ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿಯ ಚೆಂದುಳ್ಳಿ!

Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಆಗ ತಾನೆ ಕಾಲೇಜು ಮೆಟ್ಟಿಲೇರಿದ್ದ ಯುವತಿಗೆ ಸಿನಿಮಾ ಪೋಸ್ಟರ್‌ಗಳು, ಜಾಹೀರಾತು ಪ್ಲೆಕ್ಸ್‌ಗಳನ್ನು ಕಂಡಾಗ ತಾನೂ ಹೀಗೆಯೇ ಕಾಣಿಸಿಕೊಳ್ಳಬೇಕು ಎಂಬ ಆಸೆ. ನಟಿಯಾಗಬೇಕೆಂಬ ಹಂಬಲ ಉತ್ಕಟವಾಗಿರದಿದ್ದರೂ, ಸಣ್ಣ ಸೆಳೆತವಿತ್ತು. ಅದು ಈಡೇರಲು ಹೆಚ್ಚು ಕಾಲವೂ ಬೇಕಾಗಲಿಲ್ಲ. ಅದಕ್ಕೆ ಕಿರುತೆರೆ ವೇದಿಕೆಯನ್ನೂ ನೀಡಿತು.

ಈ ವಾರ ತೆರೆಕಾಣುತ್ತಿರುವ ‘ಗಣಪ’ ಚಿತ್ರದ ಮೂಲಕ ಸಿನಿಮಾ ಪೋಸ್ಟರ್‌ಗಳಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ತಣಿಸಿಕೊಂಡವರು ನಟಿ ಮಾನ್ವಿತಾ. ಅವರ ಬಯಕೆ ಒಂದೆರಡು ಸಿನಿಮಾಕ್ಕೆ ಸೀಮಿತವಲ್ಲ, ಅಭಿನಯವನ್ನು ಸಂಪೂರ್ಣ ವೃತ್ತಿಯಾಗಿ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ. ಗಡಿಯಾಚೆಗಿನ ಚಿತ್ರಲೋಕಗಳತ್ತಲೂ ಅವರು ಕಣ್ಣು ಹಾಯಿಸುತ್ತಿದ್ದಾರೆ.

ಭದ್ರಾವತಿ ಮೂಲದ ಮಾನ್ವಿತಾ ಮೊದಲು ಕ್ಯಾಮೆರಾ ಎದುರಿಸಿದ್ದು ಕಿರುತೆರೆಯಲ್ಲಿ. ಎಸ್ಸೆಸ್ಸೆಲ್ಸಿಯಲ್ಲಿ ಇದ್ದಾಗ ‘ಪ್ರೀತಿಯಿಂದ’ ಧಾರಾವಾಹಿಯ ಸಣ್ಣಪಾತ್ರಕ್ಕೆ ಮೂರು ದಿನಗಳ ಮಟ್ಟಿಗೆ ನಟಿಸುವವರು ಬೇಕು ಎಂದು ಹುಡುಕಾಡುತ್ತ ಬಂದ ತಂಡದ ಕಣ್ಣಿಗೆ ಬಿದ್ದವರು ಮಾನ್ವಿತಾ. ಹತ್ತಿರದ ತೀರ್ಥಹಳ್ಳಿಯಲ್ಲಿಯೇ ಚಿತ್ರೀಕರಣ ಇದ್ದಿದ್ದರಿಂದ ಮತ್ತು ಮೂರು ದಿನಗಳಿಗೇ ಶೂಟಿಂಗ್ ಮುಗಿದು ಹೋಗುತ್ತದೆ ಎಂದಿದ್ದರಿಂದ ಮನೆಯವರನ್ನು ಒಪ್ಪಿಸಲು ಮಾನ್ವಿತಾಗೆ ಕಷ್ಟವಾಗಲಿಲ್ಲ.

ಆದರೆ ಗುಲಾಬಿ ಎಂಬ ಈ ಚಿಕ್ಕಪಾತ್ರ ಮುಂದೆ ಧಾರಾವಾಹಿಯ ಪ್ರಮುಖ ಪಾತ್ರವಾಗಿ ಬೆಳೆಯಿತು. ಏಳು ತಿಂಗಳ ಕಾಲ ಈ ಧಾರಾವಾಹಿ ತಂಡದ ಸದಸ್ಯೆಯಾಗಿ ಮಾನ್ವಿತಾ ಗುರ್ತಿಸಿಕೊಂಡರು. ಬಳಿಕ ಕಂಪ್ಯೂಟರ್ ಸೈನ್ಸ್‌ ಡಿಪ್ಲೊಮಾಗಾಗಿ ಕಾಲೇಜು ಮೆಟ್ಟಿಲೇರಿದ ಅವರಲ್ಲಿ ಸಿನಿಮಾರಂಗಕ್ಕೆ ಕಾಲಿಡುವ ಆಸಕ್ತಿ ಸಣ್ಣನೆ ಚಿಗುರಿತ್ತು. ಓದು ಮುಗಿಸಿ ಅವಕಾಶಕ್ಕಾಗಿ ಬೆನ್ನುಹತ್ತಿದ ಅವರಿಗೆ ಬಾಗಿಲು ತೆರೆದದ್ದು ‘ಗಣಪ’.

ಅಂದಹಾಗೆ, ಮಾನ್ವಿತಾ ಅವರ ಹಿಂದಿನ ಹೆಸರು ಪ್ರಿಯಾಂಕಾ. ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹುಟ್ಟು ಹೆಸರು ಮಾನ್ವಿತಾಗೆ ಬದಲಾಗಿದ್ದಾರೆ. ಹೆಸರಿನೊಟ್ಟಿಗೆ ತಮ್ಮ ದೆಸೆಯೂ ಬದಲಾಗುವ ನಿರೀಕ್ಷೆ ಅವರದು. ‘ಗಣಪ’ ಚಿತ್ರದಲ್ಲಿ ನಟಿಸುವಾಗಲೇ ಹಲವು ಅವಕಾಶಗಳು ಬಂದರೂ ಮೊದಲ ಚಿತ್ರದ ಫಲಿತಾಂಶ ದೊರೆತ ಬಳಿಕವೇ ಮತ್ತೆ ಬಣ್ಣಹಚ್ಚುವುದು ಎಂಬ ನಿಲುವಿಗೆ ಅಂಟಿಕೊಂಡರು. ಇದಕ್ಕೆ ಕಾರಣ ಅವರ ಪಾತ್ರದ ವ್ಯಾಪ್ತಿ. ನಾಯಕನೊಟ್ಟಿಗೆ ಹಾಡಿ ಕುಣಿದು, ಕೆಲ ದೃಶ್ಯಗಳಿಗೆ ಸೀಮಿತ­ವಾಗುವ ಪಾತ್ರ ತನ್ನದಲ್ಲ ಎನ್ನುತ್ತಾರೆ ಮಾನ್ವಿತಾ.

ಭದ್ರಾವತಿಯ ಚೆಂದುಳ್ಳಿ!
ಕಷ್ಟಪಟ್ಟು ಓದಿ, ಅಮ್ಮನನ್ನು ಆರೈಕೆ ಮಾಡುವ ಜವಾಬ್ದಾರಿಯುತ ಯುವತಿ ಪ್ರೀತಿಯಲ್ಲಿ ಬಿದ್ದಾಗ ಎದುರಿಸುವ ತಳಮಳ, ಸಂಕಟಗಳು ಈ ಚಿತ್ರದಲ್ಲಿ ಅನಾವರಣಗೊಳ್ಳುತ್ತದೆ. ಈ ಚಿತ್ರದಲ್ಲಿ ಆ್ಯಕ್ಷನ್ ಇದ್ದರೂ ಅಷ್ಟೇ ಪ್ರೀತಿಯ ಹೂರಣವೂ ಇದೆ. ಆ ಪ್ರೀತಿ ತಮ್ಮ ಪಾತ್ರದಲ್ಲಿಯೇ ಕೇಂದ್ರಿತವಾಗಿರುವುದರಿಂದ ನಾಯಕನಷ್ಟೇ ನಾಯಕಿಯ ಪಾತ್ರಕ್ಕೂ ಮಹತ್ವವಿದೆ ಎಂದು ಅವರು ಹೇಳುತ್ತಾರೆ.

ಒಬ್ಬ ನಟಿಯಾಗಿ ಬೆಳೆಯಲು ಅಗತ್ಯವಿರುವ ಸ್ಥಳವನ್ನು ‘ಗಣಪ’ ಚಿತ್ರ ನೀಡಿದೆ ಎನ್ನುವ ಅವರು, ‘ಈ ನಡುವೆ ಬಂದ ಅವಕಾಶಗಳನ್ನು ಕೈಚೆಲ್ಲಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿಲ್ಲ. ಮನಸಿಗೆ ಹತ್ತಿರವಾಗುವ ಇಂತಹ ಪಾತ್ರಗಳು ದೊರಕುವವರೆಗೆ ಕಾಯುತ್ತೇನೆ. ಇನ್ನೂ ವಯಸ್ಸು ಚಿಕ್ಕದಿರುವುದರಿಂದ ಆತುರವೂ ಇಲ್ಲ.

ವರ್ಷಕ್ಕೆ ಹತ್ತು ಸಿನಿಮಾ ಮಾಡುವುದಕ್ಕಿಂತ ಎರಡು ಒಳ್ಳೆಯ ಸಿನಿಮಾ ಮಾಡಿದರೆ ಸಾಕು. ಜನ ನನ್ನನ್ನು ಒಳ್ಳೆಯ ನಟಿ ಎಂದು ಗುರುತಿಸುವಂತಾಗಬೇಕು’ ಎನ್ನುತ್ತಾರೆ. ಚಿತ್ರತಂಡದಿಂದ ಕಲಿತ ಪಾಠ ಸಾಕಷ್ಟು ಎನ್ನುವ ಮಾನ್ವಿತಾ, ಮೊದಲು ನೆನಪಿಸಿಕೊಳ್ಳುವುದು ‘ಪ್ರೀತಿಯಿಂದ’ ಧಾರಾವಾಹಿ ವೇಳೆ ಅಭಿನಯದ ಪಟ್ಟುಗಳನ್ನು ಹೇಳಿ ತಿದ್ದಿದ ರೇಖಾ ರಾಣಿ ಮತ್ತು ಅಶೋಕ್ ಕಶ್ಯಪ್ ಅವರನ್ನು.

‘ಪ್ರತಿದಿನವೂ ಕ್ಯಾಮೆರಾ ಎದುರಿಸುವ ಬಗೆ, ಸಂಭಾಷಣೆ ಒಪ್ಪಿಸುವ ಪರಿಯನ್ನು ಕಲಿಸಿಕೊಟ್ಟದ್ದು ಮಾತ್ರವಲ್ಲ, ಆತ್ಮವಿಶ್ವಾಸವನ್ನೂ ಮೂಡಿಸಿದರು. ಒಂದು ಅಭಿನಯ ತರಬೇತಿ ಶಾಲೆಯಲ್ಲಿ ಕಲಿಯುವಂಥಹದ್ದನ್ನು ಪ್ರಾಕ್ಟಿಕಲ್ ಆಗಿ ಧಾರಾವಾಹಿಯಲ್ಲಿಯೇ ಕಲಿತೆ. ಹೀಗಾಗಿ ಮೊದಲ ಸಿನಿಮಾಕ್ಕೆ ಕ್ಯಾಮೆರಾ ಎದುರಿಸುವಾಗ ಕೊಂಚವೂ ಭಯ ಇರಲಿಲ್ಲ’ ಎನ್ನುತ್ತಾರೆ ಮಾನ್ವಿತಾ.

ಕನ್ನಡವಷ್ಟೇ ಅಲ್ಲ, ದಕ್ಷಿಣದ ಎಲ್ಲಾ ನಾಲ್ಕೂ ಭಾಷೆಗಳಲ್ಲಿಯೂ ನಟಿಸಬೇಕು ಎಂಬುದು ಮಾನ್ವಿತಾ ಹೆಬ್ಬಯಕೆ. ಸಿನಿಮಾಗಳನ್ನು ಆಯ್ದುಕೊಳ್ಳುವಾಗ ಅಳೆದು ತೂಗುವ ಅವರಲ್ಲಿ ಗ್ಲಾಮರ್ ಕುರಿತು ಮಡಿವಂತಿಕೆ ಇಲ್ಲ. ಹೋಮ್ಲಿ ಪಾತ್ರಕ್ಕೂ ಸೈ, ಗ್ಲಾಮರಸ್‌ ಪಾತ್ರಕ್ಕೂ ಸೈ ಎನ್ನುವ ಅವರು, ಕಥೆಗೆ ಅಗತ್ಯವಿದ್ದರೆ ಎಕ್ಸ್‌ಪೋಸ್‌ಗೂ ಸಿದ್ಧರಿದ್ದಾರಂತೆ. ಆದರೆ ದೇಹಕ್ಕೆ ಹೊಂದಿಕೊಳ್ಳುವ, ಚೆನ್ನಾಗಿ ಕಾಣುವ ಉಡುಪು ಕೂಡ ಇರಬೇಕು ಎಂಬ ಷರತ್ತನ್ನೂ ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT