ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಪೂರ ಭರವಸೆ ಜಾರಿ ಹೇಗೆ: ಕಾಂಗ್ರೆಸ್‌

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿಯು ಕಷ್ಟಸಾಧ್ಯವಾದ ‘ಭರಪೂರ ಭರವಸೆ’ಗಳನ್ನು ಪುಂಖಾನುಪುಂಖ­ವಾಗಿ ಪ್ರಕಟಿಸುತ್ತಿದೆ ಎಂದು ಝಾಡಿಸಿದ ಪ್ರತಿಪಕ್ಷಗಳು, ‘ಈ ಯೋಜನೆಗಳನ್ನು ಜಾರಿಗೊಳಿಸುವ ಬಗೆ ಹೇಗೆ ಎಂಬುದನ್ನು ವಿವರಿಸಬೇಕು’ ಎಂದು ಒತ್ತಾಯಿಸಿದವು.

ನೀವು (ಬಿಜೆಪಿ ನೇತೃತ್ವದ ಸರ್ಕಾರ) ಇಷ್ಟು ಸೊಕ್ಕಿನಿಂದ ಮೈಮರೆಯಬಾರದು ಎಂದು ಎಚ್ಚರಿಸುತ್ತಿದ್ದೇನೆ. ಹಿಂದೆ ನಾವು ಹಲವು ಬಹುಮತದ ಸರ್ಕಾರಗಳನ್ನು ನೋಡಿದ್ದೇವೆ. ಅಂತಹ ಸರ್ಕಾರಗಳ ವಿರುದ್ಧ ಹೋರಾಟವನ್ನೂ ಮಾಡಿದ್ದೇವೆ. ಇಂದಿರಾ ಗಾಂಧಿ ಅವರ ಸರ್ಕಾರ ಇರಬಹುದು ಅಥವಾ ರಾಜೀವ್‌ ಗಾಂಧಿ ಅವರ ಸರ್ಕಾರ ಇರಬಹುದು, ಎಲ್ಲರ ವಿರುದ್ಧವೂ ಹೋರಾಡಿದ್ದೇವೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಹೇಳಿದರು.

ರಾಷ್ಟ್ರಪತಿ ಅವರ ಭಾಷಣದ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಬುಧವಾರ ಮಾತನಾಡಿದ ಮುಲಾಯಂ ಅವರು, ಆಡಳಿತ ಪಕ್ಷದ ಸದಸ್ಯರ ಗದ್ದಲದ ನಡುವೆಯೇ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ‘ನೀವು ಪಾಕ್‌ ಆಕ್ರಮಿತ ಕಾಶ್ಮೀರವನ್ನೂ ಪುನಃ ಸ್ವಾಧೀನಕ್ಕೆ ತೆಗೆದುಕೊಳ್ಳುವ ಭರವಸೆ ನೀಡಿದ್ದೀರಿ. ಚೀನಾ ಆಕ್ರಮಿಸಿರುವ ಭೂಪ್ರದೇಶವನ್ನೂ ವಾಪಸ್‌ ಪಡೆಯುವ ಮಾತು ಆಡಿದ್ದೀರಿ.

ಈ ಕೆಲಸಗಳನ್ನು ಯಾವ ಕಾಲಮಿತಿಯೊಳಗೆ ಮಾಡುತ್ತೀರಿ ಎಂಬುದನ್ನು ತಿಳಿಸಿ. ನಾವೂ ಬೆಂಬಲ ನೀಡುತ್ತೇವೆ’ ಎಂದು ಕುಟುಕಿದರು.
‘ನವಾಜ್‌ ಷರೀಫ್‌ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಪಾಕ್‌ ಆಕ್ರಮಿತ ಕಾಶ್ಮೀರ ಹಿಂದಿರುಗಿಸುವಂತೆ ಕೇಳಿದ್ದೀರಾ? ಷರೀಫ್‌ ಅವರೊಂದಿಗೆ ಯಾವ್ಯಾವ ವಿಷಯಗಳ ಕುರಿತು ಚರ್ಚೆ ಮಾಡಿದಿರಿ? ಇವನ್ನು ನಿಗೂಢವಾಗಿ ಇಡುತ್ತೀರೋ ಅಥವಾ ಏನು ನಡೆಯಿತೆಂಬುದನ್ನು ಸಂಸತ್ತಿಗೆ ತಿಳಿಸುತ್ತೀರೋ?– ಎಂದು ಕೇಳಿದರು.

ಇದೇ ವೇಳೆ ಕಾಂಗ್ರೆಸ್‌ನ ಹಿರಿಯ ಮುಖಂಡ ಅಮರಿಂದರ್‌ ಸಿಂಗ್‌ ಅವರು ಈಗ ಮುಂಗಾರು ವಿಳಂಬವಾಗಿರುವುದಕ್ಕೆ ‘ಎಲ್‌ ನಿನೊ’ ಪರಿಣಾಮ ಕಾರಣ ಎನ್ನುತ್ತಾರೆ. ಆದರೆ ಇನ್ನು ಕೆಲವರು ಇದಕ್ಕೆ ‘ಎಲ್‌ ಮೋದಿ’ ಪರಿಣಾಮ ಎನ್ನುತ್ತಿದ್ದಾರೆ. ಏಕೆಂದರೆ ಯಾರಾದರೂ ತಪ್ಪೆಸಗಿದರೆ ಹೀಗೆ ಆಗುತ್ತದೆ. ಗುಜರಾತ್‌ನಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆಯಲ್ಲ ಎಂದು ಸಿಂಗ್‌ ಚುಚ್ಚಿದರು. ಆಗ ಬಿಜೆಪಿ ಸದಸ್ಯರು ಎದ್ದು ನಿಂತು ಪ್ರತಿಭಟನೆ ವ್ಯಕ್ತಪಡಿಸಿದರು.

ಒವೈಸಿ ಬಾಯಿ ಮುಚ್ಚಿಸಲು ಬಿಜೆಪಿ ಯತ್ನ
ನವದೆಹಲಿ (ಪಿಟಿಐ): ಗೋಧ್ರಾ ಗಲಭೆ, ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣ ಮತ್ತು ಬಾಬರಿ ಮಸೀದಿ ನೆಲಸಮ ಪ್ರಕರಣಗಳು ಲೋಕಸಭೆಯಲ್ಲಿ ಬುಧವಾರ ಮಾರ್ದನಿಸಿ ಗದ್ದಲಕ್ಕೆ ಕಾರಣವಾಯಿತು.

ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ ವೇಳೆ ಈ ವಿಷಯಗಳ ಜೊತೆಗೆ ಮಹಾತ್ಮ ಗಾಂಧಿ ಅವರ ಹತ್ಯೆಗೆ ಕಾರಣರು ಯಾರು ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿದರು. ಇದನ್ನು ಪ್ರತಿಭಟಿಸಿದ ಬಿಜೆಪಿ ಸದಸ್ಯರು, ಒವೈಸಿ ಬಾಯಿಮುಚ್ಚಿಸಲು ಯತ್ನಿಸಿದರು.

‘ಈ ಸದನದಲ್ಲಿ ಬಿಜೆಪಿಯ ಮುಸ್ಲಿಂ ಸದಸ್ಯರು ಬೆರಳೆಣಿಕೆಯಷ್ಟಿದ್ದಾರೆ. ಬಹುತ್ವ, ವೈವಿಧ್ಯ ಏಲ್ಲಿದೆ? ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಅವರ ಕಲ್ಯಾಣಕ್ಕೆ ಸರ್ಕಾರ ಏನು ಮಾಡುತ್ತದೆ ಎಂಬು­ದನ್ನು ಮೋದಿ ಅವರು ಸ್ಪಷ್ಟಪಡಿಸಬೇಕು’ ಎಂದು ಒವೈಸಿ ಒತ್ತಾಯಿಸಿದರು.

‘ಮುಸ್ಲಿಮರಲ್ಲಿ ಸುರಕ್ಷೆಯ ಭಾವನೆ ತುಂಬಿ’
ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಮುಸ್ಲಿಂ ಸಮುದಾಯದವರಲ್ಲಿ ಭದ್ರತೆಯ ಭಾವನೆ­ಯನ್ನು ತುಂಬುವಂತಹ ಕೆಲಸ ಮಾಡಬೇಕಿದೆ ಎಂದು ಮುಸ್ಲಿಂ ಲೀಗ್‌ ಮುಖಂಡ ಇ.ಅಹ್ಮದ್‌ ಒತ್ತಾಯಿಸಿದರು. ಲೋಕಸಭೆಯಲ್ಲಿ ಬುಧವಾರ  ಮಾತನಾ­ಡಿದ ಅವರು, ‘ದೇಶದ ಯಾವುದೇ ಭಾಗ­ದಲ್ಲಿ ಕೋಮು ಗಲಭೆ ನಡೆದರೂ ಸರ್ಕಾರ ಕೂಡಲೇ ಕಡ್ಡಾಯವಾಗಿ ಕ್ರಮ ಜರುಗಿಸಬೇಕು’ ಎಂದರು.

‘ಹೊಸ ಸರ್ಕಾರ ಬಂದ ಮೇಲೆ ಬಹುತೇಕ ಮುಸ್ಲಿಮರಲ್ಲಿ ಅಭದ್ರತೆಯ ಭಾವನೆ ಮೂಡಿದೆ. ಇದನ್ನು ಹೋಗಲಾಡಿಸಲು ಸರ್ಕಾರ ಮುಂದಾಗ­ಬೇಕು’ ಎಂದ ಅವರು, ಇದಕ್ಕೆ ಪೂರಕವಾಗಿ ಪುಣೆಯಲ್ಲಿ ಇತ್ತೀಚೆಗೆ ಸಾಫ್ಟ್‌ವೇರ್‌ ಉದ್ಯೋಗಿ ಮುಸ್ಲಿಂ ಯುವಕನ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT