ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ವಿವಿಧ ಮಾರ್ಗ

ಬೆಳದಿಂಗಳು
Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಪೂಜೆ, ಪ್ರಾರ್ಥನೆ ಅಥವಾ ಯಾವುದಾದರೊಂದು ಬಗೆಯ ಆರಾಧನಾ ವಿಧಾನವನ್ನು ಅಳವಡಿಸಿಕೊಳ್ಳುವುದು ಮನುಷ್ಯನಿಗೆ ಅಗತ್ಯವೇ? ಇಂಥದ್ದೊಂದು ಪ್ರಶ್ನೆಯನ್ನು ಇತ್ತೀಚೆಗೆ ಕೆಲವರು ಭಿನ್ನ ಸಂದರ್ಭಗಳಲ್ಲಿ ಕೇಳಿದರು. ಈ ಪ್ರಶ್ನೆಗಳ ಹಿನ್ನೆಲೆ ಸರಳ. ಬೆಳಿಗ್ಗೆ ಯಾವುದೇ ಕೆಲಸಕ್ಕೆ ತೊಡಗುವ ಮೊದಲು ದೇವರಿಗೆ ನಮಸ್ಕಾರ ಹಾಕಬೇಕೇ.

ಹಾಗೆ ಮಾಡಿದರೆ ಮಾತ್ರ ಭಕ್ತಿಯೇ ಎಂಬುದನ್ನು ಈ ಬಗೆಯಲ್ಲಿ ಕೇಳುತ್ತಿದ್ದರು. ಇದಕ್ಕೆ ಕಾರಣವಿಲ್ಲದೇ ಇಲ್ಲ. ಕೆಲವರಿಗೆ ದೇವರು ನೆನಪಾಗುವುದು ಕೆಲವೇ ಸಂದರ್ಭಗಳಲ್ಲಿ.

ವಿದ್ಯಾರ್ಥಿಗಳಾದರೆ ಪರೀಕ್ಷೆ ಸಂದರ್ಭದಲ್ಲಿ. ದೊಡ್ಡವರಾದರೆ ಅವರ ಬದುಕಿನಲ್ಲಿ ಅವರ ನಿಯಂತ್ರಣದಲ್ಲಿ ಇಲ್ಲದೇ ಇರುವ ಏನೋ ಒಂದು ಸಂಭವಿಸುತ್ತದೆ ಎಂದು ತಿಳಿದಿರುವ ದಿನ.

ಇಂಥ ಸಂದರ್ಭಗಳು ನಮಗೆ ಪ್ರತಿಕ್ಷಣವೂ ಎದುರಾಗುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದರೆ ದೇವರನ್ನು ಹೇಗೆ ಆರಾಧಿಸಬೇಕು ಎಂಬ ಪ್ರಶ್ನೆಯೇ ಕಾಡುತ್ತಿರಲಿಲ್ಲವೇನೋ? ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳಿಗೆ ನಮಗೆ ಉತ್ತರ ಗೊತ್ತಿರುವಂತೆ ದೇವರು ಮಾಡಲಿ ಎಂದು ಪ್ರಾರ್ಥಿಸುವಂತೆಯೇ ಮುಂದಿನ ಕ್ಷಣದಲ್ಲಿ ಎದುರಾಗಲಿರುವ ಆಶ್ಚರ್ಯಕ್ಕೆ ನನ್ನನ್ನು ಸಿದ್ಧಪಡಿಸು ಎಂದು ದೇವರನ್ನು ನಾವು ಯಾವತ್ತೂ ಕೇಳಿಕೊಂಡಿರುವುದಿಲ್ಲ.

ನಿಜವಾದ ಅಧ್ಯಾತ್ಮ ಹೀಗೆ ಅವಕಾಶವಾದಿಯಾಗಿರುವುದಿಲ್ಲ. ಅದು ಬಹಳ ಸ್ಪಷ್ಟವಾಗಿರುತ್ತದೆ. ದೇವರು ಇದ್ದಾನೆಂದು ಭಾವಿಸಿರುವ ಅಧ್ಯಾತ್ಮವೂ ಅಷ್ಟೇ. ದೇವರನ್ನು ನಿರಾಕರಿಸುವ ಅಧ್ಯಾತ್ಮವೂ ಅಷ್ಟೇ. ಪ್ರಾರ್ಥಿಸುವುದು ಅಥವಾ ಪ್ರಾರ್ಥಿಸದೇ ಇರುವುದನ್ನು ಇದು ಯಾವುದೇ ಸಂಶಯವಿಲ್ಲದೆ ಸಹಜವಾಗಿ ಮಾಡುವುದಕ್ಕೆ ನಿಜವಾದ ಅಧ್ಯಾತ್ಮವಾದಿಗಳಿಗೆ ಗೊತ್ತಿರುತ್ತದೆ.

ಇದರ ಅರ್ಥವೇನು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ವಾಸ್ತವದಲ್ಲಿ ದೇವರು ಭಕ್ತರ ಪ್ರಾರ್ಥನೆಯನ್ನು ನಿರೀಕ್ಷಿಸುವವನೇನೂ ಅಲ್ಲ. ಪ್ರಾರ್ಥನೆ ಅಥವಾ ಪೂಜೆ ಎಂಬುದು ಭಕ್ತ ತನ್ನ ಬದ್ಧತೆಯನ್ನು ತನಗೆ ತಾನೇ ಖಾತರಿ ಪಡಿಸಿಕೊಳ್ಳಲು ಅಳವಡಿಸಿಕೊಂಡಿರುವ ಒಂದು ವಿಧಾನ.

ಇದು ಬೇಡ ಎಂದಾದರೆ ಮತ್ತೊಂದು ವಿಧಾನದ ಮೂಲಕ ಆತ ತನ್ನ ಭಕ್ತಿಯನ್ನು ಖಾತರಿ ಪಡಿಸಿಕೊಳ್ಳಲು ಸಾಧ್ಯವಿದೆ. ದೇವರನ್ನು ನಿರಾಕರಿಸುವವರೂ ಅಷ್ಟೇ. ಪ್ರಾರ್ಥಿಸದೇ ಇರುವ ಮೂಲಕ ಅವರು ನಿರಾಕರಣೆಯನ್ನು ಖಚಿತ ಪಡಿಸಿಕೊಳ್ಳುತ್ತಿರುತ್ತಾರೆ.

ಈ ಹಿಂದೊಮ್ಮೆ ವಿವರಿಸಿದಂತೆ ಆರಾಧನೆಗೆ ಒಬ್ಬೊಬ್ಬರೂ ತಮ್ಮದೇ ಮಟ್ಟದಲ್ಲಿ ತಮ್ಮದೇ ಆದ ವಿಧಾನಗಳನ್ನೂ ಕಂಡುಕೊಂಡಿರಬಹುದು. ಬೇಡರ ಕಣ್ಣಪ್ಪನ ಕಥೆ ಕೇವಲ ಒಂದು ರೂಪಕವಷ್ಟೇ ಆಗಿರಬೇಕಿಲ್ಲ. ಅದೊಂದು ನಿಜ ಭಕ್ತಿಯ ಉದಾಹರಣೆಯೂ ಆಗಬಹುದು.

ಶ್ರೀನಿವಾಸನ ಜೊತೆ ಪಗಡೆಯಾಡುವ ಕಥೆಯೂ ಅಷ್ಟೇ. ಇವೆಲ್ಲವೂ ಭಕ್ತ ಮತ್ತು ದೇವರ ನಡುವಣ ಸಂಬಂಧ ಒಂದಕ್ಕೊಂದು ಬೇರ್ಪಡದೆ ಒಂದೇ ಆಗಿಬಿಡುವುದನ್ನು ಕಥನ ರೂಪದಲ್ಲಿ ಹೇಳುವ ಪ್ರಯತ್ನವಷ್ಟೇ.

ನಾವೆಲ್ಲರೂ ಪ್ರಕೃತಿಯಲ್ಲಿ ಒಂದಾಗಿ ಹೋಗುವವರು ಎಂಬುದನ್ನು ನಾಸ್ತಿಕರೂ ನಿರಾಕರಿಸಲಾರರು. ಪ್ರಕೃತಿಯ ವಿರುದ್ಧ ನಿಂತರೂ, ಅದರ ಜೊತೆ ಜೊತೆಗೇ ನಡೆದರೂ ಒಂದಾಗುವುದರಲ್ಲಂತೂ ಸಂಶಯವಿಲ್ಲ. ಪ್ರಕೃತಿಯಲ್ಲಿರುವ ಇತರ ಜೀವಿಗಳನ್ನು ಅರಿತು ಸಹಜ ಹಾದಿಯಲ್ಲಿ ಸಾಗುವುದೂ ಒಂದು ರೀತಿಯ ಭಕ್ತಿಯೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT