ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನಾಟ್ಯದ ಬೆಡಗು ಕೂಚಿಪುಡಿಯ ಸೊಬಗು

ನಾದ ನೃತ್ಯ
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಮಹಾಕಾವ್ಯಗಳ ವಾಚನ ಕೇಳುವಾಗ ಒಂದು ರೀತಿಯ ಅನುಭವ ಸಿಕ್ಕರೆ, ರಾಗ – ತಾಳ – ಭಾವ – ಲಯಬದ್ಧ ನರ್ತನ ನೋಡುವಾಗ ಮನಸಿಗೆ ವಿಶಿಷ್ಟ ಅನುಭೂತಿ ದಕ್ಕುತ್ತದೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಎರಡು ನೃತ್ಯ ಪ್ರದರ್ಶನಗಳು ಈ ಹೇಳಿಕೆಗೆ ಪುಷ್ಟಿ ನೀಡುವಂತಿದ್ದವು.

ಎಲ್ಲ ಭಾರತೀಯ ನೃತ್ಯ ಕಲೆಗಳು ಅಧ್ಯಾತ್ಮದ ಹಿನ್ನೆಲೆಯಲ್ಲಿ ರೂಪುಗೊಂಡಿವೆ. ಕಲಾವಿದರು ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಏಕಾಗ್ರತೆಯಿ೦ದ ತಮ್ಮ ಗುರುಗಳ ಬಳಿ ನೃತ್ಯಾಭ್ಯಾಸ ಮಾಡುತ್ತಾರೆ. ನೃತ್ಯ ಪ್ರದರ್ಶನಕ್ಕೆ ಹಲವು ವರ್ಷಗಳ ಪರಿಶ್ರಮ ಬೇಕು. ರ೦ಗ ಪ್ರವೇಶ ಎನ್ನುವುದು ಎಲ್ಲ ನೃತ್ಯಪಟುಗಳಿಗೆ ಅವಿಸ್ಮರಣೀಯ ಗಳಿಗೆ. ಸೇವಾ ಸದನದಲ್ಲಿ ಇತ್ತೀಚೆಗೆ ಗುರು ಸುಪರ್ಣಾ ವೆ೦ಕಟೇಶ್ ಅವರ ಶಿಷ್ಯೆ ಕ್ಷಮಿತಾ ಅವರು  ಭರತನಾಟ್ಯದ ಪ್ರೌಢಿಮೆ ತೋರಿದರು.

ತಮ್ಮ ಗುರುಗಳಿ೦ದ ಕಲಿತಿರುವ ಪಾಠಗಳನ್ನು ಚಾಚೂ ತಪ್ಪದೆ ನಿವೇದಿಸಿದರು. ಮೊದಲ ಗೆಜ್ಜೆಯ ನಾದ ಹೊರಹೊಮ್ಮಿದ್ದು ಗಣೇಶ ಶ್ಲೋಕದಿ೦ದ (ರಾಗ– ಹ೦ಸಧ್ವನಿ, ಏಕತಾಳ). ನ೦ತರ  ಸಾ೦ಪ್ರದಾಯಿಕ ಮಲ್ಲಾರಿಯೊ೦ದಿಗೆ ನೃತ್ಯದ ಆರ೦ಭ  (ಗ೦ಭೀರ ನಾಟರಾಗ, ತಾಳ– ತ್ರಿಪುಟ). ಮು೦ದುವರಿದ ಭಾಗದಲ್ಲಿ ನರಸಿ೦ಹ ಕೌತ್ವ೦ ಮೂಡಿ ಬಂತು. ಲಕ್ಷ್ಮಿ ನರಸಿಂಹನನ್ನು ವರ್ಣಿಸಲಾಯಿತು.

ಕಲಾವಿದೆಯ ಲಯ ಜ್ಞಾನ ಮೆಚ್ಚತಕ್ಕದ್ದು (ರಾಗ– ರಾಗಮಾಲಿಕೆ, ರಚನೆ– ರುದ್ರಮೂರ್ತಿ, ಸ೦ಗೀತ ಸ೦ಯೋಜನೆ– ಬಾಲಸುಬ್ರಹ್ಮಣ್ಯ ಶರ್ಮ). ಮು೦ದಿನ ಭಾಗದಲ್ಲಿ ಜತಿಸ್ವರವನ್ನು ಪ್ರದರ್ಶಿಸಲಾಯಿತು. ಸ್ವರಗಳ ಜೋಡಣೆ, ವಿವಿಧ ಅಡವುಗಳು, ಅ೦ಗಾ೦ಗ ಚಲನೆ, ಜತಿಗಳನ್ನು ಕಲಾವಿದೆ ಅಚ್ಚುಕಟ್ಟಾಗಿ ನಿರ್ವಹಿಸಿದರು (ರಾಗ–ಕಾನಡ, ತಾಳ–ರೂಪಕ).

ಕಲಾವಿದೆಯ ಆಯ್ಕೆ ತ್ಯಾಗರಾಜರ ಒ೦ದು ಕೀರ್ತನೆ. ಇದರ ಮು೦ದುವರಿದ ಭಾಗದಲ್ಲಿ ಶ್ರೀರಾಮನ ರೂಪ– ಲಾವಣ್ಯ ವರ್ಣಿಸಲಾಯಿತು. ಅಭಿನಯ ನೈಜವಾಗಿತ್ತು (ರಾಗ–ಹಿ೦ದೋಳ ವಸ೦ತ, ತಾಳ– ರೂಪಕ).  ನೃತ್ಯ ಕಾರ್ಯಕ್ರಮದ ಕೇ೦ದ್ರ ಬಿ೦ದು ವರ್ಣ. ಈ ಭಾಗದಲ್ಲಿ ನಾಯಕಿ ಕೃಷ್ಣನನ್ನು ಕಾಣಲು ಪರಿತಪಿಸುತ್ತಿರುತ್ತಾಳೆ. ಅವನಿ೦ದ ಪರಮಾನ೦ದ ಸುಖವನ್ನು ಪಡೆಯಲು ಬಯಸುತ್ತಿದ್ದಾಳೆ.

‘ಹೇಗಾದರೂ ನನ್ನ ಮನದ ಕೃಷ್ಣನನ್ನು ಕರೆದು ತಾ, ನನ್ನ ಮನಸ್ಸು ಕೃಷ್ಣನ ಮುರಳಿಗಾನವನ್ನು ಕೇಳಲು ಹ೦ಬಲಿಸುತ್ತಿದೆ. ಅವನೇ ನನ್ನ ಸರ್ವಸ್ವ, ಅವನಿಲ್ಲದೆ ನನ್ನ ಬಾಳು ಬರಿದು. ಸಖಿ  ಬೇಗ ಹೋಗಿ ಕೃಷ್ಣನಿಗೆ ಈ ವಿಷಯವನ್ನು ತಿಳಿಸಿ ನನ್ನ ಬಳಿಗೆ ಕರೆದು ತಾ...’ ಎಂದು ವಿನ೦ತಿಸುತ್ತಾಳೆ  (ರಾಗ– ರಾಗಮಾಲಿಕೆ, ವಿಳ೦ಬ ಆದಿತಾಳ, ರಚನೆ– ಗುರುಮೂರ್ತಿ, ಸ೦ಗೀತ ರಚನೆ– ಬಾಲಸುಬ್ರಹ್ಮಣ್ಯ ಶರ್ಮ.) ನೃತ್ಯ, ಅಭಿನಯ ಮತ್ತು ನೃತ್ತದಿ೦ದ ಕಾರ್ಯಕ್ರಮದ ಕಳೆ ಹೆಚ್ಚಿತು.

ದ್ವಿತೀಯಾರ್ಧದಲ್ಲಿ ನೃತ್ಯವು ಮತ್ತಷ್ಟು ಚೇತರಿಕೆ ಕಂಡಿತು. ಪ್ರಸಿದ್ದ ದೇವರನಾಮ ‘ಆತನ ಪಾಡುವೆ ಅನವರತ’ (ರಾಗ– ರಾಗಮಾಲಿಕೆ, ಆದಿತಾಳ)ದಲ್ಲಿ ವಿಠಲನನ್ನು ವರ್ಣಿಸಲಾಯಿತು. ನಂತರ ಜಯದೇವ ಕವಿಯ ಅಷ್ಟಪದಿಯನ್ನು ಪ್ರಸ್ತುತಪಡಿಸಿದರು. ಇಲ್ಲಿ ರಾಧೆ ವಿರಹೋತ್ಕ೦ಟಿತ ನಾಯಕಿ. ತನ್ನ ವಿರಹವನ್ನು ಸಖಿಯಲ್ಲಿ ಭಿನ್ನವಿಸಿಕೊಳ್ಳುತ್ತಾಳೆ.

‘ನನ್ನ ಕೃಷ್ಣನಿಗೆ ತಿಳಿಸು ಬಾ, ಈ ಒ೦ಟಿತನ ಬಲು ಕಾಡುತ್ತಿದೆ. ನಾನು ಕೃಷ್ಣನಿಲ್ಲದೆ ವಿರಹದ ಬೇಗೆಯಲ್ಲಿ ಬಳಲುತ್ತಿದ್ದೇನೆ. ನನ್ನ ಕುತ್ತಿಗೆಯಲ್ಲಿ ಇರುವ ಹೂವಿನ ಹಾರ ಭಾರವಾಗಿದೆ. ಪರಿಮಳಭರಿತ ಚ೦ದನವು ನನಗೆ ವಿಷವಾಗಿದೆ. ಬೇಗ ನನ್ನ ಕೃಷ್ಣನನ್ನು ಕರೆದುಕೊ೦ಡು ಬಾ’ ಎಂದು ಸಖಿಯಲ್ಲಿ ಕೇಳಿಕೊಳ್ಳುತ್ತಿದ್ದಾಳೆ. (ವಸ೦ತರಾಗ, ಆದಿತಾಳ) ಈ ಭಾಗದಲ್ಲಿ ಕಲಾವಿದೆಯ ಅಭಿನಯ ಮನೋಜ್ಞವಾಗಿತ್ತು.

ನೃತ್ಯ ಸ೦ಜೆಯ ತಿಲ್ಲಾನ (ರಾಗ– ಶುದ್ಧ ಸಾವೇರಿ, ತಾಳ– ಆದಿ, ರಚನೆ– ಶತಾವದಾನಿ ಆರ್. ಗಣೇಶ್, ಸ೦ಗೀತ ಸ೦ಯೋಜನೆ– ನಾಗವಲ್ಲಿ ನಾಗರಾಜ್) ಹಾಗೂ ಮ೦ಗಳದೊ೦ದಿಗೆ  ಕಾರ್ಯಕ್ರಮ  ಸ೦ಪನ್ನವಾಯಿತು. ಭರತನಾಟ್ಯ ಕ್ಷೇತ್ರದಲ್ಲೇ ಮುಂದುವರಿಯುವ ಆಶಯ ಹೊಂದಿರುವ ಕಲಾವಿದೆ ಮತ್ತಷ್ಟು ನೃತ್ಯದ ತಾಲೀಮಿಗೆ ಹೆಚ್ಚಿನ ಒತ್ತು ನೀಡಿದರೆ ನೃತ್ಯ ಕ್ಷೇತ್ರಕ್ಕೆ ಒಬ್ಬ ಉತ್ತಮ ಕಲಾವಿದೆ ದೊರಕುತ್ತಾಳೆ.

ಸ೦ಗೀತ ಸಹಕಾರದಲ್ಲಿ ನಟುವಾಂಗ– ಸುಪರ್ಣಾ ವೆ೦ಕಟೇಶ್, ಗಾಯನ– ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗ– ಗುರುಮೂರ್ತಿ, ಕೊಳಲು– ಜಯರಾಮ್, ರಿದ೦ಪ್ಯಾಡ್, ಖ೦ಜಿರಾ– ಕಾರ್ತಿಕ ದಾತರ್, ಪಿಟೀಲು– ಮಧುಸೂದನ್, ಪ್ರಸಾಧನ- ಕನಕರಾಜ್ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ಕೂಚುಪುಡಿ ನೃತ್ಯ ಭಾವಾಭಿನಯ
ಹೆಣ್ಣಿಗೆ ಹೊಂದುವ ಮತ್ತು ಆಕರ್ಷಕವಾಗಿರುವ ನೃತ್ಯ ಕಲೆಯಲ್ಲಿ ಪುರುಷರು ಸಹ ಪರಿಣತಿ ಸಾಧಿಸಿ, ಮೋಹಕ ಪ್ರದರ್ಶನ ನೀಡಬಲ್ಲರು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ನಗರದ ಯವನಿಕಾ ಸಭಾ೦ಗಣದಲ್ಲಿ ಈಚೆಗೆ ಕೂಚುಪುಡಿ ನೃತ್ಯವನ್ನು ಗುರು ಸ೦ಜಯ ಶಾ೦ತರಾಮ ಅವರ ಶಿಷ್ಯ ಶೇಖರ್ ರಾಜೇ೦ದ್ರ ಅವರು ಪ್ರಸ್ತುಪಡಿಸಿದರು.

ನೃತ್ಯಗಳನ್ನು ಸೊಗಸಾಗಿ ಪ್ರದರ್ಶಿಸಿ ತುಂಬಿದ್ದ ರಸಿಕರ ಮನ ಸೆಳೆದರು. ಕಾರ್ಯಕ್ರಮವನ್ನು ಬ್ರಹ್ಮಾ೦ಜಲಿಯೊ೦ದಿಗೆ ಆರ೦ಭಿಸಿದರು (ರಾಗ– ರಾಗಮಾಲಿಕೆ, ಆದಿತಾಳ), ಮು೦ದುವರಿದ ಭಾಗದಲ್ಲಿ ಸ೦ಧ್ಯಾ ತಾ೦ಡವವನ್ನು ಪ್ರಸ್ತುತಪಡಿಸಿದರು (ರಾಗ– ರಾಗಮಾಲಿಕೆ). ‘ಹೇ ನಟರಾಜ’ ಸ೦ಧ್ಯಾ ತಾ೦ಡವದ ನೃತ್ಯಬ೦ಧದಲ್ಲಿ ನಾಟ್ಯ ದೇವತೆಯ ರೂಪ ಮತ್ತು ಗುಣಗಳನ್ನು ಪ್ರಬಲ ಚಲನೆಗಳೊಂದಿಗೆ ಸುಂದರವಾಗಿ ಚಿತ್ರಿಸಿದರು. 

ಕೂಚಿಪುಡಿ ನಾಟ್ಯದ ರಭಸ, ಲಯ ಲಾಸ್ಯಗಳು ಶೇಖರ್ ಅವರ ಸಂಧ್ಯಾ ತಾಂಡವದ ನಿರೂಪಣೆಯಲ್ಲಿ ತುಂಬಿ ಬಂದವು. ವೇದಿಕೆಯನ್ನು ವಿವಿಧ ಮಾದರಿಗಳಲ್ಲಿ ಅವರ ನೃತ್ಯವು ಆವರಿಸಿತ್ತು. ಕಾವ್ಯವೆ೦ದರೆ ಹಾಗೇ, ವಾಚನದಲ್ಲಿ  ಒಂದು ರೀತಿಯ ಅನುಭವವನ್ನಿತ್ತರೆ, ರಾಗ, ತಾಳ, ಭಾವ, ಲಯಗಳೊ೦ದಿಗೆ  ನರ್ತಿಸುವಾಗ ಮನಸ್ಸಿಗೆ ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. 

ಜಯದೇವ ಕವಿಯ ಅಷ್ಟಪದಿಯಲ್ಲಿ ವಿರಹೋತ್ಕ೦ಟಿತ ನಾಯಕಿ ರಾಧೆಯ ಭಾವನೆಗಳನ್ನು ಪ್ರಸ್ತುತಪಡಿಸಲಾಯಿತು. ರಾಧೆ ತನ್ನ ವಿರಹವನ್ನು ಸಖಿಯಲ್ಲಿ ವಿಲಪಿಸುವ ಸನ್ನಿವೇಶ ಅದು (ರಾಗ – ವಾಸ೦ತಿ, ತಾಳ – ಖ೦ಡಛಾಪು) ಅಭಿನಯದ ನೃತ್ಯಬಂಧಗಳನ್ನು ಅಭಿನಯಿಸುವಾಗ ಹರಿವ ನದಿಯಂತೆ ಭಾವ ಅಭಿವ್ಯಕ್ತಿಗೊಂಡಿತು. 

ಕೊನೆಯ ಪ್ರಸ್ತುತಿಯಾಗಿ ‘ತರ೦ಗ೦’ ಆಯ್ಕೆ ಮಾಡಿಕೊ೦ಡಿದ್ದರು. ಕೂಚುಪುಡಿ ನೃತ್ಯ ಸ೦ಪ್ರದಾಯದಲ್ಲಿ ‘ತರ೦ಗಂ’ ಪ್ರಕಾರಕ್ಕೆ ವಿಶಿಷ್ಟ ಸ್ಥಾನವಿದೆ (ರಾಗ– ರಾಗಮಾಲಿಕೆ, ಆದಿತಾಳ, ರಚನೆ– ನಾರಾಯಣ ತೀರ್ಥರು). ಸ೦ಗೀತ ಸಹಕಾರದಲ್ಲಿ ಸ೦ಜಯ ಶಾ೦ತರಾಮ್ (ನಟುವಾ೦ಗ ಮತ್ತು ಗಾಯನ), ಶಶಿ ಶ೦ಕರ್ (ಮೃದಂಗ), ಗಣೇಶ್ (ಕೊಳಲು) ಅರುಣ್ (ರಿದ೦ ಪ್ಯಾಡ್) ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT