ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನಿಟೊ ಡಿಸೈನ್ಸ್‌: ಯಶಸ್ಸಿನ ಹಾದಿಯಲ್ಲಿ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರವು ತ್ವರಿತವಾಗಿ ಬೆಳೆಯುತ್ತಿದ್ದು, ಅಸಂಖ್ಯ ಮನೆ, ಅಪಾರ್ಟ್‌ಮೆಂಟ್‌, ವಿಲಾಸಿ ಸ್ವತಂತ್ರ ವಿಲ್ಲಾಗಳು, ವಿಲ್ಲಾಮೆಂಟ್‌, ಗೇಟೆಡ್‌ ಕಮ್ಯುನಿಟಿಗಳು  ನಿರ್ಮಾಣಗೊಳ್ಳುತ್ತಿವೆ. ಪ್ರತಿಯೊಂದು ಮನೆಯ ಬಾಹ್ಯ ನೋಟವು ಮಾಲೀಕರ ಅಭಿರುಚಿಗೆ ತಕ್ಕಂತೆ ಭಿನ್ನವಾಗಿರುವಂತೆ, ಮನೆ ಒಳಗಿನ ವಿನ್ಯಾಸವು ಆ ಮನೆಯಲ್ಲಿ ವಾಸಿಸುವವರ ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ.

ಮನೆಯ ಒಳ ಆವರಣವು ಹೆಚ್ಚು ಆಕರ್ಷಕವಾಗಿ ಮನೆಯೊಡೆಯ / ಒಡತಿಯ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವ ಬಗೆಯಲ್ಲಿ ಒಳಾಂಗಣದ ವಿನ್ಯಾಸವನ್ನು ಒಪ್ಪ ಓರಣಗೊಳಿಸಲು  ಬೆಂಗಳೂರಿನ ಬೋನಿಟೊ (Bonito) ಸಂಸ್ಥೆಯು ನೆರವಾಗುತ್ತಿದೆ.

ಈ ಸಂಸ್ಥೆ  ಸ್ಥಾಪಿಸಿರುವ ಮೂವರು ಯುವ ಸಾಧಕರು   ಬೆಂಗಳೂರಿನ ಒಳಾಂಗಣ ವಿನ್ಯಾಸ ಸಂಸ್ಥೆಗಳ ಪೈಕಿ ಅತ್ಯಂತ ತ್ವರಿತವಾಗಿ ವಹಿವಾಟು ವಿಸ್ತರಿಸಲು ಶ್ರಮಿಸುತ್ತಿದ್ದಾರೆ.

ನಾಲ್ಕು ವರ್ಷಗಳ ಅವಧಿಯಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಸಂಸ್ಥೆಯು ಪ್ರತಿಯೊಂದು ಮನೆಯ ವಿನ್ಯಾಸದಲ್ಲಿಯೂ ಹೊಸತನ ಅಳವಡಿಸುವ ಮೂಲಕ ಹಳೆಯ ತಪ್ಪುಗಳನ್ನು ಪುನರಾವರ್ತನೆ ಮಾಡದಂತೆ ಎಚ್ಚರವಹಿಸುತ್ತಿದೆ.

ತನ್ನದೇ ಆದ ಪೀಠೋಪಕರಣ ತಯಾರಿಕಾ ಘಟಕದ ಮೂಲಕ ಅತ್ಯುತ್ತಮ ಗುಣಮಟ್ಟದ ಒಳಾಂಗಣ ವಿನ್ಯಾಸ ರೂಪಿಸಲು ಸಂಸ್ಥೆ ಹೆಣಗುತ್ತಿದೆ.  ಇತರ ಪೀಠೋಪಕರಣಗಳಿಗೆ ಹೋಲಿಸಿದರೆ, ವೈವಿಧ್ಯಮಯ ಸಿದ್ಧ ಮಾದರಿಗಳನ್ನು  (ಮಾಡ್ಯುಲರ್‌ ಫರ್ನಿಚರ್‌)  ತಯಾರಿಸುವ ಮೂಲಕ ಸಾಕಷ್ಟು ಸ್ಥಳಾವಕಾಶ ಉಳಿಸಲು ನೆರವಾಗುತ್ತಿದೆ.

ತಮ್ಮ ಮನೆಯ ಒಳಾಂಗಣ ಅಲಂಕಾರಕ್ಕೆ ತಮ್ಮ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಿಕೊಡಲು ಸಂಸ್ಥೆಯನ್ನು ಸಂಪರ್ಕಿಸುವ ಗ್ರಾಹಕರ ಬಜೆಟ್‌ಗೆ ತಕ್ಕಂತೆ ವಿನ್ಯಾಸ ಮಾಡಿಕೊಟ್ಟು ಅವರ ಮನ ಗೆಲ್ಲುತ್ತಿದೆ.

ಒಳಾಂಗಣ ವಿನ್ಯಾಸಕ್ಕೆ ಬೇಕಾಗುವ ಪೀಠೋಪಕರಣಗಳಿಗಾಗಿ ಸಂಸ್ಥೆಯು ಸಿಂಗಸಂದ್ರದಲ್ಲಿ ತನ್ನದೇ ಆದ  ತಯಾರಿಕಾ ಘಟಕ ಹೊಂದಿದೆ. ನಾಲ್ಕು ವರ್ಷಗಳಿಂದ ಈ ರಂಗದಲ್ಲಿ ಇರುವ  ತ್ರಿಮೂರ್ತಿಗಳು ಈಗ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ತಮ್ಮ ಸೇವೆಯನ್ನು ಹೈದರಾಬಾದ್‌ಗೂ ವಿಸ್ತರಿಸಲು ಮುಂದಾಗಿದ್ದಾರೆ. ಕ್ರಮೇಣ ರಾಜ್ಯದ ಇತರ ದೊಡ್ಡ ನಗರಗಳಿಗೂ ವಿಸ್ತರಿಸುವ ಆಲೋಚನೆಯೂ ಇದೆ.

ಈ ಮುಂಚೆ ಮನೆಗಳ ಕನಿಷ್ಠ ಅಗತ್ಯದ  ಪೀಠೋಪಕರಣಗಳು  ಇದ್ದರೆ ಸಾಕು ಎಂಬ ಭಾವನೆ ಜನರಲ್ಲಿ ಇತ್ತು. ಈಗ ಗ್ರಾಹಕರ ಅಗತ್ಯಗಳು ಹೆಚ್ಚಾಗುತ್ತಿವೆ. ಜನರ  ಅಭಿರುಚಿಯೂ ತ್ವರಿತವಾಗಿ ಬದಲಾಗುತ್ತಿದೆ. ಮನೆಗಳನ್ನು ಮತ್ತೆ, ಮತ್ತೆ ಖರೀದಿಸಲು ಅಥವಾ ಪದೇ ಪದೇ ಬದಲಾಯಿಸಲಂತೂ ಸಾಧ್ಯವಿಲ್ಲ. ಆದರೆ, ಮನೆಯ ಒಳಾಂಗ ವಿನ್ಯಾಸ ಮತ್ತು  ಪೀಠೋಪಕರಣಗಳನ್ನು ಬದಲಾಯಿಸಲು ಅವಕಾಶ ಇದ್ದೇ ಇದೆ. 

ಹಣ ವೆಚ್ಚ ಮಾಡಿದಂತೆ ವಿನ್ಯಾಸವನ್ನೂ ಬದಲಿಸಬಹುದು. ಒಳಾಂಗಣ ವಿನ್ಯಾಸದಲ್ಲಿ ಮನೆ ಮಾಲೀಕರ, ಗೃಹಿಣಿಯರ ವ್ಯಕ್ತಿತ್ವವು ಪ್ರತಿಫಲನಗೊಳ್ಳಬೇಕು ಎನ್ನುವ ಭಾವನೆ ಹೆಚ್ಚುತ್ತಿದೆ. ಮಧ್ಯಮ ವರ್ಗ ಮತ್ತು ಮೇಲ್‌ ಮಧ್ಯಮ ವರ್ಗದವರಲ್ಲಿ  ಈ ಬಗ್ಗೆ ಹೆಚ್ಚು ಒಲವು ಕಂಡು ಬರುತ್ತಿದೆ.

ಮನೆ, ಅಪಾರ್ಟ್‌ಮೆಂಟ್‌ಗೆ ₹ 1 ಕೋಟಿ ವೆಚ್ಚ ಮಾಡಿದ್ದರೆ, ₹ 10 ಲಕ್ಷವನ್ನಾದರೂ ಒಳಾಂಗಣ ವಿನ್ಯಾಸಕ್ಕೆ ವೆಚ್ಚ ಮಾಡಲು ಮಾಲೀಕರು ಮುಂದಾಗಿರುತ್ತಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ವಹಿವಾಟು ವಿಸ್ತರಣೆಗೆ ವಿಪುಲ ಅವಕಾಶಗಳಿವೆ.

ನಾಲ್ಕು ವರ್ಷಗಳ ಹಿಂದೆ ಇಬ್ಬರು ಸಮಾನ ಮನಸ್ಕರಾದ ವತ್ಸಲಾ ಮತ್ತು ಸಮೀರ್‌ ಸೇರಿಕೊಂಡು ಬೋನಿಟೊ ಡಿಸೈನ್ಸ್‌ ಸ್ಥಾಪಿಸಿದ್ದರು. ಆನಂತರ ಅವರ ಜತೆ ರಿಕ್ಸನ್‌ ಸೇರಿಕೊಂಡರು. ಮೂವರೂ ತಮ್ಮ ದುಡಿಮೆಯ ಹಣವನ್ನೇ ತೊಡಗಿಸಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಹೊರಗಿನ ಬಂಡವಾಳ ನೆಚ್ಚಿಕೊಳ್ಳದೆ ತಮ್ಮದೇ ಆದ ಸಂಪನ್ಮೂಲಗಳಿಂದ ಸಂಸ್ಥೆಯನ್ನು ಬೆಳೆಸಿ  ಮುನ್ನಡೆಸುತ್ತಿದ್ದಾರೆ. ಸದ್ಯಕ್ಕೆ 200 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.

ಬೆಂಗಳೂರಿನಲ್ಲಿನ ರಿಯಲ್‌ ಎಸ್ಟೇಟ್‌ ವಹಿವಾಟಿನ ಬೆಳವಣಿಗೆ ಜತೆಗೆ   ಸಂಸ್ಥೆಯ ವಹಿವಾಟೂ ಗಮನಾರ್ಹವಾಗಿ ಬೆಳೆಯುತ್ತಿದೆ. ‘ಸಂಸ್ಥೆಯ ಬಹುತೇಕ  ಗ್ರಾಹಕರು ಯುಟ್ಯೂಬ್‌ನಲ್ಲಿ ಸಂಸ್ಥೆ ಅಭಿವೃದ್ಧಿಪಡಿಸಿದ ಒಳಾಂಗಣ ವಿನ್ಯಾಸದ ವಿಡಿಯೊಗಳನ್ನು ನೋಡಿ, ತಮ್ಮ ಇಷ್ಟದ ವಿನ್ಯಾಸ ರೂಪಿಸಿಕೊಡಲು ನಮ್ಮನ್ನು ಸಂಪರ್ಕಿಸುತ್ತಾರೆ.

ಬೋನಿಟೊ ಡಿಸೈನ್‌ – ಎಂತಹ ಸೇವೆ ಸಲ್ಲಿಸಲಿದೆ ಎನ್ನುವುದನ್ನು ಗ್ರಾಹಕರು ಮೊದಲೇ ತಿಳಿದುಕೊಂಡು ಬರುತ್ತಾರೆ. ಬಾಯಿಂದ ಬಾಯಿಗೆ ನಡೆದ ಪ್ರಚಾರವೇ ಸಂಸ್ಥೆಯ ಯಶಸ್ಸಿಗೆ  ಕಾರಣವಾಗಿದೆ’ ಎಂದು   ಸಂಸ್ಥೆಯ ಸ್ಥಾಪಕಿ ಮತ್ತು ಲೀಡ್‌ ಡಿಸೈನರ್‌ ಆಗಿರುವ ವತ್ಸಲಾ ಸಿ. ಆರ್‌. ಹೇಳುತ್ತಾರೆ. ಸಂಸ್ಥೆಯು ಕನಿಷ್ಠ ₹ 6 – 7 ಲಕ್ಷದಿಂದ  ₹ 50 – 60 ಲಕ್ಷ ಮೊತ್ತದವರೆಗೆ ಒಳಾಂಗಣ ವಿನ್ಯಾಸ ರೂಪಿಸಿ ಕೊಡಲಿದೆ.

‘ಸಂಸ್ಥೆಯು ಇತ್ತೀಚೆಗೆ ಆನ್‌ಲೈನ್‌ ಪೀಠೋಪಕರಣ ಬ್ರ್ಯಾಂಡ್‌ ಸ್ಕ್ವಾಡ್ರೊ (www.squadro.in) ಪರಿಚಯಿಸಿದೆ.  ತನ್ನ ಪೀಠೋಪಕರಣಗಳನ್ನು ಸ್ಕ್ವಾಡ್ರೊ ಬ್ರ್ಯಾಂಡ್‌ನಡಿ  ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿಯೂ ಮಾರಾಟ ಮಾಡುತ್ತಿದೆ. ಇಲ್ಲಿ ಪೀಠೋಪಕರಣಗಳು  ಕನಿಷ್ಠ ₹  3 ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿಗಳವರೆಗೆ ಇವೆ.

ಸಂಸ್ಥೆಯ  ವಾರ್ಷಿಕ ವಹಿವಾಟು  ₹ 16 ಕೋಟಿಗಳಷ್ಟರವರೆಗೆ ಇದೆ. ವಹಿವಾಟು ವಿಸ್ತರಿಸಲು ಬಂಡವಾಳದ ಅಗತ್ಯ ಇದ್ದರೂ ಬಾಹ್ಯ ಹೂಡಿಕೆಯ ನೆರವು ಪಡೆಯಲು ನಾವಿನ್ನೂ   ಮನಸ್ಸು ಮಾಡಿಲ್ಲ. ಗ್ರಾಹಕರ ಹೆಚ್ಚಳ, ಹೊಸ ವಿನ್ಯಾಸ ಮಾದರಿಗಳು ಮತ್ತು ಆಕರ್ಷಕ ಪೀಠೋಪಕರಣಗಳ ಮೂಲಕವೇ ವಹಿವಾಟು ವಿಸ್ತರಿಸುತ್ತಿರುವುದು (Organic growth) ನಮ್ಮ ಸಾಧನೆಯಾಗಿದೆ’ ಎಂದು ವತ್ಸಲಾ ಹೇಳುತ್ತಾರೆ.

ಒಳಾಂಗಣ ವಿನ್ಯಾಸದ ಸೌಲಭ್ಯಗಳೆಲ್ಲ ಒಂದೆಡೆಯೇ ದೊರೆಯುವಂತೆ ಮಾಡಲು  ಬೋನಿಟೊ ಸಂಸ್ಥೆ ಸ್ಥಾಪಿಸಲಾಗಿದೆ. ತಯಾರಿಕಾ ಘಟಕಕ್ಕೂ ಸ್ವಂತ ಬಂಡವಾಳ ಹಾಕಿರುವ ಹೆಗ್ಗಳಿಕೆ ಇವರದ್ದು. ಗ್ರಾಹಕರ ಅಗತ್ಯ ಮತ್ತು ಬಜೆಟ್‌ಗೆ ತಕ್ಕಂತೆ ಆಧರಿಸಿ ಒಳಾಂಗಣ ವಿನ್ಯಾಸ ಮಾಡಿಕೊಡಲಾಗುತ್ತಿದೆ.

ಅಸಂಘಟಿತ ವಲಯದಲ್ಲಿನ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣ ರಂಗದಲ್ಲಿ ಸಂಸ್ಥೆಯು ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ ಮುನ್ನಡೆದಿದೆ. ಬೆಂಗಳೂರಿನ ಆಚೆಗೂ ಸೇವೆಯನ್ನು ಸೀಮಿತ ಪ್ರಮಾಣದಲ್ಲಿ ನೀಡಲಾಗಿದೆ. ಎರಡನೆ ಹಂತದ ನಗರಗಳಲ್ಲಿಯೂ  ಒಳಾಂಗಣ ವಿನ್ಯಾಸಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಅದನ್ನು ಪೂರೈಸಲೂ ಸಂಸ್ಥೆಯು ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಯುರೋಪ್‌ ತಂತ್ರಜ್ಞಾನ ಆಧರಿಸಿ ಪೀಠೋಪಕರಣಗಳ ವಿನ್ಯಾಸ ರೂಪಿಸುವುದು  ಬೋನಿಟೊದ ವೈಶಿಷ್ಟ್ಯತೆಯಾಗಿದೆ. ಪೀಠೋಪಕರಣಗಳಿಗೆ ಪ್ಲೈವುಡ್‌ ಮಾತ್ರ ಬಳಕೆ ಮಾಡಲಾಗುತ್ತಿದೆ’ ಎಂದು ಸಂಸ್ಥೆಯ ಸಹ ಸ್ಥಾಪಕ ಸಮೀರ್‌ ಅಹ್ಮದ್‌ ಹೇಳುತ್ತಾರೆ.

ಈ ಉದ್ದಿಮೆಯಲ್ಲಿ ಕುಶಲಕರ್ಮಿಗಳ  ಕೊರತೆ ಇದೆ. ಅದನ್ನು ದೂರ ಮಾಡಲು    ಕಾರ್ಪೆಂಟರ್‌, ಪ್ಲಂಬರ್‌, ಎಲೆಕ್ಟ್ರಿಷಿಯನ್ಸ್‌ಗಳಿಗೆ ತರಬೇತಿ  ನೀಡಲು ಪ್ರತ್ಯೇಕ ಕೇಂದ್ರ ಸ್ಥಾಪಿಸುವ ಆಲೋಚನೆಯೂ ಬೋನಿಟೊ ಸ್ಥಾಪಕರಿಗೆ ಇದೆ.

‘ಸಂಸ್ಥೆ ಬೆಳೆಸಲು ನಂಬಿಕೆ, ವಿಶ್ವಾಸ ಮುಖ್ಯ’
ಸಿವಿಲ್‌ ಎಂಜಿನಿಯರಿಂಗ್ ಪದವೀಧರೆ  ವತ್ಸಲಾ, ಈಗ ಒಳಾಂಗಣ ವಿನ್ಯಾಸ ವೃತ್ತಿ ಆಯ್ಕೆ ಮಾಡಿಕೊಂಡು  ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ. ತಮ್ಮದೇ ಆಲೋಚನೆಯ ಇಬ್ಬರು ಸ್ನೇಹಿತರ ಜತೆ ಸೇರಿ ಬೋನಿಟೊ ಡಿಸೈನ್ಸ್‌ ಸಂಸ್ಥೆ  ಸ್ಥಾಪಿಸಿ ಮುನ್ನಡೆದಿರುವ ವತ್ಸಲಾ,  ಅತ್ಯಂತ ಯಶಸ್ವಿ ಒಳಾಂಗಣ ವಿನ್ಯಾಸ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸುವ ಹಂಬಲ ಹೊಂದಿದ್ದಾರೆ.

‘ಮಹಿಳಾ ಉದ್ಯಮಿಯ ಬದುಕು ಸುಲಭವೇನಲ್ಲ.  ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ದೀರ್ಘ ಸಮಯದವರೆಗೆ ಸಮಯ ಮೀಸಲಿಡಬೇಕಾಗುತ್ತದೆ. ಹೆಚ್ಚು ಶ್ರದ್ಧೆಯಿಂದ ದುಡಿಯಬೇಕಾಗುತ್ತದೆ’ ಎನ್ನುತ್ತಾರೆ.

‘ನಂಬಿಕೆ ಮತ್ತು ವಿಶ್ವಾಸದ ತಳಹದಿ ಮೇಲೆ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಸಾಧ್ಯ’ ಎನ್ನುವುದು ಅವರ ನಂಬಿಕೆಯಾಗಿದೆ. ‘ಅಂಬೆಗಾಲಿಕ್ಕುವ ಮಕ್ಕಳು ದಿನಗಳು ಉರುಳಿದಂತೆ ತಮ್ಮ ಸ್ವಂತ ಕಾಲ ಮೇಲೆ ಎದ್ದು ನಿಂತು ನಡೆಯಲು ಕಲಿತುಕೊಳ್ಳುವಂತೆ, ಸ್ಟಾರ್ಟ್‌ಅಪ್‌ ಕಂಪನಿಯೊಂದು ಕೂಡ ಕ್ರಮೇಣ ಬೃಹದಾಕಾರವಾಗಿ ಬೆಳೆಯಲು ಸಾಧ್ಯ ಎನ್ನುವ’ ವತ್ಸಲಾ, ತಮ್ಮ ಸಣ್ಣ ಉದ್ದಿಮೆಯನ್ನು  ಬೆಳೆಸುವ, ಪೋಷಿಸುವ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಹೇಗೆ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಮ್ಮ ಇಬ್ಬರು ಜತೆಗಾರರ ನೆರವಿನಿಂದ ಸಂಸ್ಥೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ‘ಬೋನಿಟೊ’ ಎಂದರೆ ಸ್ಪೇನ್‌ ಭಾಷೆಯಲ್ಲಿ ಸುಂದರವಾದದ್ದು ಎಂದರ್ಥ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT