ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮ ನಿರ್ಮೂಲನೆ ಮಾಡಿದ ವೈದಿಕಶಾಹಿ

ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್‌ ಅಭಿಮತ
Last Updated 2 ಆಗಸ್ಟ್ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಪ್ರಬಲವಾಗಿದ್ದ ಬೌದ್ಧ ಧರ್ಮ ಮತ್ತು ರಾಜರನ್ನು ನಿರ್ಮೂಲನೆ ಮಾಡಲು  ವೈದಿಕಶಾಹಿ ಜನ ಹೊರಗಿನಿಂದ ಆಕ್ರಮಣಕಾರರನ್ನು ಆಹ್ವಾನಿಸಿ, ಬೌದ್ಧ ಧರ್ಮವನ್ನು ಉದ್ದೇಶಪೂರ್ವಕವಾಗಿ ದೇಶದಿಂದ ಓಡಿಸಿದರು. ನಂತರ ದೇಶ ಅಧೋಗತಿಗೆ ಇಳಿಯುತ್ತ ಬಂತು’ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್‌ ಹೇಳಿದರು. ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಬೌದ್ಧ ಸಮಾಜ ಸಂಘಟನೆಯ ಉದ್ಘಾಟನೆ ಮತ್ತು ದಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧನ ಆಗಮನಕ್ಕಿಂತ ಹಿಂದೆ ಇದ್ದ ವೈದಿಕರು ಧರ್ಮ ಸ್ಥಿರವಾದದ್ದು ಎಂದು ಸಾರಿ, ಕೊಳೆಯುವವರು ಕೊಳೆಯುತ್ತಲೇ ಇರಬೇಕು ಎಂಬ ಚಿಂತನೆ ಬಿತ್ತಿದ್ದರು. ಆಗ ಮೊದಲಿಗನಾಗಿ ಬುದ್ಧ ನಿಜವಾದ ಧರ್ಮ ಅಚಲವಾಗಿರುವುದಿಲ್ಲ, ಚಲಿಸುತ್ತದೆ ಎಂದು ಪ್ರತಿಪಾದಿಸಿದರು’ ಎಂದು ತಿಳಿಸಿದರು.

‘ಬೌದ್ಧ ರಾಜರು, ಸನ್ಯಾಸಿಗಳನ್ನು ಕಗ್ಗೊಲೆ ಮಾಡಿ, ವಿಹಾರಗಳನ್ನು ನಾಶ ಮಾಡುವ ಮೂಲಕ ಜನಮಾನಸದಲ್ಲಿದ್ದ ಬೌದ್ಧ ಧರ್ಮವನ್ನು ನಿರ್ನಾಮ ಮಾಡಲಾಯಿತು. ಇದರ ಉಲ್ಲೇಖವೇ ಇಲ್ಲದ ನಮ್ಮ ಶಾಲಾ ಕಾಲೇಜುಗಳ ಪಠ್ಯದಲ್ಲಿರುವ ಇತಿಹಾಸ ಬರಿ ಸುಳ್ಳುಗಳಿಂದಲೇ ತುಂಬಿದೆ’ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ‘ಮನುಷ್ಯನನ್ನು ಕೀಳುಗೊಳಿಸುವ ಮತ್ತು ಗುಲಾಮನನ್ನಾಗಿ ಮಾಡುವ ಜಾತಿಯ ನೀಚ ಕೃತ್ಯ ಕೊನೆಗೊಳಿಸಲು ಬುದ್ಧ ಸಮಾಜದಲ್ಲಿ ಬೆರೆಯುವುದೇ ಏಕೈಕ ಮದ್ದು. ಬುದ್ಧನ ದಾರಿಯಲ್ಲಿ ನಡೆಯುವುದು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬಹುದೊಡ್ಡ ಆಸರೆ ಮತ್ತು ಆಶಾದಾಯಕ ಊರುಗೋಲು’ ಎಂದು ಅಭಿಪ್ರಾಯಪಟ್ಟರು.

ಬೌದ್ಧ ಸಂಶೋಧಕ ಬಿ.ಕೆ.ಎಸ್ ವರ್ಧನ್ ಮಾತನಾಡಿ, ‘ಈವರೆಗೆ ದಲಿತರನ್ನು ಪುರೋಹಿತಶಾಹಿಗಳು, ಕಮ್ಯೂನಿಸ್ಟರು ಮತ್ತು ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವವರು ದಿಕ್ಕು ತಪ್ಪಿಸುತ್ತಲೇ ಬಂದಿದ್ದಾರೆ. ಇನ್ನು ಮೇಲೆ ನಾವು ಮೋಸ ಹೋಗಬಾರದು. ಬೌದ್ಧರು ಎಂದು ಹೇಳಿಕೊಳ್ಳಲು ಹಿಂಜರಿಯಬಾರದು’ ಎಂದು ಹೇಳಿದರು.

‘ದಲಿತರಿಗೆ ಒಂದು ಕಾಲದಲ್ಲಿ ಮಾದರಿ ಆಗಿದ್ದ ಕವಿ ಸಿದ್ದಲಿಂಗಯ್ಯ ಅವರು ವ್ಯವಸ್ಥೆಯಲ್ಲಿನ ಎಲ್ಲ ಸೌಲಭ್ಯಗಳನ್ನು ಅನುಭವಿಸಿ ಒಂದು ಕಡೆಗೆ ಉಳಿದರು. ಇನ್ನೊಂದೆಡೆ ಚಿಂತಕ ದೇವನೂರ ಮಹಾದೇವ ಇದ್ದಾರೆ. ಇಬ್ಬರೂ ವಿರುದ್ಧ ದಿಕ್ಕಿಗೆ ಮುಖಮಾಡಿ ಕುಳಿತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ನಮಗೀಗ ಸಾಂಸ್ಕೃತಿಕ ನಾಯಕತ್ವ ಬೇಕಾಗಿದೆ. ಆದ್ದರಿಂದ, ನೀವು ಇಬ್ಬರು ಬನ್ನಿ. ಬೌದ್ಧ ಎಂದು ಎದೆತಟ್ಟಿ ಹೇಳಿಕೊಳ್ಳಿ. ನೀವೇನು ಕಾವಿ ಧರಿಸಿದ ಸನ್ಯಾಸಿಗಳಾಗಬೇಡಿ. ನಮ್ಮೊಡನೆ ಬದುಕುವ ಶ್ವೇತವಸ್ತ್ರಧಾರಿ ಸಂತರಾಗಿರಿ’ ಎಂದು ಸವಾಲು ಹಾಕಿದರು. 

ಸ್ಫೂರ್ತಿಧಾಮದ ಲೋಕರತ್ನ ಬುದ್ಧ ವಿಹಾರದ ವಿನಯ ರಖ್ಖಿತ ಭಂತೇಜಿ ಮಾತನಾಡಿ, ‘ಹಿಂದೂ ಧರ್ಮ ಎಂಬ ಹಾವು ಬ್ರಾಹ್ಮಣರೆಂಬ ಹಲ್ಲಿನ ಮೂಲಕ ಜಾತೀಯತೆಯ ವಿಷ ಹೊರಹಾಕುತ್ತದೆ. ಆ ಹಾವಿಗೆ ಚುಂಬಿಸುವುದು ಮೃತ್ಯುವಿಗೆ ಆಹ್ವಾನ ನೀಡಿದಂತೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಹಿಂದೂ ಧರ್ಮ ಗ್ರಂಥಗಳನ್ನು ಆಚೆಗೆ ಹಾಕಬೇಕು. ಮಕ್ಕಳಿಗೆ ರಾಮಾ ಯಣ, ಮಹಾಭಾರತ, ಭಗವದ್ಗೀತೆ ಕುರಿತು ಹೇಳುವ ಬದಲು ಜಾತಕ ಕತೆಗಳು, ಬುದ್ಧ, ಅಂಬೇಡ್ಕರ್‌ ಉದಾಹರಣೆ ನೀಡಬೇಕು’ ಎಂದು ಅವರು ಹೇಳಿದರು.
*
‘ಕಳಬೇಡ ಕೊಲಬೇಡ’ ಎಂಬ ವಚನದ ಮೇಲೆ ಬುದ್ಧ ಬೋಧಿಸಿದ ಪಂಚಶೀಲ ತತ್ವಗಳ ಛಾಯೆ ಇದೆ. ಬಸವಣ್ಣನವರು ಬುದ್ಧನಿಂದ ಬಹಳ ಪ್ರಭಾವಿತರಾಗಿದ್ದರು.
ಕೆ.ಎಸ್‌.ಭಗವಾನ್‌,
ವಿಚಾರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT