ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಸಿಬ್ಬಂದಿಗೆ ‘ಥ್ಯಾಂಕ್ಸ್‌’ ಹೇಳಿದ್ದ ಕಲಾಂ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಶಿಲ್ಲಾಂಗ್‌ (ಪಿಟಿಐ): ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೊನೆಯುಸಿರೆಳೆಯುವ ಮುನ್ನ ತಮ್ಮ ಭದ್ರತಾ ಸಿಬ್ಬಂದಿಗೆ ಥ್ಯಾಂಕ್ಸ್‌ ಹೇಳಿದ ಹೃದಯಸ್ಪರ್ಶಿ ಸನ್ನಿವೇಶವೊಂದು ಅವರ ಮೇರು ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

ಶಿಲ್ಲಾಂಗ್‌ನಲ್ಲಿ ಅವರು ಸೋಮವಾರ ತಮಗೆ ಭದ್ರತೆ ನೀಡಿದ ಸಿಬ್ಬಂದಿಯನ್ನು ಕರೆದು ಕೃತಜ್ಞತೆ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ  ಕುಸಿದು ಬಿದ್ದರು. ಗುವಾಹಟಿಯಿಂದ ಶಿಲ್ಲಾಂಗ್‌ವರೆಗೆ ತಮಗೆ ಭದ್ರತೆ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಬರುವಂತೆ ಅಲ್ಲಿದ್ದವರಿಗೆ ಹೇಳಿ ಕಳಿಸಿದ್ದರು. ತಮ್ಮನ್ನು ಭೇಟಿಯಾಗುವಂತೆ ಕಲಾಂ ಅವರಿಂದ ಬುಲಾವ್‌ ಬರುತ್ತಲೇ ಭದ್ರತಾ ಸಿಬ್ಬಂದಿ ಎಸ್‌.ಎ. ಲಪಾಂಗ್‌ ತಮ್ಮಿಂದ ಏನದರೂ ತಪ್ಪಾಗಿದೆಯೇ ಎಂದು ತಬ್ಬಿಬ್ಬಾದರು.

ಅಳುಕುತ್ತಲೇ ಹೆಜ್ಜೆ ಹಾಕಿದ ಲಪಾಂಗ್‌ ಅವರಿಗೆ ಕಲಾಂ ನಗುಮೊಗದ ಸ್ವಾಗತ ದೊರೆಯಿತು. ಲಪಾಂಗ್‌ ಕೈಯನ್ನು ಪ್ರೀತಿಯಿಂದ ಹಿಡಿದು ‘ನನ್ನಿಂದಾಗಿ ನಿಮಗೆ ತೊಂದರೆಯಾಯಿತು. ಅದಕ್ಕಾಗಿ ವಿಷಾದಿಸುತ್ತೇನೆ’ ಎಂದು ಕಲಾಂ ಹೇಳಿದ್ದರು. ತಮ್ಮ ಬೆಂಗಾವಲು ಪಡೆಯ ತೆರೆದ ಜೀಪಿನಲ್ಲಿ ಗುವಾಹಟಿಯಿಂದ ಶಿಲ್ಲಾಂಗ್‌ವರೆಗಿನ ಪ್ರಯಾಣದಲ್ಲಿ ಕೈಯಲ್ಲಿ ಬಂದೂಕು ಹಿಡಿದು ಬಂಡೆಗಲ್ಲಿನಂತೆ  ನಿಂತಿದ್ದ ಭದ್ರತಾ ಸಿಬ್ಬಂದಿಯನ್ನು ಕಲಾಂ ಗಮನಿಸಿದ್ದರು. ಅಷ್ಟು ದೂರದಿಂದ ನಿಂತುಕೊಂಡಿರುವುದು ಸಾಕು. ಇನ್ನಾದಾರೂ ಅವರಿಗೆ ಕುಳಿತುಕೊಳ್ಳುವಂತೆ ಹೇಳಿ ಎಂದು ಕಲಾಂ ಅವರು ತಿಳಿಸಿದ್ದರು. ತಕ್ಷಣ ಭದ್ರತಾ ಸಿಬ್ಬಂದಿಗೆ ರೇಡಿಯೊ ಸಂದೇಶ ರವಾನಿಸಲಾಯಿತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಭದ್ರತಾ ಸಿಬ್ಬಂದಿ ಒಂದು ಕ್ಷಣವೂ ವಿರಮಿಸದೆ ಕರ್ತವ್ಯ ಪ್ರಜ್ಞೆ ಮೆರೆದರು. ಅವರ ಕರ್ತವ್ಯಪ್ರಜ್ಞೆ  ಕಲಾಂ ಅವರ ಮನ ತಟ್ಟಿತ್ತು.

‘ನಿಮ್ಮ ಕರ್ತವ್ಯ ಪ್ರಜ್ಞೆಗೆ ನನ್ನ ಸಲಾಂ. ಆದರೆ, ನನ್ನಿಂದಾಗಿ ನೀವು ಅಷ್ಟು ದೂರ ನಿಂತುಕೊಳ್ಳಬೇಕಾಯಿತಲ್ಲ. ನಿಮಗೆ  ತೊಂದರೆ ಕೊಟ್ಟೆ’ ಎಂದು ಬೇಜಾರುಪಟ್ಟುಕೊಂಡರು. ‘ನಿಮಗೆ ದಣಿವಾಗಿರಬಹುದಲ್ಲ. ಏನಾದರೂ ಆಹಾರ ಸೇವಿಸಿ ದಣಿವಾರಿಸಿಕೊಳ್ಳಿ’ ಎಂದು ಕಲಾಂ  ಹೇಳಿದರು. ‘ಸರ್‌, ನಿಮಗಾಗಿ 3 ಗಂಟೆ ಏನು? 6 ಗಂಟೆ ಬೇಕಾದರೂ ನಿಲ್ಲಬಲ್ಲೆ ಎಂದು ಉತ್ತರಿಸಿದೆ’ ಎನ್ನುತ್ತಲೇ ಲಪಾಂಗ್‌ ಹನಿಗಣ್ಣಾದರು.
*
ತುಂತುರು ಮಳೆ
ಕಲಾಂ ಅವರ ಪಾರ್ಥಿವ ಶರೀರವನ್ನು ಶಿಲ್ಲಾಂಗ್‌ದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕೊಂಡೊಯ್ಯುವ ಮುನ್ನ ತುಂತುರು ಮಳೆ ಸುರಿಯಲಾರಂಭಿಸಿತು.

ದೊಡ್ಡ ವ್ಯಕ್ತಿಗಳು ಭೂಮಿಯಲ್ಲಿ ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವ ಮೊದಲೇ ನಮ್ಮನ್ನು ಅಗಲಿದಾಗ ಮೋಡ ಕಣ್ಣೀರು ಸುರಿಸುತ್ತದೆ ಎನ್ನುವುದು ಇಲ್ಲಿಯ ಬುಡಕಟ್ಟು ಜನಾಂಗದ ನಂಬುಗೆಯಂತೆ.
*
ಶೈಕ್ಷಣಿಕ ಕೃತಿ ರಚಿಸುವ ಕನಸು ನನಸಾಗಲಿಲ್ಲ!
ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ನೂರಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ವೀಖೆ ಪಾಟೀಲ ಪ್ರತಿಷ್ಠಾನ ಪ್ರಕಟಿಸಲು ಮುಂದಾಗಿದ್ದ ಶೈಕ್ಷಣಿಕ ಗ್ರಂಥದ ಸಹ ಸಂಪಾದಕರಾಗಿದ್ದ ಅಬ್ದುಲ್‌ ಕಲಾಂ ಅದರ ಪ್ರಕಟಣೆಯ ಕನಸು ಕಂಡಿದ್ದರು.

ಶಿಕ್ಷಣ ತಜ್ಞ ಹಾಗೂ ವೀಖೆ ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ವೀಖೆ ಪಾಟೀಲ ಜತೆ ಸೇರಿ ಕಲಾಂ ಅವರು ಭಾರತದ ಶಿಕ್ಷಣ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಗ್ರಂಥ ರಚಿಸುವ ಸಿದ್ಧತೆ ನಡೆಸಿದ್ದರು.

ಜಾಗತಿಕ ಮಟ್ಟದ 200 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾನ ಪಡೆಯದಿರುವುದು ಹಾಗೂ ಅಂತರರಾಷ್ಟ್ರೀಯ ಶೈಕ್ಷಣಿಕ ಗುಣಮಟ್ಟದೊಂದಿಗೆ ಭಾರತೀಯ ಶಿಕ್ಷಣ ಮಟ್ಟದ  ಹೋಲಿಕೆ  ಕುರಿತು ಬರೆಯುವಂತೆ ಕಲಾಂ ಅವರನ್ನು ಕೇಳಿಕೊಂಡಿದ್ದೆವು ಎಂದು ಪುಸ್ತಕದ ಸಂಪಾದಕ ಅಶೋಕ್‌ ವೀಖೆ ಪಾಟೀಲ ಹೇಳಿದರು.

‘ಇದರೊಂದಿಗೆ ಭಾರತದ ಶಿಕ್ಷಣ ರಂಗದ ಮೇಲೆ ಬೆಳಕು ಚೆಲ್ಲುವ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಲೇಖನಗಳನ್ನು ಬರೆಯುವಂತೆ ಅವರಿಗೆ ಮನವಿ ಮಾಡಿದ್ದೆವು. ಆದರೆ, ಅವರ ಅಗಲಿಕೆಯೊಂದಿಗೆ ನಮ್ಮ ಕನಸು  ನನಸಾಗಲಿಲ್ಲ’ ಎಂದು ಅವರು ವಿಷಾದಿಸಿದರು.

ನಿರುದ್ಯೋಗ ಸಮಸ್ಯೆಗೆ ಶಾಲಾ ಹಂತ ದಲ್ಲಿಯೇ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಅಭಿಪ್ರಾಯ  ವ್ಯಕ್ತಪಡಿಸಿದ್ದ ಕಲಾಂ ಅವರು ಈ ಕುರಿತು ಲೇಖನ ಬರೆಯಲು ಸಿದ್ಧತೆ ನಡೆಸಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT