ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಟರ ಲೆಕ್ಕ, ಕುಮಾರನ ಮಗ್ಗಿ!

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ನಿರ್ದೇಶಕ ಯೋಗರಾಜ ಭಟ್ಟರು ಗಾಂಧಿನಗರದಲ್ಲಿ ಸಿನಿಮಾ ಹಂಚಿಕೆದಾರ ಕಚೇರಿ ತೆರೆದು ಗುಣಾಕಾರ–ಭಾಗಾಕಾರದ ಗಣಿತ ಬಿಡಿಸಲು ಆಯ್ಕೆ ಮಾಡಿಕೊಂಡ ಮೊದಲ ಸಿನಿಮಾ ‘ಎರಡೊಂದ್ಲಾ ಮೂರು’. ಕಚೇರಿ ತೆರೆದ ವಾರಕ್ಕೆ ಈ ಅಂಕ–ಗಣಿತದ ಸಿನಿಮಾವನ್ನು ಅವರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅಂದಹಾಗೆ, ಏನಿದೆ ಈ ಅಂಕಿಯ ಸಿನಿಮಾದೊಳಗೆ ಮರ್ಮ ಎಂದು ಅನೇಕರು ಹುಬ್ಬೇರಿಸಿದ್ದಾರೆ. ಭಟ್ಟರು ‘ಅದೇನು ನೋಡಿ ಈ ಸಿನಿಮಾ ತೆಗೆದುಕೊಂಡರು’ ಎನ್ನುವ ಕುತೂಹಲಕ್ಕೆ ಇಂದು (ಮೇ.22) ತೆರೆಗೆ ಬರುತ್ತಿರುವ ‘ಎರಡೊಂದ್ಲಾ ಮೂರು’ ಉತ್ತರದಂತಿದೆ.

ಭಟ್ಟರು ಈ ಚಿತ್ರದ ಬಗ್ಗೆ ಭರವಸೆ ಹೊಂದಲಿಕ್ಕೆ ಬೇಕಾದಷ್ಟು ಕಾರಣಗಳಿವೆ ಎನ್ನುತ್ತಾರೆ ನಿರ್ದೇಶಕ ಕುಮಾರ್. ಅವರ ನಿರೂಪಣಾ ಶೈಲಿ, ಸಂಭಾಷಣೆ, ಬರವಣಿಗೆ ಮತ್ತು ಕೆಲಸದ ಬಗೆಗಿನ ನಂಬಿಕೆ ಇವೆಲ್ಲವೂ ಭಟ್ಟರಿಗೆ ಇಷ್ಟವಾಗಿಯಂತೆ.

ಅಂದಹಾಗೆ ಗಡಿಭಾಗದ ಚಿಕ್ಕೋಡಿ ತಾಲ್ಲೂಕಿನ ಕುಮಾರ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು, ತದನಂತರ ಗಾಂಧಿನಗರದ ಪಡಸಾಲೆಗೆ ಬಿದ್ದವರು. ಇದು ಅವರ ಅದೃಷ್ಟ ಪರೀಕ್ಷೆಯೋ–ನಿರೀಕ್ಷೆಯೋ ಗೊತ್ತಿಲ್ಲ. ಆದರೆ ಒಂದಿಷ್ಟು ಮಂದಿ ಪ್ರೇಕ್ಷಕರು ಮಾತ್ರ ಈ ಗಡಿಭಾಗದ ಹುಡುಗನನ್ನು ಒಪ್ಪಿಕೊಳ್ಳುತ್ತಾರೆ, ಅಪ್ಪಿಕೊಳ್ಳುತ್ತಾರೆ ಎನ್ನುವ ಆಶಾವಾದ ಅವರ ಮಾತುಗಳಲ್ಲಿದೆ.

‘ಪತ್ರಿಕೋದ್ಯಮ ಓದಿದೆ. ಕಾಲೇಜು ದಿನಗಳಿಂದಲೇ ಸಿನಿಮಾ ಅಂದ್ರೆ ಇಷ್ಟ. ಕಥೆ–ಸಾಹಿತ್ಯ ಬರೆಯುತ್ತಿದ್ದೆ. ನಿರ್ದೇಶನದ ಆಸೆಯೂ ಇತ್ತು. ‘ಈ ಟೀವಿ’ ಕನ್ನಡ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಸ್ಕ್ರಿಫ್ಟ್ ಮಾಡಿದೆ. ‘ಮಾಮೂ ಟೀ ಅಂಗಡಿ’ ಸಿನಿಮಾದಲ್ಲಿ ಕೆಲಸ ಮಾಡಿದೆ. ನಿರ್ದೇಶಕ ನಂದಕಿಶೋರ್ ಅವರ ಬಳಿಯೂ ನಾಲ್ಕು ತಿಂಗಳು ಚಿತ್ರಕತೆ–ನಿರ್ದೇಶನ ಎಂದು ಕಲಿತೆ. ಆ ಸಮಯಲ್ಲಿಯೇ ಒಂದು ಕಥೆ ಮಾಡಿದ್ದೆ.

ನಂದಕಿಶೋರ್ ಆಕ್ಷನ್ ಕಟ್ ಹೇಳಲು ಒಲವು ತೋರಿದ್ದರು. ಅವರು ಮತ್ತೊಂದು ಚಿತ್ರದಲ್ಲಿ ಬಿಜಿಯಾದರು. ನಾನೂ ಮತ್ತೊಂದಿಷ್ಟು ಚಿತ್ರಕಥೆಗಳಲ್ಲಿ ತೊಡಗಿದೆ. ಆ ಯೋಜನೆ ಅರ್ಥಕ್ಕೆ ನಿಂತಿತು. ನನ್ನ ಸ್ನೇಹಿತರನ್ನಿಟ್ಟುಕೊಂಡು ಸಣ್ಣ ಕ್ಯಾಮೆರಾದಲ್ಲಿ ಇದೇ ಕಥೆಯನ್ನು ಶೂಟ್ ಮಾಡಿದ್ದೆ. ಆ ಕಥೆಯನ್ನೇ ಈಗ ಎರಡೊಂದ್ಲಾ ಮೂರು ಚಿತ್ರವಾಗಿ ಬೆಳೆಸಿದೆವು’ ಎಂದು ಸಿನಿಮಾದ ಅಂಕಿ–ಎಣಿಕೆ ಬಗ್ಗೆ ಕುಮಾರ್ ಹೇಳುತ್ತಾರೆ.

ಚಿತ್ರದಲ್ಲಿ ಪ್ರೇಮಕಥೆಯೇ ಇದ್ದರೂ ನಿರೂಪಣಾ ಕ್ರಮ ಮತ್ತು ಸಂಭಾಷಣೆ ಹೊಸತಾಗಿದೆ ಎನ್ನುವ ಅನಿಸಿಕೆ ಅವರದು. ಈ ವಿಶ್ವಾಸ ಭಟ್ಟರಿಗೂ ಬಂದಿದ್ದರಿಂದಲೇ ಚಿತ್ರದ ಮೇಲೆ ಅವರಿಗೆ ಪ್ರೀತಿ ಹುಟ್ಟಿದೆ.

‘ಸಾಮಾನ್ಯವಾಗಿ ನಾಲ್ಕು ಹುಡುಗ ಹುಡುಗಿಯರ ಜತೆ ಲವ್‌, ದ್ವೇಷ ಇದಕ್ಕೊಂದಿಷ್ಟು ಉಪ್ಪು–ಕಾರ–ಮಸಾಲೆ ಬೆರೆಸಿ ಸಿನಿಮಾ ಮಾಡುತ್ತೇವೆ. ಇದು ಒಂದು ಬಗೆ ಅಷ್ಟೇ.  ಹುಡುಗ ಹುಡುಗಿ ನಡುವೆ ಉತ್ತಮ ಸ್ನೇಹ ಯಾವ ರೀತಿ ಇರುತ್ತದೆ. ಅಲ್ಲಿ ಪ್ರೀತಿ ಇರುವಂತೆ ಹೊಟ್ಟೆಕಿಚ್ಚು ಸಹ ಇರುತ್ತದೆ. ಸುಮಧುರ ಸಂಗೀತದಂತೆ ಚಿತ್ರ ಸಾಗುತ್ತದೆ. ಯೋಗರಾಜ ಭಟ್ಟರು ಟೈಟಲ್‌ ಟ್ರಾಕ್‌ನಲ್ಲಿ ನಿರೂಪಣೆ ಮಾಡಿದ್ದಾರೆ. ಚಿತ್ರಕಥೆ ಮತ್ತು ನನ್ನ ಬರವಣಿಗೆಯನ್ನು ಅವರು ಮೆಚ್ಚಿಕೊಂಡಿದ್ದಾರೆ. ರಾಹುಕಾಲದಲ್ಲಿ ಎನ್ನುವ ಗೀತೆ ಕೂಡ ಅವರಿಗಿಷ್ಟವಾಗಿದೆ’ ಎನ್ನುತ್ತಾರೆ ಕುಮಾರ್.

‘ಸಿನಿಮಾದ ಶೀರ್ಷಿಕೆಗೂ ಕಥೆಗೂ ಸಂಬಂಧ ಇದೆ. ‘ಎರಡೊಂದ್ಲಾ ಮೂರು’ ಹೇಗೆ ಎನ್ನುವುದು ಪ್ರೇಕ್ಷಕರಿಗೆ ಕಥೆಯಲ್ಲಿ ಸಿಕ್ಕುತ್ತದೆ. ಹಿಂದಿ ಸಿನಿಮಾ ಮಾದರಿಯಲ್ಲಿ ಹಾರರ್ ಬಳಕೆಯಾಗಿದೆ. ಕಥೆ ಮಾಡಿಕೊಂಡಾಗಲೇ ತಾಂತ್ರಿಕತೆಯಲ್ಲೂ ಗುಣಮಟ್ಟ ಇರಬೇಕು ಎಂದುಕೊಂಡವನು ನಾನು. ಆ ಹಾದಿಯಲ್ಲೇ ಸಾಗಿದ್ದೇವೆ’ ಎಂದು ಕುಮಾರ್‌ ತಮ್ಮ ಸಿನಿಮಾವನ್ನು ಬಣ್ಣಿಸುತ್ತಾರೆ.

ಭೈರಪ್ಪ ಶೈಲಿಯ ಪ್ರಭಾವ
ಸಾಹಿತ್ಯ ಪ್ರೀತಿಯ ಕುಮಾರ್, ‘ಎರಡೊಂದ್ಲಾ ಮೂರು’ ಚಿತ್ರದಲ್ಲಿ ಸಾಹಿತ್ಯಕ್ಕೆ ಒತ್ತು ನೀಡಿದ್ದಾರಂತೆ. ಅದರಲ್ಲೂ ಯಂಡಮೂರಿ ವೀರೇಂದ್ರನಾಥ್ ಮತ್ತು ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳಲ್ಲಿನ ಕಥೆ ಹೇಳುವ ಶೈಲಿಯನ್ನು ಅವರು ಬಳಸಿಕೊಂಡಿದ್ದಾರಂತೆ.

‘ವೀರೇಂದ್ರನಾಥ್ ಮತ್ತು ಭೈರಪ್ಪ ಅವರು ತಮ್ಮ ಕಾದಂಬರಿಗಳಲ್ಲಿ ಹೇಳುವ ನಿರೂಪಣಾ ಶೈಲಿಯನ್ನು ನಾನು ಚಿತ್ರದಲ್ಲಿ ಸ್ವಲ್ಪ ಅಳವಡಿಸಿಕೊಂಡಿದ್ದೇನೆ. ಇದನ್ನು ಪ್ರೇಕ್ಷಕರು ಯಾವ ಮಟ್ಟದಲ್ಲಿ ಒಪ್ಪುವರೋ ನೋಡಬೇಕು. ವೀರೇಂದ್ರನಾಥ್ ಅವರ ‘ತಪ್ಪು ಮಾಡೋಣ ಬನ್ನಿ’ ಕೃತಿಯಲ್ಲಿ ಕಥೆ ಹೇಳುತ್ತಾ ಹೇಳುತ್ತಾ ಅವರು ಮೂಲವನ್ನು ಬಿಟ್ಟು ಹೊಸ ಕಥೆ ಹೇಳಲು ಶುರುಮಾಡುತ್ತಾರೆ. ಅದು ಮತ್ತೊಂದು ವಿಷಯಕ್ಕೆ ಕನೆಕ್ಟ್ ಆಗುತ್ತಾರೆ. ನಂತರ ಮರಳಿ ಮೂಲ ಸ್ಥಳಕ್ಕೆ ಬರುತ್ತಾರೆ ಇದನ್ನು ನಾನು ಪ್ರಯೋಗಿಸಿರುವೆ. ಆದರೆ ಜನರು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು. ಗಾಂಧಿ ಸೀಟಿನ ಜನರಿಗೆ ನನ್ನ ಚಿತ್ರ ಮುಟ್ಟುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಬಾಲ್ಕನಿ ಜನರಿಗಂತೂ ಟಚ್ ಆಗುವ ವಿಶ್ವಾಸವಿದೆ’ ಎನ್ನುವ ಕುಮಾರ್ ಮಾತುಗಳಲ್ಲಿ ಆತ್ಮವಿಶ್ವಾಸ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT