ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಚಾರಿಯೋ, ಕ್ರಾಂತಿಕಾರಿಯೋ?

ಸಂಸಾರ ಮತ್ತು ಸನ್ಯಾಸಕ್ಕಿಂತ ವ್ಯಕ್ತಿಯ ಕೊಡುಗೆ ಮುಖ್ಯವಾಗಬೇಕು
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಪ್ರಮುಖ ನಗರವೊಂದರಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿತು. ಆ ಮನೆತನದವರ ಮದುವೆಯು ಅದಾಗಿದ್ದರೂ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು ಸಮಾಜಮುಖಿ ಕಾರ್ಯಕ್ಕೆ ಉದಾಹರಣೆ. ಮಾನವನ ಬದುಕಿನಲ್ಲಿ ಮದುವೆಯು ಪ್ರತಿಷ್ಠೆಯ ಸಂಕೇತವಾಗಿದೆ. ಪ್ರತಿಷ್ಠೆಯನ್ನು ಬಯಸುವವರೆಲ್ಲ ಅದ್ಧೂರಿತನಕ್ಕೆ ಒಳಗಾಗುತ್ತಾರೆ. ಒಂದು ಮದುವೆಯ ಹೆಸರಿನಲ್ಲಿ ಏನೆಲ್ಲ ಆಡಂಬರ. ಆಡಂಬರಕ್ಕೆ ಎಷ್ಟೆಲ್ಲ ಹಣದ ಖರ್ಚು. ಅಲ್ಲಿ ನಡೆದ ಸಾಮೂಹಿಕ ವಿವಾಹಕ್ಕೆ ನಾಲ್ಕೈದು  ಜನ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು ಆಮಂತ್ರಿತರಾಗಿದ್ದರು. ಸಮಾರಂಭದ ಸಾನ್ನಿಧ್ಯವನ್ನು ವಹಿಸಿದ್ದ ಮಠಾಧೀಶರೊಬ್ಬರು, ‘ಬಸವಣ್ಣನವರು ಒಬ್ಬ ಬ್ರಹ್ಮಚಾರಿಗಳು. ಸಂಸಾರದಲ್ಲಿದ್ದಾಗ್ಯೂ ಬ್ರಹ್ಮಚರ್ಯವನ್ನು ಆಚರಿಸಿದರು’ ಎಂದು ನುಡಿದರು.
ಆ ಸಂದರ್ಭದಲ್ಲಿ ಅವರು ಅಲ್ಲಮನ -
ಸತಿಯ ಕಂಡು ವ್ರತಿಯಾದ ಬಸವಣ್ಣ
ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ
ಗುಹೇಶ್ವರಾ ನಿಮ್ಮಲ್ಲಿ ಬಾಲಬ್ರಹ್ಮಚಾರಿಯಾದ
ಬಸವಣ್ಣ ಒಬ್ಬನೇ

ಈ ವಚನವನ್ನು ಉದಾಹರಿಸಿದರು.  

ಬಸವಣ್ಣನವರು ಒಬ್ಬ ಬ್ರಹ್ಮಚಾರಿಯೇ ಎಂಬುದನ್ನು ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ. ಬೇರೆ ಬೇರೆ ದೇವರ ಆರಾಧನೆ ಹಾಗೂ ಪೌರಾಣಿಕ ಕಥೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಬಸವತತ್ವವನ್ನು ಒಪ್ಪಿಕೊಳ್ಳುವುದು ಶ್ರೇಷ್ಠ. ಬಸವಣ್ಣನವರನ್ನು ಒಬ್ಬ ಬ್ರಹ್ಮಚಾರಿಗೆ ಹೋಲಿಸುವುದಕ್ಕಿಂತ ಕ್ರಾಂತಿಕಾರಿ ವಿಚಾರವಾದಿ, ಸುಧಾರಣಾವಾದಿ, ಪ್ರಗತಿಪರವಾದಿ, ಮಾನವತಾವಾದಿ ಮತ್ತು ಆಶಾವಾದಿ ಅದಕ್ಕೂ ಮಿಗಿಲಾಗಿ ಆದರ್ಶವಾದಿ ಎಂದು ಬಿಂಬಿಸುವುದು ಅತ್ಯಂತ ಮಹತ್ವದ್ದು. ಬಸವಣ್ಣನವರ ಬಗೆಗೆ ಅಭಿಮಾನ ಇರಬೇಕು. ಆದರೆ ಅದು ಅಂಧಾಭಿಮಾನ ಆಗಬಾರದು. ವಿಚಾರವಾದಿ ಬಸವಣ್ಣನವರನ್ನು ವಿಚಾರವಾದಿಯಾಗಿ ವಿಮರ್ಶಕರಾಗಿ ನೋಡಬೇಕಾಗುತ್ತದೆ. ಬಸವಣ್ಣನವರೇ ಒಂದುಕಡೆ ‘ಎನ್ನ ಹೊಗಳಿಕೆಗೆ ಅಡ್ಡ ಬಾರ ಧರ್ಮಿ’ ಎಂದಿದ್ದಾರೆ.

ಬುದ್ಧ, ಅಲ್ಲಮ, ಅಕ್ಕನಂತೆ ಕೆಲವರು ಸಂಸಾರವನ್ನು ಒದ್ದು ಬಂದಿದ್ದಾರೆ. ಬಸವಣ್ಣ ಸಂಸಾರದಲ್ಲಿ ಇದ್ದು ಗೆಲ್ಲುತ್ತಾರೆ. ಇದರೊಟ್ಟಿಗೆ ಏಸುಕ್ರಿಸ್ತ, ಪೈಗಂಬರ್, ಗಾಂಧೀಜಿ ಉತ್ತಮ ಉದಾಹರಣೆ. ಮಹಾವೀರ, ಗುರುನಾನಕ, ಕನಕದಾಸ, ಕಬೀರದಾಸ, ಪುರಂದರದಾಸರು ಮುಂತಾದ ಅನೇಕ ಭಕ್ತಿಪಂಥದ ಸಾಧಕರು ಆರಂಭದಲ್ಲಿ ಸಾಂಸಾರಿಕ ಬಂಧನಕ್ಕೆ ಒಳಗಾಗಿ ಹಂತಹಂತವಾಗಿ ಅದನ್ನು ಬಿಡಿಸಿಕೊಳ್ಳುತ್ತ ಸಂತರಾಗಿದ್ದಾರೆ. ಸಾಧಕರು ಎನಿಸಿಕೊಂಡಿದ್ದಾರೆ. ಸಮಾಜಮುಖಿ ಸಾಧನೆ ಮತ್ತು ಅಂತರ್ಮುಖಿ ಸಾಧನೆಗೆ ಸಂಸಾರವು ಅಡ್ಡ ಬರುತ್ತದೆ ಎಂಬುದು ಕೆಲವರ ಅಭಿಮತವಾದರೆ, ಸಂಸಾರದಲ್ಲಿದ್ದುಕೊಂಡು ಸಾಧನೆ ಮಾಡಬಹುದು ಎಂಬುದನ್ನು ಕೆಲವರು ಸಾಧಿಸಿ ತೋರಿಸುತ್ತಾರೆ. ಪಾಶ್ಚಿಮಾತ್ಯ ಜಗತ್ತಿನ ತತ್ವಜ್ಞಾನಿಗಳು, ಕವಿಗಳು ಮತ್ತು ವಿಜ್ಞಾನಿಗಳು ಬಹುತೇಕ ಸಂಸಾರಿಗಳಾಗಿದ್ದುಕೊಂಡು ಅಪೂರ್ವ ಸಾಧನೆ ಮಾಡಿದ್ದಾರೆ. ಸಂಸಾರದಲ್ಲಿ ಇದ್ದರೂ ವಿಜ್ಞಾನ ಮತ್ತು ತತ್ವಜ್ಞಾನವನ್ನು ಸಮೀಕರಿಸಿಕೊಂಡು ಜಾಗತಿಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಮಹತ್ತರವಾದ ಕೊಡುಗೆಗಳಿಂದ ಸಂಸಾರ ಕಿರಿದಾಗಿದೆ; ಸಾಧನೆ ಹಿರಿದಾಗಿದೆ. ಕೆಲವರ ಸಂಸಾರ ಹಿರಿದಾಗಿ ಸಾಧನೆ ಕಿರಿದಾಗುತ್ತದೆ.

ವ್ಯಕ್ತಿಯ ಕೊಡುಗೆಗಳು ಮುಖ್ಯ ಆಗಬೇಕು. ಸಂಸಾರ ಮತ್ತು ಸನ್ಯಾಸ ಇವು ವ್ಯಕ್ತಿಯ ಖಾಸಗಿ ವಿಚಾರಗಳು. ಖಾಸಗಿ ವಿಚಾರಗಳ ಚರ್ಚೆಗಿಂತ ಸಾಮಾಜಿಕ ಕೊಡುಗೆಗಳ ಚಿಂತನೆ ನಡೆಯಬೇಕಾಗುತ್ತದೆ. ಬಸವಣ್ಣನವರು ಮಾನವ ಸಂಬಂಧಕ್ಕೆ ದೊಡ್ಡ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಅವರ ಸ್ವಾಮಿನಿಷ್ಠೆ ಅಪ್ರತಿಮವಾದದ್ದು. ಅದನ್ನು ಕಂಡು ಬಿಜ್ಜಳ ರಾಜನು ಅರ್ಥಮಂತ್ರಿಯನ್ನಾಗಿ ನೇಮಿಸುತ್ತಾನೆ. ತಾನು ವಹಿಸಿಕೊಂಡ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜನ ಅಂತಃಕರಣವನ್ನು ಗಳಿಸಿಕೊಳ್ಳುತ್ತಾರೆ. ಭಾವನಾತ್ಮಕತೆಯ ಹಿನ್ನೆಲೆಯಲ್ಲಿ ಬಿಜ್ಜಳ ರಾಜನ ಚಿಕ್ಕಪ್ಪನ ಮಗಳಾದ ನೀಲಾಂಬಿಕೆ ಮತ್ತು ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆಯನ್ನು ವಿವಾಹವಾಗುತ್ತಾರೆ.

1996ನೇ ಸಾಲಿನಲ್ಲಿ ಇಂಗ್ಲೆಂಡ್, ಅಮೆರಿಕ ಮತ್ತು ಕೆನಡಾ ಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ಹೋದಲೆಲ್ಲ ಮಹಾಮನೆ ಕಾರ್ಯಕ್ರಮವನ್ನು ಸಂಘಟಿಸಿ ನೆರೆದವರು ನನ್ನೊಂದಿಗೆ ಸಂವಾದ ಮಾಡಿದರು. ನ್ಯೂಯಾರ್ಕ್ ನಗರದ ಡಾ. ಉದಯಶಂಕರ್‌ರವರ ಮನೆಯಲ್ಲಿ ಮಹಾಮನೆ ಕಲಾಪವು ನಡೆಯುವಾಗ ಅಲ್ಲಿನ ಎಂಜಿನಿಯರೊಬ್ಬರು- ಬಸವಣ್ಣ ಇಬ್ಬರನ್ನು ಮದುವೆ ಆಗಿದ್ದಾರೆ; ಅವರೊಬ್ಬ ಸಂಸಾರಿ. ಅವರ ತತ್ವವನ್ನು ಪ್ರಚಾರ ಮಾಡಲು ನೀವು ಬಂದಿದ್ದೀರೆಂದು ವ್ಯಂಗ್ಯವಾಗಿ ನುಡಿದರು. ನಾನ ವರಿಗೆ ಉತ್ತರಿಸಿದೆ- ಬಸವಣ್ಣ ಒಬ್ಬ ಸಂಸ್ಕಾರವಂತ, ಹೃದಯವಂತ ಸಂಸಾರಿ. ನೀವು ಅವರಂತೆ ಉತ್ತಮ ಸಂಸಾರಿಯಾಗಿರಿ; ಸಂಸ್ಕಾರವಂತರಾಗಿರಿ ಎಂದು ತಿಳಿಸಿದೆ.

ಕಲ್ಯಾಣರಾಜ್ಯ ನಿರ್ವಹಣೆ ಮತ್ತು ವಿಸ್ತರಣೆ ಶರಣರ ಮುಂದಿದ್ದ ಸವಾಲುಗಳು. ಹಳೆಯ ಸಂಪ್ರದಾಯಗಳನ್ನು ವಿರೋಧಿಸುವುದು ಮಾತ್ರ ಅವರ ಹೊಣೆಗಾರಿಕೆ ಆಗಿರ ಲಿಲ್ಲ; ಅದರೊಟ್ಟಿಗೆ ಹೊಸ ಸಮಾಜವನ್ನು ಕಟ್ಟುವುದು ಅವರ ದೊಡ್ಡ ಪ್ರಯತ್ನವಾಗಿತ್ತು. ಅಲಕ್ಷಿತರನ್ನೆಲ್ಲ ಒಗ್ಗೂ ಡಿಸಿ ಶೋಷಣೆ ಇಲ್ಲದ ವ್ಯವಸ್ಥೆಯನ್ನು ನಿರ್ಮಿಸುವುದು ಅವರ ಪರಮೋದ್ದೇಶವಾಗಿತ್ತು. ‘ಬ್ರಹ್ಮಚಾರಿ’ ಅನಿಸಿ ಕೊಳ್ಳುವುದು ಅವರ ಮಹತ್ವಾಕಾಂಕ್ಷೆ ಆಗಿರಲಿಲ್ಲ. ಅದಕ್ಕೆ ಬದಲಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಡುವುದು ಅತ್ಯಂತ ಮಹತ್ವಾಕಾಂಕ್ಷೆ ಆಗಿತ್ತು. 3–4 ಶರಣರನ್ನುಳಿದು 766 ಶರಣ ಸಾಧಕರು ಸತಿವಿಡಿದು ನಿರ್ವಾಣ ಸತಿಯನ್ನು ಕಾಣುವ ಅಪೇಕ್ಷೆಯುಳ್ಳವರಾಗಿದ್ದರು. ಸಮಾಜಮುಖಿ ಕಾರ್ಯಗಳು ಸನ್ಯಾಸಿ ಮತ್ತು ಸಂಸಾರಿ ಇಬ್ಬರಿಗೂ ಸವಾಲು. ಇಬ್ಬರೂ ಅದನ್ನು ಸಾಧಿಸಬೇಕಾಗುತ್ತದೆ.

ವ್ಯಕ್ತಿಯು ಅಂತರ್ಮುಖಿ ಸಾಧನೆಯಲ್ಲಿ ತೊಡಗಿದಾಗಲೆಲ್ಲ ಸಮಾಜಮುಖಿ ಕಾರ್ಯಗಳು ಹೊಳೆಯಬೇಕು. ಆಗಲೇ ಬ್ರಹ್ಮಚರ್ಯಕ್ಕೆ ಧನ್ಯತೆ. ಯಾವಾಗಲೂ ಏಕಾಂತ ವಾಸದಲ್ಲಿ ಉಳಿಯುವುದರಿಂದ ವ್ಯಕ್ತಿಯು ಜಡತ್ವಕ್ಕೆ ಸರಿಯುವ ಸಂಭವ. ಅದಕ್ಕಾಗಿ ಸಮಾಜ ಸುಧಾರಕರು ಮತ್ತಿತರ ಸಾಧಕರು ಶೇಕಡ 90ರಷ್ಟು ಕರ್ತವ್ಯಮುಖಿ ಆಗುತ್ತ, ಶೇ 10ರಷ್ಟು ಮಾತ್ರ ಅಂತರ್ಮುಖಿ ಸಾಧನೆಗೆ ಬಳಸಿಕೊಳ್ಳುತ್ತಾರೆ. ಹಟಯೋಗ, ರಾಜಯೋಗ ಮುಂತಾದ ಯೋಗಗ ಳಲ್ಲಿ ದಿನವನ್ನು ನೂಕುವವರ ಆರೋಗ್ಯ ಸುಧಾರಿಸಬ ಹುದು. ಬದುಕಿದ್ದಾಗ ಮಾತ್ರ ಇಂಥವರ ಪ್ರಭಾವ. ಕ್ರಾಂತಿ ಕಾರಿ ಮತ್ತು ಪರಿವರ್ತನಾವಾದಿಗಳು ಸಾವಿನ ನಂತರವೂ ಅವರು ಮಾಡಿದ ಸತ್ಕಾರ್ಯಗಳು ಸ್ಫೂರ್ತಿಸುತ್ತವೆ. ಬಸವಣ್ಣ ಅಂದರೆ, ಸತ್ಕಾರ್ಯಗಳ ಸಂಗಮ. 

ಶಾರೀರಿಕ ಶಿಸ್ತನ್ನು ಅನುಸರಿಸಲು ಕೆಲವೊಂದು ಕಟ್ಟುಪಾಡುಗಳನ್ನು ಬಸವಣ್ಣನವರು ಅನುಸರಿಸಿರಬಹುದು. ಹಾಗೆಂದು ಅವರನ್ನು ಬ್ರಹ್ಮಚಾರಿಯೆಂದು ಭಾವಿಸುವ ಅಗತ್ಯವಿಲ್ಲ. ಅಲ್ಲಮನ ವಚನದ ಅಂತರಾರ್ಥ ಏನಿದ್ದಿರಬಹುದು ಎಂಬುದನ್ನು ಅರಿಯಬೇಕು. ಮದುವೆಯ ಪ್ರಸಂಗವು ಆ ದಿನಗಳಲ್ಲಿ ಚರ್ಚೆಗೆ ಒಳಗಾಗಿರಬಹುದು. ಸತಿ ಸಂಗವನು ಮಾಡಿಯೂ ಅಂತರಂಗದಲ್ಲಿ ಬ್ರಹ್ಮ ಚರ್ಯ ಪಾಲಿಸಿರುವ ಬಗ್ಗೆ ಅಲ್ಲಮನ ಪ್ರಶಂಸೆ ಇದ್ದಿರಬ ಹುದು. ಇದನ್ನೆ ಆಧರಿಸಿ ಆದರ್ಶ ಸಂಸಾರಿಯನ್ನು ಬ್ರಹ್ಮಚಾರಿ ಎಂದು ಪರಿಗಣಿಸುವ ಯೋಚನೆ ಸರಿ ವಿಚಾರವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT