ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತವತ್ಸಲ ಎಂಬ ಅಂತರ್ಜಲ

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಎಂಬತ್ತರ ದಶಕವೆಂದರೆ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುವಂಥ ಕಾಲ. ಹೊಸ ಅಲೆಯ ಸಿನಿಮಾಗಳು ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪುವಂತಿದ್ದವು. ಅಂಥ ಚಿತ್ರಗಳ ಅಲೆ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಯಾಗಬೇಕು’ ಎಂಬ ಆಸೆ ಎಂ. ಭಕ್ತವತ್ಸಲ ಅವರದು.

ಕನ್ನಡ, ತೆಲುಗು ಸಿನಿಮಾಗಳ ನಿರ್ಮಾಪಕ, ವಿತರಕರಾದ ಭಕ್ತವತ್ಸಲ, ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವಿ. ಚಿತ್ರರಂಗಕ್ಕೆ ನೀಡಿದ ಅಪೂರ್ವ ಕೊಡುಗೆಗೆ 2012ನೇ ಸಾಲಿನ ‘ಡಾ. ರಾಜ್‌ಕುಮಾರ್ ಪ್ರಶಸ್ತಿ’ ಅವರನ್ನು ಹುಡುಕಿಕೊಂಡು ಬಂದಿದೆ. ಬಹುತೇಕ ಅರ್ಧ ಜಗತ್ತನ್ನು ಸುತ್ತಿರುವ ಈ ಚಾರಣ ಪ್ರಿಯ, ಕನ್ನಡ ಚಿತ್ರೋದ್ಯಮದೊಂದಿಗಿನ ತಮ್ಮ ನಂಟು ಮತ್ತು ಈ ಹೊತ್ತಿನ ಚಿತ್ರರಂಗದ ಬಗೆಗಿನ ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಆರಂಭದ ದಿನಗಳು
ಇಂಗ್ಲೆಂಡಿನಲ್ಲಿ ಎಂಬಿಎ ಪದವಿ ಪಡೆದು ಬಂದ ಬಳಿಕ ನನಗೆ ‘ಹಿಂದೂಸ್ತಾನ್‌ ಮಶಿನ್ ಟೂಲ್‌’ನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಐದು ವರ್ಷ ಉದ್ಯೋಗ ಮಾಡಿ ಚಿತ್ರರಂಗಕ್ಕೆ ಬಂದೆ. ಆಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಸಣ್ಣ ಕೊಠಡಿಯಲ್ಲಿತ್ತು.

ಕಾರ್ಯದರ್ಶಿಯಾಗಿ ಅದರಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದೆ. 1970ರಿಂದ ಎಂಟು ವರ್ಷ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದೆ. ಆಗ ಅದಕ್ಕೊಂದು ಸಾಂಸ್ಥಿಕ ಚೌಕಟ್ಟು ಕೊಟ್ಟ ಖುಷಿ ನನ್ನದು. ಮಂಡಳಿಯಲ್ಲಿ ಪ್ರದರ್ಶಕ, ವಿತರಕ ಹಾಗೂ ನಿರ್ಮಾಪಕರ ವಲಯ ಮಾಡಿ, ಪ್ರಥಮ ಬಾರಿಗೆ ಸ್ವಯಂ ನಿಯಂತ್ರಣ ನಿಯಮಾವಳಿ ಜಾರಿಗೆ ತಂದೆ. ಏನೇ ವಿವಾದಗಳಿದ್ದರೂ ನ್ಯಾಯಾಲಯಕ್ಕೆ ಹೋಗದೇ ಇಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಯಮಾವಳಿ ಯಶಸ್ವಿಯಾಯಿತು. ಬಳಿಕ ಈ ನಿಯಮ ಪ್ರತಿ ರಾಜ್ಯದ ಚೇಂಬರ್‌ನಲ್ಲೂ ಅಳವಡಿಕೆಯಾಯಿತು. ಮುಂದೆ ದಕ್ಷಿಣ ಭಾರತ ಚಲನಚಿತ್ರ ಮಂಡಳಿ ಹಾಗೂ ಅಖಿಲ ಭಾರತ ಚಲನಚಿತ್ರ ಒಕ್ಕೂಟದ ಅಧ್ಯಕ್ಷನಾದೆ. ಸೆನ್ಸಾರ್ ಮಂಡಳಿ ಸದಸ್ಯನಾದೆ. ಈ ಎಲ್ಲ ಅವಕಾಶಗಳು ಕರ್ನಾಟಕದ ವ್ಯಕ್ತಿಗೆ ಸಿಕ್ಕಿದ್ದು ಅದೇ ಮೊದಲ ಸಲ.

ಅಂದಹಾಗೆ, ಚಿತ್ರರಂಗದ ನಂಟು ನನಗೆ ಬಾಲ್ಯದಿಂದಲೇ ಸಿಕ್ಕಿತ್ತು. ನನ್ನ ಚಿಕ್ಕಪ್ಪ ಮೂಲ ಲಕ್ಷ್ಮೀನಾರಾಯಣ ಸ್ವಾಮಿ, 1930ರಲ್ಲಿ ಮದ್ರಾಸಿನಲ್ಲಿ ಸ್ಟುಡಿಯೋ ಸ್ಥಾಪಿಸಿದ್ದರು. ನನ್ನ ತಂದೆಗೂ ಚಿತ್ರೋದ್ಯಮದ ಜತೆ ನಂಟು ಇತ್ತು. ಅದರಿಂದ ನನಗೆ ಸಿನಿಮಾಲೋಕ ಪರಿಚಯವಾಯಿತು. ಎಲ್ಲ ಭಾಷೆಯ ಚಿತ್ರರಂಗಗಳ ಬಹುತೇಕ ಹಿರಿಯರು ನನಗೆ ಪರಿಚಿತರು. ನಾನು ಹಲವು ಚಿತ್ರಗಳನ್ನು ನಿರ್ಮಿಸಿದೆ. ಅದಕ್ಕಿಂತ ಹೆಚ್ಚು ಚಿತ್ರ ವಿತರಣೆ ಮಾಡಿದೆ.

ಹೊಸ ಅಲೆಗೆ ಪ್ರೇರಣೆ
ಸಿನಿಮಾ ಅಂದರೆ ಜನರನ್ನು ತಲುಪುವ ಸಶಕ್ತ ಮಾಧ್ಯಮ. ನಾನು ಮಂಡಳಿ ಅಧ್ಯಕ್ಷನಾದ ಬಳಿಕ ನಿರ್ಮಾಪಕರನ್ನು ಆಹ್ವಾನಿಸಿ, ಹೊಸ ಬಗೆಯ ಚಿತ್ರ ನಿರ್ಮಾಣಕ್ಕೆ ಉತ್ತೇಜನ ನೀಡಿದೆ. ಅಲ್ಲಿವರೆಗೆ ಇತರ ಭಾಷೆ ಚಿತ್ರಗಳನ್ನೇ ಅನುಕರಿಸುವ ಚಾಳಿ ಇತ್ತು. ‘ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಅದನ್ನು ಆಧರಿಸಿ ಸಿನಿಮಾ ಮಾಡಿ’ ಎಂದು ಮನವಿ ಮಾಡಿದೆ. ಒಳ್ಳೆಯ ಕಥೆ, ಕಾದಂಬರಿ ಆಧರಿತ ಸಿನಿಮಾಕ್ಕೆ ಉತ್ತೇಜನ ನೀಡಿದೆ. ‘ಸಂಸ್ಕಾರ’, ‘ಕಾಡು’, ‘ವಂಶವೃಕ್ಷ’ದಂಥ ಹೊಸ ಅಲೆಯ ಸಿನಿಮಾಗಳನ್ನು ನಾನೇ ವಿತರಿಸಿದೆ. ಈ ಸಿನಿಮಾಗಳಿಂದಾಗಿ ಭಾರತೀಯ ಚಿತ್ರರಂಗ ಕನ್ನಡದತ್ತ ನೋಡುವಂತಾಯಿತು.

ನನಗೆ ಆಗ ಅದಮ್ಯ ಉತ್ಸಾಹವಿತ್ತು. ಅಂದಿನ ದಿನಗಳಲ್ಲಿ ಕೆಎಫ್‌ಸಿಸಿ ‘ಥಿಂಕರ್ಸ್ ಅಂಡ್ ಮೇಕರ್ಸ್’ ಸಂಗಮ ತಾಣವಾಗಿತ್ತು. ಅದರಿಂದಾಗಿಯೇ ‘ಚಂದವಳ್ಳಿ ತೋಟ’, ‘ಸಂಧ್ಯಾರಾಗ’, ‘ಹಸಿರುತೋರಣ’, ‘ಮುಕ್ತಿ’ ಇತ್ಯಾದಿ ಹೊಸಬಗೆಯ ಸಿನಿಮಾ ಬಂದವು. ಆ ಥರದ ವಾತಾವರಣವನ್ನು ರೂಪಿಸಿದ ಸಂತಸ ನನ್ನದು.

ಸಿನಿಮಾದಲ್ಲಿ ಏನಿರಬೇಕು?
ಹಾಡು, ನೃತ್ಯ, ಉಡುಗೆ–ತೊಡುಗೆ ಅದ್ದೂರಿಯಾಗಿದ್ದರೆ ಚಿತ್ರ ಯಶಸ್ವಿಯಾಗಬಹುದು ಎನ್ನುತ್ತಾರೆ. ಆದರೆ ಬಹು ಮುಖ್ಯವಾಗಿ ಬೇಕಾದ್ದು, ಚಿತ್ರಕಥೆ. ಅದರಲ್ಲಿ ತಾಕತ್ತು ಇಲ್ಲದೇ ಹೋದರೆ ಸಿನಿಮಾ ಸಫಲವಾಗದು. ಈಗ ಎಲ್ಲರೂ ಮಾಡುತ್ತಿರುವುದು ಹಿಂದಿ ಚಿತ್ರಗಳ ಅನುಕರಣೆಯಷ್ಟೇ! ಏನೇ ಮಾಡಿದರೂ ಹಿಂದಿ ಚಿತ್ರದೊಂದಿಗೆ ಸ್ಪರ್ಧಿಸಲು ಅಸಾಧ್ಯ. ನಾವು ಮಾಡುತ್ತಿರುವುದು ಹಿಂದಿ ಬಡ ಸಿನಿಮಾ! ಈ ಬಡ ಸಿನಿಮಾದ ಬದಲಿಗೆ ಪ್ರೇಕ್ಷಕ ಹಿಂದಿ ಚಿತ್ರ ನೋಡುತ್ತಾನೆ. ಇನ್ನು ಕೆಲವರು ‘ಪ್ರೇಕ್ಷಕರ ಅಭಿರುಚಿ ಬದಲಾಗಿದೆ’ ಎಂದು ದೂರುತ್ತಾರೆ. ಇಲ್ಲ. ಅವರ ಅಭಿರುಚಿ ಬದಲಾಯಿಸಲು ನಮಗೆ ಸಾಧ್ಯವಿಲ್ಲ. ಬದಲಾಗಿ ಪ್ರೇಕ್ಷಕನ ಅಭಿರುಚಿ ಏನೆಂಬುದನ್ನು ಚಿತ್ರರಂಗವೇ ಮರೆತುಬಿಟ್ಟಿದೆ. ಬರೀ ನಕಲು ಮಾಡುವತ್ತ ಗಮನಹರಿಸಲಾಗುತ್ತಿದೆ. ಹೀಗಾಗಿ ಕಳಪೆ ಉತ್ಪನ್ನ ಕೊಡುತ್ತಿದ್ದೇವೆ. ಇದನ್ನು ನೋಡಲು ಪ್ರೇಕ್ಷಕ ಬರುತ್ತಾನೆಯೇ? ಇದೇ ಸಮಸ್ಯೆ. ಇದು ನಮಗೆ ನಾವೇ ಸ್ವಯಂ ಕೆರೆದುಕೊಂಡು ಮಾಡಿಕೊಂಡ ಗಾಯ!

ವೈಫಲ್ಯಕ್ಕೆ ಕಾರಣ
ಶೇಕಡ 98ರಷ್ಟು ಕನ್ನಡ ಸಿನಿಮಾಗಳು ಸೋಲು ಕಾಣುತ್ತಿವೆ. ಇದಕ್ಕೆ ಕಾರಣಗಳು ಹಲವು. ಮೂರ್ನಾಲ್ಕು ಸಿನಿಮಾಗಳಿಂದ ಬೇಕೆನಿಸುವ ಅಂಶ ಕದ್ದು, ಸಿನಿಮಾ ಮಾಡುತ್ತಾರೆ. ಇದರಿಂದ ಕ್ರಿಯಾಶೀಲತೆ ಹಾಳಾಗುತ್ತಿದೆ. ಒಂದೆಡೆ ನಕಲು ಮಾಡುವ ‘ಕಮರ್ಷಿಯಲ್‘; ಇನ್ನೊಂದೆಡೆ ಜನರನ್ನು ತಲುಪಲು ವಿಫಲವಾದ ಆದರೆ ಪ್ರಶಸ್ತಿ ತರುವ ‘ಕಲಾತ್ಮಕ’ ಸಿನಿಮಾಗಳು! ಜನರನ್ನು ತಲುಪದ ಕಲೆ ವ್ಯರ್ಥ. ಜನರೊಡನೆ ಕಲೆ ಸಂವಹನ ನಡೆಸಬೇಕು. ಸಂವಹನ ನಡೆಸದೇ ಹೋದರೆ ಸಿನಿಮಾದ ಉದ್ದೇಶವೇನು? ಸಿನಿಮಾ ಚಲನಶೀಲವಾಗಿರಬೇಕು, ಅದು ಹೇಳುವ ಕಥೆಯನ್ನು ಪ್ರೇಕ್ಷಕ ಆಸಕ್ತಿಯಿಂದ ಕೇಳಬೇಕು. ಕಲಾತ್ಮಕ ಸಿನಿಮಾದಲ್ಲಿ ಲವಲವಿಕೆ ಇರುವುದಿಲ್ಲ. ಕಮರ್ಷಿಯಲ್ ಸಿನಿಮಾ ಬರೀ ನಕಲು. ಸಿನಿಮಾಗಳು ಸೋಲಲು ಇದೇ ಕಾರಣ.

ಮಲೆಯಾಳಂ ಚಿತ್ರರಂಗ ನೋಡಿ... ಕೆಲವು ಸಿನಿಮಾ ಹೊರತುಪಡಿಸಿದರೆ ಉಳಿದೆಲ್ಲ ಚಿತ್ರಗಳ ಕಥೆ, ನಿರ್ದೇಶನ ವಿಭಿನ್ನವಾಗಿ ಇರುತ್ತದೆ. ಅದನ್ನು ಬಿಟ್ಟು ನಮ್ಮಲ್ಲಿ ಫಾರ್ಮುಲಾ ಬೆನ್ನತ್ತಿ ಹೋಗುತ್ತಾರೆ. ಅದಂತೂ ದರಿದ್ರ! ಕುಟುಂಬದೊಡನೆ ಹೋಗಿ ಕೂತು ನೋಡುವಂಥ ಚಿತ್ರ ಮಾಡುವುದೇ ಇಲ್ಲ. ಕೊನೆಗೆ ‘ಪ್ರೇಕ್ಷಕರು ಸಿನಿಮಾ ನೋಡುವುದಿಲ್ಲ’ ಅಂತ ದೂರುತ್ತಾರೆ. ಇದು ನಾನ್‌ಸೆನ್ಸ್‌ ಅಷ್ಟೇ!

ಅನುಭವ ಸಾಕಷ್ಟಿದೆ...
ನಾನು ಕೆಎಫ್‌ಸಿಸಿ ಅಧ್ಯಕ್ಷನಾಗಿದ್ದಾಗ ಹೆಸರಘಟ್ಟದಲ್ಲಿ ಫಿಲ್ಮ್‌ಸಿಟಿ ಪ್ರಸ್ತಾಪ ರೂಪುಗೊಂಡಿತು. ಅದಾದ ಮೇಲೆ ಎಷ್ಟೋ ಮುಖ್ಯಮಂತ್ರಿಗಳು ಬಂದರು; ಹೋದರು. ಆಶ್ವಾಸನೆ ಕೊಡುವುದನ್ನು ಬಿಟ್ಟರೆ ಏನೂ ಆಗಿಲ್ಲ. ಚಲನಚಿತ್ರ ಅಕಾಡೆಮಿ ಇದೆ. ಅದಕ್ಕೆ ಶಕ್ತಿಯಿಲ್ಲದ ಕಾರಣ, ಹೆಚ್ಚೇನೂ ನಿರೀಕ್ಷಿಸುವಂತಿಲ್ಲ ಎಂಬಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಸತ್ಯಜಿತ್‌ ರೇ ಆರಂಭಿಸಿದ ‘ನಂದನ್’ ಮಾದರಿಯಲ್ಲಿ ಸಂಸ್ಥೆಯೊಂದು ಇಲ್ಲಿ ಸ್ಥಾಪನೆಯಾಗಬೇಕು ಅಂತ ಪ್ರಯತ್ನಿಸಿದೆ. ಆದರೆ ಆಗಲೇ ಇಲ್ಲ. ಹೊಸ ಪೀಳಿಗೆಯ ನಟ, ನಿರ್ದೇಶಕರನ್ನು ಒಳ್ಳೆಯ ಚಿತ್ರಗಳತ್ತ ಕೊಂಡೊಯ್ಯುವ ಪ್ರಯತ್ನ ನಡೆದರೆ, 80ರ ದಶಕದಂತೆ ಹೊಸ ಅಲೆ ಚಿತ್ರಗಳು ಮತ್ತೆ ಬರಬಹುದು.

ಆದರೆ ಈಗ ಅದೆಲ್ಲ ಆಗುತ್ತಿಲ್ಲ ಎಂಬುದೇ ನನ್ನ ನೋವು. ಸಿನಿಮಾಕ್ಕೆ ಯಾವುದೇ ಅರ್ಹತೆ ಬೇಕಿಲ್ಲ. ಯಾವುದೇ ಹಿನ್ನೆಲೆಯವರು ಈ ಲೋಕಕ್ಕೆ ಬರಬಹುದು. ಗುತ್ತಿಗೆದಾರ, ರಿಯಲ್ ಎಸ್ಟೇಟ್‌ನವರು ಈಗ ದೊಡ್ಡ ಸಂಖ್ಯೆಯಲ್ಲಿ ಬಂದುಬಿಟ್ಟಿದ್ದಾರೆ. ಜನರನ್ನು ಉತ್ತಮ ಚಿಂತನೆಯತ್ತ ಪ್ರೇರೇಪಿಸುವ ಚಿತ್ರರಂಗವು ಕಪ್ಪುಹಣ ಹೂಡಿಕೆಗೆ ಒಳ್ಳೆಯ ತಾಣವಾಗಿ ಪರಿಣಮಿಸಿದೆ.

ಚಾರಣ ಬಲು ಇಷ್ಟ
ಐದು ದಶಕಕ್ಕೂ ಹೆಚ್ಚು ಕಾಲ ಸಿನಿಮಾ ಲೋಕದಲ್ಲಿರುವ ನನಗೆ ಚಾರಣವೆಂದರೆ ಬಲು ಇಷ್ಟ. ಯೂರೋಪ್, ಮೆಕ್ಸಿಕೋ, ಲ್ಯಾಟಿನ್ ಅಮೆರಿಕ, ಅರ್ಜೆಂಟೀನಾ, ಬ್ರೆಝಿಲ್, ಪೆರು, ಭೂತಾನ್, ಅಮೆರಿಕ, ಇಂಡೋನೇಷ್ಯಾ, ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಇತ್ಯಾದಿ ದೇಶಗಳನ್ನು ಸುತ್ತಿದ್ದೇನೆ. ಹತ್ತು ವರ್ಷಗಳ ಹಿಂದೆ ಕಾಲು ನೋವು ಶುರುವಾಗುವವರೆಗೂ ಹಿಮಾಲಯದಲ್ಲಿ ಪ್ರತಿ ವರ್ಷ ಚಾರಣ ಮಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT