಲಿ ಈ ಪ್ರಮಾಣ ಸರಾಸರಿ ₨3000ಕ್ಕೆ ಏರಿದೆ. ವಾರಾಂತ್ಯದ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಅರಣ್ಯ ಇಲಾಖೆಯು ಈ ಉದ್ಯಾನವನ್ನು ನಿರ್ವಹಿಸುತ್ತಿದೆ.

‘ಇಲ್ಲೇ ನೆಂಟರ ಮನೆಗೆ ಬಂದಿದ್ದೆವು. ಹತ್ತಿರದಲ್ಲಿನ ಯಾವು ದಾದರೂ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಬೇಕೆಂದು ಕೊಂಡಾಗ ನಮಗೆ ಹೊಳೆದಿದ್ದು ಸಂಜೀವಿನಿ ಉದ್ಯಾನ. ನಮ್ಮೊಂದಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಉದ್ಯಾನ ಸಮಯ ಕಳೆಯಲು ಹೆಚ್ಚು ಸೂಕ್ತವಾಗಿದೆ’ ಎಂದು ಲಕ್ಷ್ಮೇಶ್ವರದಿಂದ ಬಂದಿದ್ದ ಮಹಿಳೆಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT