ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟ್ಸ್‌ಮನ್‌ ತಲೆಗೆ ಅಪ್ಪಳಿಸಿದ ಚೆಂಡು

ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಪಂದ್ಯದ ವೇಳೆ ಘಟನೆ: ಫಿಲಿಪ್‌ ಹ್ಯೂಸ್‌ ಸ್ಥಿತಿ ಗಂಭೀರ
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ/ಐಎಎನ್‌ಎಸ್‌): ಬ್ಯಾಟಿಂಗ್‌ ವೇಳೆ ಚೆಂಡು ಪುಟಿದೆದ್ದು  ಹೆಲ್ಮೆಟ್‌ಗೆ ಬಡಿದ   ರಭಸಕ್ಕೆ  ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಎಡಗೈ ಬ್ಯಾಟ್ಸ್‌ಮನ್‌ ಫಿಲಿಪ್‌ ಹ್ಯೂಸ್‌ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು,  ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಸಿಡ್ನಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಶೆಫೀಲ್ಡ್‌ ಶೀಲ್ಡ್‌ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ಈ ಘಟನೆ ಜರುಗಿದೆ. ಟೂರ್ನಿಯಲ್ಲಿ ದಕ್ಷಿಣ ಆಸ್ಟ್ರೇಲಿಯ ತಂಡದಲ್ಲಿ ಆಡುತ್ತಿದ್ದ ಹ್ಯೂಸ್‌, ನ್ಯೂ ಸೌಥ್‌ ವೇಲ್ಸ್‌ ತಂಡದ ಸೀನ್‌ ಅಬಾಟ್‌ ಎಸೆದ ಬೌನ್ಸರ್‌ ಅನ್ನು ನಿಖರವಾಗಿ ಅರಿಯಲು ವಿಫಲರಾದರು. ಚೆಂಡು ಅಪ್ಪಳಿಸಿದ ರಭಸಕ್ಕೆ ಅವರು ಕ್ರೀಸ್‌ನಲ್ಲೇ ಕುಸಿದು ಬಿದ್ದರು.

ತಕ್ಷಣ ಅವರನ್ನು ‘ಸ್ಟ್ರೆಚರ್‌’ ನಲ್ಲಿ ಅಂಗಳದ ಹೊರಗೆ ತೆಗೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿರು­ವುದನ್ನು ಕಂಡು ತಕ್ಷಣ ಸೇಂಟ್‌ ವಿನ್ಸೆಂಟ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಜರುಗಿದ ಬಳಿಕ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಹ್ಯೂಸ್‌ ಅವರನ್ನು ಅಂಬ್ಯುಲೆನ್ಸ್‌ ಮೂಲಕ ಸೇಂಟ್‌ ವಿನ್ಸೆಂಟ್‌ ಆಸ್ಪತ್ರೆಗೆ ಕೊಂಡೊ­ಯ್ಯುವ ವೇಳೆ ಇದ್ದ ಎರಡೂ ತಂಡಗಳ ಆಟಗಾರರು ಕಣ್ಣೀರಿಟ್ಟರು.

‘ಹ್ಯೂಸ್‌ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಆಸ್ಪತ್ರೆಯ ವೈದ್ಯರು ಅವರನ್ನು ಸರ್ಜರಿಗೆ ಒಳಪಡಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಆಸ್ಟ್ರೇಲಿಯ ತಂಡದ ವೈದ್ಯ ಪೀಟರ್‌ ಬ್ರೂಕ್ನರ್‌ ತಿಳಿಸಿದ್ದಾರೆ.

ಆಸ್ಟ್ರೇಲಿಯ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಸುದ್ದಿ ತಿಳಿದ ಕೂಡಲೆ ಆಸ್ಪತ್ರೆಗೆ ಧಾವಿಸಿ, ಹ್ಯೂಸ್‌ ಅವರ ಸಹೋದರಿ ಮತ್ತು ತಾಯಿ ವರ್ಜೀನಿಯ ಅವರಿಗೆ ಧೈರ್ಯ ತುಂಬಿದ್ದಾರೆ.

ಭಾರತದ ಆಟಗಾರರ ಹಾರೈಕೆ: ‘ಹ್ಯೂಸ್‌ ಬೇಗ ಗುಣಮುಖರಾಗಲಿ’ ಎಂದು ಆಸ್ಟ್ರೇಲಿಯ ಪ್ರವಾಸ­ದಲ್ಲಿರುವ ಭಾರತದ ಆಟಗಾರರು ಹಾರೈಸಿದ್ದಾರೆ.

25 ವರ್ಷದ ಹ್ಯೂಸ್‌  26 ಟೆಸ್ಟ್‌, 25 ಏಕದಿನ ಹಾಗೂ ಏಕೈಕ ಟ್ವೆಂಟಿ–20 ಪಂದ್ಯವನ್ನಾಡಿದ್ದಾರೆ.

ಟೆಸ್ಟ್‌ನಲ್ಲಿ ಅವರು 32.65ರ ಸರಾಸರಿಯಲ್ಲಿ 1535ರನ್‌ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಏಳು ಅರ್ಧ ಶತಕಗಳೂ ಸೇರಿವೆ. ಏಕದಿನ ಮಾದರಿಯಲ್ಲಿ ಎರಡು ಶತಕ ಹಾಗೂ ನಾಲ್ಕು ಅರ್ಧ ಶತಕ ಸೇರಿದಂತೆ ಒಟ್ಟು 826ರನ್‌ ಗಳಿಸಿದ್ದಾರೆ. ಹ್ಯೂಸ್‌ 2009ರಲ್ಲಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ ಕ್ರಿಕೆಟ್‌ಗೆ ಪದರ್ಪಾಣೆ ಮಾಡಿದ್ದರು. ಆಗ ಅವರಿಗೆ 20 ವರ್ಷ ವಯಸ್ಸು. ತಾವಾಡಿದ ಎರಡನೇ ಟೆಸ್ಟ್‌ ಪಂದ್ಯದಲ್ಲೇ ಎರಡು ಶತಕ ಬಾರಿಸಿದ ಯುವ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT