ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯೂಟಿ ಮೀಮಾಂಸೆ

ಲಲಿತ ಪ್ರಬಂಧ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಧ್ಯಾಹ್ನದ ಊಟ ಮುಗಿಸಿ ಟ್ಯಾಗೋರರ ಅನುವಾದಿತ ಕವಿತೆಗಳನ್ನು ಓದುತ್ತಿದ್ದೆ. ಸಣ್ಣಗೆ ನಿದ್ದೆ ಆವರಿಸಿದಂತಾಗಿ ಪುಸ್ತಕ ಪಕ್ಕಕ್ಕಿಟ್ಟು ರೆಪ್ಪೆ ಮಡಚಿದೆ. ಸ್ವಲ್ಪ ಹೊತ್ತಿಗೆ ಫೋನು ರಿಂಗಣಿಸಿ ಎಚ್ಚೆತ್ತೆ. ಆ ಕಡೆಯಿಂದ ಯಾವುದೋ ಸೌಂದರ್ಯವರ್ಧಕಗಳ ಸಂಸ್ಥೆಯವರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಗ್ರಾಹಕರ ಮನೆಗಳನ್ನು ಸಂಪರ್ಕಿಸುತ್ತಿದ್ದರು. ಫೇಶಿಯಲ್ ಕ್ರೀಮ್, ಲಿಪ್‌ಸ್ಟಿಕ್, ಐಲೈನರ್, ಬಾಡಿಲೋಷನ್, ಶಾಂಪೂ– ಇನ್ನೂ ಯಾವ್ಯಾವುದೋ ಹೆಸರೆಲ್ಲಾ ಹೇಳಿ ಮುಗಿಸಿದ ಮೇಲೆ ನಾನು ‘ಸ್ಸಾರಿ, ನಾನು ಅವುಗಳನ್ನೆಲ್ಲಾ ಬಳಸುವುದಿಲ್ಲ, ಇರಲಿ... ನಿನ್ನ ಹೆಸರು ಏನಮ್ಮಾ?’ ಎಂದೆ. ಅತ್ತ ಕಡೆಯಿಂದ ‘ಥ್ಯಾಂಕ್ಯೂ ಮೇಡಮ್’ ಎಂದದ್ದು ಕೇಳಿಸಿತು.

ನನ್ನ ಮದುವೆ ಸಂದರ್ಭದಲ್ಲಿ ನಮ್ಮೂರಿನಲ್ಲಿ ಆಗತಾನೇ ಬ್ಯೂಟಿಪಾರ್ಲರ್ ಸಂಭ್ರಮ ಪ್ರಾರಂಭವಾಗಿತ್ತು. ಬಹುಶಃ ಇಡೀ ಊರಿಗೆ ಎರಡು ಪಾರ್ಲರ್‌ಗಳಿದ್ದವು. ಮದುವೆಗೆ ಎಂಟು ದಿನ ಬಾಕಿ ಇದ್ದಾಗ ನಾನು ಮನೆಯ ಹತ್ತಿರವಿದ್ದ ಗ್ಲೋರಿ ಬ್ಯೂಟಿಪಾರ್ಲರ್‌ಗೆ ಹೋದೆ. ಅದರ ಮಾಲೀಕಳು ಬೆಂಗಳೂರಿನವಳು. ಸುಂದರಿಯೂ ವೈಯಾರಿಯೂ ಆದ ಆಕೆ ತನ್ನ ಚಾಲಾಕಿ ಮಾತುಕತೆಗಳಿಂದ ಚಂದ ಆಕರ್ಷಿಸುತ್ತಿದ್ದಳು. ಆದರೆ ಕುಸುರಿ ಕಲೆಯ ಸೂಕ್ಷ್ಮತೆ ಅವಳಿಗೆ ಕೊಂಚವೂ ಒಲಿದಿರಲಿಲ್ಲ. ಅವಳು ಮಾಡುತ್ತಿದ್ದ ಮೇಕಪ್ ಎಮ್ಮೆಗೋ ದನಕ್ಕೋ ತಿಕ್ಕಿ ತೀಡುವಂತಿತ್ತು. ಇದಾವುದನ್ನೂ ಅರಿಯದೆ ನಾನು ಪಾರ್ಲರಿನೊಳಗೆ ಕಾಲಿಟ್ಟಿದ್ದೆ.

ನಾನು ಹೋದದ್ದೇ ತಡ ಬಲಿಯ ವೇದಿಕೆಗೆ ಪಶುವನ್ನು ಕಟ್ಟುವಂತೆ ದೊಡ್ಡ ಕನ್ನಡಿಯೆದುರು ಇಟ್ಟಿದ್ದ ವ್ಹೀಲ್‌ಛೇರಿನಲ್ಲಿ ಕೂಡಿಸಿದಳು. ಅಲ್ಲಿನ ವಾತಾವರಣ ನನಗೆ ತುಂಬಾ ಹೊಸದು. ವಿಚಿತ್ರ ಹೇರ್‌ಸ್ಟೈಲ್‌ಗಳಲ್ಲಿ ನಿಂತ ತರುಣಿಯರ ಚಿತ್ರಗಳು, ಸಾಲಾಗಿ ಜೋಡಿಸಿಟ್ಟಿದ್ದ ಸೌಂದರ್ಯವರ್ಧಕಗಳ ಬಾಟಲ್‌ಗಳು, ಆಕೆಯ ಹಾವಭಾವ ನನ್ನ ಕವಿಮನಸ್ಸಿಗೆ ಹೊಸಲೋಕವೇನೋ ಎನ್ನಿಸಿತ್ತು. ತುಂಬಾ ಹೊತ್ತು ಕುಳಿತುಕೊಳ್ಳಲು ಇರಿಸುಮುರಿಸಾದರೂ ನಾನೇನೂ ಅಷ್ಟು ಬೇಗ ಎದ್ದುಬರುವಂತಿರಲಿಲ್ಲ.

ಪಾರ್ಲರಿನಾಕೆ ಉಪದೇಶ ಪ್ರಾರಂಭಿಸಿದ್ದಳು. ಐಬ್ರೋ ಜೊತೆಗೆ ಫೇಶಿಯಲ್, ಥ್ರೆಡಿಂಗ್, ಹೇರ್‌ಕಟಿಂಗ್ ಮಾಡಿಸಿಕೊಂಡರೆ ಮದುವೆಗೆ ಲುಕ್ ಇರುತ್ತೆ ಅಂತ ಕಣ್ಣರಳಿಸಿಕೊಂಡು ನಸುನಗುತ್ತಲೇ ಮಾತನಾಡಿ, ನನ್ನನ್ನು ಒಪ್ಪಿಸಿದಂತೆ ಮಾಡಿ, ಯಾವ ತೀರ್ಮಾನಕ್ಕೂ ಬರದೇ ಗಲಿಬಿಲಿ ಉಂಟಾಗಿದ್ದ ನನ್ನ ಮೌನವನ್ನೇ ಸಮ್ಮತಿಯೆಂದು ತೀರ್ಮಾನಿಸಿ ಕೆಲಸ ಶುರುಮಾಡಿಬಿಟ್ಟಳು. ಕೊನೆಗೆ ನಾನು ನನಗೆ ತಿಳಿದಿರಲಾರದ, ಆದರೆ ಆಕೆಗೆ ತಿಳಿದಿರುವ ಜ್ಞಾನವನ್ನು ಒಪ್ಪಿಕೊಂಡು ಗೋಣು ಅಲ್ಲಾಡಿಸುತ್ತಾ ಕೂತೆ. ಆಕೆಯ ಪಾಲಿಗೆ ಮಿಕ ಬಲೆಗೆ ಬಿದ್ದಿತ್ತು.

‘ಮುಖದ ಮೇಲೆಲ್ಲಾ ತುಂಬಾ ಕೂದಲಿದೆಯಲ್ಲಾ’ ಎಂದು ಹೇಳಿ ತೆಳುವಾದ ದಾರದ ಒಂದು ತುದಿಯನ್ನು ತುಟಿಯಲ್ಲಿ ಕಚ್ಚಿ ಹಿಡಿದು ಮತ್ತೊಂದು ತುದಿಯನ್ನು ಬೆರಳಿಗೆ ಸುತ್ತಿಕೊಂಡು ಎಲ್ಲಾ ಸಣ್ಣಪುಟ್ಟ ಕೂದಲುಗಳನ್ನು ಕಿತ್ತು ತೆಗೆದಳು. ಚರ್ಮವೆಲ್ಲಾ ಚುರ್ರೆಂದು ಉರಿದರೂ ನೋವು ನುಂಗಿಕೊಂಡೆ. ‘ಅಪ್ಪರ್‌ಲಿಪ್ ಮಾಡಿಸ್ಕೊಳ್ಳಿ’ ಎನ್ನುತ್ತಾ ಮೇಲ್ದುಟಿಗೂ ಮೂಗಿಗೂ ನಡುವಿನಲ್ಲಿದ್ದ ಕೂದಲುಗಳನ್ನು ಆಕೆ ಕೀಳುವಾಗ ಅಸಾಧ್ಯ ನೋವಿನಿಂದ ಒದ್ದಾಡಿದೆ. ಹುಬ್ಬಿನ ಕೂದಲನ್ನು ಕಿತ್ತು ಬಾಗಿಸಿದಳು.

ಮೂಗಿನ ತುದಿಯಲ್ಲಿದ್ದ ಅತ್ಯಂತ ಸಣ್ಣ ಸಣ್ಣ ಕೂದಲುಗಳನ್ನು ಅದೆಂಥದೋ ಫೋರ್‌ಸೆಪ್ಸ್‌ನಿಂದ ಒತ್ತಿ ತೆಗೆದಳು. ತೋಳನ್ನೆಳೆದುಕೊಂಡು ಕೊಂಚ ಬಿಸಿಯಾಗಿದ್ದ ಸಕ್ಕರೆ ಪಾಕವನ್ನು ಎರಡೂ ತೋಳಿನುದ್ದಕ್ಕೂ ಸವರಿ ಅದರ ಮೇಲೆ ಕಾಟನ್‌ ಬಟ್ಟೆಯನ್ನು ಹಾಕಿ, ಒತ್ತಿ ಜೋರಾಗಿ ಹಿಡಿದೆಳೆದಳು. ನಾನು ತಡೆಯಲಾಗದೆ ಒಮ್ಮೆ ಕಿರುಚಿದೆ. ಅದಕ್ಕೆ ಆಕೆ ‘ಇಷ್ಟೇ, ಆಯ್ತಲ್ಲಾ... ಎಷ್ಟೊಂದು ಕೂದಲು ನೋಡಿ, ಈಗ ಚೆನ್ನಾಗಾಯ್ತು’ ಎಂದಳು, ತೋಳನ್ನು ಹಿಂದೆ ಮುಂದೆ ತಿರುಗಿಸಿ ನೋಡಿ. ಅದನ್ನು ಕೇಳಿ ನನಗೆ ‘ನಾನೇನಾದ್ರೂ ಚಿಂಪಾಂಜಿನೋ ಗೊರಿಲ್ಲಾನೋ’ ಎಂಬ ಭ್ರಮೆ ಬಂತು.

ಇದೀಗ ಆಕೆ ಮುಖಕ್ಕೆಲ್ಲಾ ಸ್ಕ್ರಬ್ ಹಾಕಿ ಶುಚಿಗೊಳಿಸಿದಳು. ಫೇಶಿಯಲ್ ಕ್ರೀಮ್ ಹಚ್ಚಿ, ಕಣ್ಣಿಗೆ ಸೌತೆಕಾಯಿ ಹೋಳು ಇರಿಸಿದಳು. ಬೆನ್ನಿಗೆ ದಿಂಬು ಹಾಕಿ ಹಾಗೇ ಒರಗಿಸಿ ಫ್ಯಾನ್ ಹಾಕಿದಳು. ಇಪ್ಪತ್ತು ನಿಮಿಷ ಚೆನ್ನಾಗಿ ನಿದ್ದೆ ಮಾಡಿದೆ. ನಿಜವಾಗಲೂ ಆಯಾಸ ಆಗಿತ್ತು. ಚಂದದ ಹಳೇ ಹಿಂದೀ ಚಿತ್ರದ ಹಾಡುಗಳನ್ನು ಕೇಳುತ್ತಾ ಹಾಗೇ ವಿಶ್ರಾಂತಳಾದೆ. ಮುಖ ತೊಳೆದ ನಂತರ ಬಿಸಿ ನೀರಿನ ಹಬೆಗೆ ಮುಖ ಒಡ್ಡಿಸಿದಳು. ಎಲ್ಲಾ ಮುಗಿದ ನಂತರ ಎದುರಿಗಿದ್ದ ಕನ್ನಡಿ ನೋಡಿಕೊಂಡೆ. ಏನೋ ಚಿತ್ರವಿಚಿತ್ರವಾದ ಮುಖ. ‘ಇವತ್ತು ತಾನೇ ಬ್ಯೂಟಿಥೆರಪಿ ಮಾಡಿಸ್ಕೊಂಡಿದ್ದೀರಿ.

ನಾಲ್ಕು ದಿನದ ನಂತ್ರ ನಿಮ್ಮ ಮುಖದಲ್ಲಿ ಎಂಥಾ ಗ್ಲೋರಿ ಬರುತ್ತೆ ನೋಡ್ತಿರಿ’ ಎಂದು ಹೇಳಿದವಳು, ‘ನಿಮ್ಮ ಮುಖಕ್ಕೆ ಯು ಶೇಪ್ ಹೇರ್‌ಕಟ್ ಚೆನ್ನಾಗಿರುತ್ತೆ’ ಅಂತ ಹೇಳಿ ಅದೂ ಮುಗಿಸಿದಳು. ಎಲ್ಲಾ ಮುಗಿದ ನಂತರ ಚಂದ ಫೀಸು ಕಿತ್ತಳು. ಕೊನೆಗೆ, ‘ಮನೆಗೆ ಹೋಗಿ ಎರಡು ಮೂರು ದಿನ ರಾತ್ರಿ ಹರಳೆಣ್ಣೆ ಮುಖಕ್ಕೆ ಹಚ್ಚಿ ಮಲಗಿ. ಬೆಳಿಗ್ಗೆ ಕಡ್ಲೆಹಿಟ್ಟಿನಲ್ಲಿ ಮುಖ ತೊಳೆಯಿರಿ’ ಎಂಬ ಅವಳ ಆದೇಶ ಚಾಚೂ ತಪ್ಪದೆ ಪಾಲಿಸಿದ್ದೆ.

ಆನಂತರದ ಪಾಡು ಯಾರಿಗೂ ಬೇಡ. ಆಕೆ ಕಿತ್ತು ಉಜ್ಜಿ ಏನೇನೋ ಹಚ್ಚಿ ಬಿಟ್ಟ ಮುಖ ಹರಳೆಣ್ಣೆ ಕುಡಿದು ಬೆಳಿಗ್ಗೆ ಹೊತ್ತಿಗೆ ಬೊಬ್ಬೆ ಎದ್ದಿದ್ದವು. ಉರಿಮುಖವಾಗಿ ಊದುತ್ತಾ ಹೋಯಿತು, ನಾನು ಕುಸಿದೆ. ಕೆಲವರು ‘ಆಕೆ ಹತ್ತಿರ ಯಾಕೆ ಹೋದಿ? ಎಂಥಾ ರಾಕ್ಷಸಿ ನೋಡು, ಹೇಗೆ ಹಾಳು ಮಾಡಿದ್ದಾಳೆ ನಿನ್ನ ಮುಖ’ ಎಂದರೆ, ಮತ್ತೆ ಕೆಲವರು ‘ಹೋಗ್ಲಿಬಿಡು ತಿಳೀದೆ ಹೋದಿ ಅನ್ಸುತ್ತೆ. ಒಂದೆರಡು ದಿನ, ಮತ್ತೆ ಸರಿಯಾಗುತ್ತೆ’ ಅಂತ ಸಮಾಧಾನಿಸಿದರು. ನಾನು ದೇವರಲ್ಲಿ ಶರಣಾಗಿ ಬಿಕ್ಕಿದ್ದೆ.

ಮದುವೆ ಹಿಂದಿನ ದಿನದ ಹೊತ್ತಿಗೆ ಮುಖ ಕೊಂಚ ರಿಪೇರಿಯಾಗಿದ್ದರೂ, ಅಲರ್ಜಿಯಾದ ಹಾಗೆ ಸಣ್ಣ ಸಣ್ಣ ಗುಳ್ಳೆಗಳಿಂದ ಮುಖ ಊದಿಕೊಂಡಿತ್ತು. ಅದರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ನಾನು ಮುಖದ ತುಂಬಾ ನಗುವಿನ ಬೆಳಕನ್ನು ಹರಡಿ ಯಾವ ಕೊರತೆಯೂ ಕಾಣದಂತೆ ನಿಗಾ ವಹಿಸಿದ್ದೆ. ಗೆಳತಿಯರೆಲ್ಲರೂ ನನಗಾದ ಸ್ಥಿತಿಗೆ ಮರುಗಿ ‘ಆಕೆ ಬಂದರೆ ಸುಮ್ಮನೇ ಬಿಡೋಲ್ಲ’ ಎಂದು ರೇಗಾಡುತ್ತಿದ್ದರು. ನಾನವರನ್ನು ಸುಮ್ಮನಾಗಿಸಿ ‘ಅದೆಲ್ಲಾ ಬೇಡಾ, ಈ ಹೊತ್ತಿನಲ್ಲಿ ಜಗಳ ಯಾಕೆ?’ ಎಂದೆ.

ಮದುವೆ ಮುಗೀತು. ಪತಿಯಂತೂ ‘ನೀನು ಪಾರ್ಲರಿಗೆ ಹೋಗದೇ ಹಾಗೇ ಚೆನ್ನಾಗಿದ್ದೆ’ ಎಂದರು. ‘ನನ್ಗೂ ಅದೇ ಇಷ್ಟ. ಆದ್ರೆ ಏನೋ ಕುತೂಹಲಕ್ಕೆ ಹೋಗಿ ಈ ಸ್ಥಿತಿಯಾಯ್ತು’ ಎಂದಿದ್ದೆ ಗದ್ಗದಿತಳಾಗಿ. ಪಾರ್ಲರಿಗೆ ಹೋದ ಗೆಳತಿಯೊಬ್ಬಳು ಕೊಟ್ಟ ವಿವರಣೆ ಕೇಳಿ ಅಚ್ಚರಿಕೊಂಡಿದ್ದೆ. ‘ಗಂಟೆಗಟ್ಟಲೆ ಅವರು ಮಾಡುವ ಫೇಶಿಯಲ್ ಮಸಾಜ್‌ನ ಸ್ಪರ್ಶ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತೆ. ಅದಕ್ಕೇ ಹೋಗ್ತೀನಿ’ ಅಂದಿದ್ದಳು. ನನಗೆ ಮತ್ತೊಬ್ಬ ಪಾರ್ಲರಿನ ಒಡತಿಯ ಪರಿಚಯವಾಯಿತು.

ಗಂಡನನ್ನು ಕಳೆದುಕೊಂಡ ಆಕೆ, ಮೂರು ಮಕ್ಕಳನ್ನು ಸಲಹಿ ಸಾಕಿದ್ದು ತನ್ನ ಪಾರ್ಲರ್ ಕೆಲಸದಿಂದಲೇ. ‘ಮೂವರಲ್ಲಿ ಒಬ್ಬಳು ಮಗಳು ಕ್ಯಾನ್ಸರಿಗೆ ತುತ್ತಾದಾಗ, ಒಂದೊಂದು ದಿನದ ಗಳಿಕೆಯೂ ಅವಳ ಮಾತ್ರೆಗೆ ಔಷಧಿಗೆ ಖರ್ಚು ಮಾಡುತ್ತಿದ್ದೆ. ಬೆಳಿಗ್ಗೆಯಿಂದ ಸಂಜೆವರೆಗೆ ಪಾರ್ಲರಿನ ಬಾಗಿಲು ತೆಗೆದುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದೆ. ಆ ದಿನಗಳಲ್ಲಿ ಪಾರ್ಲರ್ ನನ್ನನ್ನು ಪೊರೆಯಿತು. ಆದರೂ ನನ್ನ ಮಗಳನ್ನು ಕಳೆದುಕೊಂಡೆ’ ಎನ್ನುವ ಆಕೆಯ ಮಾತುಗಳು ನನ್ನ ಅಂತಃಕರಣವನ್ನೇ ಕಲಕಿಬಿಟ್ಟಿದ್ದವು.

ಒಮ್ಮೆ ಪತಿಯ ಸ್ನೇಹಿತರೊಬ್ಬರು ಬ್ಯೂಟಿಪಾರ್ಲರ್ ಕೋರ್ಸ್‌ನ ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಸಾವಿರಾರು ವರ್ಷಗಳ ಹಿಂದೆ ಆಯುರ್ವೇದ ಗಿಡಮೂಲಿಕೆಗಳು ಹಾಗೂ ಸುಗಂಧಭರಿತ ಪುಷ್ಪಗಳಿಂದ ತಯಾರಿಸಲಾದ ಸೌಂದರ್ಯವರ್ಧಕಗಳನ್ನು ಉಪಯೋಗಿಸಿ ಜನರು ಸೌಂದರ್ಯ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ ಬಗೆ, ಬೇಲೂರು ಹಳೇಬೀಡಿನ ಶಿಲ್ಪಗಳಲ್ಲಿ ಕಾಣಬರುವ ಮಹಿಳೆಯರ ಚಿತ್ರಗಳಲ್ಲಿ ಕಂಡು ಬರುವ ಸೌಂದರ್ಯ ಪ್ರಜ್ಞೆ ಮುಂತಾದ ಬಗ್ಗೆ ಭಾಷಣದಲ್ಲಿ ತಿಳಿಸಿದೆ.

ಕೊನೆಗೆ ಬಾಹ್ಯಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿದೆ. ಒಳ್ಳೆಯ ಮೌಲ್ಯಗಳನ್ನು ಸ್ವೀಕರಿಸಿ, ವ್ಯಕ್ತಿಗತ ಸಾಧನೆಯ ಜೊತೆ ಸಮಾಜಸೇವೆಯ ಬಗ್ಗೆ ತುಸು ಗಮನ ಹರಿಸಿ, ಎಲ್ಲದರ ಜೊತೆ ಕೊಂಚ ಧ್ಯಾನ – ಪ್ರಾಣಾಯಾಮ ಮಾಡಿ ಎಂಬ ಸಲಹೆಗಳನ್ನು ನೀಡಿದೆ. ಅಷ್ಟು ಹೊತ್ತು ತನ್ಮಯರಾಗಿ ಕುಳಿತ ಮಂದಿ ಭಾಷಣದ ನಂತರ ನನ್ನ ಬಳಿ ಬಂದು, ನಾನು ಹೇಳಿದ್ದ ಸಲಹೆಗಳ ಬಗ್ಗೆ ಮತ್ತಷ್ಟು ಸಲಹೆಗಳನ್ನು ಕೇಳತೊಡಗಿದ್ದರು, ಆ ಗುಂಪಿನ ಮಧ್ಯೆ ತೂರಿ ಬಂದ ಅಂಗೈನ ಒಡತಿಯೊಬ್ಬಳು, ‘ನಿಮ್ಮ ಆಟೋಗ್ರಾಫ್ ಬೇಕು’ ಎಂದಳು. ‘ನಿಮ್ಮ ಅಂಗೈಮೇಲಾ?’ ಎಂದು ನಾನು ಅಚ್ಚರಿಗೊಂಡೆ.

‘ನಾನು ಸಿನಿಮಾ ನಟಿಯಲ್ಲ’ ಎಂದೆ. ನನ್ನ ಮಾತಿನಿಂದ ಆಕರ್ಷಿತಗೊಂಡಿದ್ದ ಆಕೆ ಮಣಿಯಲಿಲ್ಲ. ತನ್ನ ಮೃದುವಾದ ಬಿಳಿಯಾದ ಅಂಗೈ ನೀಡಿ, ಪೆನ್ನನ್ನೂ ನೀಡಿ, ನನ್ನ ಹೆಸರನ್ನು ಬರೆಸಿಕೊಂಡು ‘ಥ್ಯಾಂಕ್ಸ್’ ಎಂದು ಹೊರಟಳು. ನಾನು ತುಟಿಯರಳಿಸಿ ನಕ್ಕೆ. ಕೆಲವೊಮ್ಮೆ ಗಂಡನೊಂದಿಗೆ ಸುಂದರ ಉದ್ಯಾನವನಗಳೂ ಕೊಳಗಳೂ ಇರುವ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಸಂಜೆ ಪಾರ್ಟಿಗಳಿಗೆ ಹೋಗಬೇಕಾಗುತ್ತಿತ್ತು. ತುಂಬಾ ಜನ ಬಿಲ್ಡರ್ಸ್ ತಮ್ಮ ಸುಂದರ ಹೆಂಡತಿಯರೊಂದಿಗೆ ಅಲ್ಲಿಗೆ ಬರುತ್ತಿದ್ದರು ಮತ್ತು ಅವರೆಲ್ಲಾ ನನಗೂ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು.

ಅದೊಂದು ದಿನ ಪಾರ್ಟಿಗೆ ಹೋಗುವ ಮುನ್ನ ಶಾಂಪೂ ಹಾಕಿ ಕೂದಲನ್ನು ತೊಳೆದು ಒಣಗಿಸಿ, ತಿಳಿಗುಲಾಬಿ ಬಣ್ಣದ ಜಾರ್ಜೆಟ್ ಸೀರೆ ಉಟ್ಟು, ತೆಳುವಾದ ಲಿಪ್‌ಸ್ಟಿಕ್ ತುಟಿಗೆ ಹಚ್ಚಿ ಗಂಡ ಮಕ್ಕಳೊಂದಿಗೆ ಹೊರಟೆ. ಕಾರ್ಯಕ್ರಮದ ಆರಂಭದಲ್ಲಿ ಗಾಯಕರು ‘ತೂ ಜಹಾ ಜಹಾ ಚಲೇಗಾ’, ‘ಆಜಾರೇ...’, ‘ಪರದೇಸಿ’, ‘ಕಭೀ ಕಭೀ’ ಮೊದಲಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಹಳೆಯ ಹಿಂದೀ ಚಿತ್ರಗಳ ಹಾಡಿನ ಅಭಿಮಾನಿಯಾಗಿದ್ದ ನಾನು ಹಾಡಿನ ಮೋಡಿಗೆ ಒಳಗಾಗಿ ಅಲ್ಲೇ ಹಸಿರು ಹುಲ್ಲಿನ ಲಾನ್‌ನಲ್ಲಿ ಜೋಡಿಸಿಟ್ಟಿದ್ದ ಕುರ್ಚಿಯಲ್ಲಿ ಕುಳಿತು ತನ್ಮಯಳಾಗಿ ಹಾಡು ಕೇಳತೊಡಗಿದೆ. ಗಂಡ ಮಕ್ಕಳು ತಮ್ಮ ತಮ್ಮ ಸ್ನೇಹಿತರನ್ನು ಹುಡುಕಿಕೊಂಡು ಹೊರಟರು.

ಗೆಳತಿಯರ ಹಿಂಡೊಂದು ನನ್ನನ್ನು ಕಂಡು ಖುಷಿಯಿಂದ ‘ಹಾಯ್’ ಎಂದು ಕೈ ಬೀಸಿತು ನಾನು ಮೌನವಾಗಿ ಕೈ ಬೀಸಿದೆ. ಹಾಡು ಕೇಳುವ ನನ್ನ ತನ್ಮಯತೆಗೆ ಭಂಗ ತಾರದೇ ತಮ್ಮತಮ್ಮೊಳಗೆ ಜೋರು ಮಾತುಕತೆ ಮುಂದುವರಿಸಿದರು. ‘ಮೈ ನದಿಯಾ ಫಿರ್ ಭೀ ಮೈ ಪ್ಯಾಸೀ’ ಹಾಡಿನ ನಡುವೆ ಬಂದ ಸಾಲನ್ನು ಧ್ಯಾನಿಸತೊಡಗಿದೆ. ಹೊಸ ಕವಿತೆ ಹೊಳೆಯಬಹುದೇನೋ ಎಂದು.

ಸಂಜೆಯ ಸೊಗಸಿಗೆ ನಾನು ಸೋತಿದ್ದೆ. ಹಿತವಾದ ತಂಗಾಳಿ ಮುಂಗುರುಳನ್ನು ತೀಡುತ್ತಿತ್ತು. ಆಗಸದಲ್ಲಿ ಚಂದಿರ ಅರಳಿದ್ದ. ನಾನು ಹಾಡು ಕೇಳುತ್ತಾ ಹತ್ತಾರು ದಶಕದ ಹಿಂದಿನ ಕಾಲಕ್ಕೆ ಹೋಗಿಬಿಟ್ಟಿದ್ದೆ. ಕಾರ್ಯಕ್ರಮದ ನಂತರ ಗೆಳತಿಯರ ಹಿಂಡಿನಲ್ಲಿ ಬಂಧಿಯಾದೆ. ನಗು, ಹರಟೆಯ ಜೊತೆಗೆ ಒಳ್ಳೆಯ ಊಟದ ಹೊತ್ತಿಗೆ ಬಹುಕಾಲದ ಗೆಳತಿಯೊಬ್ಬಳು ಸಿಕ್ಕಳು. ‘ನೀನು ಮದ್ವೆಯಾದಾಗ ಹೇಗಿದ್ದೆಯೋ ಈಗ್ಲೂ ಹಾಗೇ ಇದ್ದೀಯೆ. ಪಾರ್ಲರಿಗೂ ಹೋಗೋಲ್ಲ ಅಂತಿಯಾ, ನಾವು ನೋಡು ಪಾರ್ಲರಿಗೆ ಹೋಗ್ಬಂದು ಹ್ಯಾಗೆ ಲಕಲಕಾಂತ ಹೊಳೀತಿದ್ದೇವೆ, ನೀನು ಏನೂ ಇಲ್ಲದೆ ಹೀಗೆ ಬೆಳಗ್ತಿದ್ದೀಯಲ್ಲ, ಏನು ರಹಸ್ಯ?’ ಎಂದಳು.

ನಾನು ನಗುತ್ತಾ ‘ದಿನಾ ಕೊಂಚ ಧ್ಯಾನ – ಪ್ರಾಣಾಯಾಮ ಮತ್ತು ಸಕಾರಾತ್ಮಕ ಚಿಂತನೆ’ ಎಂದೆ. ‘ಹೌದಾ! ಆದರೆ... ಇನ್ನೂ ಒಂದು ವಿಷ್ಯ ಕಾಡ್ತಿದೆ ಹೇಳ್ಲಾ? ನಿನ್ನನ್ನು ನೋಡಿದ್ರೆ ನಿಂಗೆ ಇನ್ನೊಂದು ಮದ್ವೆ ಮಾಡೋ ಅಷ್ಟು ತಾರುಣ್ಯ ಕಾಣ್ತದಲ್ಲಾ ಅದು ಹೇಗೆ?’ ಎಂದಳು ಕಣ್ಣು ಮಿಟುಕಿಸುತ್ತಾ. ನಾನು ತಬ್ಬಿಬ್ಬಾದೆ. ತಕ್ಷಣವೇ ಸಾವರಿಸಿಕೊಂಡು ನಕ್ಕೆ. ‘ಥ್ಯಾಂಕ್ಯೂ’ ಎಂದೆ ಮೆಲ್ಲಗೆ. ಅವಳ ಅಂಗೈ ನನ್ನ ಅಂಗೈಯೊಳಗೆ ಬೆಚ್ಚಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT