ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತದ ಬಳಿಕ ‘ಬಾಹುಬಲಿ’

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ ಬಿಟ್ಟುಕೊಡುವುದರಿಂದ.  
-ಕೆ.ವಿ. ತಿರುಮಲೇಶ್

‘ಬಾಹುಬಲಿ’ ಗೆದ್ದಿದ್ದಾನೆ. ಗೆಲ್ಲುವ ಮೂಲಕ ಅನೇಕ ನಂಬಿಕೆಗಳನ್ನು ಬಿಟ್ಟುಕೊಟ್ಟಿದ್ದಾನೆ. ಭಾರತೀಯ ಚಿತ್ರವೊಂದಕ್ಕೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡುವ ಕುರಿತು ಇದ್ದ ಅಳುಕು, ಅದ್ದೂರಿ ಚಿತ್ರ ಎಂದರೆ ಅದು ಬಾಲಿವುಡ್ ಎನ್ನುವ ನಂಬಿಕೆ, ಸಿನಿಮಾಗೆ ಇರುವ ಭಾಷೆಯ ಚೌಕಟ್ಟು, ತಂತ್ರಜ್ಞಾನದ ಮಿತಿಗಳು- ಹೀಗೆ, ಅನೇಕ ಮಿತಿಗಳನ್ನು ‘ಬಾಹುಬಲಿ’ ಬಿಟ್ಟುಕೊಟ್ಟಿದ್ದಾನೆ.

ಬೆಳ್ಳಿತೆರೆಯ ಈ ‘ಬಾಹುಬಲಿ’ ಒಂದರ್ಥದಲ್ಲಿ ಬೆಳಗೊಳದ ಬಾಹುಬಲಿಯನ್ನು ನೆನಪಿಸುತ್ತಾನೆ. ಗೊಮ್ಮಟನನ್ನು ನೋಡುವವರು ಪಾದದಿಂದ ನೆತ್ತಿಯವರೆಗೆ ತಲೆ ಎತ್ತಿ ನೋಡುತ್ತಾರೆ. ಇಡೀ ಗೊಮ್ಮಟ ಮೂರ್ತಿ ಯಾರಿಗೂ ದಕ್ಕುವುದಿಲ್ಲ. ಕೆಲವರಿಗೆ ಬಾಹುಬಲಿಯ ಪಾದಗಳು ಬೆರಗುಹುಟ್ಟಿಸುತ್ತವೆ. ಕೆಲವರಿಗೆ ಮಗು ಮುಖದ ಮುಗ್ಧತೆ. ಕೆಲವರಿಗೆ ವಿರಾಗ ಭಾವ. ದೇಹದ ಮೇಲಿನ ಹಂಗು ತೊರೆದ ನಿರ್ಭಾವುಕತೆ ಕೆಲವರಿಗೆ ಆಪ್ಯಾಯಮಾನ.

ಇದು ಬೆಳಗೊಳದ ಗೊಮ್ಮಟನ- ಚರಿತ್ರೆಯ ವಿರಾಟ್‌ಮೂರ್ತಿಯ- ಕಥನ. ಈ ಹೊತ್ತಿನ ಸಿನಿಮಾ ‘ಬಾಹುಬಲಿ’ ಕೂಡ ಮಿಶ್ರ ಭಾವಗಳನ್ನು ಸಹೃದಯರಲ್ಲಿ ಹುಟ್ಟಿಸುತ್ತಿದ್ದಾನೆ. ಅದ್ಭುತ, ರೋಚಕ, ದೃಶ್ಯಕಾವ್ಯ- ಹೀಗೆ ಕೆಲವರ ಬಣ್ಣನೆ.  ಮತ್ತೆ ಕೆಲವರದು ಇದು ಕಸರತ್ತು ಎನ್ನುವ ಟಿಪ್ಪಣಿ.

ಕನ್ನಡದ ಜನರಷ್ಟೇ ಏನು, ಚಂದನವನದ ಮಂದಿ ಕೂಡ ‘ಬಾಹುಬಲಿ’ಯನ್ನು ಮುಗಿಬಿದ್ದು ನೋಡಿದ್ದಾರೆ. ಚಿತ್ರ ತೆರೆಕಂಡ ದಿನದಂದೇ ಶಿವರಾಜ್‌ಕುಮಾರ್ ನಸುಕಿಗೇ ‘ಬಾಹುಬಲಿ’ಯನ್ನು ಕಣ್ತುಂಬಿಕೊಂಡು ಅಮೋಘ ಎಂದಿದ್ದಾರೆ. ಪುನೀತ್‌ ಅವರಿಗೂ ಚಿತ್ರದಲ್ಲಿನ ಭುಜಬಲ ಪರಾಕ್ರಮ ಇಷ್ಟವಾಗಿದೆ. ಸುದೀಪ್ ಅವರಂತೂ ಚಿತ್ರತಂಡದ ಒಂದು ಭಾಗ! ಸಾರಾಸಗಟು ಮೆಚ್ಚುಗೆಯ ಹೊರತಾಗಿ ‘ಬಾಹುಬಲಿ’ಯನ್ನು ವಸ್ತುನಿಷ್ಠವಾಗಿ ನೋಡುವವರ ಸಂಖ್ಯೆಯೂ ಕಡಿಮೆಯಿಲ್ಲ. ನಿರ್ಮಾಪಕ–ನಿರ್ದೇಶಕ ಬಿ. ಸುರೇಶ್ ಅವರನ್ನು ಮಾತನಾಡಿಸಿ: ‘ಆತ್ಮವಿಲ್ಲದ ಸಿನಿಮಾ’ ಎನ್ನುವುದು ‘ಬಾಹುಬಲಿ’ ಬಗೆಗಿನ ಅವರ ಒಂದು ಸಾಲಿನ ವಿಮರ್ಶೆ.

‘‘ಹಾಲಿವುಡ್‌ನ ‘ಅವತಾರ್’ ಚಿತ್ರವನ್ನು ನೋಡಿ. ಆ ಚಿತ್ರದಲ್ಲಿ ಮನರಂಜನೆಯಷ್ಟೇ ಇಲ್ಲ. ಪರಿಸರ ಕಾಳಜಿಯಿದೆ. ಮನುಷ್ಯನ ಲಾಲಸೆಯ ಕುರಿತ ಚಿಂತನೆಯಿದೆ. ಇಂಥ ವೈಚಾರಿಕ ಆಯಾಮಗಳು ‘ಬಾಹುಬಲಿ’ಗಿಲ್ಲ. ತಮಿಳಿನ ಇತ್ತೀಚಿನ ಬಹು ಜನಪ್ರಿಯ ಚಿತ್ರ ‘ಕತ್ತಿ’ ಕೂಡ ದೊಡ್ಡ ಸಿದ್ಧಾಂತವೊಂದನ್ನು ಮಂಡಿಸಲು ಪ್ರಯತ್ನಿಸುತ್ತದೆ.

‘ಬಾಹುಬಲಿ’ಯಲ್ಲಿ ಇರುವುದು ದೃಶ್ಯವೈಭವ ಮಾತ್ರ. ಈ ನೆಲದ್ದು ಅನ್ನಿಸುವ ಕಥೆ ಚಿತ್ರದಲ್ಲಿಲ್ಲ. ಒಳ್ಳೆಯ ಅಂಶಗಳನ್ನು ಆರೋಪಿಸಿ ಚಿತ್ರವನ್ನು ನೋಡಬೇಕಾಗಿದೆ’’– ಹೀಗೆ ‘ಬಾಹುಬಲಿ’ ಬಗ್ಗೆ ಟೀಕೆ ಟಿಪ್ಪಣಿ ಮಂಡಿಸುವ ಸುರೇಶ್, ‘‘ಆತ್ಮ ಒಳಗೊಂಡಿದ್ದರೆ ಈ ಸಿನಿಮಾ ಒಂದು ಅದ್ಭುತ ಆಗುತ್ತಿತ್ತು’’ ಎನ್ನುತ್ತಾರೆ. ಅದ್ದೂರಿತನ, ಫ್ಯಾಂಟಸಿ, ನೆಲದ ಘಮ– ಈ ಎಲ್ಲವನ್ನೂ ಒಳಗೊಂಡ ಚಿತ್ರದ ರೂಪದಲ್ಲಿ ಅವರು ಉದಾಹರಿಸುವುದು ತೆಲುಗಿನ ‘ಪಾತಾಳ ಭೈರವಿ’ಯನ್ನು. ತಮಿಳಿನ ‘ಜಂಟಲ್‌ಮನ್’, ‘ಕಾದಲನ್‌’ಗಳಂಥ ಮನರಂಜನೆಯ ಚಿತ್ರಗಳಲ್ಲಿ ಇರುವ ಆತ್ಮದತ್ತಲೂ ಅವರು ಗಮನಸೆಳೆಯುತ್ತಾರೆ.

ನಿರ್ದೇಶಕ ಪಿ. ಶೇಷಾದ್ರಿ ಅವರಿಗೂ ‘ಬಾಹುಬಲಿ’ ಅದ್ಭುತ ಎನ್ನಿಸಿಲ್ಲ. ಓರ್ವ ಸಿನಿಮಾ ವಿದ್ಯಾರ್ಥಿಯಾಗಿ ‘ಬಾಹುಬಲಿ’ಗಿಂತಲೂ ರಾಜಮೌಳಿ ಅವರ ‘ಮಗಧೀರ’ ಹಾಗೂ ‘ಈಗ’ ಚಿತ್ರಗಳೇ ಶೇಷಾದ್ರಿ ಅವರಿಗೆ ಹೆಚ್ಚು ಇಷ್ಟ. ಹಾಗಿದ್ದರೆ ‘ಬಾಹುಬಲಿ’ಗೆ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಮಹತ್ವವಿಲ್ಲವೇ? ಇದೆ. ‘‘ಈ ಸಿನಿಮಾ ಮಂಡಿಸುತ್ತಿರುವ ನಂಬರ್‌ಗಳ ಗಣಿತ ಬೆರಗು ಹುಟ್ಟಿಸುವಂತಿದೆ. ಒಂದು ಭಾರತೀಯ ಸಿನಿಮಾ ಆಗಿ ಇದು ಬೆರಗು ಹುಟ್ಟಿಸುತ್ತದೆ’’ ಎನ್ನುತ್ತಾರೆ ಸುರೇಶ್. ಈ ಬೆರಗಿನ ಜೊತೆಗೇ, ಬಾಹುಬಲಿಯ ಯಶಸ್ಸಿನಿಂದಾಗಿ ಇಂತಹ ಆತ್ಮವಿಲ್ಲದ ಚಿತ್ರಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳ ಆತಂಕವೂ ಅವರಿಗಿದೆ. ಏಕೆಂದರೆ, ಗೆದ್ದೆತ್ತಿನ ಬಾಲ ಹಿಡಿಯುವುದರಲ್ಲಿ ಸಿನಿಮಾ ಮಂದಿಯನ್ನು ಮೀರಿಸುವವರಾರು?

ಆತ್ಮದ ವಿಷಯವನ್ನು ಒಂದು ಕ್ಷಣ ಮರೆತು ನೋಡಿದರೆ, ‘ಬಾಹುಬಲಿ’ ಚಿತ್ರ ತೋರಿಸಿಕೊಟ್ಟ ಮಾರುಕಟ್ಟೆ ಅಚ್ಚರಿ ಹುಟ್ಟಿಸುವಂತಿದೆ. ಕರ್ನಾಟಕದೊಳಗೆ ಇರುವ ಸಿನಿಮಾ ಮಾರುಕಟ್ಟೆಯ ವ್ಯಾಪ್ತಿಯ ಒಂದು ಅಂದಾಜಿನ ಬಗ್ಗೆಯೂ ‘ಬಾಹುಬಲಿ’ ಬೆಟ್ಟುಮಾಡಿದೆ. ‘‘ನಮ್ಮ ಮಾರುಕಟ್ಟೆ ಕೋಲಾರ ಬಿಟ್ಟು ಮುಂದಕ್ಕೆ ಹೋಗುವುದಿಲ್ಲ. ಕನ್ನಡದ ತಾರಾ ವರ್ಚಸ್ಸಿನ ನಟರ ಸಿನಿಮಾಗಳ ಗರಿಷ್ಠ ಹೂಡಿಕೆ ಎಂದರೆ 20 ಕೋಟಿ ರೂಪಾಯಿ. ಲಾಭ ಗಳಿಕೆ 50 ಕೋಟಿ ರೂಪಾಯಿ. ‘ಬಾಹುಬಲಿ’ 200 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯ ಸಿನಿಮಾ.

ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ– ಹೀಗೆ ಎಲ್ಲ ರಾಜ್ಯಗಳಲ್ಲೂ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪುಗೊಂಡ ಈ ಸಿನಿಮಾಕ್ಕೆ ಪ್ರೇಕ್ಷಕರ ಅಭೂತಪೂರ್ವ ಸ್ಪಂದನ ದೊರೆತಿದೆ. ಕನ್ನಡಿಗರು ಸಿನಿಮಾ ನೋಡುವುದಿಲ್ಲ ಎನ್ನುವ ಅಪವಾದವನ್ನೂ ‘ಬಾಹುಬಲಿ’ ಸುಳ್ಳಾಗಿಸಿತು’’ ಎನ್ನುವುದು ನಿರ್ಮಾಪಕ - ನಿರ್ದೇಶಕ ದುನಿಯಾ ಸೂರಿ ಅವರ ವಿಶ್ಲೇಷಣೆ.

ಕರ್ನಾಟಕದಲ್ಲಿ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಕನಕಪುರ ಶ್ರೀನಿವಾಸ್‌ ಅವರ ಪ್ರಕಾರ– ‘‘ಮೂರು ವಾರಗಳಲ್ಲಿ ತೆರಿಗೆ, ಚಿತ್ರಮಂದಿರಗಳ ಬಾಡಿಗೆ ಎಲ್ಲವನ್ನೂ ಕಳೆದು ಸುಮಾರು 20 ಕೋಟಿ ರೂಪಾಯಿ ಗಳಿಕೆ ಆಗಿದೆ. ನಾವು ಖುಷಿಯಲ್ಲಿದ್ದೇವೆ. ಪ್ರೇಕ್ಷಕರ ಸ್ಪಂದನ ಚೆನ್ನಾಗಿದ್ದು, ಗಳಿಕೆ ಇನ್ನೂ ಹೆಚ್ಚಾಗಲಿದೆ’’. ದೇಶದೆಲ್ಲೆಡೆ ಹಾಗೂ ವಿಶ್ವದ ಬೇರೆ ಬೇರೆ ಕಡೆಗಳಲ್ಲಿನ ಪ್ರದರ್ಶನಗಳ ಲೆಕ್ಕವನ್ನೂ ಹಿಡಿದರೆ, ಇಪ್ಪತ್ತನೇ ದಿನದ ವೇಳೆಗೆ ‘ಬಾಹುಬಲಿ’ಯ ಗಳಿಕೆ 450 ಕೋಟಿ ರೂಪಾಯಿಗಳ ಅಂಚಿನಲ್ಲಿದೆ. ಸದ್ಯಕ್ಕೆ 700 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆಯ ‘ಪಿಕೆ’ ಹಾಗೂ 500 ಕೋಟಿಗೂ ಹೆಚ್ಚು ಗಳಿಕೆಯ ‘ಧೂಮ್‌ 3’ ಅತಿ ಹೆಚ್ಚು ಗಳಿಕೆಯ ಭಾರತೀಯ ಸಿನಿಮಾಗಳು ಎನ್ನುವ ಅಗ್ಗಳಿಕೆಗೆ ಪಾತ್ರವಾಗಿವೆ. ಈ ಚಿತ್ರಗಳ ದಾಖಲೆ ಮೀರಿ ನಿಲ್ಲುವತ್ತ ‘ಬಾಹುಬಲಿ’ ನಾಗಾಲೋಟದಿಂದ ಸಾಗುತ್ತಿದೆ.

ಪ್ರಚಾರದ ದೃಷ್ಟಿಯಿಂದಲೂ ‘ಬಾಹುಬಲಿ’ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿರುವ ಸಿನಿಮಾ. ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ತಮ್ಮ ಸಿನಿಮಾ ಸಿದ್ಧತೆಗಳ ವಿಡಿಯೊ ತುಣುಕುಗಳನ್ನು ಪ್ರಚಾರದ ಸರಕಾಗಿ ಬಳಸಿಕೊಂಡರು. ಚಿತ್ರೀಕರಣಕ್ಕೆ ಹಾಕಲಾದ ಸೆಟ್‌ ಕುರಿತು ಕಥೆಗಳು ಹುಟ್ಟಿಕೊಂಡವು. ಪ್ರಭಾಸ್‌, ರಾಣಾ ದಗ್ಗುಬಾಟಿಯ ಮೈ ಮಡಿಕೆಗಳು, ತಮನ್ನಾಳ ಸುರಸೌಂದರ್ಯ– ಎಲ್ಲವೂ ಪ್ರಚಾರದ ಭಾಗವಾಯಿತು. ‘ಪ್ರತಿ ನಿಮಿಷಕ್ಕೆ ಎರಡು ಕೋಟಿ ರೂಪಾಯಿ ವೆಚ್ಚ ಮಾಡಿರುವ ಮಹೋನ್ನತ ಚಿತ್ರ’ ಎನ್ನುವ ವಿಶೇಷಣ ಜಾಹೀರಾತಲ್ಲಿ ಕಾಣಿಸಿಕೊಂಡಿತು. ಹೂಡಿಕೆಯ ದೃಷ್ಟಿಯಲ್ಲಿ ಭಾರತೀಯ ಚಿತ್ರರಂಗದ ಪಾಲಿಗೆ ‘ಬಾಹುಬಲಿ’ ಜೂಜಿನಂಥ ಸಿನಿಮಾ.

ಈವರೆಗೆ ರಜನಿಕಾಂತ್‌ರ ‘ಎಂಧಿರನ್‌’ (130 ಕೋಟಿ), ಕಮಲಹಾಸನ್‌ರ ‘ವಿಶ್ವರೂಪಂ’ (110 ಕೋಟಿ), ಅಮೀರ್ ಖಾನ್‌ರ ‘ಧೂಮ್‌ 3’ (120 ಕೋಟಿ)– ಹೀಗೆ, ಯಾವ ಸಿನಿಮಾದ ಉದಾಹರಣೆ ನೋಡಿದರೂ 150 ಕೋಟಿ ರೂಪಾಯಿ ಹೂಡಿಕೆಯ ಅಂಚು ಮುಟ್ಟಿದ್ದಿಲ್ಲ. ಆದರೆ, ‘ಬಾಹುಬಲಿ’ ಒಮ್ಮೆಗೇ 250 ಕೋಟಿ ರೂಪಾಯಿ ವೆಚ್ಚದ ಮಾತನಾಡತೊಡಗಿತು. ಜನ ಮರುಳೊ ಜಾತ್ರೆ ಮರುಳೊ ಎನ್ನುವಂತಾಗಲು ಇನ್ನೇನು ಬೇಕು?

ನಟ ಅಜೇಯ್‌ರಾವ್ ಅವರಿಗೆ ‘ಬಾಹುಬಲಿ’ ಒಂದು ಅದ್ಭುತ ಅನ್ನಿಸಿದೆ. ಈ ಸಿನಿಮಾ ಅವರ ಪಾಲಿಗೊಂದು ಪ್ರೇರಣೆ. ‘‘ಮೇಕಿಂಗ್ ದೃಷ್ಟಿಯಿಂದ ನನ್ನ ಪಾಲಿಗಿದು ಅತ್ಯುತ್ತಮ ಸಿನಿಮಾ. ಒಂದು ಪ್ರಾದೇಶಿಕ ಚಿತ್ರ ಇಷ್ಟು ದೊಡ್ಡ ಹೆಸರು ಮತ್ತು ವ್ಯಾಪಾರ ಮಾಡಿರುವುದು, ಇಂಥ ಚಿತ್ರಗಳನ್ನು ನಾವೂ ಮಾಡಬೇಕು ಎನ್ನುವುದಕ್ಕೆ ಪ್ರೇರಣೆಯಾಗಿದೆ. ಇದೇ ವೇಳೆಗೆ ‘ಬಾಹುಬಲಿ’ಯಂಥ ದೊಡ್ಡ ಬಜೆಟ್‌ನ ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರಗಳಿಗೆ ಪೆಟ್ಟು ಬೀಳುವುದನ್ನು ಮರೆಯುವಂತಿಲ್ಲ.

ಮೈಸೂರಿನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ನನ್ನ ‘ಕೃಷ್ಣಲೀಲಾ’ ಚಿತ್ರವನ್ನು ‘ಬಾಹುಬಲಿ’ಗಾಗಿ ತೆಗೆಯಲಾಯಿತು. ಇದನ್ನು ಪ್ರದರ್ಶಕರ ದೃಷ್ಟಿಯಿಂದಲೂ ನೋಡಬೇಕಿದೆ. ಒಳ್ಳೆಯ ಬಾಡಿಗೆ ಬರುತ್ತದೆ ಎನಿಸಿದ್ದರಿಂದ ಅವರಿಗೆ ‘ಬಾಹುಬಲಿ’ ಮುಖ್ಯವೆನ್ನಿಸಿತು. ಇದೇ ಸಾಧ್ಯತೆ ಒಳ್ಳೆಯ ಕನ್ನಡ ಚಿತ್ರಗಳಿಗೂ ಇದೆ. ಒಟ್ಟಾರೆ, ದೊಡ್ಡ ಮಟ್ಟದ ಕನ್ನಡ ಸಿನಿಮಾ ಮಾಡಬೇಕು ಎನ್ನುವ ಆಸೆ ಮತ್ತು ಕನಸನ್ನು ‘ಬಾಹುಬಲಿ’ ನನ್ನಲ್ಲಿ ಬಿತ್ತಿದೆ’’ ಎನ್ನುತ್ತಾರೆ ಅಜೇಯ್‌ರಾವ್.

ಸಿನಿಮಾ, ರಂಗಭೂಮಿ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಪ್ರಕಾಶ ಬೆಳವಾಡಿ ಅವರು ‘ಬಾಹುಬಲಿ’ಯಂಥ ಚಿತ್ರಗಳಿಂದ ಉಂಟಾಗುವ ಹೊಡೆತವನ್ನು ತೆರೆದ ಜಾಗತಿಕ ಮಾರುಕಟ್ಟೆಯೊಂದಿಗೆ ತಳಕು ಹಾಕುತ್ತಾರೆ. ‘‘ಹೊರಗಿನ ಪ್ರಭಾವ ಇಲ್ಲದಿದ್ದಾಗ ನೀವು ನಿಮ್ಮ ಮಾರುಕಟ್ಟೆಯನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ನಿಯಂತ್ರಿಸಬಹುದು. ಉದಾಹರಣೆಗೆ, ವಾರದಲ್ಲಿ ಇಷ್ಟು ಸಿನಿಮಾ ಬಿಡುಗಡೆ ಮಾಡಬೇಕು ಅಥವಾ ಚಿತ್ರಮಂದಿರಗಳ ಹಂಚಿಕೆಯ ನೀತಿ ಇತ್ಯಾದಿ. ಆದರೆ, ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಾಗ ನಿಯಂತ್ರಣಗಳೆಲ್ಲ ಕರಗಿಹೋಗಿ ಸ್ಪರ್ಧೆ ಅನಿವಾರ್ಯವಾಗುತ್ತದೆ. ಆದರೆ, ಇಲ್ಲಿನ ಸ್ಪರ್ಧೆಯಲ್ಲೂ ಒಂದು ವೈರುಧ್ಯವಿದೆ.

ದೊಡ್ಡ ಬಜೆಟ್‌ನ ಹೊರಗಿನ ಚಿತ್ರಗಳು ಕನ್ನಡಿಗರನ್ನು ಆಕರ್ಷಿಸುತ್ತವೆ ಎಂದರೆ ಅಷ್ಟು ದೊಡ್ಡ ಮೊತ್ತವನ್ನು ಕನ್ನಡ ಚಿತ್ರಕ್ಕೂ ಹೂಡುವುದು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲೇ ಕನ್ನಡದವರು ಮಾರುಕಟ್ಟೆ ಕಾಪಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಚಳವಳಿ ಹುಟ್ಟಿಕೊಳ್ಳುವುದು. ಈ ಹಿಂದೆ ಪರಭಾಷೆಯ ಚಿತ್ರಗಳು ಬಿಡುಗಡೆಯಾದ ಒಂದು ವಾರದ ನಂತರ ಇಲ್ಲಿ ತೆರೆಗೆ ಬರಬೇಕು ಎನ್ನುವ ಆಗ್ರಹ ಇತ್ತು.

ಈಗ ಭಾರತವನ್ನು ಒಂದೇ ಸಾಮಾನ್ಯ ಮಾರುಕಟ್ಟೆ ಎಂದು ನೋಡುವ ವಾತಾವರಣ ಇದೆ. ವಿಶ್ವ ಮಾರುಕಟ್ಟೆಯ ಜತೆ ಭಾರತದ ಮಾರುಕಟ್ಟೆಯೂ ಸ್ಪರ್ಧಿಸಬೇಕು ಎನ್ನುವ ರೀತಿಯ ತಾತ್ವಿಕತೆ ನಮ್ಮ ಅರ್ಥಶಾಸ್ತ್ರಜ್ಞರಲ್ಲಿ ಬಂದಿದೆ. ಯಾರಿಗೆ ಸ್ಪರ್ಧೆಯ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯ ಇದೆಯೋ ಅವರು ಉಳಿಯುತ್ತಾರೆ. ಆಗದವರು ಕಳೆದು ಹೋಗುತ್ತಾರೆ. ‘ಬಾಹುಬಲಿ’ ದೊಡ್ಡ ಹಿಟ್ ಆಗಿದೆ ಎಂದರೆ ಅದು ಒಂದು ಹೊಸ ಆಯಾಮವನ್ನು ನಮ್ಮ ಮುಂದೆ ಬಿಚ್ಚಿಟ್ಟಿದೆ ಎಂದೇ ಅರ್ಥ. ಇದರಿಂದಾಗಿ ಇಂಥ ಅದ್ದೂರಿ ಸಿನಿಮಾ ಮಾಡುವವವರು ಹೆಚ್ಚಾಗುತ್ತಾರೆ’’ ಎನ್ನುವ ಬೆಳವಾಡಿ, ಸಣ್ಣ ಸಿನಿಮಾಗಳ ಅಸ್ತಿತ್ವಕ್ಕೆ ಉಂಟಾಗಿರುವ ಅಪಾಯವನ್ನು ಸೂಚ್ಯವಾಗಿ ಹೇಳುತ್ತಾರೆ.

ಇದೆಲ್ಲವೂ ಲೆಕ್ಕಾಚಾರಗಳ ಮಾತಾಯಿತು. ದಿನದಿಂದ ದಿನಕ್ಕೆ ‘ಬಾಹುಬಲಿ’ ಹೊಸ ಲೆಕ್ಕಗಳನ್ನು ಹುಟ್ಟುಹಾಕುತ್ತಲೇ ಇದ್ದಾನೆ. ‘ಸಿನಿಮಾ ಸುಮಾರು’ ಎನ್ನುವವರು ಕೂಡ ಅದ್ದೂರಿತನದ ಕಾರಣಕ್ಕೆ ಪುನರಾವರ್ತಿತ ಪ್ರೇಕ್ಷಕರ ಸಾಲಿನಲ್ಲಿದ್ದಾರೆ. ‘ನಮ್ಮ ಸುದೀಪ್‌ಗೆ ‘ನೊಣ’ದಷ್ಟು ನಿಕೃಷ್ಟ ಪಾತ್ರ ಕೊಟ್ಟಿದ್ದಾರೆ’ ಎಂದು ರಾಜಮೌಳಿ ಬಗ್ಗೆ ಬೇಸರಿಸಿಕೊಳ್ಳುವ ಸುದೀಪ್‌ ಅಭಿಮಾನಿಗಳು, ‘ಮುಂದಿನ ಭಾಗದಲ್ಲಿ ಕಿಚ್ಚನದು ಪ್ರಮುಖ ರೋಲ್‌’ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಈಗಾಗಲೇ ‘ಬಾಹುಬಲಿ’ಯ ಎರಡನೇ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಕಾವೇರುತ್ತಿದೆ. ಅಂತರ್ಜಾಲ ತಾಣಗಳಲ್ಲಿ, ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿ ‘ಬಾಹುಬಲಿ’ ಉತ್ತರಾರ್ಧದ ಕಥೆಯ ಹಂದರ ಕಾಣಿಸಿಕೊಳ್ಳುತ್ತಿದೆ. ಬಹುಶಃ, ‘ಬಾಹುಬಲಿ’ಯ ಈ ಜ್ವರ ಚಿತ್ರದ ಎರಡನೇ ಭಾಗ ತೆರೆಕಾಣುವವರೆಗೂ ಯಾವುದಾದರೂ ರೂಪದಲ್ಲಿ ಇದ್ದೇಇರುತ್ತದೆ.

ಮತ್ತೆ ‘ಬಾಹುಬಲಿ’ ಕವಿತೆಯನ್ನು ನೆನಪಿಸಿಕೊಳ್ಳೋಣ. ಬಿಟ್ಟುಕೊಡುವುದರ ಮೂಲಕ ‘ಬಾಹುಬಲಿ’ಯ ಗೆಲುವಿನ ಸಾಲಿಗೆ ಮತ್ತೊಂದು ವಿಶೇಷಣವನ್ನೂ ಸೇರಿಸಬಹುದು. ಅದು ರೂಪಕವೊಂದರ ಅರ್ಥವನ್ನು ಈ ತಲೆಮಾರು ಬಿಟ್ಟುಕೊಟ್ಟಿರುವುದರ ಬಗ್ಗೆ. ಈವರೆಗೆ ಬಾಹುಬಲಿ ಎನ್ನುವ ರೂಪಕ ಸರಳತೆಯ, ವಿರಾಗದ, ಅಹಿಂಸೆಯ ಹಾಗೂ ಬದುಕಿನ ವಿರಾಟ್‌ ದರ್ಶನದ ಸ್ವರೂಪವಾಗಿತ್ತು. ಆದರೆ, ಸಿನಿಮಾದ ‘ಬಾಹುಬಲಿ’ ವೈಭದವ, ರಾಗರಂಜನೆಯ, ಹಿಂಸೆಯ ಹಾಗೂ ಬದುಕಿನ ಐಭೋಗಗಳ ವಿರಾಟ್‌ ದರ್ಶನದ ಪ್ರತಿರೂಪವಾಗಿ ಗೋಚರಿಸುತ್ತಿದ್ದಾನೆ. ಪ್ರಸ್ತುತ ಕನ್ನಡದಲ್ಲಿ ಸಿನಿಮಾ ಮಾಡುತ್ತಿರುವ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ರಾಂಗೋಪಾಲ್‌ ವರ್ಮ ಅವರ ಇತ್ತೀಚಿನ ಟ್ವೀಟ್‌ ಹೀಗಿತ್ತು– ‘ಮುತ್ತಪ್ಪ ರೈ ಭೂಗತ ಲೋಕದ ಬಾಹುಬಲಿ’. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT