ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿರುವ ಕಾಮಗಾರಿ

ಪುಟ್ಟಣ್ಣ ಶೆಟ್ಟಿ ಪುರಭವನವಾಗಿ ಮರುನಾಮಕರಣ?
Last Updated 29 ಜುಲೈ 2014, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿ ರುವ ಐತಿಹಾಸಿಕ ಕಟ್ಟಡ ಸರ್‌ ಪುಟ್ಟಣ್ಣಚೆಟ್ಟಿ ಪುರಭವನದ ಒಳಾಂಗಣ ಕಾಮಗಾರಿಯು ಭರದಿಂದ ಸಾಗಿದೆ.

ಜೂನ್‌ 26 ರಂದು ಪುಟ್ಟಣ್ಣಚೆಟ್ಟಿ ಪುರಭವನದ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪುರಭವನದ ಒಳಾಂಗಣವನ್ನು ನವೀಕರಣಗೊಳಿಸಿ ಹೊಸ ರೂಪು ನೀಡಿ, ಸುಸಜ್ಜಿತ ಗೊಳಿಸಲಾಗುತ್ತಿದೆ. ‘ವೇದಿಕೆಯನ್ನು ಹೊಸ ರೂಪದಲ್ಲಿ  ಆಕರ್ಷಣೀಯವಾಗಿ ನಿರ್ಮಿಸಲಾಗು ತ್ತಿದೆ. ವೇದಿಕೆಯನ್ನು ಸಿನಿಮಾ ಥಿಯೇ ಟರ್‌ನಂತೆ ವಿನ್ಯಾಸಗೊ ಳಿಸಲಾಗು ವುದು. ಸ್ವಯಂಚಾಲಿತ ಲೈಟಿಂಗ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್‌ ಗಿರಿ ಶೆಟ್ಟಿ ಹೇಳಿದರು.

‘ಹೊಸ ರೀತಿಯಲ್ಲಿ ಅತಿ ಚೆಂದನೆಯ ಒಳ್ಳೆಯ ಗುಣಮಟ್ಟದ ಪರದೆಗಳನ್ನು ಜೋಡಿಸಲಾಗುತ್ತಿದೆ. ನೂತನ ತಂತ್ರ ಜ್ಞಾನದಿಂದ ಪುರಭವನದ ಒಳಾಂಗ ಣವನ್ನು ಸಜ್ಜುಗೊಳಿಸ ಲಾಗುತ್ತಿದೆ.  ಹವಾನಿಯಂತ್ರಣ ವ್ಯವಸ್ಥೆಯ ಕೆಲಸ ನಡೆಯುತ್ತಿದೆ. ಆಸನಗಳು ಶೇ 5 ಅಥವಾ 10 ರಷ್ಟು ಹೆಚ್ಚಾಗಬಹುದು’ ಎಂದು ಮಾಹಿತಿ ನೀಡಿದರು.

‘ಪುರಭವನವು ಐತಿಹಾಸಿಕ ಕಟ್ಟಡ ವಾಗಿರುವುದರಿಂದ ಕಟ್ಟಡದ ಹೊರ ಭಾಗದಲ್ಲಿ ಕಾಮಗಾರಿಯನ್ನು ಕೈಗೊಂ ಡಿಲ್ಲ. ಕೇವಲ ಒಳಾಂಗಣದ ಕಾಮಗಾ ರಿಯನ್ನು ಮಾತ್ರ ಕೈಗೊಳ್ಳಲಾಗಿದೆ’ ಎಂದು ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್‌. ಬಸವರಾಜು ಹೇಳಿದರು. ‘ಇನ್ನು ನಾಲ್ಕು ತಿಂಗಳಲ್ಲಿ ಪುರ ಭವನದ ಒಳಾಂಗಣ ನವೀಕರಣ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು’ ಎಂದರು.

‘ಧ್ವನಿ ಪ್ರತಿಫಲನ ನಿರೋಧಕ, ಮೇಲ್ಛಾವಣಿ ಕಾಮಗಾರಿ, ವೇದಿಕೆ ನವೀಕರಣ, ಪರದೆಗಳು, ಬೆಳಕಿನ ವ್ಯವಸ್ಥೆ, ಹವಾನಿಯಂತ್ರಣ, ಅಗ್ನಿಶಾಮಕ ಉಪಕರಣಗಳು, ಆಸನದ ವ್ಯವಸ್ಥೆ, ನಿಯಂತ್ರಣ ಕೊಠಡಿ, ವಿದ್ಯುತ್‌ ವಾಹಕ ಗಳ ಬದಲಾವಣೆ, ಶೌಚಾಲಯ ಮುಂತಾದ ವ್ಯವಸ್ಥೆಗಳ ಕಾಮಗಾ ರಿಯನ್ನು ಕೈಗೊಳ್ಳಲಾಗಿದೆ’ ಎಂದರು.

‘ಒಟ್ಟು ₨ 5 ಕೋಟಿಯಲ್ಲಿ ನವೀಕರಣ ಕಾರ್ಯವನ್ನು ಕೈಗೊಳ್ಳ ಲಾಗಿದೆ. ಐದು ವರ್ಷಗಳು ಸಂಜಯ್‌ ಮಾರ್ಕೆಟಿಂಗ್‌ ಅಂಡ್‌ ಪಬ್ಲಿಸಿಟಿ ಸರ್ವೀಸಸ್‌ ಸಂಸ್ಥೆಯೇ ನಿರ್ವಹಣೆ ಜವಾಬ್ದಾರಿ ಹೊತ್ತಿದೆ’ ಎಂದರು.

ಪುರಭವನದ ಇತಿಹಾಸ
ಮೈಸೂರಿನ ಮಹಾರಾಜ ಕೃಷ್ಣ ರಾ ಜೇಂದ್ರ ಒಡೆಯರ್‌ ಅವರು 1933 ರ ಮಾರ್ಚ್‌ 6 ರಂದು ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ್ದರು. ಎರಡು ವರ್ಷಗಳಲ್ಲಿಯೇ ಕಟ್ಟಡದ ನಿರ್ಮಾ ಣವು ಪೂರ್ಣವಾಗಿ,   ಸೆಪ್ಟೆಂಬರ್‌ 11, 1935 ರಂದು ಮೈಸೂರಿನ ಯುವ ರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ್‌ ಅವರು ಕಟ್ಟಡವನ್ನು ಉದ್ಘಾಟಿಸಿದರು.
ಪುರಭವನ ನಿರ್ಮಾಣಕ್ಕೆ ಆಗ ತಗುಲಿದ ವೆಚ್ಚ  1.75 ಲಕ್ಷ. 14,500 ಚದರ ಅಡಿ ಕಟ್ಟಡದ ವಿಸ್ತೀರ್ಣವಾಗಿದೆ. 1,038 ಆಸನ ಗಳನ್ನು ಹೊಂದಿದ್ದ ಎರಡು ಮಹಡಿಗಳ ಕಟ್ಟಡವಾಗಿತ್ತು.

‘ಕೃಷ್ಣರಾಜೇಂದ್ರ ಒಡೆಯರ್‌ ಅವರ  ಆಡಳಿತದ 25 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ನಾಡಿನೆಲ್ಲೆಡೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳ ಲಾಯಿತು. ಆಗ ಅಸ್ತಿತ್ವದಲ್ಲಿದ್ದ ನಗರ ಸುಧಾರಣೆ ಮಂಡಳಿಯ (ಸಿಟಿಟಿಬಿ) ಅಧ್ಯಕ್ಷರಾಗಿದ್ದ ಪುಟ್ಟಣ್ಣ ಶೆಟ್ಟಿ ಅವರು ಪುರಭವನ ನಿರ್ಮಾಣದ ಕುರಿತು ಚಿಂತನೆ ನಡೆಸಿದರು. ಪುರಭವನ ನಿರ್ಮಾಣಕ್ಕೆ ಬಹುತೇಕ ಅವರೇ ಕಾರಣಕರ್ತರು. ಇದರಿಂದ ಅವರ ಹೆಸರನ್ನೇ ನಾಮಕರಣ ಮಾಡ ಲಾಯಿತು’ ಎಂದು ಇತಿಹಾಸ ತಜ್ಞ ಸುರೇಶ್‌ ಮೂನ ತಿಳಿಸಿದರು.

ಆಗ ಸರ್‌.ಮಿರ್ಜಾ ಇಸ್ಮಾಯಿಲ್‌ ಅವರು ದಿವಾನರಾಗಿದ್ದರು.  ಎಸ್‌. ಲಕ್ಷ್ಮಿನರಸಪ್ಪ ಅವರು ಕಟ್ಟಡದ ವಾಸ್ತುಶಿಲ್ಪಿಯಾಗಿದ್ದರು. ಮುಖ್ಯ ಎಂಜಿನಿಯರ್‌ಗಳಾದ ಎಂ.ಜಿ.ರಂಗಯ್ಯ, ಎನ್‌.ಎನ್‌.ಅಯ್ಯಂಗಾರ್‌, ಎ. ತಂದೋಣಿ ರಾವ್‌, ಗುತ್ತಿಗೆದಾರ  ಚಿಕ್ಕನಂಜುಂಡಪ್ಪ ಅವರು ಪುರಭವನ ನಿರ್ಮಾಣಕ್ಕೆ ಶ್ರಮಿಸಿದರು.

ಪುರಭವನದ ನವೀಕರಣ:  ದೇವರಾಜ ಅರಸು ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಪುರಭವನದಲ್ಲಿ ಏರ್ಪಡಿಸಿದ್ದ ರಶ್ಯನ್‌ ಬ್ಯಾಲೆ ನೃತ್ಯವನ್ನು ನೋಡಲು ಆಗಮಿ ಸಿದ್ದರು. ಆಗ ಅವರಿಗೆ ಕಟ್ಟಡದ ಅವ್ಯವಸ್ಥೆಯ ಪರಿಚಯವಾಯಿತು. ಪುರಭವನದ ಧ್ವನಿ ವ್ಯವಸ್ಥೆ ಸರಿಯಾಗಿರಲಿಲ್ಲ ಮತ್ತು ಕುಳಿತು ನೋಡುವ ಆಸನಗಳ ವ್ಯವಸ್ಥೆಯೂ ಸರಿಯಿಲ್ಲ ಎಂಬುದನ್ನು ಕಂಡುಕೊಂಡ ಅವರು ಕಟ್ಟಡದ ಪುನರ್‌ ನಿರ್ಮಾಣಕ್ಕೆ ಆದೇಶಿಸಿದರು.

1976 ರಲ್ಲಿ ಕಟ್ಟಡದ ಪುನರ್‌ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳ ಲಾಯಿತು. ಕಟ್ಟಡದ ಪುನರ್‌ ನಿರ್ಮಾ ಣಕ್ಕೆ ಆಗ 10 ಲಕ್ಷ ವೆಚ್ಚವನ್ನು ಅಂದಾಜಿಸಲಾಗಿತ್ತು. ಆದರೆ, ಪುನರ್‌ ನಿರ್ಮಾಣ ಕಾಮಗಾರಿಯು ಒಟ್ಟು 14 ವರ್ಷಗಳ ಕಾಲ ಹಿಡಿಯಿತು. ಇದರಿಂದ, ಕಾಮಗಾರಿಗೆ ತಗುಲಿದ ವೆಚ್ಚ ಒಟ್ಟು  65 ಲಕ್ಷ. 1,038 ಆಸನಗಳನ್ನು 810 ಆಸನಗಳಿಗೆ ಇಳಿಸಲಾಯಿತು.

ಹೆಸರು ಬದಲು?
ಪುಟ್ಟಣ್ಣ ಚೆಟ್ಟಿ ಅವರ ಹೆಸರು ಶೆಟ್ಟಿ ಎಂದಿರುವುದರಿಂದ ಬದಲಾಯಿಸಬೇಕು ಎಂದು ಅವರ ಮಗ ಮತ್ತು ಸೊಸೆ ಮನವಿ ಮಾಡಿದ್ದಾರೆ. ಹೀಗಾಗಿ, ಅದನ್ನು ಬದಲಾಯಿಸಿ ಮರು ನಾಮಕರಣ ಮಾಡಲಾಗುವುದು.

ಇದುವರೆಗೆ ಪುರಭವನದ ಬಾಡಿಗೆಯು  5,000 ಇತ್ತು.  ನವೀಕರಣದ ನಂತರ ಬಾಡಿಗೆಯನ್ನು ಹೆಚ್ಚಿಸಲೇಬೇಕು. ಹವಾನಿಯಂತ್ರಣ ವ್ಯವಸ್ಥೆ ಮತ್ತಿತರ ವ್ಯವಸ್ಥೆಯಿಂದ ಕಟ್ಟಡವು ಸುಸಜ್ಜಿತವಾಗಲಿದೆ. ಸಾರ್ವಜನಿಕರಿಗೆ ಹೊರೆಯಾಗದಂತೆ ಹಾಗೂ ಬಿಬಿಎಂಪಿಗೆ ನಷ್ಟವಾಗದಂತೆ ಬಾಡಿಗೆಯನ್ನು ಹೆಚ್ಚಿಸುವುದರ ಕುರಿತು ಚರ್ಚಿಸಿ ನಂತರ ತೀರ್ಮಾನಿಸಲಾಗುವುದು.

–ಎ.ಎಚ್‌.ಬಸವರಾಜು, ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT