ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಕಿರಣ... ಶ್ರೀಕಾಂತ್‌

Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಚೀನಾದ ಲಿನ್‌ ಡಾನ್‌ ಅವರ ಹೆಸರು ಕೇಳಿದರೆ ಸಾಕು ಹಲವು ಆಟಗಾರರ ಮೈ ನಡುಗುತ್ತದೆ, ಹಣೆಯಲ್ಲಿ ಅವರಿಗೇ ಅರಿವಿಲ್ಲದ ಹಾಗೆ ಬೆವರು ಒಸರುತ್ತದೆ. ಅಂತಹ ದೈತ್ಯ ಪ್ರತಿಭೆಗೆ ಸಲೀಸಾಗಿ ನೀರು ಕುಡಿಸಿದ ಪ್ರತಿಭಾನ್ವಿತ ಆಟಗಾರ ಶ್ರೀಕಾಂತ್‌.

ರಿಯೊ ಒಲಿಂಪಿಕ್‌ನಲ್ಲಿ ನನಗೆ ಮೊದಲ ಬಾರಿ ಆಡುವ ಅವಕಾಶ ಸಿಕ್ಕಿದೆ. ಇದಕ್ಕಾಗಿ ನಾನು ಈಗಿನಿಂದಲೇ  ಕಠಿಣ ಅಭ್ಯಾಸ ನಡೆಸಿ ಸಜ್ಜುಗೊಳ್ಳಬೇಕಿದೆ. ಸೂಕ್ತ ಯೋಜನೆಗಳನ್ನು ರೂಪಿಸಿ ಮುಂದಿನ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುತ್ತಾ ಸಾಗಿದರೆ ಖಂಡಿತವಾಗಿಯೂ ಇಲ್ಲಿ ಪದಕ ಗೆಲ್ಲುವುದು ಕಷ್ಟವಾಗಲಾರದು’....

ಈಚೆಗೆ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ  ಭಾರತದ ಯುವ ಆಟಗಾರ ಕೆ.ಶ್ರೀಕಾಂತ್‌ ಹೇಳಿದ್ದ ಮಾತಿದು.
ಇತ್ತೀಚಿನ ವರ್ಷಗಳಲ್ಲಿ ಭಾರತದ ಬ್ಯಾಡ್ಮಿಂಟನ್‌ ಕ್ಷೇತ್ರದಲ್ಲಿ ಹೊಸ ಸಂಚಲವನ್ನುಂಟು ಮಾಡುತ್ತಿರುವ ಪ್ರತಿಭೆ ಶ್ರೀಕಾಂತ್‌.

ಪ್ರಕಾಶ್‌ ಪಡುಕೋಣೆ, ಪುಲ್ಲೇಲಾ ಗೋಪಿಚಂದ್‌, ಯು. ವಿಮಲ್‌ ಕುಮಾರ್‌ ಅವರಂತಹ  ಸಾಧಕರು ತೆರೆ ಮರೆಗೆ  ಸರಿದಾಗ  ಅವರ ಜಾಗವನ್ನು ತುಂಬಬಲ್ಲ ಸಮರ್ಥ ಆಟಗಾರರ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್‌ ಪ್ರಿಯರು ಕಾಲ ದೂಡಿದ್ದರು.

ಈ ಸಂದರ್ಭದಲ್ಲಿ ಬೆಳಕಿಗೆ ಬಂದವರೇ ಪರುಪಳ್ಳಿ ಕಶ್ಯಪ್‌. ಹೈದರಾಬಾದ್‌ನ ಈ ಆಟಗಾರ  ತಮ್ಮ ಅಮೋಘ ಆಟದ ಮುಖೇನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದು, ಕೆಲವೇ ಕೆಲವು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ತಮ್ಮ ಛಾಪನ್ನು ಒತ್ತಿದ್ದರು.
ಆದರೆ ಕ್ರಮೇಣ ಅವರು ತಮ್ಮ ಪ್ರಭಾವವನ್ನು ಕಳೆದುಕೊಂಡು ಏಕಾಏಕಿ ಮಂಕಾಗಿ ಹೋದರು. ಇಂತಹ ಪರಿಸ್ಥಿತಿಯಲ್ಲಿ ಭಾರತದ ಭರವಸೆಯ ಬೆಳಕಾಗಿ ಮಿನುಗಿದವರೇ ಶ್ರೀಕಾಂತ್‌.

ಎರಡು ವರ್ಷಗಳ ಹಿಂದೆ ತುಂಬಾ ಅಪರಿಚಿತ ಎನಿಸಿದ್ದ ಈ ಹೆಸರು. ಈಗ ಅಷ್ಟೇ ಆಪ್ತವೆನಿಸುತ್ತಿದೆ ಅಂದರೆ ಅದಕ್ಕೆ ಕಾರಣ ಹೈದರಾಬಾದ್‌ನ ಈ ಯುವಕನ ವಯಸ್ಸಿಗೂ ಮೀರಿದ ಸಾಧನೆ.

ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಹೇಳಿಕೊಟ್ಟ ಸಾಹಸಿ ಶ್ರೀಕಾಂತ್‌. ಹೈದರಾಬಾದ್‌ನ ಗೋಪಿಚಂದ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಇವರು 2011ರಲ್ಲಿ ಇಸ್ಲೆ ಆಫ್‌ ಮ್ಯಾನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಯೂತ್‌ ಕ್ರೀಡಾಕೂಟದ ಮಿಶ್ರ ಡಬಲ್ಸ್‌ ಮತ್ತು ಪುರುಷರ ಡಬಲ್ಸ್‌ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದು ಪ್ರವರ್ಧಮಾನಕ್ಕೆ ಬಂದವರು.

ಅದೇ ವರ್ಷ ಅಖಿಲ ಭಾರತ ಜೂನಿಯರ್‌ ಟೂರ್ನಿಯ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಗಮನ ಸೆಳೆದರು.

ಹೀಗೆ ಹಂತ ಹಂತವಾಗಿ ಕೌಶಲಗಳನ್ನು ಕರಗತ ಮಾಡಿಕೊಳ್ಳುತ್ತಾ ಸಾಗಿದ್ದ ಅವರು  ಈಗ ಚೀನಾ, ಮಲೇಷ್ಯಾ, ದಕ್ಷಿಣ ಕೊರಿಯ ಮತ್ತು ಡೆನ್ಮಾರ್ಕ್‌ನಂತಹ ರಾಷ್ಟ್ರಗಳ ಬಲಿಷ್ಠ ಆಟಗಾರರಿಗೆ ಸಿಂಹ ಸ್ವಪ್ನರಾಗಿ ಕಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ.

ಚೀನಾದ ಲಿನ್‌ ಡಾನ್‌ ಅವರ ಹೆಸರು ಕೇಳಿದರೆ ಸಾಕು ಹಲವು ಆಟಗಾರರ ಮೈ ನಡುಗುತ್ತದೆ, ಹಣೆಯಲ್ಲಿ ಅವರಿಗೇ ಅರಿವಿಲ್ಲದ ಹಾಗೆ ಬೆವರು ಒಸರುತ್ತದೆ. ಅಂತಹ ದೈತ್ಯ ಪ್ರತಿಭೆ ಅವರು. ಎರಡು ಬಾರಿ ಒಲಿಂಪಿಕ್‌ನಲ್ಲಿ ಚಾಂಪಿಯನ್‌ ಆಗಿರುವ ಜತೆಗೆ ಚೀನಾ ಓಪನ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತಲಾ ಐದು ಬಾರಿ ಪ್ರಶಸ್ತಿ ಗೆದ್ದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಅವರು.

ಹೋದ ವರ್ಷ ನಡೆದಿದ್ದ ಚೀನಾ ಓಪನ್‌ ಸೂಪರ್‌ ಸರಣಿ ಟೂರ್ನಿಯ ಫೈನಲ್‌ನಲ್ಲಿ ಇಂತಹ ದಿಗ್ಗಜ ಆಟಗಾರನಿಗೆ ಸಲೀಸಾಗಿ ನೀರು ಕುಡಿಸಿ ಪ್ರಶಸ್ತಿ ಗೆದ್ದಿದ್ದ ಶ್ರೀಕಾಂತ್‌ ಈ ಮೂಲಕ ಇಡೀ ಬ್ಯಾಡ್ಮಿಂಟನ್‌ ಜಗತ್ತನ್ನೇ ಅಚ್ಚರಿಗೆ ದೂಡಿದ್ದು ಸಾಮಾನ್ಯದ ಮಾತಲ್ಲ. ಇದು ಸ್ವತಃ ಶ್ರೀಕಾಂತ್‌ಗೂ ಅಚ್ಚರಿ ತಂದಿದ್ದಂತೂ ಸುಳ್ಳಲ್ಲ. ಏಕೆಂದರೆ ಸೂಪರ್‌ ಸರಣಿ ಟೂರ್ನಿಯೊಂದರ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತದ ಆಟಗಾರ ಅವರು.

‘ಲಿನ್‌ ಎದುರು ಗೆಲುವು ಸಿಗಲಿದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ.  ನನ್ನ ಗಮನ ಕೇವಲ ಆಟದ ಕಡೆ ಇತ್ತು. ಎರಡನೇ ಗೇಮ್‌ನ ಕೊನೆಯ ಪಾಯಿಂಟ್‌ ಗಳಿಸಿದಾಗಲೇ ನಾನು ಗೆಲುವು ಕಂಡಿದ್ದೇನೆ ಎಂಬುದರ ಅರಿವಾಗಿದ್ದು’ ಎಂದು ಶ್ರೀಕಾಂತ್‌ ಪಂದ್ಯದ ಬಳಿಕ ಹೇಳಿದ್ದರು.

ಶ್ರೀಕಾಂತ್‌ ಹಿನ್ನೆಲೆ
ಶ್ರೀಕಾಂತ್‌ 1993 ಫೆಬ್ರುವರಿ 7ರಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಶ್ರೀಕಾಂತ್‌ ನಮ್ಮಾಲ್ವರ್‌ ಕಿದಂಬಿ.  ತಂದೆ ಕೆವಿಎಸ್‌ ಕೃಷ್ಣ ಕೃಷಿಕರು. ತಾಯಿ ರಾಧಾ ಗೃಹಿಣಿ. ಅವರ ಅಣ್ಣ ನಂದ ಗೋಪಾಲ್‌ ಬ್ಯಾಡ್ಮಿಂಟನ್‌ ಆಟಗಾರ.  ಶ್ರೀಕಾಂತ್‌ ಈ ಕ್ಷೇತ್ರಕ್ಕೆ ಕಾಲಿಡಲು ಅವರೇ ಪ್ರೇರಣೆ.

ಆಟದ ಬಗ್ಗೆ ಅಪಾರ ಬದ್ಧತೆಯನ್ನು ಅವರು ರೂಢಿಸಿಕೊಂಡು ಬಂದಿದ್ದರಿಂದಲೇ   ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ವಿರಾಜಮಾನರಾಗಲು ಸಾಧ್ಯವಾಗಿ ರುವುದು.

ಅಂದಹಾಗೆ ಭಾರತದ ಬ್ಯಾಡ್ಮಿಂಟನ್‌ ಇತಿಹಾಸದ ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಅವರು. ಇದಕ್ಕೂ ಮುನ್ನ ಪ್ರಕಾಶ್‌ ಪಡುಕೋಣೆ ಅಗ್ರ ಸ್ಥಾನ ಪಡೆದಿದ್ದರೆ, ಶ್ರೀಕಾಂತ್‌ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್‌ ನಾಲ್ಕನೇ ಸ್ಥಾನ ಗಳಿಸಿದ್ದರು.

‘ನಾನು ಇಷ್ಟು ಬೇಗ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರುತ್ತೇನೆ ಎಂದು ಖಂಡಿತವಾಗಿಯೂ ಊಹಿಸಿರಲಿಲ್ಲ. ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡರೂ ಸಾಮರ್ಥ್ಯಕ್ಕೂ ಮೀರಿದ ಆಟವಾಡುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೆ. ಅದರ ಫಲ ಶೀಘ್ರವೇ ದೊರಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿ ಅಗ್ರ ಸ್ಥಾನಕ್ಕೇರುವುದು ನನ್ನ ಗುರಿ’ ಎಂದು ಶ್ರೀಕಾಂತ್‌ ಹಿಂದೊಮ್ಮೆ ವಿಶ್ವಾಸದಿಂದ ನುಡಿದಿದ್ದರು.

ಈ ಹಾದಿ ಅಷ್ಟು ಸುಲಭದ್ದಲ್ಲವಾದರೂ ಅಸಾಧ್ಯವಾದು ದ್ದಂತೂ ಅಲ್ಲವೇ ಅಲ್ಲ. ಶ್ರೀಕಾಂತ್‌ ಹಠಕ್ಕೆ ಬಿದ್ದರೆ ಯಾವುದನ್ನೂ ಅಷ್ಟು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ಇದಕ್ಕೆ  ಸ್ವಿಸ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯೇ ನಿದರ್ಶನ.  ಟೂರ್ನಿಯಲ್ಲಿ ತಮ್ಮ ಚುರುಕಿನ ಆಟದ ಮೂಲಕ ವಿಶ್ವದ ಬಲಿಷ್ಠ ಆಟಗಾರರಿಗೆ ಚಳ್ಳೆ ಹಣ್ಣು ತಿನ್ನಿಸಿದ ಅವರು ಇಲ್ಲಿ ಪ್ರಶಸ್ತಿ ಗೆದ್ದು ಚಾರಿತ್ರಿಕ ಸಾಧನೆಗೆ ಕಾರಣರಾದರು. ಜತೆಗೆ 2016ರ ರಿಯೊ ಒಲಿಂಪಿಕ್‌ನಲ್ಲಿ ಆಡಲು ಅರ್ಹತೆ ಗಿಟ್ಟಿಸಿದರು.

ಶ್ರೀಕಾಂತ್‌ಗೆ ಸದ್ಯ 22ವರ್ಷ ವಯಸ್ಸು. ಅವರು ಮುಂದಿನ ದಿನಗಳಲ್ಲಿ ಇನ್ನೂ ಹಲವು ಟೂರ್ನಿಗಳಲ್ಲಿ ಆಡಲಿದ್ದಾರೆ. ಅಲ್ಲಿ ಅವರಿಗೆ ವಿಶ್ವದ ಬಲಿಷ್ಠ ಆಟಗಾರರಿಂದ ಪ್ರಬಲ ಸವಾಲು ಎದುರಾಗಬಹುದು. ಅದನ್ನು  ಅಷ್ಟೇ ವಿಶ್ವಾಸದಿಂದ ಎದುರಿಸುವ ತಾಕತ್ತು ಅವರಲ್ಲಿದ್ದು ಹೆಚ್ಚೆಚ್ಚು ಪ್ರಶಸ್ತಿಗಳನ್ನು ಗೆದ್ದು ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT