ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಹೊರಹೋಗುವುದು ಅನುಮಾನ

ಐರೋಪ್ಯ ಒಕ್ಕೂಟದ ರಾಜತಾಂತ್ರಿಕರ ಅಭಿಪ್ರಾಯ
Last Updated 27 ಜೂನ್ 2016, 22:30 IST
ಅಕ್ಷರ ಗಾತ್ರ

ಬ್ರಸಲ್ಸ್‌/ ಲಂಡನ್ (ಎಎಫ್‌ಪಿ): ಐರೋಪ್ಯ ಒಕ್ಕೂಟದಿಂದ ಹೊರ ಹೋಗುವ ಕುರಿತ ಪ್ರಕ್ರಿಯೆಯನ್ನು ಬ್ರಿಟನ್‌ ಎಂದಿಗೂ ಆರಂಭಿಸುವುದಿಲ್ಲ ಎಂದು ಒಕ್ಕೂಟದ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ. ಐರೋಪ್ಯ ಒಕ್ಕೂಟದಿಂದ ಹೊರಬರುವ ಬಗ್ಗೆ ಬ್ರಿಟನ್‌ನಲ್ಲಿ ಹೆಚ್ಚಿನ ಜನರು ಒಲವು ವ್ಯಕ್ತಪಡಿಸಿದ್ದರೂ, ಬೇರ್ಪಡುವ ಸಾಂಪ್ರದಾಯಿಕ ಪ್ರಕ್ರಿಯೆಯನ್ನು ಪ್ರಾರಂಭಿಸುವುದಿಲ್ಲ ಎಂದು ತಿಳಿಸಿದ್ದಾರೆ.

‘ನನ್ನ ವೈಯಕ್ತಿಕ ನಂಬಿಕೆ ಪ್ರಕಾರ ಒಕ್ಕೂಟದಿಂದ ಹೊರ ಹೋಗುವುದಾಗಿ ಬ್ರಿಟನ್‌ ಘೋಷಣೆ ಮಾಡುವುದಿಲ್ಲ’ ಎಂದು ಐರೋಪ್ಯ ಒಕ್ಕೂಟದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ. 2007ರ ಲಿಸ್ಬನ್ ಒಪ್ಪಂದದ ಅನ್ವಯ ಯಾವುದಾದರೂ ದೇಶ ಐರೋಪ್ಯ ಒಕ್ಕೂಟದಿಂದ ಹೊರಹೋಗುವ ಮುನ್ನ ಎಲ್ಲ 28 ರಾಷ್ಟ್ರಗಳ ಐರೋಪ್ಯ ಸಮಿತಿಯ ನಿಯಮಾವಳಿಗಳ ಪ್ರಕಾರ ವಿವರಣೆ ನೀಡುವುದು ಕಡ್ಡಾಯ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಎರಡು ವರ್ಷಗಳ ಕಾಲಾವಕಾಶವಿರುತ್ತದೆ.

‘ಒಕ್ಕೂಟದಿಂದ ಹೊರಹೋಗುವ ಕುರಿತ ತನ್ನ ನಡೆ ಸ್ಪಷ್ಟಪಡಿಸಲು ಲಂಡನ್‌ ಕಲಂ 50ಅನ್ನು ಬಳಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಾವು ಅವರನ್ನು ಒತ್ತಾಯಿಸಲು ಆಗುವುದಿಲ್ಲ. ಅವರು ಕಾಲಾವಕಾಶ ಬಳಸಿಕೊಳ್ಳಬಹುದು. ಆದರೆ, ನನ್ನ ವೈಯಕ್ತಿಕ ನಂಬಿಕೆ ಪ್ರಕಾರ ಬ್ರಿಟನ್‌ ಅದನ್ನು ಮಾಡುವುದಿಲ್ಲ’ ಎಂದು ರಾಜತಾಂತ್ರಿಕರು ಹೇಳಿದ್ದಾರೆ.

ಮರುಮತದಾನ ನಡೆಸುವ ಮೂಲಕ ಅದನ್ನು ತಡೆಯಲು ಬ್ರಿಟನ್‌ ಮುಂದಾಗಲಿದೆಯೇ ಅಥವಾ ಒಕ್ಕೂಟದಿಂದ ಹೊರ ಉಳಿಯುವ ಒಪ್ಪಂದ ಪ್ರಕ್ರಿಯೆಯನ್ನು ನಿಧಾನಗೊಳಿಸಲಿದೆಯೇ ಎಂಬುದರ ಬಗ್ಗೆ ಅವರು ನಿರ್ದಿಷ್ಟವಾಗಿ ಹೇಳಲಿಲ್ಲ. ಐರೋಪ್ಯ ಒಕ್ಕೂಟದ ಒತ್ತಡದ ನಡುವೆಯೂ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಮಂಗಳವಾರ ನಡೆಯಲಿರುವ ಒಕ್ಕೂಟದ ಸಮಾವೇಶದಲ್ಲಿ 50ನೇ ಕಲಂ ಅನ್ನು ಬಳಸಿಕೊಳ್ಳುವ ಕುರಿತು ಪ್ರಸ್ತಾಪಿಸಲಾರರು ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ, ಬ್ರೆಕ್ಸಿಟ್‌ ಪರ ಮತಚಲಾಯಿಸಿ ಈಗ ಪಶ್ಚಾತ್ತಾಪ ಪಡುತ್ತಿರುವವರೂ  ಸೇರಿದಂತೆ ಫಲಿತಾಂಶದಿಂದ ನಿರಾಶರಾದವರ ಸಾವಿರಾರು ಇ–ಮೇಲ್‌ಗಳು ಒಕ್ಕೂಟಕ್ಕೆ ಬರುತ್ತಿವೆ. ‘ಬ್ರಿಟನ್‌ನಿಂದ ದಶಕದಿಂದಲೂ ಬರುತ್ತಿದ್ದ ದ್ವೇಷದ ಇ–ಮೇಲ್‌ಗಳ ಬಳಿಕ ಮೊದಲ ಬಾರಿಗೆ ನಮಗೆ ಪ್ರೀತಿ ತುಂಬಿದ ಸಂದೇಶಗಳು ಹರಿದುಬರುತ್ತಿವೆ’ ಎಂದು ರಾಜತಾಂತ್ರಿಕರು ಹೇಳಿದ್ದಾರೆ.

ಹೊರಬರಲು 50ನೇ ಕಲಂ ಸಾಕು: ಐರೋಪ್ಯ ಒಕ್ಕೂಟದಿಂದ ಹೊರ ಹೋಗಲು ಬ್ರಿಟನ್‌ ಕಲಂ 50ನ್ನು ಬಳಸಿಕೊಂಡರೆ ಸಾಕು ಎಂದು ಅಲ್ಲಿನ ಹಣಕಾಸು ಸಚಿವ ಜಾರ್ಜ್‌ ಅಸ್ಬರ್ನ್‌ ಹೇಳಿದ್ದಾರೆ. ‘ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿರುವ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಕಲಂ 50ಅನ್ನು ಬಳಸಿಕೊಳ್ಳುವ ಪ್ರಕ್ರಿಯೆ ವಿಳಂಬವಾಗುವಂತೆ ಮಾಡಿದ್ದಾರೆ. ಅವರ ಉತ್ತರಾಧಿಕಾರಿ ನೇಮಕವಾದ ನಂತರವೇ ಆ ಪ್ರಕ್ರಿಯೆ ಶುರುವಾಗುತ್ತದೆ.

ಯುರೋಪ್‌ನೊಂದಿಗಿನ ಸಂಬಂಧ ಯಾವ ರೀತಿಯದ್ದಾಗಿರಬೇಕು ಎಂಬುದನ್ನು ನಿರ್ಧರಿಸಲು ಪ್ರಧಾನಿ ನಮಗೆ ಸಮಯ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.‘ಯುರೋಪ್‌ನ ನೆರೆಹೊರೆಯವರೊಂದಿಗೆ ನಮ್ಮ ಸಂಬಂಧಗಳ ಸೂಕ್ತ ವ್ಯವಸ್ಥೆ ಮಾಡಿಕೊಂಡು ಸ್ಪಷ್ಟ ದೃಷ್ಟಿಕೋನ ದೊರೆತ ಬಳಿಕವೇ ನಾವು ಕಲಂ 50ಅನ್ನು ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಂಡಾಯ ಸಚಿವರ ನಿರ್ಲಕ್ಷಿಸಿದ ಲೇಬರ್‌ ಮುಖಂಡ: ಪಕ್ಷದೊಳಗಿನ ಬಂಡಾಯದಿಂದ ವಿಚಲಿತರಾಗದ ಬ್ರಿಟನ್‌ನ ವಿರೋಧ ಪಕ್ಷವಾದ ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್‌ ಅವರು, ರಾಜೀನಾಮೆಯಿಂದ ತೆರವಾದ ಛಾಯಾ ಸಚಿವ ಸಂಪುಟದ 16 ಸಚಿವರ ಸ್ಥಾನಗಳನ್ನು ತುಂಬುವ ಕೆಲಸ ಪ್ರಾರಂಭಿಸಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಹೊರಬರುವ ಕುರಿತು ನಡೆದ ಆಂದೋಲನವನ್ನು ನಿಭಾಯಿಸಿದ ಬಗೆಯ ವಿರುದ್ಧ ಆಕ್ರೋಶಗೊಂಡು 16 ಸಚಿವರು ಛಾಯಾ ಸಚಿವ ಸಂಪುಟಕ್ಕೆ (ಚುನಾವಣೆಯ ಸಂದರ್ಭದಲ್ಲಿ ರಚಿಸಿಕೊಳ್ಳುವ ಸಚಿವ ಸಂಪುಟ) ರಾಜೀನಾಮೆ ನೀಡಿದ್ದರು. ಭಾನುವಾರ 12 ಸಚಿವರು ರಾಜೀನಾಮೆ ನೀಡಿದ್ದರು. ಭಾರತ ಮೂಲದ ಸೀಮಾ ಮಲ್ಹೋತ್ರಾ ಸೇರಿದಂತೆ ನಾಲ್ವರು ಸೋಮವಾರ ರಾಜೀನಾಮೆ ನೀಡಿದ್ದರು.

ಹೊಸ ಘಟಕ ಸ್ಥಾಪನೆ: ಕ್ಯಾಮರೂನ್
ಐರೋಪ್ಯ ಒಕ್ಕೂಟದಿಂದ ಹೊರಹೋಗುವ ಸಂಬಂಧ ನಡೆಯಬೇಕಿರುವ ತೀವ್ರ ಮತ್ತು ಸಂಕೀರ್ಣ ನಾಗರಿಕ ಸೇವೆಗಳ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಲು ಹೊಸ ಸರ್ಕಾರಿ ಘಟಕವನ್ನು ರಚಿಸುವುದಾಗಿ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ತಿಳಿಸಿದ್ದಾರೆ. ಹುದ್ದೆಯಿಂದ ನಿರ್ಗಮಿಸಲಿರುವ ಕ್ಯಾಮರೂನ್‌ ಅವರು ಜನಮತಗಣನೆ ಬಳಿಕ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

‘ಅಸಹಿಷ್ಣುತೆ ಸಹಿಸುವುದಿಲ್ಲ: ಜನಮತ ಗಣನೆ ನಡೆದ ಬೆನ್ನಲ್ಲೇ ನೂರಕ್ಕೂ ಅಧಿಕ ಜನಾಂಗೀಯ ನಿಂದನೆ ಮತ್ತು ದ್ವೇಷ ಅಪರಾಧ ಚಟುವಟಿಕೆಗಳ ವರದಿಯಾಗಿದ್ದು, ಇಂತಹ ಅಸಹಿಷ್ಣುತೆಯನ್ನು ಬ್ರಿಟನ್ ಸಹಿಸುವುದಿಲ್ಲ ಎಂದು ಕ್ಯಾಮರೂನ್‌ ಹೇಳಿದ್ದಾರೆ. ‘ವಲಸಿಗರನ್ನು ಬೆದರಿಸುವ ಮತ್ತು ಅವರನ್ನು ಮರಳಿ ತಮ್ಮ ದೇಶಕ್ಕೆ ಹೋಗುವಂತೆ ಎಚ್ಚರಿಸುವಂತಹ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ’ ಎಂದು ಕ್ಯಾಮರೂನ್‌ ಹೇಳಿದ್ದಾರೆ.

ಆಸ್ಟ್ರೇಲಿಯಾ–ನ್ಯೂಜಿಲೆಂಡ್‌ ಒಪ್ಪಂದ
ಸಿಡ್ನಿ (ಎಎಫ್‌ಪಿ):
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದರಿಂದ ತನ್ನ ಮೇಲೆ ಆಗುವ ಪರಿಣಾಮಗಳನ್ನು ತುರ್ತಾಗಿ ಪರಾಮರ್ಶಿಸುವಂತೆ ಸೂಚಿಸಿರುವ ಆಸ್ಟ್ರೇಲಿಯಾ ಸರ್ಕಾರ, ಹೊಸ ವಾಣಿಜ್ಯ ಮತ್ತು ವಲಸೆ ಒಪ್ಪಂದಗಳ ವ್ಯವಹಾರಕ್ಕಾಗಿ ನೆರೆಯ ನ್ಯೂಜಿಲೆಂಡ್‌ ಜತೆ ಕೈಜೋಡಿಸುವುದಾಗಿ ಸೋಮವಾರ ಹೇಳಿದೆ.

ಬ್ರಿಟನ್‌ ನಿರ್ಗಮನದಿಂದ ಉಂಟಾಗಲಿರುವ ಆರ್ಥಿಕ ಪರಿಣಾಮಗಳ  ಕುರಿತು ಬ್ರಿಟನ್‌, ಜರ್ಮನಿ ಸಲಹೆ ಪಡೆದು ಪರಾಮರ್ಶೆ ನಡೆಸುವಂತೆ ಹಣಕಾಸು ಸಚಿವಾಲಯ, ರಿಸರ್ವ್‌ ಬ್ಯಾಂಕ್‌ ಮತ್ತು ಹಣಕಾಸು ಪ್ರಾಧಿಕಾರಗಳಿಗೆ ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ಆದೇಶಿಸಿದ್ದಾರೆ.

** *** **
ಒಕ್ಕೂಟದಿಂದ ಹೊರಹೋಗುವ ಸಂಬಂಧ ಬ್ರಿಟನ್‌ ಅಧಿಸೂಚನೆ ಹೊರಡಿಸುವವರೆಗೂ ಅದರೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ.
-ಐರೋಪ್ಯ ಒಕ್ಕೂಟದ ರಾಜತಾಂತ್ರಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT