ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರೆೆಟ್@ ಬೆಂಗಳೂರು

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹಲೋ, ಬ್ಯಾರೆಟ್‌ ಹೇಗಿದ್ದೀರಾ?
ನಾನೀಗ ಚೆನ್ನಾಗಿದ್ದೇನೆ. ಥ್ಯಾಂಕ್ಯೂ.

ನೀವೀಗ ಜಗದ್ವಿಖ್ಯಾತ ಐಟಿ ನಗರಿ ಬೆಂಗಳೂರಿನ ತೆಕ್ಕೆಯಲ್ಲಿದ್ದೀರಿ, ಹೇಗನ್ನಿಸುತ್ತಿದೆ?
(ಒಂದು ಫ್ಲೈಯಿಂಗ್‌ ಕಿಸ್‌ ನೀಡಿ ನಕ್ಕರು, ನಂತರ...) ನಾನು ಇದಕ್ಕೂ ಮುನ್ನ ಭಾರತಕ್ಕೆ ಬಂದಿರಲಿಲ್ಲ. ಬೆಂಗಳೂರಿಗೆ ನನ್ನ ಮೊದಲ ಭೇಟಿ ಇದು. ಇಲ್ಲಿ ಕಳೆದ ಒಂದು ದಿನ ಮನಸ್ಸಿಗೆ ತುಂಬ ಸಂತೋಷ ನೀಡಿತು. ನಮ್ಮೂರಿನಲ್ಲಿ ಎಲ್ಲರೂ ಈ ಊರನ್ನು ಬಾಯ್ತುಂಬ ಹೊಗಳುತ್ತಾರೆ. ಅವರು ಹೇಳಿದ್ದೆಲ್ಲಾ ನಿಜ ಎಂಬುದು ನನಗೆ ಇಲ್ಲಿಗೆ ಬಂದ ಮೇಲೆ ತಿಳಿಯಿತು. ಇಲ್ಲಿಗೆ ಬಂದ ಕ್ಷಣದಿಂದಲೂ ಬ್ಯುಸಿಯಾಗಿದ್ದೆ. ಅಭಿಮಾನಿಗಳನ್ನು ಭೇಟಿ ಮಾಡಿದ್ದು, ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು ಎಲ್ಲವೂ ಹೊಸತೇ ಅನುಭವ.

ಈವರೆಗಿನ ನಿಮ್ಮ ಡಬ್ಲ್ಯೂಡಬ್ಲ್ಯೂಇ ಜರ್ನಿ ಬಗ್ಗೆ ಹೇಳಿ...
ನಾನು ಡಬ್ಲ್ಯೂಡಬ್ಲ್ಯೂಇ ಜಗತ್ತಿಗೆ ಕಾಲಿಟ್ಟಿದ್ದು 2007ರಲ್ಲಿ. ಈ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆಯಲು ಕೆಲ ವರ್ಷಗಳೇ ಬೇಕಾಯ್ತು. 2010ರಲ್ಲಿ ನಾನು ಡಬ್ಲ್ಯೂಡಬ್ಲ್ಯೂಇ ‘NXT’ ಷೋನಲ್ಲಿ ಭಾಗವಹಿಸಿದೆ. ಇದೊಂದು ಬಾಕ್ಸಿಂಗ್‌ ಸ್ಪರ್ಧೆ. ಈ ಷೋ ನಿರಂತರವಾಗಿ ಐದು ತಿಂಗಳು ನಡೆಯಿತು. ಈ ಸ್ಪರ್ಧೆಯಲ್ಲಿ ನಾನು ವಿಜಯಿಯಾದ ನಂತರ ಡಬ್ಲ್ಯೂಡಬ್ಲ್ಯೂಇ ಪ್ರಪಂಚದಲ್ಲಿ ಸೂಪರ್‌ಸ್ಟಾರ್‌ ಆದೆ. 

ಬಾಕ್ಸಿಂಗ್‌ ರಿಂಗ್‌ನಲ್ಲಿ ನಿಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು?
ರಿಂಗ್‌ನೊಳಗೆ ನನ್ನ ಪ್ರಬಲ ಪ್ರತಿಸ್ಪರ್ಧಿ ಶೀಮಸ್. ಆತ ಐರ್ಲೆಂಡ್‌ನ ರೆಸ್ಲರ್‌. ನಾನು ಇಂಗ್ಲೆಂಡ್‌ನವನು. ತುಂಬ ಹಿಂದಿನಿಂದಲೂ ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ನಡುವೆ ದೊಡ್ಡದೊಂದು ಪೈಪೋಟಿಯೇ ನಡೆದುಕೊಂಡು ಬರುತ್ತಿದೆ. ಹಾಗಾಗಿ, ಐರ್ಲೆಂಡ್‌ನ ಶೀಮಸ್‌ ಅವರನ್ನು ರಿಂಗ್‌ನೊಳಗೆ ನೂರಕ್ಕಿಂತಲೂ ಅಧಿಕ ಬಾರಿ ಹಣ್ಣುಗಾಯಿ ನೀರುಗಾಯಿ ಮಾಡಬೇಕು ಎಂಬುದು ನನ್ನ ಆಸೆ. ಕೆಳೆದ ಕೆಲವು ವರ್ಷಗಳಿಂದ ಆತ  ಡಬ್ಲ್ಯೂಡಬ್ಲ್ಯೂಇ ಜಗತ್ತಿನಲ್ಲಿ ಚಾಲ್ತಿಯಲ್ಲಿದ್ದಾರೆ. ಅಂದಿನಿಂದಲೂ ನಾನು ಆತನ ಜೊತೆ ರಿಂಗ್‌ನೊಳಗೆ ಸೆಣಸುತ್ತಿದ್ದೇನೆ. ಹಾಗಾಗಿ, ರಿಂಗ್‌ನೊಳಗೆ ಶೀಮಸ್‌ ನನ್ನ ಪ್ರಬಲ ಪ್ರತಿಸ್ಪರ್ಧಿ.

ರಿಂಗ್‌ನೊಳಗೆ ನಿಮ್ಮ ಪ್ರಬಲ ಬಲವೇನು?
(ಬ್ಯಾರೆಟ್‌ ತನ್ನ ಬಲ ಮೊಣಕೈಯನ್ನು ಹುರಿಗೊಳಿಸಿ ತೋರಿಸುತ್ತಾ...) ಗೂಳಿಯ ಬಲಿಷ್ಠ ಮೂಳೆ ಮತ್ತು ಮಾಂಸಖಂಡದಂತಿರುವ ನನ್ನ ಮೊಣಕೈ ವಜ್ರಪ್ರಹಾರವೇ ನನ್ನ ಪ್ರಬಲ ಶಕ್ತಿ. ಡಬ್ಲ್ಯೂಡಬ್ಲ್ಯೂಇ ರಿಂಗ್‌ನೊಳಗೆ ಎದುರಾಳಿಗಳನ್ನು ಹಣಿಯಲು ಕೊನೆಯಲ್ಲಿ ಪ್ರಯೋಗಿಸುವ ಹೊಡೆತ ಅದು. ಎದುರಾಳಿಯನ್ನು ಮೊಣಕೈ ಹೊಡೆತದ ಮೂಲಕ ನೆಲಕ್ಕುರುಳಿಸುವ  ಈ ಬಲವೇ ನನ್ನ ಹೆಗ್ಗುರುತು. ಎದುರಾಳಿಯ ತಲೆಗೆ ನನ್ನ ಮೊಣಕೈ ಶಕ್ತಿಯ ರುಚಿ ತೋರಿದರೆ ಆತ ಮತ್ತೆ ಮೇಲೇಳುವ ಪ್ರಶ್ನೆಯೇ ಇಲ್ಲ. ಬುಲ್‌ ಹ್ಯಾಮರ್‌ ಮೊಣಕೈ ಹೊಡೆತವೇ ನನಗೆ ಅನೇಕ ಪಂದ್ಯಗಳನ್ನು ಗೆಲ್ಲಲು ಸಹಕಾರಿಯಾಗಿದೆ.

ನಿಮ್ಮ ಫಿಟ್‌ನೆಸ್‌ ಮಂತ್ರ ಏನು?
ವಾರಕ್ಕೆ ಐದು ದಿನ ತಪ್ಪದೇ ಜಿಮ್‌ ಮಾಡುತ್ತೇನೆ. ನಾನು ರೆಸ್ಲರ್‌ ಆದ್ದರಿಂದ ವಾರಕ್ಕೆ ನಾಲ್ಕು–ಐದು ರಾತ್ರಿಗಳನ್ನು ಕುಸ್ತಿ ಪಂದ್ಯಗಳನ್ನು ಆಡಲು ಮೀಸಲಿಡುತ್ತೇನೆ. ಬಾಕ್ಸಿಂಗ್‌ಗೆ ನೆರವಾಗುವ ಕಾರ್ಡಿಯೋ ಅನ್ನು ತಪ್ಪದೇ ಮಾಡುತ್ತೇನೆ. ಇವೆಲ್ಲವೂ ನನ್ನನ್ನು ಫಿಟ್‌ ಆಗಿ ಇರಿಸಿವೆ.

ಏನೇನು ಆಹಾರ ಸೇವಿಸುತ್ತೀರಾ?
ನಿತ್ಯವೂ ಸಾಕಷ್ಟು ಚಿಕನ್‌, ಬೀಫ್‌, ಮೀನು ಮತ್ತು ಪ್ರೋಟೀನ್‌ ಶೇಕ್‌ಗಳನ್ನು ಸೇವಿಸುತ್ತೇನೆ. ಇವುಗಳ ಜೊತೆಗೆ ತರಕಾರಿ ಮತ್ತು ಸಲಾಡ್‌ಗಳನ್ನು ಹೆಚ್ಚು ಸೇವಿಸುತ್ತೇನೆ. ಜಂಕ್‌ಫುಡ್‌ನಿಂದ ದೂರವಿರುತ್ತೇನೆ. ಪಿಜ್ಜಾಗಳನ್ನು ಜಾಸ್ತಿ ತಿನ್ನುವುದಿಲ್ಲ. ಹೆಲ್ದಿಫುಡ್‌ ಮಾತ್ರ ಸೇವಿಸುವ ಅಭ್ಯಾಸವಿದೆ.

ರಿಂಗ್‌ನೊಳಗೆ ಸೆಣೆಸಾಡುವ ನೀವು ಬೆಳ್ಳೆತೆರೆಯ ಮೇಲೂ ಕಾಣಿಸಿಕೊಂಡಿದ್ದೀರಿ. ನಟನೆಯ ಅನುಭವ ಹೇಗಿತ್ತು?
ನನ್ನ ಚಿತ್ರಯಾನ ತುಂಬ ಚಿಕ್ಕದಾದುದು. 2012ರಲ್ಲಿ ತೆರೆಕಂಡಿದ್ದ ‘ಡೆಡ್‌ ಮ್ಯಾನ್ ಡೌನ್‌’ ಚಿತ್ರಕ್ಕೆ ಬಣ್ಣಹಚ್ಚಿದ್ದೆ. ಕಾಲಿನ್ ಫರ್ರೆಲ್‌ ಮತ್ತು ಟೆರ್ರೆನ್ಸ್‌ ಹಾವರ್ಡ್‌ ನನ್ನ ಸಹನಟರಾಗಿದ್ದರು. ನಿಜ ಹೇಳಬೇಕು ಅಂದರೆ ನಾನು ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ನಿರ್ವಹಿಸಿದ್ದೆ ಅಷ್ಟೇ. ಆದರೂ, ಆ ಚಿತ್ರದಲ್ಲಿನ ನಟನೆ ನನಗೆ ತುಂಬ ಖುಷಿ ನೀಡಿತ್ತು. ಡಬ್ಲ್ಯೂಡಬ್ಲ್ಯೂಇ ಕಥಾವಸ್ತುವನ್ನು ಒಳಗೊಂಡ ಚಿತ್ರಗಳು ಇತ್ತೀಚೆಗೆ ಸಾಕಷ್ಟು ತಯಾರಾಗುತ್ತಿವೆ. ಮುಂದಿನ ದಿನಗಳಲ್ಲಿ ನಾನು ಕೂಡ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ.

ನಿಮ್ಮ ಮುಂದಿನ ಯೋಜನೆಗಳೇನು ಮತ್ತು ಮುಂಬರುವ ಯಾವ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದೀರಾ?
ವೆಲ್‌, ನಾನೀಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಹಾಗಾಗಿ, ಕೆಳೆದ ಕೆಲವು ತಿಂಗಳಿನಿಂದ ಡಬ್ಲ್ಯೂಡಬ್ಲ್ಯೂಇ ರಿಂಗ್‌ನೊಳಗೆ ಕಾಣಿಸಿಕೊಂಡಿಲ್ಲ. ಎರಡು ತಿಂಗಳ ಹಿಂದಷ್ಟೇ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಈ ನೋವಿನಿಂದ ಚೇತರಿಸಿಕೊಂಡ ಕ್ಷಣದಿಂದಲೇ ಬಾಕ್ಸಿಂಗ್‌ ರಿಂಗ್‌ನೊಳಗೆ ಪ್ರತ್ಯಕ್ಷನಾಗುತ್ತೇನೆ. ಇಂಟರ್‌ನ್ಯಾಷನಲ್‌ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಗೆಲುವಿನ ರಣಕಹಳೆ ಊದುವ ಹುಮ್ಮಸ್ಸಿನಲ್ಲಿದ್ದೇನೆ. ಉಳಿದಂತೆ, ಡಬ್ಲ್ಯೂಡಬ್ಲ್ಯೂಇ ವರ್ಲ್ಡ್‌ ಚಾಂಪಿಯನ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆ ಇದೆ.

ರೆಸ್ಲಿಂಗ್‌ ಹೊರತುಪಡಿಸಿ ನಿಮಗೆ ಇಷ್ಟವಾಗುವ ಕ್ಷೇತ್ರಗಳು ಯಾವುವು? ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರಿ?
ಫುಟ್‌ಬಾಲ್‌ ಅಚ್ಚುಮೆಚ್ಚು. ನಾನು ಫುಟ್‌ಬಾಲ್‌ ಕ್ರೀಡೆಯ ಬಹುದೊಡ್ಡ ಅಭಿಮಾನಿ. ಈಚೆಗೆ ನಡೆದ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಯನ್ನು ತುಂಬಾ ಎಂಜಾಯ್‌ ಮಾಡಿದೆ. ಅದೇ ರೀತಿ ಬಾಕ್ಸಿಂಗ್‌ ಪಂದ್ಯಾವಳಿಗಳನ್ನು ನೋಡುವುದು ಇಷ್ಟ. ಆದರೆ, ನನ್ನ ವೃತ್ತಿಯಲ್ಲಿ ಸಮಯ ಹೊಂದಿಸಿಕೊಂಡು ಬೇರೆ ಕ್ರೀಡೆಗಳನ್ನು ನೋಡುವುದು ತುಸು ಕಷ್ಟವೇ ಸರಿ. ಉಳಿದಂತೆ ಬಿಡುವು ಸಿಕ್ಕರೆ ಒಬ್ಬನೇ ಬೀಚ್‌ನಲ್ಲಿ ಕಾಲ ಕಳೆಯಲು ತುಂಬ ಇಷ್ಟಪಡುತ್ತೇನೆ. ಫ್ಲಾರಿಡಾ ಪ್ರವಾಸ ನನಗೆ ಅತ್ಯಂತ ಅಚ್ಚುಮೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT