ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಿಕ ಕಸರತ್ತಿನ ‘ಅತೀತ’

ರಂಗಭೂಮಿ
Last Updated 23 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ಅತೀತ’ನೆಂಬ ಗರ್ವದ ಸುಳಿಯಲ್ಲಿ ತನ್ನನ್ನೇ ವಿಜೃಂಭಿಸಿಕೊಳ್ಳುತ್ತ ಆತ್ಮರತಿಯಲ್ಲಿ ತೊಡಗುವ ಕ್ರಿಮಿನಲ್ ವಕೀಲನೊಬ್ಬನ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಡುವ ಚಿಂತನಾಶೀಲ ನಾಟಕ `‘ಅತೀತ’ ಇತ್ತೀಚೆಗೆ ರಂಗಶಂಕರದಲ್ಲಿ ಪ್ರದರ್ಶನ ಕಂಡಿತು. ಅನನ್ಯ ರಂಗತಂಡದ ಈ ನಾಟಕವನ್ನು ಬರೆದು ನಿರ್ದೇಶಿಸಿದವರು ಎಸ್.ಎನ್. ಸೇತುರಾಂ.

ತಾನು ಎಲ್ಲರಿಗಿಂತ ಭಿನ್ನ, ಪರಮ ಮೇಧಾವಿ ಎಂದು ಭ್ರಮಿಸಿದ್ದ 85ರ ವಯೋವೃದ್ಧ ವಕೀಲನ ಅಂತರಂಗವನ್ನು ಸುಲಿದು, ಅವನ ಹಣದಾಹಿ, ಸ್ವಾರ್ಥ ಜೀವನದ ತಣ್ಣನೆಯ ಕ್ರೌರ್ಯದ ಸಂಗತಿಗಳನ್ನು ಅನಾವರಣಗೊಳಿಸುವ ವಿಡಂಬನಾತ್ಮಕವಾದ ಈ ಕಥಾಚಿತ್ರಣ ತೀವ್ರವಾಗಿ ತಟ್ಟುತ್ತದೆ.

ರಾಜ್ಯಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳ ಜೊತೆಗೆ ಎಂಟು ವಿಶ್ವವಿದ್ಯಾಲಯಗಳ ಡಾಕ್ಟರೆಟ್ ಪದವಿ ಮತ್ತು ರಾಜ್ಯಸಭೆಯ ನಾಮಿನೇಷನ್‌ಗಳನ್ನು ಧಿಕ್ಕರಿಸಿದ ಧೀಮಂತ ತಾನೆಂದು ವರ್ಣಿಸಿಕೊಳ್ಳುವ ವ್ಯಕ್ತಿಯೊಬ್ಬ. ಅವನ `ಆತ್ಮಚರಿತ್ರೆ ಬರೆಯಲು ಬಂದ ಹುಡುಗಿಯ ಎದುರು ಅವನ ಹುಸಿ ಮುಖವಾಡದ ಅಸಲಿಯತ್ತು ಬಯಲಾಗುವ ಪರಿ ಕುತೂಹಲ ಹುಟ್ಟಿಸುತ್ತದೆ. 

ಬಡ ಹುಡುಗ 14 ವರ್ಷಕ್ಕೆ ಇಂಟರ್‌ ಮಿಡಿಯೇಟ್‌ ಮುಗಿಸಿ, ಅರ್ಚಕನಾಗಿದ್ದ ತಾತನ ಮನೆಗೆ ಸಹಾಯ ಕೇಳಲು ಹೋಗುತ್ತಾನೆ. ಕಣ್ಣಿಗೆಬಿದ್ದ ದೇವಸ್ಥಾನದ ಒಡವೆಗಂಟು ಕದ್ದು, ಬೆಂಗಳೂರು ಸೇರಿ ಕಾನೂನು ಪದವಿ ಗಳಿಸಿ 22 ವರ್ಷಕ್ಕೆ ವಕೀಲಿ ವೃತ್ತಿ ಕೈಗೊಳ್ಳುತ್ತಾನೆ. ಸತತ 63 ವರ್ಷ ವಕೀಲಿ ವೃತ್ತಿ ಮಾಡಿ, 85ನೇ ವಯಸ್ಸಿನಲ್ಲಿ 2862ನೇ ಪ್ರಕರಣ ಒಂದರಲ್ಲಿ ಸೋತು ನಿವೃತ್ತಿ ಪಡೆಯುತ್ತಾನೆ. ಅವನ ಮಗ-ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ. ವಕೀಲ ತನ್ನ ಮೂಗಿನ ನೇರಕ್ಕೆ ಕಥೆ ಹೇಳಿಕೊಂಡು ಹೋದಂತೆ, ಅವನ ವೃತ್ತಿ ಬದುಕಿನ ನೆಂಟ ಸಾಕ್ಷಿದಾರ ಸತ್ಯದ ಎಳೆಯನ್ನು ಬಿಚ್ಚಿಡುತ್ತ ಹೋಗುವುದು ವಿಪರ್ಯಾಸ.

ಅದನ್ನೆಲ್ಲ ಅಲ್ಲಗಳೆಯದೆ ವಕೀಲ ಒಪ್ಪಿಕೊಂಡು, ನಡೆದ ಘಟನೆಗಳಿಗೆ ಬೇರೆ ಲೇಪನವಿತ್ತು ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತ ಹೋಗುತ್ತಾನೆ. ಆದರೂ ಸಾಕ್ಷಿದಾರ ಬಿಡದೆ, ಅವನ  ಇನ್ನೊಂದು ಮುಖದ ದರ್ಶನ ಮಾಡಿಸುತ್ತಾನೆ. ಹೆಂಡತಿ ಸತ್ತ ಮೇಲೆ, ವಕೀಲನ ಐವತ್ತರ ನಂತರದ ಬದುಕಿನಲ್ಲಿ ಬಂದ ಅವನ ಜೂನಿಯರ್ 22ರ ಚೆಲುವೆಯ ಜೊತೆ ಅವಳಾಸೆಯಂತೆ ಸಂಬಂಧ ಬೆಳೆಸಿ, ಅವಳಿಗೆ ಮದುವೆಯೂ ಮಾಡಿಸಿ, ಸಾಕಷ್ಟು ಆಸ್ತಿ ಮಾಡಿಕೊಟ್ಟೆನೆಂದು ನಿಷ್ಠಾವಂತನ ಸೋಗುಹಾಕುತ್ತಾನೆ. ಆದರವಳು ತನ್ನ  ಕರುಣಾಜನಕ ಕಥೆ ನಿರೂಪಿಸುತ್ತ, ಅವನ ಆಕ್ರಮಣ-ಅತ್ಯಾಚಾರದ ಪರಿಸ್ಥಿತಿಯಿಂದ ಅಪ್ಪನ ವಯಸ್ಸಿನವನೊಡನೆ ಸಂಬಂಧ ಬೆಳೆಸುವುದು ಅನಿವಾರ್ಯವಾಯಿತೆಂದು ಕಣ್ಣೀರಾಗುತ್ತಾಳೆ.

ಇಷ್ಟಕ್ಕೇ ಮುಗಿಯುವುದಿಲ್ಲ ಅವನ ಪಾಪ ಪುರಾಣ. ವಿದೇಶದಿಂದ ಬಂದಿಳಿದ ಮಗ ಅವನ ಕ್ರೌರ್ಯದ ಇನ್ನೊಂದು ಮುಖ ಅನಾವರಣಗೊಳಿಸುತ್ತಾನೆ. ಪ್ರತಿಷ್ಠಿತ ವ್ಯಕ್ತಿಗಳಿಗೆ ಹೊರಗೆ ಹತ್ತಾರು ಸಂಬಂಧವಿದ್ದರೆ ಅದವರ ವ್ಯಕ್ತಿತ್ವಕ್ಕೊಂದು ರಂಗೆಂದು ಬಣ್ಣಿಸುವ ಈ ವಕೀಲನಿಗೆ 50ರ ನಂತರ ಹೆಂಡತಿ ಬಸುರಾಗುವುದು ಸಮಾಜದಲ್ಲಿ ಅವಮಾನವಂತೆ. ಹಳ್ಳಿಯ ನಾಟಿ ವೈದ್ಯರಲ್ಲಿ 5 ತಿಂಗಳ ಗರ್ಭವನ್ನು ತೆಗೆಸಿ ಅವಳ ಸಾವಿಗೆ ಪರೋಕ್ಷ ಕಾರಣವಾಗಿರುತ್ತಾನೆ.

ಇವನು ಒಡವೆಗಳನ್ನು ಕದ್ದದ್ದರಿಂದ ತಾತ ಆತ್ಮಹತ್ಯೆ ಮಾಡಿಕೊಳ್ಳುವುದು, ಇದರಿಂದ ಇವನ ಇಡೀ ಸಂಸಾರ ಕಷ್ಟಕ್ಕೀಡಾದರೂ ಈ ಕೆಟ್ಟಮಗನ ಆಶ್ರಯಕ್ಕೆ ಬರದಿರುವುದು, ತಂದೆ ಅಟ್ಟದಿಂದ ಬಿದ್ದು ಸೊಂಟ ಮುರಿದುಕೊಂಡಾಗ ಅವರಿಗೆ ಆಪರೇಷನ್ ಮಾಡಿಸದೆ 20 ವರ್ಷ ಹಾಸಿಗೆಯಲ್ಲೇ ನರಳಿಸಿದ ಕಟುಕನಿವನೆಂಬ ವಿಷಯವನ್ನು ಸಾಕ್ಷಿ ಬಿಚ್ಚಿಡುತ್ತಾನೆ. ಅವನ ಪಾಪ ಪ್ರವರಗಳೆಲ್ಲ ಮುಗಿದ ನಂತರ ಹುಡುಗಿ, ಅವನ ಕಡೆಯ ಕೇಸ್ ಸೋತಿದ್ದಕ್ಕೆ ಕಾರಣ ಕೇಳುತ್ತಾಳೆ.

ಬಡ ತರುಣಿಯೊಬ್ಬಳ ಮೇಲೆ ಗುಂಪು ಅತ್ಯಾಚಾರ ನಡೆದು, ಅಪರಾಧಿಗಳು ಪ್ರತಿಷ್ಠಿತರ ಮಕ್ಕಳಾದ್ದರಿಂದ ಅವರ ಪರ ಗೆಲ್ಲಲಾರದ ಈ ವಕೀಲ, ಅವರ ಸಹಾಯದಿಂದ ಪಬ್ಲಿಕ್‌ ಪ್ರಾಸಿಕ್ಯೂಟರಾಗಿ ಕೇಸನ್ನು ಸೋತು ಗೆದ್ದ ಒಳಮರ್ಮ ತಿಳಿಸಿದಾಗ, ಹುಡುಗಿ ಅಂತ್ಯದಲ್ಲಿ ಬಿಚ್ಚಿಡುವ ರಹಸ್ಯ ಬೆಚ್ಚಿ ಬೀಳಿಸುತ್ತದೆ.

ವಕೀಲರಾಗಿ ಸೇತೂರಾಂ ಮಾತಿನ ಮೋಡಿ ಅವ್ಯಾಹತ. ಅರಳು ಹುರಿದಷ್ಟು ನಿಖರವಾಗಿ-ಸ್ಫುಟವಾಗಿ ಮಾತನಾಡುತ್ತ ನೇರವಾಗಿ ಎದೆಗಿಳಿಯುತ್ತಾರೆ. ಉಷಾ ಭಂಡಾರಿ ತಮ್ಮ ಭಾವಪೂರ್ಣ ಅತ್ಯುತ್ತಮ ಅಭಿನಯದಿಂದ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ. ಹುಡುಗಿ ದೀಪಾ ಸಹಜಾಭಿನಯ, ಸ್ಪಷ್ಟೋಕ್ತಿಗಳಿಂದ ಇಷ್ಟವಾಗುತ್ತಾರೆ. ಸಾಕ್ಷಿಯಾಗಿ ಶ್ರೀಪತಿ ಮಂಜನಬೈಲು ವಿನೋದಶೈಲಿಯ ಉತ್ತಮಿಕೆಯಿಂದ ಆಪ್ತರಾದರೆ, ಶರತ್ ಪರ್ವತವಾಣಿ ಹದವಾಗಿ ನಟಿಸಿದ್ದಾರೆ.

ಆದರೆ ಎಲ್ಲ ನಟರೂ ನಿರ್ದೇಶಕರ ಗರಡಿಯ ಅಚ್ಚಿನಂತೆ  ಒಂದೇ ಶೈಲಿಯಲ್ಲಿ ಮಾತುಗಳನ್ನು ಒಪ್ಪಿಸುವುದು ವೈವಿಧ್ಯತೆಗೆ ದೂರವಾಗುತ್ತದೆ. ನಾಟಕದಲ್ಲಿ ಪರಿಣಾಮಕಾರಿ ತಂತ್ರಗಾರಿಕೆಯಾಗಲಿ, ದೃಶ್ಯವತ್ತಾಗಿ ಸಾಕ್ಷೀಕರಿಸುವಂಥ ನೋಟಗ್ರಹಣ ವೈಶಿಷ್ಟ್ಯವಾಗಲಿ ಗೋಚರಿಸಲಿಲ್ಲ.

ಸೇತೂರಾಂ ಮಾತಿನ ಓಘದಲ್ಲಿ ಕೊಚ್ಚಿಹೋದ ಪ್ರೇಕ್ಷಕ, ನಂತರ ನಿಧಾನವಾಗಿ ಅನುಸಂಧಾನ ಮಾಡಿದಾಗ ಅನಿಸುವುದಿಷ್ಟು- ನಾಟಕದ ಪ್ರಾರಂಭದಲ್ಲಿ ತಾನು ಎಲ್ಲ ಸ್ಥಾನ-ಮಾನಗಳನ್ನು ಧಿಕ್ಕರಿಸಿದೆನೆನ್ನುವ ವಕೀಲ, ಕಡೆಯಲ್ಲಿ ಸಾಮಾಜಿಕ ಕಳಕಳಿಯ ಕೇಸ್ ವಹಿಸಿಕೊಂಡಿದ್ದರಿಂದ ಅಯಾಚಿತವಾಗಿ ಬಂದ ಪ್ರಶಸ್ತಿ, ಡಾಕ್ಟರೇಟ್‌ಗಳನ್ನೆಲ್ಲ ಸ್ವೀಕರಿಸಿದೆ ಎನ್ನುವ ಹೇಳಿಕೆಗಳಲ್ಲಿ ವೈರುಧ್ಯವಿದೆ. ವಯಸ್ಸು, ವರ್ಷಗಳ ಲೆಕ್ಕಾಚಾರ-ಕಾಲಮಾನಗಳ ವಿವರಗಳಲ್ಲಿ ಗೊಂದಲ ಕಾಣುತ್ತದೆ. ಕೆಲವೆಡೆ ಮಾತುಗಳಲ್ಲಿ ವಿತಂಡವಾದ ಇಣುಕುವುದುಂಟು.

ತನ್ನ ಖಾಸಗಿ ಬದುಕು ಬಹಿರಂಗವಾಗದಂತೆ ಎಚ್ಚರ ವಹಿಸಿ ಗುಟ್ಟಾಗಿಟ್ಟಿದ್ದ ವಕೀಲನ ಹುಟ್ಟು, ಬಾಲ್ಯದ ಪ್ರತಿಯೊಂದು ವಿವರಗಳೂ `ನೆಟ್‌ನಲ್ಲಿದೆ ಎನ್ನುವ ಹುಡುಗಿಯ ಉವಾಚದ ಯಥಾರ್ಥವೇನು? ಬೇರೆಯವರು ಬರೆಯುವ ಜೀವನಗಾಥೆ `ಆತ್ಮಚರಿತ್ರೆ ಹೇಗಾದೀತು? `ಜೀವನಚರಿತ್ರೆಯಲ್ಲವೇ? ಮುಂತಾದ ಸಂದೇಹಗಳು ಕಾಡುತ್ತವೆ.

ಈ ನಾಟಕದ ವಸ್ತು ಗಹನತೆ-ವ್ಯಾಪ್ತಿಗಳ ಬಹು ಆಯಾಮಗಳನ್ನು ಒಳಗೊಂಡಿದ್ದರೂ ಕಥೆಯನ್ನು ಒಂದು ಕೌಟುಂಬಿಕ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ಇಲ್ಲಿ `ಸಾಕ್ಷಿದಾರ ಒಂದು ಪಾತ್ರವಾಗಿ ಪ್ರತ್ಯೇಕ ನಿಲ್ಲದೆ, ವಕೀಲನ `ಸಾಕ್ಷೀಪ್ರಜ್ಞೆಯಾಗಿ ಪ್ರತಿಮಾರೂಪಕವಾಗಿ ಬಿಂಬಿತವಾಗಿದ್ದರೆ, ಮನುಷ್ಯನ ದ್ವಂದ್ವಗಳಿಗೆ ಉತ್ತಮ ಧ್ವನಿಯಾಗಿ ಇನ್ನೂ ಹೆಚ್ಚಿನ ವ್ಯಾಪಕತೆಯನ್ನು ಪಡೆದುಕೊಳ್ಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT