ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಸಿಕಲ್‌ನಲ್ಲೇ ಭತ್ತ ಒಕ್ಕಣೆ

ವಿದ್ಯಾರ್ಥಿ ತಂತ್ರಜ್ಞ
Last Updated 29 ಜುಲೈ 2014, 19:30 IST
ಅಕ್ಷರ ಗಾತ್ರ

ಕೃಷಿ ಕಾರ್ಮಿಕರು ಲಭ್ಯವಿಲ್ಲದೆ ಸಣ್ಣ ಹಿಡುವಳಿದಾರರಿಗೆ ಧಾನ್ಯ ಒಕ್ಕಣೆ ಮಾಡುವುದೇ ಕಷ್ಟವಾಗಿದೆ. ಇಂತಹರಿಗೆ ನೆರವಾಗಲೆಂದು ಇಬ್ಬರೇ ನಡೆಸಬಹುದಾದ ಸರಳ ರೀತಿಯ ‘ಬೈಸಿಕಲ್‌ ಒಕ್ಕಣೆ ಯಂತ್ರ’ ಅಭಿವೃದ್ಧಿಪಡಿಸಿದ್ದಾರೆ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರು. ಈ ಪುಟ್ಟ ಯಂತ್ರ ಕಾರ್ಮಿಕರ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ಕೂಲಿ ವೆಚ್ಚವನ್ನೂ ಉಳಿಸುತ್ತದೆ.


 ಭತ್ತದ ಕೊಯ್ಲು ಮುಗಿದು ಬಣವೆಯಲ್ಲಿ ಒಟ್ಟುಗೂಡಿಸಿ ಹದವಾಗಿ ಒಣಗಿಸಿ ಒಕ್ಕಣೆ ಮಾಡುವುದು ಸಾಂಪ್ರದಾಯಿಕ ಪದ್ಧತಿ. ಇದಕ್ಕೆ ಕೂಲಿಯಾಳುಗಳು ಹೆಚ್ಚು ಬೇಕು. ಈ ಪ್ರಕ್ರಿಯೆಯನ್ನು ಸರಳಗೊಳಿಸಲೆಂದೇ ಹಲವು ಯಂತ್ರೋಪಕರಣಗಳೂ ಕಾಲಿಟ್ಟವು. ಆದರೆ ಅವು ದೊಡ್ಡ ಮಟ್ಟದ ರೈತರಿಗೆ ಅನುಕೂಲವಾದವೇ ಹೊರತು ಸಣ್ಣಪುಟ್ಟ ರೈತರಿಗೆ ನಿಲುಕಲಿಲ್ಲ.

ಕೂಲಿಯಾಳುಗಳ ಕೊರತೆ, ಹೆಚ್ಚು ಕೂಲಿಯಿಂದಾಗಿ ಸಣ್ಣ ಭೂಮಿ ಹೊಂದಿರುವ ರೈತರಿಗೆ ಒಕ್ಕಣೆ ಮಾಡುವುದೇ ಪ್ರಯಾಸಕರವಾಗಿದೆ.
ಆದ್ದರಿಂದ ಒಕ್ಕಣೆ ಕೆಲಸವನ್ನು ಸರಳಗೊಳಿಸುವ ಸಾಧನವೊಂದನ್ನು ಬೆಂಗಳೂರಿನ ‘ಎಸ್‌ಜೆಬಿಐಟಿ’ (ಶ್ರೀ ಜಗದ್ಗುರು ಬಾಲಗಂಗಾಧರನಾಥ ಸ್ವಾಮಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ಮೂವರು ವಿದ್ಯಾರ್ಥಿನಿಯರು ಸಿದ್ಧಪಡಿಸಿದ್ದಾರೆ. ದೀಪಿಕಾ ಎನ್, ದೀಪಿಕಾ ಎಸ್‌ ಹಾಗೂ ಫೌಜಿಯಾ ಪರ್ವೀನ್ ಎಂಬ ವಿದ್ಯಾರ್ಥಿನಿಯರು ‘ಮ್ಯಾನ್ಯುಯಲ್ ಥ್ರೆಷರ್ ಮೆಷಿನ್‌’ (ಮಾನವ ಚಾಲಿತ ಒಕ್ಕಣೆ ಯಂತ್ರ) ವಿನ್ಯಾಸಗೊಳಿಸಿದ್ದಾರೆ.

ಸಾಮಾನ್ಯವಾದ ಬೈಸಿಕಲ್‌ಗೇ ಜೋಡಿಸಲಾಗಿರುವ ಈ ಪುಟ್ಟ ಯಂತ್ರಕ್ಕೆ ವಿದ್ಯುಚ್ಛಕ್ತಿಯ ಅಗತ್ಯವೇ ಇಲ್ಲ. ಸ್ಟ್ಯಾಂಡ್‌ ಹಾಕಿದಂತೆ ಇರುವ ಬೈಸಿಕಲ್‌ ಮೇಲೆ ಒಬ್ಬರು ಕುಳಿತು ಪೆಡಲ್ ತುಳಿಯುತ್ತಾ ಹೋದರೆ ಯಂತ್ರ ಚಾಲನೆ ಪಡೆದುಕೊಳ್ಳುತ್ತದೆ. ಹಿಂದಿನ ಚಕ್ರಕ್ಕೆ ಜೋಡಿಸಿದ ಒಕ್ಕಣೆ ಯಂತ್ರದೊಳಕ್ಕೆ ಭತ್ತದ ಪೈರನ್ನು ಮತ್ತೊಬ್ಬರು ಒಡ್ಡಿದರೆ ಪೈರಿನಿಂದ ಕಾಳು ಬೇರ್ಪಡುತ್ತದೆ. ಅಂದ ಹಾಗೆ ರೈತ ಮಹಿಳೆಯರೇ ಬಹಳ ಸುಲಭದಲ್ಲಿ ಭತ್ತವನ್ನು ಒಕ್ಕಣೆ ಮಾಡಲೆಂದೇ ವಿಶೇಷವಾಗಿ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇಬ್ಬರು ಮಹಿಳೆಯರಿಂದ ಒಕ್ಕಣೆ ಕೆಲಸವನ್ನು ಮಾಡಿ ಮುಗಿಸಬಹುದು.

ಈ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದವರೇ ಆಗಿದ್ದರಿಂದ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವ ಯಂತ್ರವನ್ನೇ ಅಭಿವೃದ್ಧಿಪಡಿಸಲು ಆಲೋಚಿಸಿದರು. ಆಗ ಹೊಳೆದದ್ದು ಸರಳವಾದ ಭತ್ತ ಒಕ್ಕಣೆ ಯಂತ್ರ.    ಕಡಿಮೆ ಪ್ರಮಾಣದ ಭೂಮಿ ಹೊಂದಿರುವವರಿಗೆ ಹೊರೆ ಎನಿಸಿರುವ ಭತ್ತ ಒಕ್ಕಣೆ ಕೆಲಸವನ್ನು ಆರ್ಥಿಕವಾಗಿ ನಿಲುಕುವಂತೆ ಮಾಡುವ ಉದ್ದೇಶದೊಂದಿಗೇ ಈ  ಯಂತ್ರವನ್ನು ಸಿದ್ಧಗೊಳಿಸಿರುವುದಾಗಿ ಹೇಳುತ್ತಾರೆ ವಿದ್ಯಾರ್ಥಿನಿಯರು.

‘ಮೂಲತಃ ಗ್ರಾಮೀಣ ಪ್ರದೇಶದವರೇ ಆದ್ದರಿಂದ ಕೃಷಿ ಕ್ಷೇತ್ರದತ್ತಲೂ ಆಸಕ್ತಿಯಿತ್ತು. ಸಣ್ಣ ಮಟ್ಟದ ರೈತರು, ಅದರಲ್ಲೂ ಮಹಿಳೆಯರು ಸುಲಭ ರೀತಿಯಲ್ಲಿ ನಿರ್ವಹಿಸಬಹುದಾದ ಸರಳ ಯಂತ್ರವೊಂದನ್ನು ಸಿದ್ಧಪಡಿಸಬೇಕು ಎಂಬ ಮನಸ್ಸಾಯಿತು. ಆ ನಿಟ್ಟಿನಲ್ಲಿಯೇ ಭತ್ತ ಒಕ್ಕಣೆ ಯಂತ್ರ ಸಿದ್ಧಪಡಿಸಿದ್ದೇವೆ’ ಎನ್ನುತ್ತಾರೆ ಈ ‘ವಿದ್ಯಾರ್ಥಿ ತಂತ್ರಜ್ಞರು’. ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಟಿ.ಮಧುಸೂದನ್ ಮಾರ್ಗದರ್ಶನ ಹಾಗೂ ಪ್ರಾಧ್ಯಾಪಕರ ಸಹಕಾರ ಈ ಒಕ್ಕಣೆ ಯಂತ್ರದ ಕನಸು ನನಸಾಗಲು ಬಹಳವಾಗಿ ನೆರವಾಯಿತು ಎಂದು ಗುರುಭಕ್ತಿಯನ್ನೂ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದಾರೆ.

ಯಂತ್ರ ರಚನೆ
ಸಾಮಾನ್ಯ ದರ್ಜೆಯ ಬೈಸಿಕಲ್‌ನಿಂದಲೇ ಈ ಒಕ್ಕಣೆ ಯಂತ್ರ ಕಾರ್ಯ ನಿರ್ವಹಿಸುತ್ತದೆ. ಮೊದಲಿಗೆ, ಉಕ್ಕಿನ ಹಾಳೆಯಿಂದ ಸಿಲಿಂಡರ್ ಆಕಾರದ ಡ್ರಮ್‌ ತಯಾರಿಸಿಕೊಳ್ಳಲಾಯಿತು. ಈ ಡ್ರಮ್‌ ಒಂದು ಕಡೆ ಅಗಲವಾಗಿ ಬಾಯಿ ತೆರೆದುಕೊಂಡಂತೆಯೇ ಇದೆ. ಇದುವೇ ಭತ್ತದ ಪೈರನ್ನು ಯಂತ್ರದ ಬಾಯಿಗೆ ಕೊಡುವ ಜಾಗ.

ಡ್ರಮ್‌ನ ಒಳಗಡೆ ರೋಟರ್‌ ಅಳವಡಿಸಲಾಗಿದೆ. ಅದು ಸುತ್ತುವುದಕ್ಕೆ ಅನುಕೂಲವಾಗುವಂತೆ ನೈಲಾನ್ ಪೆಗ್ಸ್‌ಗಳನ್ನು ಹೆಣೆಯಲಾಗಿದೆ. ರೋಟರ್‌ ಸೈಕಲ್ಲಿನ ಚೈನ್‌ ಸಂಪರ್ಕ ಗೊಳಿಸಲಾಗಿದೆ. ಪೆಡಲ್ ತುಳಿದಾಗ ಅದರ ಚೈನ್‌ ಚಲಿಸಲಾರಂಭಿಸುತ್ತದೆ. ಆ ಚಲನೆಗೆ ತಕ್ಕಂತೆಯೇ ಒಕ್ಕಣೆ ಯಂತ್ರದ ರೋಟರ್ ತಿರುಗಲು ಆರಂಭಿಸುತ್ತದೆ. ಆಗ ಭತ್ತದ ಪೈರನ್ನು ರೋಟರ್‌ ಬಾಯಿಗೆ ಹಿಡಿದರೆ ಅಲ್ಲಿ ತಿರುಗುತ್ತಿರುವ ನೈಲಾನ್ ಪೆಗ್‌ಗೆ ತಾಗಿ ಕಾಳುಗಳು ಬೇರ್ಪಟ್ಟು ಕೆಳಕ್ಕೆ ಉದುರುತ್ತವೆ. ಭತ್ತದ ಕಾಳುಗಳು ಸಲೀಸಾಗಿ ಹೊರಬಂದು ಚೀಲದೊಳಗೆ ಬೀಳುವಂತೆ ಪ್ಲೇಟ್‌ ಕೂಡ ಅಳವಡಿಸಲಾಗಿದೆ.

ಮೊದಲು ನೈಲಾನ್ ಬದಲು ಲೋಹದ ಪೆಗ್‌ ಅಳವಡಿಸಲಾಗಿತ್ತು. ಆದರೆ ಇದರಿಂದ ಕಾಳುಗಳು ಒಡೆದು ವ್ಯರ್ಥವಾಗುತ್ತಿದ್ದವು. ಆದ್ದರಿಂದ ನೈಲಾನ್ ಪೆಗ್‌ ಬಳಸಲಾಯಿತು ಎಂದು ವಿವರಿಸಿದೆ ‘ವಿದ್ಯಾರ್ಥಿ ತಂತ್ರಜ್ಞ’ರ ತಂಡ. ಗಂಟೆಗೆ ಮೂವತ್ತರಿಂದ ನಲವತ್ತು ಕೆ.ಜಿ ಭತ್ತವನ್ನು ಒಕ್ಕಣೆ ಮಾಡಬಹುದು. ಇದರ ಮಾದರಿಗೆ ವೆಚ್ಚವಾಗಿರುವುದು ಕೇವಲ ₨6ಸಾವಿರ. ಹೆಚ್ಚಿನ ಸಂಖ್ಯೆಯಲ್ಲಿ ಇದೇ ಯಂತ್ರವನ್ನು ತಯಾರಿಸುವುದಾದರೆ ಆಗ ಕನಿಷ್ಠ ₨4 ಸಾವಿರದಿಂದ ₨5 ಸಾವಿರದ ಬೆಲೆಗೆಲ್ಲಾ  ರೈತರಿಗೆ ಒದಗಿಸಬಹುದು.

ವಿದ್ಯುತ್ ಬೇಕಿಲ್ಲ
ಪೆಡಲ್ ತುಳಿದರೆ ಸಾಕು ಧಾನ್ಯ ಒಕ್ಕಣೆ ಆಗುವುದರಿಂದ ವಿದ್ಯುತ್ ಅವಶ್ಯಕತೆಯಿಲ್ಲ. ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌ಗಳಲ್ಲಿ ಒಕ್ಕಣೆ ಮಾಡಿದಾಗ ಭಾರಿ ಪ್ರಮಾಣದಲ್ಲಿ ಕಾಳುಗಳು ಹಾನಿಗೆ ಒಳಗಾಗುತ್ತವೆ. ಆದರೆ, ಈ ಸರಳ ಒಕ್ಕಣೆ ಯಂತ್ರದಲ್ಲಿ ಆ ಬಗೆಯ ವೇಸ್ಟೇಜ್‌ ಇಲ್ಲ. ಸೈಕಲ್‌ಗೆ ಜೋಡಿಸಿರುವುದರಿಂದ ಗದ್ದೆಯೊಳಕ್ಕೇ ಕೊಂಡೊಯ್ಯಬಹುದು. ಅಕ್ಕ ಪಕ್ಕದ ಊರುಗಳಿಗೂ ಒಯ್ಯಬಹುದು. ಸರಳವೂ ಆಗಿರುವುದರಿಂದ ಯಂತ್ರದ ನಿರ್ವಹಣೆ ಶ್ರಮವೂ ಇಲ್ಲ.

ಕಡಿಮೆ ವೆಚ್ಚದಲ್ಲಿ ರೈತರೇ ತಮ್ಮ ಬೈಸಿಕಲ್‌ಗೆ ಅಳವಡಿಸಿಕೊಳ್ಳುವಂತಹ ಯಂತ್ರ ಇದಾಗಿದೆ. ಅರ್ಧ ಎಕರೆಯಿಂದ ಹತ್ತು ಎಕರೆ ಹೊಂದಿರುವ ರೈತರಿಗೆ ಈ ಯಂತ್ರ ಸೂಕ್ತವಾಗಿದೆ. ಒಕ್ಕಣೆಯ ಕೆಲಸ ಇಲ್ಲದ ಕಾಲದಲ್ಲಿ ಯಂತ್ರವನ್ನು ಬಿಚ್ಚಿಟ್ಟು ಸೈಕಲನ್ನು ರೈತರು ಮಾಮೂಲಿಯಂತೆ ತಮ್ಮ ಓಡಾಟಕ್ಕೆ ಬಳಸಿಕೊಳ್ಳಬಹುದು. ಈ ಯಂತ್ರ ಭತ್ತ ಮಾತ್ರವಲ್ಲದೆ, ಗೋಧಿ, ಅಕ್ಕಿ, ಜೋಳ, ರಾಗಿ ಒಕ್ಕಣೆಗೂ ಅನುಕೂಲಕರವಾಗಿದೆ.

ಈಗಂತೂ ಕೃಷಿ ಕಾರ್ಮಿಕರು ಸುಲಭಕ್ಕೆ  ದೊರೆಯುತ್ತಿಲ್ಲ. ಸಣ್ಣ ಹಿಡುವಳಿದಾರರು ಮನೆಯವರನ್ನೆಲ್ಲಾ ಸೇರಿಸಿಕೊಂಡು ಶ್ರಮಪಟ್ಟು ಅದು ಹೇಗೋ ಬೆಳೆ ತೆಗೆದರೂ ಧಾನ್ಯಗಳನ್ನು ಒಕ್ಕಣೆ ಮಾಡುವ ಸಂದರ್ಭದಲ್ಲಿ ಮತ್ತಷ್ಟು ಕಷ್ಟ ಎದುರಿಸಬೇಕಿತ್ತು. ಈಗ ಕೇವಲ ಬೈಸಿಕಲ್‌ ಸಹಾಯದಿಂದ ಕೇವಲ ಇಬ್ಬರೇ ನಡೆಸಬಹುದಾದ ಈ ಸರಳ ಒಕ್ಕಣೆ ಯಂತ್ರ ಅಭಿವೃದ್ಧಿ ಆಗಿರುವುದರಿಂದ ಸಣ್ಣ ಹಿಡುವಳಿದಾರರಿಗೆ ಕಾರ್ಮಿಕರ ಕೊರತೆ ಸಮಸ್ಯೆಗೂ ಪರಿಹಾರ ಸಿಕ್ಕಂತಾಯಿತು, ಜತೆಗೆ, ಕೂಲಿ ವೆಚ್ಚವೂ ಉಳಿತಾಯವಾದಂತಾಯಿತು.
(ಹೆಚ್ಚಿನ ಮಾಹಿತಿಗೆ ಪ್ರೊ. ಮಧುಸೂದನ್‌ ಮೊ: 9916101233)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT