ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಬ್ಯಾಂಕ್‌

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರಾದೇಶಿಕ ಅಭಿವೃ­ದ್ಧಿ­ ಉದ್ದೇಶದ, ಚೀನಾ ನೇತೃತ್ವದಲ್ಲಿನ ಬಹು­ರಾಷ್ಟ್ರೀಯ ‘ಏಷ್ಯಾ ಮೂಲ­ಸೌಕರ್ಯ ಹೂಡಿಕೆ ಬ್ಯಾಂಕ್‌’ (ಎಐಐಬಿ) ಬೀಜಿಂಗ್‌­ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವುದು ಈ ವಲಯದ ದೇಶಗಳ ಪಾಲಿಗೆ ಹೊಸ ಭಾಗ್ಯದ ಬಾಗಿಲು ತೆರೆಯಲಿದೆ. ಅಮೆರಿಕದ ತೀವ್ರ ವಿರೋಧದ ಮಧ್ಯೆಯೂ ಈ ಬ್ಯಾಂಕ್‌ ಕೊನೆಗೂ ಅಸ್ತಿತ್ವಕ್ಕೆ ಬರುತ್ತಿರುವುದು ಈ ವಲ­ಯದ ಮೂಲಸೌಕರ್ಯಗಳ ಅಭಿವೃದ್ಧಿ ನಿಟ್ಟಿನಲ್ಲಿನ ಮಹತ್ವದ ಬೆಳವ­ಣಿಗೆ­ಯಾ­ಗಿದೆ.

ಸದಸ್ಯ ದೇಶಗಳಿಗೆ ಸಾಲ ಪಡೆಯುವ ಅವಕಾಶಗಳು ಹೆಚ್ಚುವುದು ಮತ್ತು ಸುಲಭ­­ವಾಗಿ ಸಾಲ ಸಿಗಲಿರು­ವುದರಿಂದ ನಿಜಕ್ಕೂ ಇದೊಂದು ಸಕಾ­ರಾ­ತ್ಮಕ ಬೆಳ­ವಣಿಗೆ. ಅಮೆರಿಕದ ಒತ್ತಡಕ್ಕೆ ಮಣಿದಿರುವ ಜಪಾನ್‌ ಮತ್ತು ದಕ್ಷಿಣ ಕೊರಿ­ಯಾ-­­ಗಳು ಈ ಬ್ಯಾಂಕ್‌ನ ಸದಸ್ಯತ್ವ ಪಡೆಯದಿ­ರುವುದು ಬಿಟ್ಟರೆ, ಅಭಿವೃದ್ಧಿ ಹೊಂದುತ್ತಿ­ರುವ ಮತ್ತು ಬಡ ದೇಶಗಳೇ ಹೆಚ್ಚಾಗಿ­ರುವ 21 ಸದಸ್ಯರ ಪೈಕಿ ಭಾರತವು ಚೀನಾ ನಂತರದ ಎರಡನೇ ಪ್ರಮುಖ ಪಾಲು­ದಾರಿಕೆ ದೇಶವಾಗಿದೆ. ಇದರಿಂದ ಚೀನಾದ ಮೇಲುಗೈಗೆ ಕಡಿವಾಣ ಬೀಳ­ಲಿದ್ದು, ಸಮತೋಲನವೂ ಸಾಧ್ಯ­ವಾ­ಗಲಿದೆ.

ಭಾರ­ತವೂ ಚೀನಾ ಮತ್ತಿತರ ದೇಶಗಳ ಸಹಯೋಗ­ದ­ಲ್ಲಿಯೇ ಕಾರ್ಯ­­ನಿರ್ವ­ಹಿಸುವ ಮೂಲಕ ಇತರ ಸದಸ್ಯ ದೇಶಗಳ ಹಿತ ಕಾಯ­ಬೇಕಾಗಿದೆ. ಏಷ್ಯಾದ ದೇಶಗಳ ಅಭಿವೃದ್ಧಿಗೆ ನೆರ­ವಾಗುವ ಮಹತ್ವಾ­ಕಾಂಕ್ಷೆಯ ಈ ಬ್ಯಾಂಕ್‌ನ ಅಸ್ತಿತ್ವವು ಅಮೆರಿಕ ನೇತೃತ್ವದ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಒಡ್ಡಿದ ಮೊದಲ ಸವಾಲೂ ಆಗಿದೆ. ಹೊಸ ಬ್ಯಾಂಕ್‌ ಅಸ್ತಿತ್ವಕ್ಕೆ ಬರುತ್ತಿರು­ವು­ದರಿಂದ ಈ ಪ್ರದೇಶದ ಅಭಿವೃದ್ಧಿಗೆ ಸಹಜ­ವಾಗಿಯೇ ಒತ್ತು ಸಿಗುವುದರ ಜತೆಗೆ, ಜಾಗತಿಕ  ಆರ್ಥಿಕ ಶಕ್ತಿಯ ಸಮತೋಲ­ನವೂ ಈಗ ಏಷ್ಯಾ­ದತ್ತ ವಾಲಿ­ದಂತಾ­ಗಿದೆ. ಮೂಲ­­ಸೌಕರ್ಯಗಳ ಯೋಜನೆ­ಗಳಿಗೆ ನೆರವು ಪಡೆ­ಯಲು ಏಷ್ಯಾದ ಅಭಿ­ವೃದ್ಧಿ ಹೊಂದುತ್ತಿರುವ ದೇಶಗಳು ಇದುವರೆಗೆ ಅಂತ­ರ­ರಾಷ್ಟ್ರೀಯ ಹಣ­ಕಾಸು ನಿಧಿ (ಐಎಂಎಫ್‌) ಮತ್ತು ವಿಶ್ವ­ಬ್ಯಾಂಕ್‌ನ ಮರ್ಜಿ ಕಾಯಬೇಕಾ­ಗಿತ್ತು.

ಇನ್ನು ಮುಂದೆ ಅಂತಹ ಪರಿಸ್ಥಿತಿ ಎದು­ರಾಗದು.  ಈ ಎರಡೂ ಜಾಗತಿಕ ಹಣಕಾಸು ಸಂಸ್ಥೆ­­ಗಳು ಸಿರಿವಂತ ದೇಶಗಳ ಅಗತ್ಯ­ಗಳಿಗೆ ಮಾತ್ರ ಸ್ಪಂದಿಸು­ತ್ತಿರುವುದು ಸುಳ್ಳಲ್ಲ. ಏಷ್ಯಾದ ಅಭಿವೃದ್ಧಿ ಹೊಂದು­ತ್ತಿರುವ ದೇಶಗಳ ಹಣಕಾಸಿನ ಅಗತ್ಯ­ಗಳು ಈ ಸಂಸ್ಥೆಗಳಿಗೆ ಇದುವರೆಗೂ ಮನವರಿಕೆ­ಯಾಗಿಲ್ಲ ಅಥವಾ ನೆರವು ನೀಡುವ ಮನಸ್ಸು ಅವುಗ­ಳಿಗೆ ಇದ್ದಂತಿಲ್ಲ. ಏಷ್ಯಾದ ದೇಶಗಳ ಹಣ­ಕಾಸಿನ ನೆರವಿನ ಅಗತ್ಯಗಳಿಗೆ ಇವುಗಳು ಸೂಕ್ತವಾಗಿ ಸ್ಪಂದಿಸದಿರು­ವುದೇ ಹೊಸ ಬ್ಯಾಂಕ್‌ ಅಸ್ತಿತ್ವಕ್ಕೆ ಬರಲು ಮೂಲ ಕಾರಣ ಎನ್ನುವುದನ್ನು ಮರೆ­ಯು­ವಂತಿಲ್ಲ.

ಒಂದು ಅಂದಾಜಿನ ಪ್ರಕಾರ, 2020ರವರೆಗಿನ ಅವಧಿಯಲ್ಲಿ ಏಷ್ಯಾದ ದೇಶ­­ಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ವಾರ್ಷಿಕ ₨ 48 ಲಕ್ಷ ಕೋಟಿಗಳಷ್ಟು ಹಣಕಾಸು ನೆರವಿನ ಅಗತ್ಯ ಇದೆ. ಜಪಾನ್‌ ಹಿಡಿತದಲ್ಲಿ ಇರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ವರ್ಷಕ್ಕೆ ₨ 60 ಸಾವಿರ ಕೋಟಿಗಳಷ್ಟೆ ಕೊಡುವ ಸಾಮರ್ಥ್ಯ ಹೊಂದಿದೆ. ಅಮೆರಿಕ ನಿಯಂತ್ರಣದ ವಿಶ್ವಬ್ಯಾಂಕ್‌ ಮತ್ತು ಯುರೋಪ್‌ ದೇಶಗಳ ನಿಯಂತ್ರಣದ ಐಎಂಎಫ್‌­ನಿಂದ ಕೂಡ ಏಷ್ಯಾದ ಬೇಡಿಕೆ ಈಡೇರಿಸುವುದು ಸಾಧ್ಯವಾ­ಗುತ್ತಿಲ್ಲ.

₨ 3 ಲಕ್ಷ ಕೋಟಿಗಳ ಮೂಲ ಬಂಡವಾಳ­ದೊಂದಿಗೆ ಅಸ್ತಿತ್ವಕ್ಕೆ ಬರುತ್ತಿರುವ ಹೊಸ ಬ್ಯಾಂಕ್‌ನಲ್ಲಿ ಚೀನಾ ಪ್ರಾಬಲ್ಯ ಸಾಧಿಸ­ದಂತೆಯೂ ಇತರ ಸದಸ್ಯ ದೇಶಗಳು ನೋಡಿ­ಕೊಳ್ಳ­ಬೇಕಾಗಿದೆ. ಪ್ರಾದೇಶಿಕ ಮೂಲಸೌಕರ್ಯ ಅಭಿವೃದ್ಧಿಗೆ ಈ   ಬ್ಯಾಂಕ್‌ ಅಗತ್ಯ­ವಾದ ಬಂಡ­ವಾಳ ಕ್ರೋಡೀಕರಿಸಿ ಹಣಕಾಸು ನೆರವು ಒದಗಿಸುವ ನಿಟ್ಟಿನಲ್ಲಿ ಎಡಿಬಿ, ಐಎಂಎಫ್ ಮತ್ತು ವಿಶ್ವಬ್ಯಾಂಕ್‌ಗೆ ಪರ್ಯಾಯವಾಗಿ ಪರಿಣಾಮ­ಕಾರಿ­ಯಾಗಿ ಕಾರ್ಯ­ನಿರ್ವಹಿಸಿದರೆ ಮಾತ್ರ ಬ್ಯಾಂಕ್‌ ಸ್ಥಾಪನೆ ಉದ್ದೇಶ ಈಡೇರಲಿದೆ.

ಸಾರಿಗೆ, ಅಣೆ­ಕಟ್ಟು, ಬಂದರು ಮತ್ತಿತರ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಬಲಿಷ್ಠ ದೇಶಗಳ ಹಂಗಿಲ್ಲದೇ ಹಣಕಾಸು ನೆರವು ಪಡೆಯುವುದು ಈಗ ಏಷ್ಯಾದ ದೇಶಗಳಿಗೆ ಹೆಚ್ಚು ಸುಲಭವಾ­ಗಲಿದೆ. ಈ ಅವಕಾಶವನ್ನು ಸದಸ್ಯ ದೇಶಗಳು ಸದ್ಬಳಕೆ ಮಾಡಿಕೊಂಡರೆ ಅಭಿವೃದ್ಧಿಯ ವೇಗ ತೀವ್ರಗೊಂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT