ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ನಲ್ಲಿ ಬೆರಗಿನ ಹೆಜ್ಜೆ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಹುಲಿಗಳೆಂದೇ ಪರಿಗಣಿಸಲಾಗಿರುವ ಚೀನಾದ ಘಟಾನುಘಟಿ ಆಟಗಾರರನ್ನು ಅವರ ತವರಿನಲ್ಲಿಯೇ ಭಾರತೀಯ ಆಟಗಾರರು ಮಣಿಸಿರುವುದು ಚಾರಿತ್ರಿಕ ಸಾಧನೆ. ಚೀನಾ ಓಪನ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಗೆದ್ದಿರುವ ಪ್ರಶಸ್ತಿ ಭಾರತದ ಹೊಸ ಪೀಳಿಗೆಯ ಆಟಗಾರರಿಗೆ ಆತ್ಮವಿಶ್ವಾಸದ ಸಿಂಚನದಂತಿದೆ.

ಕಳೆದ ನಾಲ್ಕು ದಶಕಗಳಲ್ಲಿ ಚೀನಾ ಈ ಕ್ರೀಡೆಯಲ್ಲಿ ಏರಿದ ಎತ್ತರ ಬೆರಗು ಮೂಡಿಸುತ್ತದೆ. ಈ ಕ್ರೀಡೆಯಲ್ಲಿ ವಿಶ್ವ ಕಿರೀಟಗಳೆಂದೇ ಪರಿಗಣಿಸಲಾಗಿರುವ ಥಾಮಸ್‌ ಕಪ್‌, ಉಬೆರ್‌ ಕಪ್‌ಗಳನ್ನು ಹಲವು ಸಲ ಗೆದ್ದಿರುವ ಚೀನಾದ ಆಟಗಾರರು ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಕ್ರೀಡಾ­ಕೂಟಗಳಲ್ಲಿಯೂ ಸದಾ ಪದಕದ ಹಾದಿಯಲ್ಲಿಯೇ ನಡೆದು ಬಂದವರು. ಇದೇ ವರ್ಷ ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿಯೂ ಚೀನಾದ ಮಹಿಳೆಯರು ಚಿನ್ನ ಗೆದ್ದರೆ, ಪುರುಷರು ಬೆಳ್ಳಿ ಗೆದ್ದಿದ್ದಾರೆ. ಇಂತಹ ಅದ್ಭುತ ಪರಂಪರೆ ಹೊಂದಿರುವ ಆಟಗಾರರನ್ನು ಮಣಿಸಿ ಪ್ರಶಸ್ತಿ  ಎತ್ತಿ­ಕೊಂಡಿರುವ ಸೈನಾ ಮತ್ತು ಶ್ರೀಕಾಂತ್‌ ಸಾಧನೆ ಶ್ಲಾಘನಾರ್ಹ.

ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟ, ಉಬೆರ್‌ ಕಪ್‌ಗಳಲ್ಲಿ ಕಂಚಿನ ಸಾಧನೆ ಮಾಡಿರುವ ಅನುಭವಿ ಸೈನಾ ನೆಹ್ವಾಲ್‌ ಹಿಂದೆ ಚೀನಾ ಓಪನ್‌ನಲ್ಲಿ ಐದು ಸಲ ನಿರಾಸೆ ಕಂಡಿದ್ದರು. ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಮತ್ತು  ಕಾಮನ್‌ವೆಲ್ತ್‌ ಯುವ ಕ್ರೀಡಾಕೂಟಗಳ ತಂಡ ವಿಭಾಗಗಳಲ್ಲಿ ಪದಕ ಗಳಿಸಿರುವ ಅನುಭವ­ವನ್ನಷ್ಟೇ ಹೊಂದಿರುವ ಶ್ರೀಕಾಂತ್‌ ಇದೀಗ ಮಹೋನ್ನತ ಸಾಧನೆ ತೋರಿ­ದ್ದಾರೆ. ಶ್ರೀಕಾಂತ್‌ ಗೆದ್ದ ಮೊದಲ ಸೂಪರ್‌ ಸೀರಿಸ್‌ ಪ್ರಶಸ್ತಿ ಇದಾಗಿದೆ.

ಪ್ರಕಾಶ್‌ ಪಡುಕೋಣೆ, ಪುಲ್ಲೇಲ ಗೋಪಿಚಂದ್‌, ಅಪರ್ಣಾ ಪೊಪಟ್‌ ಮುಂತಾದವರು ಈ ನೆಲದ ಬ್ಯಾಡ್ಮಿಂಟನ್‌ನಲ್ಲಿ ಮಾದರಿ ಎನಿಸಿಕೊಂಡಿದ್ದ­ವರು. ತಮ್ಮ ಕಾಲದ  ಶಕ್ತಿಶಾಲಿಗಳ ಎದುರು ವೀರೋಚಿತವಾಗಿ ಆಡಿದ್ದ­ವರು. ಅವರ ನಂತರ ಈ ಕ್ರೀಡೆಯಲ್ಲಿ ಅವರಂತಹ ಗಟ್ಟಿಗರು ಬರಬಹುದೇ ಎಂಬ ಕುತೂಹಲ ಇತ್ತು. ಆದರೆ ಸೈನಾ, ಸಿಂಧು, ಕಶ್ಯಪ್‌ ಸೇರಿದಂತೆ ಹಲ­ವರು ಹಿರಿಯರ ದಾರಿಯಲ್ಲಿ ಸಾಗಿ ಇನ್ನಷ್ಟು ಎತ್ತರಕ್ಕೆ ಏರಿದರು.

ಇದೇ ಮೊದಲ ಬಾರಿಗೆ ಚೀನಾ ಓಪನ್‌ ಸೂಪರ್‌ ಸೀರಿಸ್‌ ಕಿರೀಟವೂ ಭಾರತದ ಮುಡಿಗೇರಿದೆ. ಚೀನಾ, ಡೆನ್ಮಾರ್ಕ್‌, ಇಂಡೊನೇಷ್ಯಾ, ಜಪಾನ್‌, ಮಲೇಷ್ಯಾ, ಇಂಗ್ಲೆಂಡ್‌ ದೇಶಗಳು ಜಾಗತಿಕ ಬ್ಯಾಡ್ಮಿಂಟನ್‌ನಲ್ಲಿ ಶಕ್ತಿಕೇಂದ್ರಗಳು. ಇವುಗಳ ಪೈಪೋಟಿಯ ನಡುವೆಯೇ ಭಾರತ ತಾನೊಂದು ಪ್ರಬಲ ಶಕ್ತಿ­ಕೇಂದ್ರವಾಗುವತ್ತ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಪ್ರಸಕ್ತ ಗೆದ್ದ ಚೀನಾ ಓಪನ್‌ ಪ್ರಶಸ್ತಿ ಸ್ಪಷ್ಟ ನಿದರ್ಶನ. ಭಾರತದಲ್ಲಿ ಕ್ರಿಕೆಟನ್ನು ಹೊರತುಪಡಿಸಿ ಇತರ ಕ್ರೀಡೆಗಳೂ ಈಚೆಗಿನ ದಿನಗಳಲ್ಲಿ ಜನಮನ ಗೆಲ್ಲುತ್ತಿವೆ.

ದೇಶದ ಒಳಗೆ ಕಬಡ್ಡಿ, ಫುಟ್‌ಬಾಲ್‌ ಲೀಗ್‌ಗಳ ಯಶಸ್ಸು, ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್‌, ಬಿಲಿಯರ್ಡ್ಸ್‌, ಸ್ಕ್ವಾಷ್‌ ಮುಂತಾದ ಕ್ರೀಡೆಗಳಲ್ಲಿ ಭಾರತೀ­ಯರ ಯಶೋಗಾಥೆ ಈ ದೇಶದ ಕ್ರೀಡಾ ರಂಗದಲ್ಲಿ ಹೊಸ ಮನ್ವಂತರದಂತೆ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT