ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಫೊರ್ಸ್‌ ಹಗರಣವೇ ಅಲ್ಲ

Last Updated 26 ಮೇ 2015, 19:54 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸ್ವೀಡನ್‌ನ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ, ಬೊಫೊರ್ಸ್‌ ಫಿರಂಗಿ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿದೆ ಎಂಬುದು ಈವರೆಗೆ ಸಾಬೀತಾಗಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. 

‘ಮೊತ್ತ ಮೊದಲಿಗೆ ಇದೊಂದು ಹಗರಣ ಎಂಬುದು ಸಾಬೀತಾಗಬೇಕು. ಭಾರತದ ಯಾವ ನ್ಯಾಯಾಲಯದಲ್ಲಿಯೂ ಇದು ಸಾಬೀತಾಗಿಲ್ಲ’ ಎಂದು ‘ಡಾಜೆನ್ಸ್‌ ನೈಹೆಟರ್‌’ ಪತ್ರಿಕೆ ಪ್ರಧಾನ ಸಂಪಾದಕ ಪೀಟರ್‌ ವೊಲೊಡರ್‌ಸ್ಕಿ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮುಂದಿನ ತಿಂಗಳು ರಾಷ್ಟ್ರಪತಿ ಸ್ವೀಡನ್‌ ಭೇಟಿ ನೀಡಲಿದ್ದಾರೆ.

‘ಬೊಫೊರ್ಸ್‌ ಫಿರಂಗಿ ಖರೀದಿಯ ಬಹಳ ಕಾಲದ ನಂತರ ನಾನು ರಕ್ಷಣಾ ಸಚಿವನಾಗಿದ್ದೆ. ಈತನಕ ನಾವು ಹೊಂದಿರುವ ಫಿರಂಗಿಗಳಲ್ಲೇ ಇದು ಅತ್ಯುತ್ತಮವಾದುದು ಎಂದು ಹಲವು ಜನರಲ್‌ಗಳು ನನಗೆ ಹೇಳಿದ್ದಾರೆ. ಈಗಲೂ ಭಾರತೀಯ ಸೇನೆ ಅದನ್ನು ಬಳಸುತ್ತಿದೆ. ಮಾಧ್ಯಮದಲ್ಲಿ ಇದು ಬಾರಿ ಪ್ರಚಾರ ಪಡೆದಿದೆ. ಈ ಬಗ್ಗೆ ವಿಚಾರಣೆಯೂ ನಡೆದಿದೆ. ಪ್ರಕರಣದ ಬಗ್ಗೆ ಆಗಿರುವ ಭಾರಿ ಪ್ರಚಾರದಿಂದ ನಾವು ದಾರಿ ತಪ್ಪುವುದು ಬೇಡ’ ಎಂದು ಪ್ರಣವ್‌ ಮುಖರ್ಜಿ ಹೇಳಿದ್ದಾರೆ.

ಇದು ಮಾಧ್ಯಮವೇ ಸೃಷ್ಟಿಸಿದ ಹಗರಣವೇ ಎಂಬ ಪ್ರಶ್ನೆಗೆ ‘ಅದು ನನಗೆ ಗೊತ್ತಿಲ್ಲ. ನಾನು ಅದನ್ನು ಹಾಗೆ ವರ್ಣಿಸಿಲ್ಲ. ಮಾಧ್ಯಮದಲ್ಲಿ ಇದು ಹೆಚ್ಚಿನ ಪ್ರಚಾರ ಪಡೆದಿದೆ ಎಂದಷ್ಟೇ ನಾನು ಹೇಳಿದ್ದೇನೆ. ಅದಲ್ಲದೆ, ಭಾರತದ ಯಾವುದೇ ನ್ಯಾಯಾಲಯದಲ್ಲಿಯೂ ಇದು ಹಗರಣ ಎಂಬುದು ಸಾಬೀತಾಗಿಲ್ಲ’ ಎಂದೂ ರಾಷ್ಟ್ರಪತಿ ಹೇಳಿದ್ದಾರೆ.

ಆದರೆ ರಾಷ್ಟ್ರಪತಿಯವರ ಸಂದರ್ಶನದ ವಿಡಿಯೊದಲ್ಲಿ ಈ ಯಾವುದೇ ಹೇಳಿಕೆಗಳು ಇಲ್ಲ. ಮುಖರ್ಜಿ ಅವರ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 1986ರಲ್ಲಿ ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತಕ್ಕೆ ಹೂವಿಟ್ಜರ್‌ ಫಿರಂಗಿ ಪೂರೈಸಲು ಸ್ವೀಡನ್‌ನ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಬೊಫೊರ್ಸ್‌ ಜೊತೆಗೆ ಮಾಡಿಕೊಂಡ ₨1,500 ಕೋಟಿ ಮೊತ್ತದ ಒಪ್ಪಂದ ವಿವಾದಕ್ಕೆ ಕಾರಣವಾಗಿತ್ತು.

ಫಿರಂಗಿ ಪೂರೈಸುವ ಗುತ್ತಿಗೆ ಪಡೆದುಕೊಳ್ಳುವುದಕ್ಕಾಗಿ ಬೊಫೊರ್ಸ್‌ ಕಂಪೆನಿಯು ಭಾರತದ ರಾಜಕಾರಣಿಗಳು ಮತ್ತು ಸೇನೆಯ ಅಧಿಕಾರಿಗಳಿಗೆ ಭಾರಿ ಲಂಚ ನೀಡಿದೆ ಎಂದು ಸ್ವೀಡನ್‌ನ ಮಾಧ್ಯಮಗಳು ವರದಿ ಮಾಡಿದ್ದವು.

ಬೊಫೊರ್ಸ್‌ ಫಿರಂಗಿ ಉತ್ತಮ:  ಬೊಫೊರ್ಸ್‌ ಫಿರಂಗಿಗಳ ಗುಣಮಟ್ಟ ಉತ್ತಮವಾಗಿವೆ ಎಂದು ಹೇಳಿರುವ ರಕ್ಷಣಾ ಸಚಿವ ಮನೋಹರ್  ಪರಿಕ್ಕರ್‌, ರಾಷ್ಟ್ರಪತಿಯವರು ಸ್ವೀಡನ್‌ನ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿರುವ ಅಂಶಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಬೊಫೊರ್ಸ್‌ ಫಿರಂಗಿಗಳು ಉತ್ತಮವಾಗಿವೆ ಎಂದು ನಾನು ಪ್ರಮಾಣಿಸಬಹುದು. ಆದರೆ ರಾಷ್ಟ್ರಪತಿಯವರ ಹೇಳಿಕೆಯ ಬಗ್ಗೆ ಏನನ್ನೂ ಹೇಳುವುದಿಲ್ಲ. -ಮನೋಹರ್‌ ಪರಿಕ್ಕರ್‌,ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT