ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಪಸೆ ಆರಿದ ಲೋಕದೊಳಗೆ!

Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

‘ಕೊಳಕು ಕತೆ ಕೇಳಿದರೆ ನಿನ್ನ ಕಿವಿ ತೊಳೆದುಕೊ, ಕೊಳಕು ಕಸ ನೋಡಿದರೆ ನಿನ್ನ ಕಣ್ಣು  ತೊಳೆದುಕೊ, ಕೊಳಕು ವಿಚಾರ ಬಂದರೆ ನಿನ್ನ ಮನ ತೊಳೆದುಕೊ, ಆದರೆ ಕಾಲು ಕೆಸರಾಗಿಯೇ ಇರಲಿ ಸದಾ’ ಹೀಗೆಂದು ಜಪಾನಿನ ಅಲೆಮಾರಿ ಕವಿ ನನಾವೊ ಸಕಾಕಿ ಹೇಳುತ್ತಾನೆ. ಕೈ, ಕಾಲುಗಳು ಕೆಸರಾಗಿರುವುದು ಎಂದರೆ ದುಡಿಯುವುದರ ಸಂಕೇತವೆಂಬುದು ಆ ಕವಿಯ ಅಭಿಮತ. ಆದರೆ ಈಗ ನಮ್ಮ ದೇಶ ಮತ್ತು ರಾಜ್ಯದಲ್ಲಿ ಬಹುತೇಕರ ಕೈ ಕಾಲುಗಳು ಸ್ವಚ್ಛವಾಗಿಯೇ ಇವೆ. ಆದರೆ ಮುಖ ಮೈಯೆಲ್ಲಾ ಕೆಸರಾಗಿದೆ. ನಂಬಿಕೆಯ ಗೋಡೆ ಕುಸಿದು ಬಿದ್ದಿದೆ.

ಮಹಾಭಾರತದಲ್ಲಿ ಸಂಧಾನಕ್ಕೆ ಬಂದ ಕೃಷ್ಣನನ್ನು ಕೌರವ ‘ಹೆಣದ ಮೇಲೆ ಹೋಳಿಗೆ ತಿನ್ನುವ ಜಾತಿಯವ’ ಎಂದು ನಿಂದಿಸುತ್ತಾನೆ. ಆದರೆ ಈಗ ನಮಗೆ ಎಲ್ಲಿ ನೋಡಿದರೂ ಹೆಣದ ಮೇಲೆ ಹೋಳಿಗೆ ತಿನ್ನುವವರೇ ಕಾಣುತ್ತಿದ್ದಾರೆ. ಇದು ನಮ್ಮ ಕಣ್ಣಿನ ದೋಷವೋ, ವ್ಯವಸ್ಥೆಯ ದೋಷವೋ ಅರ್ಥವಾಗುತ್ತಿಲ್ಲ.

ಈಗ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಕೇವಲ ಲೋಕಾಯುಕ್ತ ಸಂಸ್ಥೆಯ ಕತೆ ಅಲ್ಲ. ಎಲ್ಲ ಸಾಂವಿಧಾನಿಕ ಸಂಸ್ಥೆಗಳೂ ತಮ್ಮ ಪಾವಿತ್ರ್ಯವನ್ನು ಕಳೆದುಕೊಂಡು ಬೆತ್ತಲಾಗಿ ನಿಂತಿವೆ. ಕಳೆದ ವರ್ಷವೆಲ್ಲ ಕರ್ನಾಟಕ ಲೋಕ ಸೇವಾ ಆಯೋಗದ ಹಗರಣ ಹೊರಕ್ಕೆ ಬಂದು ಅದು ಸಂಪೂರ್ಣ ಬೆತ್ತಲಾಗಿತ್ತು. ಆ ನಂತರ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಘನತೆಗೆ ಕುಂದು ಉಂಟಾಗುವ ಸುದ್ದಿಗಳೇ ಬರುತ್ತಿದ್ದವು. ಈಗ ಲೋಕಾಯುಕ್ತದ ಸರದಿ ಅಷ್ಟೆ.

ಲೋಕಸೇವಾ ಆಯೋಗದ ಹಗರಣ ಹೊರಕ್ಕೆ ಬಂದಾಗಲೂ ಒಂದಿಷ್ಟು ಜನ ‘ಸಾಂವಿಧಾನಿಕ ಸಂಸ್ಥೆಯ ಘನತೆಗೆ ಕುಂದು ತಂದಿರಿ’ ಎಂದು ಮಾಧ್ಯಮಗಳನ್ನು ದೂರಿದ್ದರು. ಈಗ ಲೋಕಾಯುಕ್ತ ಸಂಸ್ಥೆಯ ಮೇಲೆ ಆರೋಪ ಕೇಳಿ ಬಂದಾಗಲೂ ಇದೇ ಮಾತನ್ನು ಹೇಳಲಾಗುತ್ತಿದೆ. ಸಂಸ್ಥೆಯ ಒಳಗೆ ಇದ್ದವರೇ ಕೊಳೆಯನ್ನು ಮೆತ್ತಿಕೊಂಡು ಹೊರಗೆ ಬರುತ್ತಿದ್ದಾರೆ. ಆ ಕೊಳೆಯನ್ನು ತೊಳೆಯುವ ಕೆಲಸಕ್ಕೆ ಯಾರು ಕೈ ಹಚ್ಚಬೇಕು ಎನ್ನುವುದೇ ತಿಳಿಯುತ್ತಿಲ್ಲ. ಈ ಬಗ್ಗೆ ಹೆಚ್ಚು ಹೆಚ್ಚು ಆಲೋಚಿಸುತ್ತಾ ಹೋದರೆ ಆರೋಪದ ಬಾಣಗಳೆಲ್ಲಾ ನಮ್ಮ ಕಾಲ ಬುಡಕ್ಕೇ ಬಂದು ಬೀಳುತ್ತವೆ.

ಈ ಸಂಸ್ಥೆಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿದವರು ಯಾರು ಎಂದರೆ ನಾವೇ ಆರಿಸಿ ಕಳುಹಿಸಿದ ನಮ್ಮ ನಾಯಕರು. ಅಂದ ಮೇಲೆ ತಪ್ಪೆಲ್ಲ ನಮ್ಮದೇ ಆಯ್ತಲ್ಲ. ಶಾಸಕಾಂಗ ಮತ್ತು ಕಾರ್ಯಾಂಗದ ಕಾವಲು ನಾಯಿಯಂತೆ ಕೆಲಸ ಮಾಡುವುದಕ್ಕಾಗಿ ಜಾರಿಗೆ ಬಂದ ಲೋಕಾಯುಕ್ತ ಸಂಸ್ಥೆಯೇ ಭ್ರಷ್ಟಾಚಾರದ ಕೂಪವಾದರೆ, ಲೋಕಾಯುಕ್ತರ ಪುತ್ರನೇ ಲೋಕಾಯುಕ್ತ ಕಚೇರಿಯಲ್ಲಿ ಅಂಗಡಿ ತೆರೆದು ಕುಳಿತು ಬಿಟ್ಟಿದ್ದಾರೆ ಎಂಬ ಆರೋಪ ಬಂದರೆ, ಇದನ್ನೆಲ್ಲಾ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನದೇ ಬೇರೆ ವಿಧಿಯೇ ಇಲ್ಲ.

ಯಾಕೆ ಹೀಗಾಗುತ್ತದೆ? ಸಾಂವಿಧಾನಿಕ ಸಂಸ್ಥೆಗಳು ಯಾಕೆ ಭ್ರಷ್ಟಾಚಾರದ ಕೂಸುಗಳಾಗುತ್ತವೆ? ಲೋಕಾಯುಕ್ತರನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಅವರನ್ನು ತೆಗೆಯುವ ಅಧಿಕಾರ ಇಲ್ಲ. ಅವರನ್ನು ತೆಗೆಯಬೇಕು ಎಂದರೆ ವಿಧಾನ ಮಂಡಲದ ಮೂರನೇ ಎರಡರಷ್ಟು ಶಾಸಕರು ಬೆಂಬಲ ನೀಡಬೇಕು. ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಬಗ್ಗೆ ನಿರ್ಣಯವಾಗಬೇಕು. ನಂತರ ಅದನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಬೇಕು. ರಾಜ್ಯಪಾಲರು ಇದನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬಹುದು.

ಇಷ್ಟೆಲ್ಲಾ ಮಾಡುವಾಗ ಲೋಕಾಯುಕ್ತರ ಮೇಲೆ ನಿರ್ದಿಷ್ಟ ಆರೋಪ ಸಾಬೀತಾಗಿರಬೇಕು. ಲೋಕಾಯುಕ್ತರ ಪದಚ್ಯುತಿಗೆ ಇಷ್ಟೊಂದು ಕಠಿಣವಾದ ಕ್ರಮವನ್ನು ಯಾಕಿಟ್ಟಿದ್ದಾರೆ ಎಂದರೆ ಶಾಸಕಾಂಗ ಲೋಕಾಯುಕ್ತರನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಂಡೀತು ಎಂಬ ಅನುಮಾನ ಕಾರಣ. ಅದು ಕೂಡ ಗ್ರಾಮ ಪಂಚಾಯ್ತಿ ಅಧ್ಯಕ್ಷರ ತರಹ ಆರು ತಿಂಗಳಿಗೆ ಒಬ್ಬ ಬಂದು ಕುಳಿತುಕೊಳ್ಳಬಹುದು ಎಂಬ ಭಯ. ಇದೇ ಪ್ರಜಾಪ್ರಭುತ್ವದ ಬ್ಯೂಟಿ ಕೂಡ. ಆದರೆ ಸಿಕ್ಕ ಅಧಿಕಾರವನ್ನು ಇವರೆಲ್ಲಾ ಯಾಕೆ ದುರುಪಯೋಗ ಪಡಿಸಿಕೊಳ್ಳುತ್ತಾರೆ? ಮತ್ತೆ ಪ್ರಶ್ನೆ ಏಳುತ್ತದೆ.

ಲೋಕಾಯುಕ್ತರನ್ನು ಆಯ್ಕೆ ಮಾಡುವ ವಿಧಾನದಲ್ಲಿಯೇ ಏನಾದರೂ ತಪ್ಪುಗಳು ಇವೆಯೇ ಎಂದು ಯೋಚಿಸಿದರೆ ಕೊಳೆತು ನಾರುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಎಲ್ಲವೂ ತಪ್ಪುಗಳಂತೆಯೇ ಕಾಣುತ್ತವೆ. ಮುಖ್ಯಮಂತ್ರಿ, ವಿಧಾನಸಭೆ ಅಧ್ಯಕ್ಷರು, ವಿಧಾನ ಪರಿಷತ್‌ ಸಭಾಪತಿ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರು ಹಾಗೂ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಸೇರಿ ಲೋಕಾಯುಕ್ತರನ್ನು ಆಯ್ಕೆ ಮಾಡುತ್ತಾರೆ.

ಲೋಕಾಯುಕ್ತ ಸ್ಥಾನಕ್ಕೆ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನೇ ಆಯ್ಕೆ ಮಾಡಲಾಗುತ್ತದೆ. ಇದರ ಹಿಂದಿರುವ ಮುಖ್ಯ ಕಾರಣ ಎಂದರೆ ಈಗಲೂ ನಮ್ಮ ದೇಶದಲ್ಲಿ ಕೊಂಚವಾದರೂ ನಂಬಿಕೆ ಉಳಿಸಿಕೊಂಡಿರುವ ಕ್ಷೇತ್ರ ಎಂದರೆ ನ್ಯಾಯಾಂಗ. ನ್ಯಾಯಮೂರ್ತಿಗಳು ಭ್ರಷ್ಟರಾಗಿರುವುದಿಲ್ಲ ಎಂಬ ನಂಬಿಕೆ. ನ್ಯಾಯಾಂಗದ ಬಗ್ಗೆ ಅಲ್ಲಲ್ಲಿ ಗುಸುಗುಸು ಕೇಳಿ ಬರುತ್ತಿದ್ದರೂ ಅದು ಬಹುದೊಡ್ಡ ಶಬ್ದವಾಗಿ ಇನ್ನೂ ಹೊರಹೊಮ್ಮಲಿಲ್ಲ.

ನ್ಯಾಯಾಂಗ ಕೂಡ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಎದೆ ಉಬ್ಬಿಸಿ ಹೇಳುವ ಸ್ಥಿತಿ ಇಲ್ಲವಾದರೂ ಜನರು ಕೊಂಚ ಭರವಸೆಯ ಬೆಳಕನ್ನು ಕಾಣುತ್ತಿರುವುದು ನ್ಯಾಯಾಂಗದಲ್ಲಿಯೇ ಎನ್ನುವುದೂ ಸುಳ್ಳಲ್ಲ. ದೇಶದಲ್ಲಿ ಇತ್ತೀಚೆಗೆ ನಡೆದ ಹಲವಾರು ವಿದ್ಯಮಾನಗಳು ನ್ಯಾಯಾಂಗದ ಮೇಲೆಯೂ ಗುಮಾನಿ ಬರುವಂತೆ ಮಾಡಿವೆ. ಅದಕ್ಕಾಗಿ ನ್ಯಾಯಾಂಗದಲ್ಲಿಯೂ ಒಂದು ಪಾರದರ್ಶಕ ವ್ಯವಸ್ಥೆ ಜಾರಿಗೆ ಬರುವುದು ಅಗತ್ಯವಾಗಿದೆ.

ಲೋಕಾಯುಕ್ತ ಸಂಸ್ಥೆಯ ಬಗ್ಗೆ ಶಂಕೆ ವ್ಯಕ್ತವಾದಾಗ ಅದು ಕೇವಲ ಒಬ್ಬ ವ್ಯಕ್ತಿ ಮೇಲಿನ ಅಪನಂಬಿಕೆಯಲ್ಲ. ಇಡೀ ವ್ಯವಸ್ಥೆಯ ಮೇಲೆಯೇ ನಂಬಿಕೆ ಹೋಗುವಂತಹ ಪರಿಸ್ಥಿತಿ. ಕರ್ನಾಟಕ ಲೋಕಾಯುಕ್ತಕ್ಕೆ ಇಡೀ ದೇಶದಲ್ಲಿಯೇ ಒಂದು ಮರ್ಯಾದೆ ಇತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅತ್ಯಂತ ಬಲಿಷ್ಠ ಲೋಕಾಯುಕ್ತ ಕಾನೂನನ್ನು ಜಾರಿಗೆ ತಂದಿದ್ದರೂ ಹಲವಾರು ವರ್ಷಗಳ ಕಾಲ ಅದು ನೆಪ ಮಾತ್ರಕ್ಕೆ ಇತ್ತು.

ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾದ ನಂತರ ಶಾಸಕಾಂಗದಲ್ಲಿನ ಜನರಿಗೂ ಈ ಬಗ್ಗೆ ಭಯ ಉಂಟಾಯಿತು.

ಮುಖ್ಯಮಂತ್ರಿ, ಸಚಿವರೂ ಜೈಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸಂತೋಷ್‌ ಹೆಗ್ಡೆ ಅವರು ಕೇವಲ ಸರ್ಕಾರಿ ಅಧಿಕಾರಿಗಳು, ಶಾಸಕರನ್ನು ಬೆದರಿಸುವ ಕೆಲಸವನ್ನಷ್ಟೇ ಮಾಡಲಿಲ್ಲ. ಜನಸಾಮಾನ್ಯರ ಇತರ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿದರು. ಅದಕ್ಕೇ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರು ಬೆಟ್ಟದಷ್ಟು ನಂಬಿಕೆಯನ್ನು ಇಟ್ಟುಕೊಂಡಿದ್ದರು. ಈಗ ಆ ಬೆಟ್ಟ ಕುಸಿದು ಬಿದ್ದಿದೆ.

ದೇಶದ ಹಲವಾರು ರಾಜ್ಯಗಳಲ್ಲಿ ಇನ್ನೂ ಸೂಕ್ತ ಲೋಕಾಯುಕ್ತ ವ್ಯವಸ್ಥೆಯೇ ಇಲ್ಲ. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಸಂಚು ಬಹಳ ಕಾಲದಿಂದಲೂ ನಡೆಯುತ್ತಿದೆ. ಕರ್ನಾಟಕದಲ್ಲಿ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆಯನ್ನು ಜಾರಿಗೆ ತಂದ ರಾಮಕೃಷ್ಣ ಹೆಗಡೆ ಅವರೇ ರಾಜ್ಯದಲ್ಲಿ ಬಾಟ್ಲಿಂಗ್‌ ಹಗರಣ ನಡೆದ ಸಂದರ್ಭದಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಕೆಲಸಕ್ಕೂ ಕೈ ಹಾಕಿ ಯಶಸ್ವಿಯಾದರು.

ಅಣ್ಣಾ ಹಜಾರೆ ಬಲಿಷ್ಠವಾದ ಲೋಕಪಾಲ್‌ ಮಸೂದೆಗಾಗಿ ಇಡೀ ದೇಶದಲ್ಲಿ ಪ್ರಬಲವಾದ ಹೋರಾಟ ನಡೆಸಿದ ನಂತರವೂ ದೇಶದಲ್ಲಿ ಸೂಕ್ತ ಲೋಕಪಾಲ್‌ ಮಸೂದೆ ಜಾರಿಗೆ ಬರಲಿಲ್ಲ. ಈಗ ನಾಮಕಾವಸ್ತೆ ಲೋಕಪಾಲ್‌ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದ್ದರೂ ಇನ್ನೂ ಲೋಕಪಾಲ್‌ ನೇಮಕವಾಗಿಲ್ಲ. ಅಂದರೆ ಪ್ರಧಾನಿ ಮೋದಿ ಅವರಿಗೆ ಬೇಕಾದ ವ್ಯಕ್ತಿ ಇನ್ನೂ ಸಿಕ್ಕಿಲ್ಲ. ಅರ್ಹತೆಗಿಂತಲೂ ತಮಗೆ ಬೇಕಾದ ವ್ಯಕ್ತಿಯನ್ನು ಹುಡುಕುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿಯೂ ಹೀಗೆಯೇ ಆಗುತ್ತದೆ. ಲೋಕಸೇವಾ ಆಯೋಗದ ಸದಸ್ಯರನ್ನು ನೇಮಕ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಅವರನ್ನು ಪದಚ್ಯುತಿಗೊಳಿಸುವ ಹಕ್ಕು ಸರ್ಕಾರಕ್ಕೆ ಇಲ್ಲ. ಇಲ್ಲಿಯೂ ನೇಮಕಾತಿಯಲ್ಲಿಯೇ ಅಕ್ರಮಗಳಾಗುತ್ತವೆ ಎಂಬ ಕೂಗು ಇದೆ. ಕೆಪಿಎಸ್‌ಸಿ ನೇಮಕಾತಿಗೇ ಕೋಟಿ ಕೋಟಿ ಹಣ ನೀಡಿ ಬರುತ್ತಾರೆ.

ಹೀಗೆ ಬಂದವರು ತಾವು ಕೊಟ್ಟ ಹಣವನ್ನು ಇಲ್ಲಿ ದುಡಿಯುತ್ತಾರೆ. ಲಾಭವನ್ನೂ ಗಳಿಸುತ್ತಾರೆ ಎನ್ನುವ ಆರೋಪ ಬಹಳ ಕಾಲದಿಂದಲೂ ಇದೆ. ಅಲ್ಲದೆ ಅಧಿಕಾರದಲ್ಲಿ ಇದ್ದ ಪಕ್ಷ ತನಗೆ ಬೇಕಾದವರನ್ನೇ ನೇಮಕ ಮಾಡುತ್ತದೆ. ಒಳ್ಳೆಯ ಉದ್ದೇಶದಿಂದಲೇ ಇಷ್ಟು ಅಧಿಕಾರವನ್ನು ಕೆಪಿಎಸ್‌ಸಿ ಸದಸ್ಯರಿಗೆ ನೀಡಲಾಗಿದೆ. ಆದರೆ ಅದು ಸದುಪಯೋಗವಾಗದೇ ಇರುವುದು ದುರದೃಷ್ಟಕರ.

ಲೋಕಸೇವಾ ಆಯೋಗದ ಕೊಳಕನ್ನು ತೊಳೆಯಲು ಸಿದ್ದರಾಮಯ್ಯ ಸರ್ಕಾರ ಕೊಂಚ ಯತ್ನ ನಡೆಸಿತು. ಇದಕ್ಕಾಗಿ ಪಿ.ಸಿ.ಹೋಟಾ ಸಮಿತಿಯನ್ನೂ ರಚಿಸಿತು. ಸದಸ್ಯರ ನೇಮಕಕ್ಕೆ ಆಯ್ಕೆ ಸಮಿತಿಯನ್ನು ರಚಿಸಬೇಕು ಎಂಬ ಶಿಫಾರಸನ್ನು ಒಪ್ಪಿಕೊಳ್ಳಲೇ ಇಲ್ಲ. ವಿಶ್ವವಿದ್ಯಾಲಯದ ಕುಲಪತಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಗಳಿವೆ. ಹೀಗೆ ಆಯ್ಕೆಯಾಗಿ ಬಂದ ಕುಲಪತಿಗಳು ಭ್ರಷ್ಟಾಚಾರ ಮಾಡಿಲ್ಲವೇ ಎಂದು ಪ್ರಶ್ನೆ ಮಾಡಲಾಯಿತು.

ಹೌದು ವಿಶ್ವವಿದ್ಯಾಲಯಗಳೂ ಈಗ ಭ್ರಷ್ಟಾಚಾರದ ಕೂಪಗಳಾಗಿವೆ. ರಾಜ್ಯದ ಯಾವುದೇ ವಿಶ್ವವಿದ್ಯಾಲಯ ಭ್ರಷ್ಟಾಚಾರದ ಆರೋಪದಿಂದ ಮುಕ್ತವಾಗಿಲ್ಲ. ವಿದ್ಯಾರ್ಥಿಗಳನ್ನು ಕೈಹಿಡಿದು ನಡೆಸಬೇಕಾದ ಅಧ್ಯಾಪಕರೇ ನೈತಿಕ ಅಧಃಪತನದ ಕೂಪದಲ್ಲಿ ಸಿಲುಕಿದ್ದಾರೆ. ಯಾರೂ ಯಾರ ವಿರುದ್ಧವೂ ಕೈ ಮಾಡಿ ತೋರಿಸಲು ಸಾಧ್ಯವಾಗದ ಸನ್ನಿವೇಶದಲ್ಲಿ ನಾವಿದ್ದೇವೆ.

ಮಾಹಿತಿ ಹಕ್ಕು ಆಯೋಗ, ಮಾನವ ಹಕ್ಕು ಆಯೋಗಗಳೂ ಇದೇ ರೀತಿ ಸ್ವಾಯತ್ತ ಸಂಸ್ಥೆಗಳೇ ಆಗಿವೆ. ಈ ಸಂಸ್ಥೆಗಳೂ ಜನ ಸಾಮಾನ್ಯರಿಗೆ ಅಗತ್ಯವಾದ ನೆರವನ್ನು ನೀಡುವ ಜವಾಬ್ದಾರಿಯನ್ನು ಹೊತ್ತಿವೆ. ಆದರೆ ಇವೂ ಆರೋಪಗಳಿಂದ ಮುಕ್ತವಾಗಿಲ್ಲ. 

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ‘ಸಂಭವಾಮಿ ಯುಗೇ ಯುಗೇ’ ಎಂಬ ಮಾತನ್ನು ಭಾರತೀಯರು ಬಲವಾಗಿ ನಂಬಿ ಕುಳಿತಿದ್ದಾರೆ. ಯಾರೋ ಒಬ್ಬ ಬಂದು ಇದನ್ನೆಲ್ಲಾ ಸ್ವಚ್ಛ ಮಾಡುತ್ತಾನೆ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಅಂತಹ ಮಹಾನ್‌ ಪುರುಷರಾಗಬಹುದು ಎನ್ನುವುದನ್ನು ಮರೆತೇ ಬಿಟ್ಟಿದ್ದಾರೆ.

‘ಹಸಿದ ನಿನ್ನ ಬಿಟ್ಟೇ ಊಟ ಮಾಡಿದೆ. ಕ್ಷಮಿಸಿದೆಯಾದರೆ ನೀನೂ ಮನುಷ್ಯನಾಗಿ ಉಳಿಯುವುದಿಲ್ಲ’ ಎಂದು ಕವಿ ಬಸೂ ಹೇಳುತ್ತಾರೆ. ಆದರೆ ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಎಲ್ಲರೂ ಹಸಿದವರಿಂದ ಕಸಿದುಕೊಂಡು ಅವರ ಮುಂದೇ ಊಟ ಮಾಡುವ ದೃಶ್ಯ ಕಣ್ಣಿಗೆ ರಾಚುತ್ತದೆ.

ಕಾರ್ಯಾಂಗ ಕಲುಷಿತವಾಗಿದೆ. ಶಾಸಕಾಂಗ ಹಾದಿತಪ್ಪಿದೆ. ಸಮಾಜದ ಕಾವಲು ನಾಯಿ ಎಂದೇ ಬಿಂಬಿತವಾದ ಮಾಧ್ಯಮರಂಗವೂ ನಾಚಿಕೆಬಿಟ್ಟಿದೆ. ನ್ಯಾಯಾಂಗದ ಬಗ್ಗೆಯೂ ಅಪಸ್ವರ ಇದೆ. ಮತ್ತೆ ನನಗೆ ಕವಿ ಬಸೂ ಅವರ ಸಾಲುಗಳೇ ನೆನಪಾಗುತ್ತವೆ. 

‘ನಿಮ್ಮೊಂದಿಗೆ ನನ್ನ ತಕರಾರಿಲ್ಲ. ನನ್ನ ತಕರಾರು ಏನಿದ್ದರೂ ಮನುಷ್ಯರ ಜೊತೆಗೆ’ ಎಂದು ಅವರು ಹೇಳುತ್ತಾರೆ. ತಕರಾರು ಮಾಡುವುದಕ್ಕಾದರೂ ನಾವು ಈಗ ಮನುಷ್ಯರನ್ನು ಹುಡುಕಬೇಕಾಗಿದೆ. ಬನ್ನಿ ಬೇಗ ಬೇಗ ಹುಡುಕೋಣ. ಒಂದಿಷ್ಟು ಜಗಳವನ್ನಾದರೂ ಕಾಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT