ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಪ್ರಯತ್ನ ಮಾಡೋಣ

ಕಲಿಕಾ ಮಾಧ್ಯಮ ಜಾರಿ : ಸಚಿವ ಅನಂತ ಕುಮಾರ್ ಅಭಿಪ್ರಾಯ
Last Updated 29 ಮಾರ್ಚ್ 2015, 20:09 IST
ಅಕ್ಷರ ಗಾತ್ರ

ಬೆಂಗಳೂರು:  ‘ನಮ್ಮ ಭಾಷಾ ಸಂಸ್ಕೃತಿ ಮತ್ತು ದೇಸೀಯ ಭಾಷೆಗಳು ಉಳಿಯ ಬೇಕಾದರೆ ಮಾತೃಭಾಷೆಯೇ ಕಲಿಕೆಯ ಮಾಧ್ಯಮವಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಜಾರಿಗೆ ತರಲು ನಾವೆಲ್ಲ ಭಗೀರಥ ಪ್ರಯತ್ನ ಮಾಡೋಣ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶ್ವಕನ್ನಡಿಗರ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಮಾತೃಭಾಷೆ ಕಲಿಕೆಯ ಮಾಧ್ಯಮ ವಾಗಬೇಕು ಎಂಬ ವಿಚಾರದಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾಗಳ ನಡುವೆ ಭಿನ್ನಾಭಿಪ್ರಾಯಗಳಿಲ್ಲ. ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ರಾಷ್ಟ್ರೀಯ ಭಾವೈಕ್ಯ  ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಿ. ನಾನು ಕೂಡಾ ಪ್ರಧಾನಿ, ಗೃಹ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿ ಮನವೊಲಿ ಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ‘ಕಲಿಕಾ ಮಾಧ್ಯಮ ವಿಚಾರವಾಗಿ ಕೇಂದ್ರದ ವರಿಷ್ಠರ ಜತೆ ಚರ್ಚಿಸುತ್ತೇನೆ. ಈ ಸಮಸ್ಯೆಗೆ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳೋಣ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಮಾತನಾಡಿ, ‘ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರದ ನಿಲುವು ಅಚಲವಾಗಿದೆ. ಅಗತ್ಯ ಬಿದ್ದರೆ ಸರ್ಕಾರ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ‘ವಿಶ್ವಮಾನವ ರಾಷ್ಟ್ರಕವಿ ಕುವೆಂಪು’, ಪತ್ರಕರ್ತ ರಂಜಾನ್‌ ದರ್ಗಾ ಅವರಿಗೆ ‘ಜಗಜ್ಯೋತಿ ಶ್ರೀ ಬಸವೇಶ್ವರ’, ನಟಿ ಬಿ.ಸರೋಜಾದೇವಿ ಅವರಿಗೆ ‘ವರನಟ ಡಾ.ರಾಜ್‌ಕುಮಾರ್’, ಜನಪದ ಕಲಾ ವಿದೆ ಸುಕ್ರಿ ಬೊಮ್ಮಗೌಡ ಅವರಿಗೆ ‘ಎಸ್‌.ಕೆ.ಕರೀಂ ಖಾನ್’, ಪತ್ರಕರ್ತ ಕೆ.ಸತ್ಯ ನಾರಾಯಣ ಅವರಿಗೆ ‘ಕೆ.ಶ್ಯಾಮರಾವ್‌’, ಹಿರಿಯ ರಾಜಕಾರಣಿ ಎಂ.ವಿ.ರಾಜ ಶೇಖರನ್‌ ಅವರಿಗೆ ‘ಶಾಂತವೇರಿ ಗೋಪಾಲಗೌಡ’ ಮತ್ತು ರೈತಪರ ಹೋರಾಟಗಾರ ಕೆ.ಟಿ.ಗಂಗಾಧರ  ಅವರಿಗೆ ‘ಪ್ರೊ.ಎಂ.ಡಿ.ನಂಜುಂಡಸ್ವಾಮಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳು ತಲಾ ಪ್ರಜಾವಾಣಿ ವಾರ್ತೆ 50 ಸಾವಿರ ನಗದು ಪುರಸ್ಕಾರ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT