ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಿಕ –ಭೌತಿಕ ಬೆಳವಣಿಗೆ ಗಮನಿಸುತ್ತ...

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಯಾವುದೇ ಕಾರಣದಿಂದ ಮಕ್ಕಳ ಮೆದುಳು ಕಾಲ ಕಾಲಕ್ಕೆ ಸರಿಯಾಗಿ ಬೆಳವಣಿಗೆ ಯಾಗದಿದ್ದರೆ, ಬೆಳವಣಿಗೆಯ ಮೈಲುಗಲ್ಲುಗಳು ನಿಧಾನವಾಗಿ ಮಕ್ಕಳಲ್ಲಿ ಬೆಳವಣಿಗೆಯ ಸಮಸ್ಯೆಗಳು ಕಂಡುಬರುತ್ತವೆ. ಇಂಥ ಮಕ್ಕಳು ಬದುಕಲು ಬೇಕಾಗುವ ಸಾಮಾಜಿಕ, ಬೌದ್ಧಿಕ, ಶೈಕ್ಷಣಿಕ ಕೌಶಲಗಳನ್ನು ಕಲಿಯುವುದರಲ್ಲಿ ನಿಧಾನರಾಗಿರುತ್ತಾರೆ. ಇದರರ್ಥ ಅವರು ದೈಹಿಕ ಬೆಳವಣಿಗೆಯೊಂದಿಗೆ ಬೌದ್ಧಿಕ ಬೆಳವಣಿಗೆ ಸಮಸಮವಾಗುವುದಿಲ್ಲ ಎಂದಷ್ಟೇ ಅರ್ಥ. ಬುದ್ಧಿ ಮಾಂದ್ಯ ಮಕ್ಕಳ ಬೆಳವಣಿಗೆಯನ್ನು ಆರಂಭದಲ್ಲಿಯೇ ಗುರುತಿಸಬಹುದು.

ಉದಾಹರಣೆಯೊಂದಿಗೆ ಇದನ್ನು ಅರಿಯುವ. ವಿದ್ಯಾಳಿಗೆ 10 ವರ್ಷ ವಯಸ್ಸು. ಅವಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಬೇರೆಯವರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲಾರಳು. ತನ್ನ ಕೆಲಸ ತಾನೇ ಮಾಡಿಕೊಳ್ಳಲಾರಳು. ಅವಳ ಅಮ್ಮ ಅವಳಿಗೆ ಸ್ನಾನ ಮಾಡಿಸಬೇಕು, ಊಟ ಮಾಡಿಸಬೇಕು, ಬಟ್ಟೆ ತೊಡಿಸಬೇಕು. ಇತರ ಮಕ್ಕಳು ಅವಳೊಂದಿಗೆ ಆಟ ಆಡಲು ಇಷ್ಟಪಡುವುದಿಲ್ಲ. ಅವಳಿಗೆ ಆಟದ ನಿಯಮಗಳು ಗೊತ್ತಿಲ್ಲ. ಅವಳ ತಾಯಿಯ ಪ್ರಕಾರ ವಿದ್ಯಾಳ ಬೆಳವಣಿಗೆ ಬಹು ನಿಧಾನ. ವಯಸ್ಸು ಹತ್ತು ವರ್ಷವಾದರೂ, ನಾಲ್ಕು ವರ್ಷದ ಮಗುವಿಗಿರುವಷ್ಟು ಮಾತ್ರ ಬುದ್ಧಿ ಇದೆ. 

ಬುದ್ಧಿಮಾಂದ್ಯ ಮಕ್ಕಳನ್ನು ಗುರುತಿಸುವುದು ಹೇಗೆ?
ಬೆಳವಣಿಗೆಯ ಮೈಲಿಗಲ್ಲುಗಳು ನಿಧಾನವಾಗುವುದು. ಮಗುವು ಕುಳಿತುಕೊಳ್ಳಲು, ನಡೆಯಲು, ಓಡಾಡಲು ಮತ್ತು ಮಾತನಾಡಲು ಬೇರೆ ಮಕ್ಕಳಿಗಿಂತ ನಿಧಾನವಾಗಿ ಕಲಿಯುತ್ತದೆ. ದೈನಂದಿನ ಚಟುವಟಿಕೆಗಳಾದ ಸ್ನಾನ, ಆಹಾರ ಸೇವನೆ ಮತ್ತು ಸ್ವಚ್ಛತೆಗೆ ಪೋಷಕರನ್ನು ಅವಲಂಬಿಸಿರುತ್ತದೆ. ಮಗುವಿಗೆ ಬಣ್ಣ, ಹಣ, ಆಕಾರ, ಸಮಯ ಮತ್ತು ವ್ಯವಹಾರ ಜ್ಞಾನ ಇರುವುದಿಲ್ಲ. ಮಗುವು ನಿಧಾನವಾಗಿ ಕಲಿಯುತ್ತದೆ ಮತ್ತು ಕಲಿತದ್ದನ್ನು ಬಹು ಬೇಗ ಮರೆಯುತ್ತದೆ.

ಬುದ್ಡಿಮಾಂದ್ಯತೆಗೆ ಏನು ಪರಿಹಾರ ?
ಬುದ್ಡಿಮಾಂದ್ಯತೆಯನ್ನು ಸರಿಪಡಿಸುವ ಅಥವಾ ಬುದ್ಧಿಯನ್ನು ಹೆಚ್ಚಿಸುವ ಯಾವುದೇ ಟಾನಿಕ್, ಇಂಜೆಕ್ಷನ್, ಮಾತ್ರೆ ಇದುವರೆಗೆ ಕಂಡುಹಿಡಿದಿಲ್ಲ. ಆದ್ದರಿಂದ ಪೋಷಕರು ಬುದ್ಧಿಮಾಂದ್ಯತೆಗೆ ಔಷಧಿ ಇರಬಹುದೆನ್ನುವ ಸುಳ್ಳು ಮಾಹಿತಿ, ಜಾಹೀರಾತುಗಳಿಗೆ ಮೋಸ ಹೋಗಬಾರದು. ಬುದ್ಧಿಮಾಂದ್ಯ ಮಕ್ಕಳಿಗೆ ಸ್ವಾವಲಂಬಿಗಳಾಗಲು ಇರುವ ಏಕೈಕ ಚಿಕಿತ್ಸಾ ವಿಧಾನವೆಂದರೆ, ಮನೋರೋಗ ತಜ್ಞರ ಸಹಾಯ ಪಡೆದು ಮನೆಯಲ್ಲಿ ಮಕ್ಕಳಿಗೆ ತರಬೇತಿ ಕೊಡುವುದು. 2 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳ ಪಂಚೇಂದ್ರಿಯಗಳನ್ನು ಪ್ರಚೋದಿಸಬೇಕು ಮತ್ತು ದೇಹದ ಸ್ನಾಯುಗಳಿಗೆ ವ್ಯಾಯಾಮ ಮಾಡಿಸಬೇಕು.

ಮಗು ತನ್ನ ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲು ಮತ್ತು ಮನೆ ಕೆಲಸದಲ್ಲಿ ಸಹಕರಿಸಲು ಪ್ರೋತ್ಸಾಹಿಸಬೇಕು. ಮಾತು ಕಲಿಸಲು ವಾಗ್ದೋಷ ಚಿಕಿತ್ಸಕಾರರ ಸಹಾಯ ಪಡೆಯಿರಿ. ಸಾಮಾಜಿಕ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿ ಕೊಡಿ. ಮಕ್ಕಳನ್ನು ಸಭೆ- ಸಮಾರಂಭಗಳಿಗೆ ಕರೆದುಕೊಂಡು ಹೋಗಿ. ಪರಿಚಯದವರನ್ನು ನಮಸ್ಕರಿಸಲು ಮತ್ತು ಚೆನ್ನಾಗಿದ್ದೀರಾ ಎಂದು ಕೇಳಲು ಹೇಳಿ. 

ಹೆಚ್ಚು ಬುದ್ಧಿ ಉಪಯೋಗಿಸದೆ, ಸರಳವಾಗಿ ಮಾಡಬಹುದಾದಂತಹ ಕೆಲಸ ಮಾಡಲು ಹದಿ ವಯಸ್ಸಿಗೆ ಬಂದ ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ಕೊಡಬೇಕು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಇರುವ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳ (ಪಿಂಚಣಿ, ಬಸ್ ಪಾಸ್) ಸದುಪಯೋಗ ಪಡೆದುಕೊಳ್ಳಬೇಕು. ಬುದ್ಧಿಮಾಂದ್ಯ ಮಕ್ಕಳ ಪೋಷಕರ ಸಂಘ ಸಂಸ್ಥೆಗಳೊಡನೆ ಸಂಪರ್ಕ ಸಾಧಿಸಬೇಕು.

ಮಾಹಿತಿಗೆ: 95355 46054
(sugnyani.devi63@gmail.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT