ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಪಡ್ಬೇಡಿ ಸ್ಟ್ರೆಸ್ ಮಾಡ್ಕೊಬೇಡಿ ಸಂತೋಷವಾಗಿದ್ಬಿಡಿ!

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಒತ್ತಡದ ಇಂದಿನ ದಿನಮಾನಗಳಲ್ಲಿ ಈ ಶೀರ್ಷಿಕೆಯೇ ಸ್ಟ್ರೆಸ್, ಕೋಪ ತರಿಸಬಹುದು! ಆದರೆ, ಇಂದಿನ ವೈದ್ಯಕೀಯ ವಿಜ್ಞಾನ ಕೂಡ ಇದನ್ನೇ ಹೇಳುವುದು. ಇಂದು ನಮ್ಮ ಬಹುತೇಕ ಜನರಲ್ಲಿ ಅರ್ಥಿಕ ಬಡತನವಿಲ್ಲ, ಆದರೆ ನೆಮ್ಮದಿಯ ಬಡತನವೇ ಹೆಚ್ಚಾಗಿದೆ. ಇದಕ್ಕೆ ಅನೇಕ ಕಾರಣಗಳನ್ನು ಮನಃಶಾಸ್ತ್ರಜ್ಞರು, ಚಿಂತಕರು ಹಾಗೂ ವ್ಯಕ್ತಿತ್ವವಿಕಸನ ತಜ್ಞರು ಕೊಡುತ್ತಾರೆ.

ಭಯ, ಆತಂಕಗಳ ಪ್ರಮುಖ ಕಾರಣ ಭವಿಷ್ಯದ ಕುರಿತ ಚಿಂತೆಯೇ ಆಗಿರುತ್ತದೆ. ಇಲ್ಲವೆ ನಮ್ಮ ಅನಾರೋಗ್ಯ ಕುರಿತಾದ ನಮ್ಮ ಆಲೋಚನೆಗಳೇ ಆಗಿರುತ್ತವೆ.ಈ ಒತ್ತಡ ಮತ್ತು ಆತಂಕಗಳಿಗೆ ಮುಖ್ಯವಾದ ಕಾರಣ ನಮ್ಮ ಸಮಸ್ಯೆಗಳನ್ನು ನಾವು ನೋಡುವ ಪರಿ, ನಾವು ಅವಕ್ಕೆ ಪ್ರತಿಕ್ರಿಯಿಸುವ ಪರಿ. ನಮಗೇನಾಯಿತು ಎಂಬುದು ಮುಖ್ಯವಲ್ಲ; ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ಜೀವನದಲ್ಲಿ ನಡೆಯುವ ಸಣ್ಣಪುಟ್ಟ ನೋವು ಅವಮಾನಗಳಿಂದ ತೊಡಗಿ ವ್ಯವಹಾರದಲ್ಲಿ ದೊಡ್ಡ ನಷ್ಟ, ಅಪಘಾತ ಮತ್ತು ಸಾವು – ಈ ಸಂದರ್ಭಗಳಲ್ಲಿಯೂ  ನಾವು ಹೇಗೆ ಅದಕ್ಕೆ ಉತ್ತರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ.

ನಾವು ನಮ್ಮನ್ನು ಕುರಿತಾಗಿ ಏನೆಂದು ಕಲ್ಪಿಸಿಕೊಳ್ಳುತ್ತೇವೆಯೋ ಅದೇ ನಾವು. ಹೀಗಾಗಿ, ನಮ್ಮನ್ನು ಕುರಿತಾಗಿ ನಾವು ಉದಾರವಾಗಿರಬೇಕಾದ ಆವಶ್ಯಕತೆಯಿದೆ.  ನಮ್ಮ ಸಾಮರ್ಥ್ಯವನ್ನು ನಾವೇ ಹೀಗಳೆಯುತ್ತಾ, ನಮ್ಮನ್ನು ನಾವು ತಿರಸ್ಕರಿಸಿಕೊಳ್ಳುತ್ತ, ಏನೇನೋ ಪರಿಮಿತಿಗಳನ್ನು ನಿರ್ಮಿಸಿಕೊಂಡು, ಕೊನೆಗೆ ಈ ಎಲ್ಲ ಭಾರಗಳಿಂದ ನರಳುವವರು ನಾವೇ; ಸೋಲುವವರೂ ನಾವೇ.

ಇಪ್ಪತ್ತ್ಮೂರು ವರ್ಷದ ಹುಡುಗಿ, ಬಾಸ್ಕೆಟ್‌ಬಾಲ್ ಚಾಂಪಿಯನ್ ರೈಲಿನಲ್ಲಿ ದರೋಡೆಕೋರರಿಗೆ ಸಿಲುಕಿ ರೈಲಿನಿಂದ ಹೊರಗೆಸೆಯಲ್ಪಡುತ್ತಾಳೆ; ಅದೂ ಮತ್ತೊಂದು ಹಳಿಯ ಮೇಲೆ. ಅಲ್ಲಿ ರೈಲು ಸಾಗಿ ಹೋಗುತ್ತದೆ. ಒಂದು ಕಾಲು ಕತ್ತರಿಸಿಹೋಗುತ್ತದೆ. ಮತ್ತೊಂದು ಕಾಲು ಜರ್ಝರಿತ, ಬೆನ್ನುಮೂಳೆ ಪುಡಿಪುಡಿ.

ಎರಡು ಗಂಟೆಗಳಲ್ಲಿ ಜೀವನ ತಲೆಕೆಳಗು! ಆ ಹೆಣ್ಣು  ಏನು ಮಾಡಬೇಕು? ಜೀವನವಿಡೀ ಅಳುತ್ತಾ ಕೂರುವುದೇ? ನಾವಾಗಿದ್ದರೆ ಹಾಗೆ ಮಾಡುತ್ತಿದ್ದೆವೇನೋ? ಆದರೆ ಆ ದಿಟ್ಟ ಯುವತಿ ಹಾಗೆ ಮಾಡಲಿಲ್ಲ! ಬೆಳಗಿನವರೆಗೆ ರೈಲುಹಳಿಗಳ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದವಳು, ಮುಂದೆ ಹತ್ತಿರದ ಆಸ್ಪತ್ರೆಗೆ ಆನಂತರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನೆಯಾದಳು. ಆರು ತಿಂಗಳು ಚಿಕಿತ್ಸೆ.

ಅನಂತರ? ಅದೇ ಇಲ್ಲಿನ ಮುಖ್ಯ ಭಾಗ! “ಕಾಲು ಕಳೆದುಕೊಂಡಿದ್ದರ ಸಿಟ್ಟನ್ನು ನಾನು ಎವರೆಸ್ಟ್ ಹತ್ತಿ ತೀರಿಸಿಕೊಳ್ಳುತ್ತೀನಿ” ಇದು ಆ ದಿಟ್ಟ ತರುಣಿಯ ನಿರ್ಧಾರ!.ಆಸ್ಪತ್ರೆಯಿಂದ ಬಿಡುಗಡೆಯಾದಾಗ ಆಕೆ ಮನೆಗೆ ಹೋಗಲಿಲ್ಲ; ಬದಲಾಗಿ, ನೇರವಾಗಿ ಬಚೇಂದ್ರಿಪಾಲ್ ಅವರ ಬಳಿಗೆ ಹೋದರು. ಅವರ ಬಳಿ ಶಿಸ್ತುಬದ್ಧ ತರಬೇತಿ ಪಡೆದು ಕೃತಕಕಾಲಿನಿಂದ ಎವರೆಸ್ಟ್ ಹತ್ತಿದ ಮೊದಲ ಮಹಿಳೆಯಾದರು. ನಾವೇನು ಚಿಂತಿಸುತ್ತೇವೆಯೋ ಅದೇ ನಾವು!


ಆ ಕರಾಳದಿನದ ರಾತ್ರಿ ತಂದೆಯ ಹುಟ್ಟುಹಬ್ಬ ಎಂದು ಮೂವರು ಮಕ್ಕಳು ದಿಢೀರ್ ಪಾರ್ಟಿ ಏರ್ಪಡಿಸಿದರು; ಕೇಕು ಕತ್ತರಿಸಿದ್ದಾಯಿತು! ಸಂತೋಷದಿಂದ ತಂದೆ ಮಕ್ಕಳನ್ನು ಮುದ್ದಿಸಿ ಮನೆಯಿಂದ ಅನತಿ ದೂರದಲ್ಲಿದ್ದ ಸಮುದ್ರದಂಡೆಗೆ ಮಕ್ಕಳೊಂದಿಗೆ ಹೋಗಿ ಆಡುತ್ತಿದ್ದರು. ಆಗ ಮಗ ಹೇಳಿದ “ಅಲ್ಲಿ ನೋಡಪ್ಪ! ಅದೆಷ್ಟು ದೊಡ್ಡ ಅಲೆ!” ಮಾತು ಮುಗಿಯುವುದರೊಳಗೆ ಅಲೆ ಇವರನ್ನು ಕೊಚ್ಚಿಕೊಂಡು ಹೋಯಿತು. ಸುನಾಮಿ! ಮೂರೂ ಮಕ್ಕಳ ಸಾವು.

 ಕೆಲವು ದಿನಗಳ ನಂತರ ದಂಪತಿಗಳು ರಸ್ತೆಯಲ್ಲಿ ಸಾಗುತ್ತಿರುವಾಗ ಒಂದೆಡೆ ಮಕ್ಕಳು ಆಡುತ್ತಿರುವುದನ್ನು ಕಂಡು ವಿಚಾರಿಸುತ್ತಾರೆ. ಅವು ತಂದೆತಾಯಿಗಳನ್ನು ಕಳೆದುಕೊಂಡ ಮಕ್ಕಳು. ‘ಇಬ್ಬರನ್ನು ಕರೆದುಕೊಂಡು ಹೋಗಬಹುದೇ? ’ ಇವರ ಪ್ರಶ್ನೆ. ಮೂವರು ಮಕ್ಕಳನ್ನು ಕಳೆದುಕೊಂಡ ದಂಪತಿಗಳು ಇಂದು ಮುವ್ವತ್ತಕ್ಕೂ ಹೆಚ್ಚು ಮಕ್ಕಳ ತಂದೆ–ತಾಯಿ!

ಒಬ್ಬನೇ ಮಗ. ಮದುವೆಯಾಯಿತು. ಮೊಮ್ಮಗುವಿನ ನಿರೀಕ್ಷೆ. ಜೀವನವೆಲ್ಲ ಇನ್ನು ಸಂತೋಷವೇ ಎಂಬ ಭಾವ. ಆದರೆ ಭವಿಷ್ಯ ಬೇರೆಯಿತ್ತು. ಮಗನೇ ಕಾಲವಾದ! ಇವರು ಸೊಸೆಯನ್ನೇ ಮಗಳು ಎಂದುಕೊಂಡು ಮರುಮದುವೆ ಮಾಡಿಕೊಟ್ಟರು. ಇಂದು ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿ. ಜೀವನದಲ್ಲಿ ನಮಗೇನಾಗುತ್ತದೆ ಎಂಬುದು ಮುಖ್ಯವಲ್ಲ; ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ನಮ್ಮ ಆ ಕ್ಷಣದ ಪ್ರತಿಕ್ರಿಯೆ ನಮ್ಮ ಬದುಕನ್ನೇ ಬದಲಿಸಬಹುದು. 

 ನಮ್ಮಲ್ಲಿರುವ ನಮ್ಮನ್ನು ಕುರಿತ ನಮ್ಮ ನಂಬಿಕೆಗಳೇ ನಮ್ಮಿಂದ ಪವಾಡದಂಥ ಕೆಲಸಗಳನ್ನು ಮಾಡಿಸುತ್ತವೆ. ಹೀಗಾಗಿ ಜೀವನೋತ್ಸಾಹವನ್ನು ಎಂಥ ಸಂದರ್ಭದಲ್ಲೂ ಕಳೆದುಕೊಳ್ಳಬಾರದು.
*  *  *
ಮೇಲಿನವು ಸ್ಫೂರ್ತಿ ತುಂಬುವುದಾದರೂ ಅಪರೂಪದ ಘಟನೆಗಳು. ದಿನನಿತ್ಯದ ಒತ್ತಡ ನಿರ್ವಹಣೆ ಹೇಗೆ? ಭಯ ಆತಂಕಗಳ ನಿರ್ವಹಣೆ ನಿವಾರಣೆ ಹೇಗೆ? ಪ್ರಚಾರದಿಂದ ದೂರ ಉಳಿದು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ತೋರುತ್ತಿರುವವರು ಡಾ. ರಂಗನಾಥ್. ಇವರು ವೃತ್ತಿಯಿಂದ ವೈದ್ಯ–ಪ್ರಾಧ್ಯಾಪಕರು; ನರವೈದ್ಯರು. ಮಣಿಪಾಲದ ವೈದ್ಯವಿದ್ಯಾಲಯದಲ್ಲಿದ್ದು ನಿವೃತ್ತರಾದವರು. ಮಂಗಳೂರು ವಿಶ್ವವಿದ್ಯಾನಿಲಯದ ಸೆನೇಟ್ ಸದಸ್ಯರೂ ಆಗಿದ್ದವರು ಇವರು.

 ಇವರು ನಮ್ಮೆಲ್ಲ ಒತ್ತಡದ ಸಮಸ್ಯೆಗಳಿಗೆ, ಒಳ್ಳೆಯ ಜೀವನ ನಡೆಸಲು ಕೆಲವು ಸರಳವಾದ ಆಟಗಳನ್ನು ಸೂಚಿಸುತ್ತಾರೆ. ಇದರಿಂದ ಒತ್ತಡದ ಸಮಸ್ಯೆಗಳು ಮಾತ್ರವಲ್ಲ, ಕಾಯಿಲೆಗಳು ಸಹ ನಿವಾರಣೆಯಾಗುತ್ತದೆ! ಇದು ನೂರಾರು ಜನರ ಅನುಭವದ ಮಾತು. ಇವರು ಸೂಚಿಸುವುದನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ “ಮಾಡುವುದನ್ನು ಗಮನವಿಟ್ಟು ಮಾಡಿ” ಎಂದು ಹೇಳಬಹುದು.  ಇದನ್ನು ನಿಧಾನವಾಗಿ ಅಭ್ಯಾಸ ಮಾಡುತ್ತಾ ಬಂದರೆ ನಮಗೆ ಈ ತಂತ್ರದ ಅರಿವು ಆಗುತ್ತದೆ.

ಒಮ್ಮೆಲೆ ಹಲವು ಕೆಲಸ ಮಾಡುವುದನ್ನು ನಮ್ಮ ಶತ್ರು ಎಂದೇ ಕರೆಯುತ್ತಾರೆ ಇವರು. ಒಮ್ಮೆ ಒಂದು ಕೆಲಸವನ್ನು ಮಾತ್ರ ಪೂರ್ಣಗಮನವಿಟ್ಟು ಮಾಡಿ ಎಂಬುದು ಇವರ ಮಂತ್ರ. ಉದಾಹರಣೆಗೆ ನೀವು ಕಾಫಿ ಕುಡಿಯುತ್ತಿದ್ದೀರೆಂದುಕೊಳ್ಳಿ. ಅದನ್ನೇ ನಿಧಾನವಾಗಿ ಗಮನವಿಟ್ಟು ಮಾಡುವುದು.

ಸುತ್ತಲಿನ ಜಗತ್ತು ನಿಮ್ಮ ಪಾಲಿಗಿಲ್ಲವೆಂಬಂತೆ ಮಾಡುವುದು. ಶಾಂತಿಯ ಮನೋಭಾವದಿಂದ ನಿಧಾನವಾಗಿ ಬಿಸಿ ಬಿಸಿಯಾದ ರುಚಿ ರುಚಿ ಕಾಫಿಯ ಬಟ್ಟಲನ್ನು ನಿಮ್ಮ ತುಟಿಗೆ ತರುತ್ತೀರಿ, ತುಸುವೇ ಬಗ್ಗಿಸಿ ಒಂದು ಗುಟುಕು ಕಾಫಿಯನ್ನು ನೀವು ತೆಗೆದುಕೊಂಡು ಅದರ ರುಚಿ, ಉಷ್ಣತೆಯನ್ನು ಆಸ್ವಾದಿಸುತ್ತೀರಿ. ಹೀಗೆ ಇಡೀ ಬಟ್ಟಲನ್ನು ಬರಿದು ಮಾಡುತ್ತೀರಿ. ಈಗ ಕಾಫಿ ಸೇವಿಸಿದ ಆನಂದ ನಿಮ್ಮಲ್ಲಿದೆ.

ಹೀಗೆಯೇ ಪ್ರತಿಯೊಂದು ಕೆಲಸವನ್ನು ಮಾಡಬೇಕು. ಇದರಿಂದ ಒತ್ತಡ ಉಂಟಾಗುವುದಿಲ್ಲ, ಕಾಯಿಲೆ ಬರುವುದಿಲ್ಲ; ಇರುವ ಕಾಯಿಲೆಗಳಿಗೆ ದೇಹ ಪರಿಹಾರವನ್ನು  ಕಂಡುಕೊಳ್ಳಲು ಇದರಿಂದ ಸಾಕಷ್ಟು ಸಮಯಾವಕಾಶವೂ ಸಿಗುತ್ತದೆ.  ಡಯಾಬಿಟೀಸ್‌ನಂಥ ಒತ್ತಡ ಹಾಗೂ ಜೀವನಶೈಲಿಯ ಕಾಯಿಲೆಗಳಿಗೆ ಇದು ಶಾಶ್ವತವಾದ ಪರಿಹಾರ. ಯಾವಾಗಲೂ ಮುಖದ ಮೇಲೆ ಸಂತೋಷದ ಮುದ್ರೆ ಹಾಕಿಕೊಂಡಿರಿ ಎನ್ನುತ್ತಾರೆ ರಂಗನಾಥ್. ‘ಮಿದುಳು ಮಂಕು ಮುಂಡೇದು ಅದಕ್ಕೆ ಯಾಕೆ ನಗುತ್ತೀರಿ ಎಂಬುದು ಮುಖ್ಯವಲ್ಲ, ನೀವು ನಕ್ಕಷ್ಟೂ ಅದು ಆರೋಗ್ಯಶಾಲಿಯಾಗುತ್ತೆ’ ಎನ್ನುತ್ತಾರೆ ಅವರು.

  ‘ಕಾಯಿಲೆಗೆ ಕಾರಣಗಳಿವೆ’, ‘ಸಂತೋಷವಾಗಿ ಇದ್ದುಬಿಡಿ’ ಹಾಗೂ ‘ಡಾಕ್ಟರಿಂದ ದೂರ ಇರಿ’ ಎಂಬ ಪುಸ್ತಕಗಳೂ ಸೇರಿದಂತೆ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ‘ಮಾಸ್ತರ್’ ಎಂದೇ ಖ್ಯಾತರಾದ ಡಾ. ರಂಗನಾಥ್ ಬರೆದಿದ್ದಾರೆ. ಭಯ ಎಂದರೆ ಮುಂದೆ ಆಗುತ್ತದೆ/ಒದಗುತ್ತದೆ – ಎಂದು ನಾವಾಗಿಯೇ ನಂಬುವ, ಊಹಿಸಿಕೊಳ್ಳುವ ವಿಪತ್ತು. ಅದು ಹಾಗೆ ಆಗದೇ ಹೋಗಬಹುದಲ್ಲವೆ? ಕಾದು ನೋಡಿ, ಅದನ್ನು ಎದುರಿಸೋಣ. ಎಷ್ಟೋ ಬಾರಿ ನಾವು ಅಂದುಕೊಂಡಂತೆ ಆಗದೇ ಆ ವಿಪತ್ತು ಪುಸ್ ಅನ್ನುವುದೇ ಹೆಚ್ಚು.

ವಿಪತ್ತೇ ಉಂಟಾದರೆ ಅದನ್ನು ಎದುರಿಸೋಣ.  ತಪ್ಪಾಗಿದ್ದರೆ ಕ್ಷಮೆ ಕೇಳೋಣ. ಬೇರೆಯವರು ತಪ್ಪು ಮಾಡಿದ್ದರೆ ಕ್ಷಮಿಸೋಣ. ನಮಗೆ ಶಿಕ್ಷೆಯೇ ಆದರೆ ಅದನ್ನು ಸಕಾರಾತ್ಮಕವಾಗಿ ಎದುರಿಸೋಣ ಎನ್ನುವುದು ಅವರ ಹೇಳುವ ಜೀವನಸೂತ್ರ. ನಮ್ಮ ಬಗ್ಗೆ ನಮಗಿರುವ ವಿಶ್ವಾಸ, ಜೀವನೋತ್ಸಾಹಗಳು ಹಾಗೂ ನಾವು ರೂಢಿಸಿಕೊಳ್ಳುವ ಕ್ಷಮಾಗುಣ–ನಿರ್ಭಯತ್ವಗಳೇ ನಮ್ಮನ್ನು ಕಾಪಾಡುವ ರಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT