ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ಏರಿ ನಂದಿಬೆಟ್ಟಕ್ಕೆ ಸವಾರಿ

Last Updated 14 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆಯ ಸಡಗರದಲ್ಲಿದೆ. ಶಾಲಾ, ಕಾಲೇಜು, ರಸ್ತೆ ಬದಿಗಳಲ್ಲಿ ಬಾವುಟ ಹಿಡಿದು ಸಂಭ್ರಮ ಪಡುವವರು ಒಂದೆಡೆಯಾದರೆ,  ನಗರದ ಆರ್‌ಡಿ೩೫೦ ಕ್ಲಬ್‌ ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಜ್ಜಾಗಿದೆ. ತರಹೇವಾರಿ ಬೈಕ್‌ ರ್‍ಯಾಲಿ ಮೂಲಕ ನಂದಿಬೆಟ್ಟದಲ್ಲಿ ಧ್ವಜ ಹಾರಿಸಲು ಕ್ಲಬ್‌ ತಯಾರಾಗಿದೆ.

ಯೆಜ್ಡಿ– ಜಾವಾ ಕ್ಲಬ್‌, ಬುಲ್ಸ್‌ ಅಂಡ್‌ ಪೆರೇಡ್‌, ಬೈಕರ್ಸ್ ಆಫ್‌ ಇಂಡಿಯಾ, ನೇಕೆಡ್‌ ವೂಲ್ವ್ಸ್‌, ಬೈಕರ್‌ ಬ್ರದರ್ಸ್, ಇಂಡಿಯಾ ಬುಲ್‌ ರೈಡರ್ಸ್‌ ಸೇರಿದಂತೆ ನಗರದ ೨೦ ವಿಭಿನ್ನ ಕ್ಲಬ್‌ಗಳು ರಾಜ್‌ದೂತ್‌ ಬೈಕ್‌ ಜತೆಗೆ ಯಮಹಾ, ಯೆಜ್ಡಿ, ರಾಯಲ್‌ ಎನ್‌ಫೀಲ್ಡ್‌, ಡ್ಯೂಕ್‌ ಸೇರಿದಂತೆ ವಿಭಿನ್ನ ಬೈಕ್‌ಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿವೆ.

ಆರು ವರ್ಷದಿಂದ ಈ ಬೈಕ್‌ ರ್‍ಯಾಲಿಯನ್ನು ಆಯೋಜಿಸಲಾಗುತ್ತಿದೆ. ಕಳೆದ ವರ್ಷ ೬೫೦ಕ್ಕೂ ಅಧಿಕ ಜನರು ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ೭೦೦ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ೧೯೬೦ರ ಮಾಡೆಲ್‌ಗಳಾದ ಜಾವ, ಸ್ಕೂಟರ್‌ನಿಂದ ಇಂದಿನ ಸೂಪರ್‌ ಬೈಕ್‌ಗಳು ಈ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿವೆ ಎನ್ನುತ್ತಾರೆ ಆರ್‌ಡಿ 350 ಕ್ಲಬ್‌ನ ಅಧ್ಯಕ್ಷ ವಿಶಾಲ್‌ ಅಗರವಾಲ್‌.

‘ದೇಶದ ಅಭಿವೃದ್ಧಿಯಲ್ಲಿ ಯುವಸಮುದಾಯದ ಕೊಡುಗೆ ಮಹತ್ವದ್ದು. ಹಾಗಾಗಿ ಅವರಲ್ಲಿ ದೇಶಪ್ರೇಮ ಬೆಳೆಸುವುದು ನಮ್ಮ ಮುಖ್ಯ ಉದ್ದೇಶ. ಬೈಕ್‌ ರ್‍ಯಾಲಿಯನ್ನು ಆಯೋಜಿಸುವುದರಿಂದ ಯುವ ಸಮುದಾಯವನ್ನು ಬಹುಬೇಗ ಸೆಳೆಯಬಹುದು ಎಂಬ ಉದ್ದೇಶದಿಂದಲೇ ಈ ರ್‍ಯಾಲಿ ನಡೆಸಲು ಮುಂದಾದೆವು.  ಈ ಮೂಲಕ ಬೈಕರ್‌ಗಳ ನಡುವಿನ ಬಾಂಧವ್ಯದ ಜತೆಗೆ ಸಮಾಜದಲ್ಲಿ ಸಹೋದರತೆಯನ್ನು ಸಾರುವ ಗುರಿ ಹೊಂದಿದ್ದೇವೆ. ಬೈಕರ್‌ ಸಂಘಟನೆ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರುವುದರಿಂದ ಪ್ರತಿಯೊಬ್ಬರನ್ನು ಸಂಪರ್ಕಿಸುವುದು ಸುಲಭವಾಗುತ್ತದೆ’ ಎನ್ನುತ್ತಾರೆ ಅವರು.

ಹದಿನೆಂಟು ವರ್ಷ ಮೇಲ್ಪಟ್ಟವರು, ಡ್ರೈವಿಂಗ್‌ ಲೈಸೆನ್ಸ್‌ ಇರುವ ಯಾರು ಬೇಕಾದರೂ ಈ ರ್‍ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ತ್ರಿವರ್ಣ ಧ್ವಜ, ಜಾಕೆಟ್‌, ಹೆಲ್ಮೆಟ್‌, ಶೂ ಹಾಕಿಕೊಳ್ಳುವುದು ಕಡ್ಡಾಯ.

ಬೆಂಗಳೂರಿನ ಬೈಕರ್‌ ಸಂಘಟನೆಗಳ ಜೊತೆಗೆ ಕೋಲಾರದ ಗೋಲ್ಡ್‌ ಟೌನ್‌ ಬೈಕರ್ಸ್‌ ಮತ್ತು ಮೈಸೂರಿನ ಬೈಕ್‌ಗಳು ಭಾಗವಹಿಸುತ್ತಿವೆ.

ಇಂದು (ಆಗಸ್ಟ್‌ 15) ಬೆಳಿಗ್ಗೆ ಆರು ಗಂಟೆಗೆ ಹೆಬ್ಬಾಳ ಸಮೀಪದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಇವರೆಲ್ಲ ಸೇರಲಿದ್ದಾರೆ. ನಂತರ ನಂದಿಬೆಟ್ಟದತ್ತ ಇವರ ಪಯಣ. ಅಲ್ಲಿ ೮ ಗಂಟೆಗೆ ಧ್ವಜಾರೋಹಣ, ರಾಷ್ಟ್ರ ಗೀತೆಯ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಲಾಗುತ್ತದೆ.

‘ಆರ್‌ಡಿ-350 ಕ್ಲಬ್ ಬೆಂಗಳೂರು’ ತಂಡದ ಉತ್ಸಾಹಿ ಸದಸ್ಯರಾದ ೮೪ ವರ್ಷದ ನಿವೃತ್ತ ಏರ್‌ಕ್ರಾಫ್ಟ್‌ ಡಿಸೈನರ್‌ ಆರ್‌. ಚಕ್ರವರ್ತಿ ಈ ರ್‍ಯಾಲಿಯಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ. ಇವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸ್ನೇಹ ಮತ್ತು  ಒಬ್ಬರಿಗೊಬ್ಬರು ಗೌರವದಿಂದ ನಡೆದುಕೊಳ್ಳುವ ಕುರಿತು ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ಈ ತಂಡ ಬೆಂಗಳೂರಿಗೆ ವಾಪಸಾಗುತ್ತದೆ. ಸಂಪರ್ಕಕ್ಕೆ: 99016 55571. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT