ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲಿಂಗ್‌ ವಿಭಾಗಕ್ಕೆ ಒತ್ತು: ಕುಂಬ್ಳೆ

ಕ್ರಿಕೆಟ್‌್: ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದ ಅಭ್ಯಾಸ ಶಿಬಿರ ಆರಂಭ
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ನಮ್ಮ ಬೌಲರ್‌ಗಳು ನಾಯಕತ್ವದ ಗುಣವನ್ನು ತೋರಿಸಬೇಕಿದೆ. ಆದ್ದರಿಂದ ಈ ವಿಭಾಗವನ್ನು ಬಲಿಷ್ಠಗೊಳಿಸುವ ಗುರಿ ನನ್ನದು’ ಎಂದು ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

‘ಒಂದು ತಂಡದ ಗೆಲುವಿಗೆ ಬ್ಯಾಟ್ಸ್‌ಮನ್‌ಗಳು ಹೇಗೆ ಮುಖ್ಯವಾಗುತ್ತಾರೊ, ಬೌಲರ್‌ಗಳ ಪಾತ್ರವೂ ಅಷ್ಟೇ ಮುಖ್ಯ. ಈ ಕಾರಣದಿಂದ ಬೌಲರ್‌ಗಳೂ ತಮ್ಮಲ್ಲಿನ ನಾಯಕತ್ವ ಗುಣ ಬೆಳಸಿಕೊಳ್ಳಬೇಕು’ ಎಂದೂ ಅವರು ನುಡಿದರು.

ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿ ಆಡಲು ಮುಂದಿನ ತಿಂಗಳು ಕೆರಿಬಿಯನ್‌ ನಾಡಿಗೆ ತೆರಳಲಿದೆ.   ಜುಲೈ 9ರಿಂದ ಆಗಸ್ಟ್ 22ರ ವರೆಗೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಯೋಜನೆಯಾಗಿದೆ.

ಈ ಸರಣಿಗಾಗಿ  ಭಾರತ ತಂಡ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಶಿಬಿರ ಆರಂಭಿಸಿತು. ಇದರ ಹಿನ್ನೆಲೆಯಲ್ಲಿ ಕುಂಬ್ಳೆ ಅವರು ಮುಖ್ಯ ಕೋಚ್‌ ಆದ ಬಳಿಕ ಮಾಧ್ಯಮಗಳ ಜೊತೆ ಮೊದಲ ಬಾರಿಗೆ ಸಂವಾದ ನಡೆಸಿದರು. ಈ ವೇಳೆ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟೆಸ್ಟ್‌ ಪಂದ್ಯಗಳು ಆ್ಯಂಟಿಗಾ, ಜಮೈಕಾ, ಸೇಂಟ್ ಲೂಸಿಯಾ ಮತ್ತು ಟ್ರಿನಿಡಾಡ್‌ ಅಂಡ್‌ ಟೊಬೊಗೊದಲ್ಲಿ ಆಯೋಜನೆಯಾಗಿವೆ. ಇದಕ್ಕೂ ಮೊದಲು  ಭಾರತ ಎರಡು ದಿನ ಮತ್ತು ಮೂರು ದಿನಗಳ ತಲಾ ಒಂದು ಅಭ್ಯಾಸ ಪಂದ್ಯವನ್ನಾಡಲಿದೆ.

ನಗರದಲ್ಲಿ ಜಿಟಿಜಿಟಿ ಮಳೆ ಬೀಳುತ್ತಿದ್ದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದ ‘ಬಿ’ ಮೈದಾನದಲ್ಲಿ ಮೊದಲ ದಿನ ಶಿಬಿರ ನಡೆಯಲಿಲ್ಲ. ಆದ್ದರಿಂದ ಶಿಬಿರವನ್ನು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

‘ನಾನು ಕೋಚ್‌ ಆಗಿ ಅಷ್ಟೇ ಕೆಲಸ ಮಾಡುವುದಿಲ್ಲ. ಎಲ್ಲರ ಜೊತೆ ಬೆರೆತು ಆಟಗಾರನಂತೆ ಕಾರ್ಯ ನಿರ್ವಹಿಸುತ್ತೇನೆ.  ತಂಡದಲ್ಲಿ ಆಟಗಾರನಾಗಿದ್ದಾಗ ಮತ್ತು ನಾಯಕನಾದ ವೇಳೆ ಪಡೆದ ಅನುಭವಗಳನ್ನು ಈಗ ತಂಡದ ಜೊತೆ ಹಂಚಿಕೊಳ್ಳುತ್ತೇನೆ. ಅದರಲ್ಲೂ ವಿಶೇಷವಾಗಿ ಬೌಲಿಂಗ್‌ಗೆ ಒತ್ತು ಕೊಡುತ್ತೇನೆ. ಬೌಲರ್‌ಗಳಲ್ಲಿನ ನಾಯಕತ್ವ ಗುಣವನ್ನು ಹೊರತೆಗೆಯುತ್ತೇನೆ’ ಎಂದೂ  ಕುಂಬ್ಳೆ ನುಡಿದರು.

‘ತಂಡದ ಸಹಾಯಕ ಸಿಬ್ಬಂದಿ ಕೂಡ ನನ್ನ ಜೊತೆ ಕೆಲಸ ಮಾಡಲಿದ್ದಾರೆ. ನಾವೆಲ್ಲರೂ ಸೇರಿ ತೆರೆಯ ಹಿಂದೆ ಕೆಲಸ ಮಾಡುತ್ತೇವೆ. ಆಟಗಾರರೇ ಮುಖ್ಯ. ಆಟಗಾರನಾಗಿಯೂ ಅನುಭವವಿರುವ ಕಾರಣ ಅವರ ಸಮಸ್ಯೆಗಳೇನು ಎಂಬುದು ಅರ್ಥವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಂಡದ ಎಲ್ಲಾ ಆಟಗಾರರ ಜೊತೆ ಹೊಂದಾಣಿಕೆ ಮುಖ್ಯವಾಗುತ್ತದೆ’ ಎಂದೂ ಅವರು ಅನಿಸಿಕೆ ವ್ಯಕ್ತಪಡಿಸಿದರು.

‘ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರನಾಗಿದ್ದ ವೇಳೆ ಆಟಗಾರರ ಜೊತೆ ಪ್ರಯಾಣಿಸಿದ ಅನುಭವವಿದೆ. ಈಗಿನ ಯುವ ಆಟಗಾರರ ಬಗ್ಗೆಯೂ ಚೆನ್ನಾಗಿ ತಿಳಿದಿದೆ. ನಮ್ಮ ತಂಡ ಕಳೆದ ಬಾರಿ ವಿಂಡೀಸ್‌ ಪ್ರವಾಸ ಕೈಗೊಂಡಾಗ 3–0ರಲ್ಲಿ ಸರಣಿ ಜಯಿಸಿತ್ತು. ಹಿಂದಿನ ಆ ಸಾಧನೆ  ನಮ್ಮಲ್ಲಿ ವಿಶ್ವಾಸ ಹೆಚ್ಚಿಸಿದೆ.  ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ಟೆಸ್ಟ್‌ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದ್ದರಿಂದ ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಗೆಲ್ಲಲು ಇದು ಉತ್ತಮ ಅವಕಾಶ’ ಎಂದೂ ಲೆಗ್‌ ಸ್ಪಿನ್ನರ್‌ ಕುಂಬ್ಳೆ ಹೇಳಿದರು.

12 ತಿಂಗಳು, 17 ಟೆಸ್ಟ್‌: ಮುಂದಿನ ಒಂದು ವರ್ಷದ ಅವಧಿಯಲ್ಲಿ ಭಾರತ ತಂಡ 17 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.  ಈ ಸವಾಲಿಗೂ ಸಜ್ಜಾಗಿದ್ದೇನೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಟೆಸ್ಟ್‌ ಪಂದ್ಯಗಳಿವೆ. ಆದ್ದರಿಂದ ಈ ಮಾದರಿಗೆ ಎಷ್ಟೊಂದು ಒತ್ತು ಕೊಡಬೇಕು ಎಂಬುದು ಗೊತ್ತಾಗುತ್ತದೆ.  ಆದ್ದರಿಂದ ಆಟಗಾರರು ಟೆಸ್ಟ್‌ಗೆ ಪ್ರಾಮುಖ್ಯತೆ ನೀಡಬೇಕಾದ ಅಗತ್ಯವಿದೆ’ ಎಂದರು.

ರವಿಶಾಸ್ತ್ರಿಗೆ ನಾನೇ ವಿಷಯ ತಿಳಿಸಿದೆ: ಕುಂಬ್ಳೆ
‘ಬಿಸಿಸಿಐ ನನ್ನನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿರುವ ವಿಷಯವನ್ನು ನಾನೇ ರವಿ ಶಾಸ್ತ್ರಿ ಅವರಿಗೆ ತಿಳಿಸಿದೆ. ನನ್ನನ್ನು ಅವರು ಅಭಿನಂದಿಸಿದರು. ಇದರಲ್ಲಿ ವಿವಾದವಾಗುವ ವಿಷಯ ಏನಿದೆ’ ಎಂದು ಕುಂಬ್ಳೆ ಪ್ರಶ್ನಿಸಿದ್ದಾರೆ.

‘ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಮಾದರಿಯಲ್ಲಿ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದ್ದು ಕೋಚ್ ಕೆಲಸ.  ಕೋಚ್‌ ಯಾರು ಎಂಬುದು ಮುಖ್ಯವಲ್ಲ.  ನನಗೆ ಒಂದು ವರ್ಷದ ಅವಧಿಗಷ್ಟೇ ಅವಕಾಶ ಲಭಿಸಿದೆ. ನನಗೇ ಕೋಚ್‌ ಹುದ್ದೆ ಕಾಯಂ ಅಲ್ಲ. ಇರುವ ಅವಕಾಶದಲ್ಲಿ ತಂಡವನ್ನು ಬಲಿಷ್ಠಗೊಳಿಸಬೇಕಷ್ಟೇ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿಬಿರದಲ್ಲಿರುವ ಆಟಗಾರರು
ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ,  ಆರ್‌. ಅಶ್ವಿನ್‌, ಸ್ಟುವರ್ಟ್‌ ಬಿನ್ನಿ, ಶಿಖರ್‌ ಧವನ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಅಮಿತ್‌ ಮಿಶ್ರಾ, ಚೇತೇಶ್ವರ ಪೂಜಾರ, ಕೆ.ಎಲ್‌. ರಾಹುಲ್‌, ವೃದ್ಧಿಮಾನ್‌ ಸಹಾ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ರೋಹಿತ್‌ ಶರ್ಮಾ, ಶಾರ್ದೂಲ್‌ ಠಾಕೂರ್‌, ಮುರಳಿ ವಿಜಯ್‌ ಮತ್ತು ಉಮೇಶ್ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT