ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ತಿರುಗೇಟು ನೀಡಿದ ಕರ್ನಾಟಕ

ರಣಜಿ: ಚಾಂಪಿಯನ್ ತಂಡಕ್ಕೆ 70 ರನ್‌ ಮುನ್ನಡೆ, ವಿನಯ್‌ಗೆ ಎರಡು ವಿಕೆಟ್
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಗುವಾಹಟಿ: ಹಾಲಿ ಚಾಂಪಿಯನ್‌ ಕರ್ನಾಟಕವನ್ನು ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ್ದ ಅಸ್ಸಾಂ ತಂಡದ ಖುಷಿ ಶುಕ್ರವಾರದ ಸಂಜೆ ವೇಳೆಗೆ ಮಂಜಿನಂತೆ ಕರಗಿ ಹೋಗಿತ್ತು. ಬೌಲಿಂಗ್‌ನಲ್ಲಿ ಪ್ರಾಬಲ್ಯ ಮೆರೆದ ರಾಜ್ಯ ತಂಡ ಅಸ್ಸಾಂಗೆ ಭರ್ಜರಿ ತಿರುಗೇಟು ನೀಡಿತು.

ಹೀಗಾಗಿ ವಿನಯ್‌ ಕುಮಾರ್‌ ನಾಯಕತ್ವದ ರಾಜ್ಯ ತಂಡದಲ್ಲಿ ಗೆಲುವಿನ ಕನಸು ಒಡಮೂಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ 187 ರನ್‌ಗೆ ಆಲೌಟ್‌ ಆಗಿತ್ತು.  ಪ್ರಥಮ ಇನಿಂಗ್ಸ್‌ನಲ್ಲಿ ಅಸ್ಸಾಂ 78.5 ಓವರ್‌ಗಳಲ್ಲಿ 194 ರನ್‌ ಕಲೆ ಹಾಕಿ ಏಳು ರನ್‌ಗಳ ಮುನ್ನಡೆ ಪಡೆದುಕೊಂಡಿತು.

ರಾಜ್ಯ ತಂಡ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 77 ರನ್ ಗಳಿಸಿದೆ. ಸಮರ್ಥ್‌ (ಬ್ಯಾಟಿಂಗ್‌ 33) ಮತ್ತು ಮಯಂಕ್ (ಬ್ಯಾಟಿಂಗ್‌ 44) ವೇಗವಾಗಿ ರನ್‌ ಗಳಿಸುತ್ತಿದ್ದಾರೆ.

ಮೊದಲ ದಿನ ಬ್ಯಾಟ್ಸ್‌ಮನ್‌ಗಳಿಗೆ ‘ಆಟ’ವಾಡಿಸಿದ್ದ ಪಿಚ್‌ ಸತ್ವ ಪೂರ್ಣವಾಗಿ ಕಳೆದುಹೋಗಿದೆ. ಆದ್ದರಿಂದ ಇನ್ನೆರೆಡು ದಿನ ಬರ್ಸಾಪರ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಹೊಳೆ ಹರಿಸಲು ನೆರವಾಗಲಿದೆ.

ಆದ್ದರಿಂದ ಕರ್ನಾಟಕ ಮೂರನೇ ದಿನದಾಟದಲ್ಲಿ ವೇಗವಾಗಿ ರನ್‌ ಕಲೆ ಹಾಕಿ ಸವಾಲಿನ ಗುರಿ ನೀಡುವ ಲೆಕ್ಕಾಚಾರ ಹೊಂದಿದೆ. ರಾಜ್ಯ ತಂಡ ಅಸ್ಸಾಂಗೆ 250 ರನ್‌ ಗುರಿ ನೀಡಿದರೂ ಅವರಿಗೆ ಗೆಲುವು ಕಷ್ಟವೇ. ಏಕೆಂದರೆ, ರಾಜ್ಯದ ಬೌಲಿಂಗ್ ಬಲಿಷ್ಠವಾಗಿದೆ.  ವಿನಯ್‌, ಮಿಥುನ್‌, ಶರತ್‌, ಸುಚಿತ್‌, ಶ್ರೇಯಸ್‌ ನಾಲ್ಕನೇ ಇನಿಂಗ್ಸ್‌ನಲ್ಲಿ ಅಸ್ಸಾಂ ತಂಡವನ್ನು ಸುಲಭವಾಗಿ ಕಟ್ಟಿ ಹಾಕಬಲ್ಲರು.

ಕರ್ನಾಟಕದ ಎದುರು ಚೊಚ್ಚಲ ಜಯದ ನಿರೀಕ್ಷೆಯಲ್ಲಿರುವ ಅಸ್ಸಾಂ ದೇಶಿ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವೇನಲ್ಲ. ಈ ತಂಡದ ಅಮಿತ್‌ ವರ್ಮಾ, ಪಲ್ಲವ ಕುಮಾರ್‌ ದಾಸ್‌, ಗೋಕುಲ್‌ ಶರ್ಮಾ ಮತ್ತು ಅರುಣ್‌ ಕಾರ್ತಿಕ್‌ ಬಿಟ್ಟರೆ  ಬೇರೆ ಬಲಿಷ್ಠ ಬ್ಯಾಟ್ಸ್‌ಮನ್‌ಗಳೂ ಇಲ್ಲ. ಇದಕ್ಕೆ ಶುಕ್ರವಾರದ ಆಟ ಸಾಕ್ಷಿಯಾಯಿತು.

ಮೊದಲ ದಿನ ಒಂದು ವಿಕೆಟ್‌ ಕಳೆದುಕೊಂಡು 21 ರನ್‌ ಗಳಿಸಿದ್ದ ಅಸ್ಸಾಂ ಎರಡನೇ ದಿನದ ಮೊದಲ ಅವಧಿಯಲ್ಲಿ ಚೆನ್ನಾಗಿಯೇ ಆಡಿತು. ಹೆಚ್ಚು ರನ್ ಗಳಿಸದಿದ್ದರೂ ವಿಕೆಟ್‌ ಬೀಳದಂತೆ ಎಚ್ಚರಿಕೆ ವಹಿಸಿತು. ಪಲ್ಲವಕುಮಾರ್‌ (55, 150 ನಿಮಿಷ, 107ಎಸೆತ, 5 ಬೌಂಡರಿ, 1 ಸಿಕ್ಸರ್‌) ನೆರವಾದರು. ಇವರ ಜೊತೆ ಕ್ರೀಸ್‌ ಕಾಯ್ದಕೊಂಡಿದ್ದ ಗೋಕುಲ್ ದಾಸ್ (30) ಎರಡನೇ ವಿಕೆಟ್‌ಗೆ ಪಲ್ಲವ್‌ ಜೊತೆ 82 ರನ್‌ ಕಲೆ ಹಾಕಿದರು.

ದಿನದಾಟದ ಮೊದಲ ಅವಧಿಯಲ್ಲಿ ಪಿಚ್‌ ಹೆಚ್ಚು ಅಪಾಯಕಾರಿ ಎನ್ನುವುದನ್ನು ಅರಿತ ಅಸ್ಸಾಂ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. 
ಅಸ್ಸಾಂ 91 ರನ್‌ ಗಳಿಸಿದ್ದ ವೇಳೆ ಎರಡು ವಿಕೆಟ್‌ ಕಳೆದುಕೊಂಡಿತು. ಇನಿಂಗ್ಸ್‌ ಮುನ್ನಡೆ ತಂದುಕೊಡಲು  ಅಸ್ಸಾಂ ತಂಡದಲ್ಲಿರುವ ಕನ್ನಡಿಗ ಅಮಿತ್‌ ವರ್ಮಾ ಸಾಕಷ್ಟು ಹೋರಾಡಿದರು. 185 ನಿಮಿಷ ಕ್ರೀಸ್‌ನಲ್ಲಿದ್ದ ಎಡಗೈ ಬ್ಯಾಟ್ಸ್‌ಮನ್ ವರ್ಮಾ 125 ಎಸೆತಗ
ಳನ್ನು ಎದುರಿಸಿದರು. ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು. ಇವರ ಅರ್ಧಶತಕದ ಬಲದಿಂದಾಗಿಯೇ ಅಸ್ಸಾಂಗೆ ಇನಿಂಗ್ಸ್‌ ಮುನ್ನಡೆ ಲಭಿಸಿತು.

ಇದರಲ್ಲಿ ರಾಜ್ಯ ತಂಡದ ಕಳಪೆ ಫೀಲ್ಡಿಂಗ್‌ನ ‘ಕೊಡುಗೆ’ಯೂ ಇದೆ. ಅಮಿತ್‌ 49 ರನ್ ಗಳಿಸಿದ್ದ ವೇಳೆ ಸಮರ್ಥ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಗೌತಮ್‌ಗೆ ಕ್ಯಾಚ್‌ ನೀಡಿದ್ದರು. ಈ ಅವಕಾಶವನ್ನು ಗೌತಮ್‌ ಕೈಚೆಲ್ಲಿದರು. ಕರುಣ್‌ ನಾಯರ್ ಮತ್ತು ರಾಬಿನ್ ಉತ್ತಪ್ಪ ಕೂಡ ತಲಾ ಒಂದು ಕ್ಯಾಚ್‌ ಬಿಟ್ಟರು. ಇದರ ಲಾಭ ಪಡೆದ ಅಸ್ಸಾಂ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿತು. ಆದರೆ, ಅಸ್ಸಾಂ ಏಳು ರನ್‌ಗಳಷ್ಟೇ ಮುನ್ನಡೆ ಪಡೆದ ಕಾರಣ ಮೂರು ಜೀವದಾನಗಳು ದುಬಾರಿಯೆನಿಸಲಿಲ್ಲ.

ಮಹತ್ವದ ತೀರ್ಮಾನ: ದಿನದಾಟದ ಆರಂಭದಲ್ಲಿ ಬೇಗನೆ ವಿಕೆಟ್ ಬೀಳದ ಕಾರಣ ನಾಯಕ ವಿನಯ್‌ ‘ದಿಕ್ಕು ಬದಲಿಸುವ ತಂತ್ರ’ಕ್ಕೆ ಮುಂದಾದರು.

ವೇಗಿಗಳಾದ ವಿನಯ್‌, ಮಿಥುನ್ ಹಾಗೂ ಶರತ್‌ ಬೌಲಿಂಗ್‌ ಮಾಡಿದರೂ ವಿಕೆಟ್‌ ದಕ್ಕಲಿಲ್ಲ. ಚೊಚ್ಚಲ ರಣಜಿ ಆಡುತ್ತಿರುವ ಸ್ಪಿನ್ನರ್‌ ಸುಚಿತ್‌ ಮತ್ತು ಲೆಗ್ ಸ್ಪಿನ್ನರ್‌ ಶ್ರೇಯಸ್ ಅವರನ್ನು ಕಣಕ್ಕಿಳಿಸಿದರೂ ಹೆಚ್ಚು ಫಲ ಸಿಗಲಿಲ್ಲ.

ಆದ್ದರಿಂದ ವಿನಯ್‌ ಸಾಂದರ್ಭಿಕ ಸ್ಪಿನ್ನರ್‌ಗಳಾದ ಸಮರ್ಥ್‌ ಮತ್ತು ಕರುಣ್‌ ಕೈಗೆ ಚೆಂಡು ನೀಡಿದರು. ವಿನಯ್‌  ಈ ತೀರ್ಮಾನ ಪಂದ್ಯದ ಗತಿಯನ್ನೇ ಬದಲಿಸಿತು.

ನಿಧಾನವಾಗಿ ರನ್ ಗಳಿಸುತ್ತಿದ್ದ ಅಸ್ಸಾಂ ನಾಯಕ ಗೋಕುಲ್ ಶರ್ಮಾ ಅವರನ್ನು ಸುಚಿತ್‌ ಔಟ್‌ ಮಾಡಿದರೆ, ಶಿವಶಂಕರ್‌ ರಾಯ್‌ ಮತ್ತು ಪಲ್ಲವ್‌ದಾಸ್‌ ಅವರಿಗೆ ಆಫ್‌ಸ್ಪಿನ್ನರ್‌ ಕರುಣ್‌ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ವಿನಯ್‌ ಬೌಲಿಂಗ್‌ನಲ್ಲಿ ಮತ್ತೆ ಬದಲಾವಣೆ ಮಾಡಿದರು.

ವೇಗ ಮತ್ತು ಸ್ಪಿನ್‌ ಹೀಗೆ ಪದೇ ಪದೇ ಬದಲಾವಣೆ ಮಾಡುತ್ತಾ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಇದಕ್ಕೆ ಬೇಗನೆ ಫಲ ಲಭಿಸಿತು. ಅಸ್ಸಾಂ ತಂಡದ ಒಟ್ಟು ಮೊತ್ತ 160 ಆಗಿದ್ದಾಗ ಐದು ವಿಕೆಟ್‌ಗಳು ಪತನವಾಗಿದ್ದವು. ಕೊನೆಯ 34 ರನ್ ಗಳಿಸುವಷ್ಟರಲ್ಲಿ ಇನ್ನುಳಿದ ಐದು ವಿಕೆಟ್‌ಗಳು ಉರುಳಿದ್ದು ಇದಕ್ಕೆ ಸಾಕ್ಷಿ.

ಸ್ಕೋರು ವಿವರ
ಕರ್ನಾಟಕ ಮೊದಲ ಇನಿಂಗ್ಸ್‌ 187  (75.2 ಓವರ್‌ಗಳಲ್ಲಿ)

ಅಸ್ಸಾಂ ಮೊದಲ ಇನಿಂಗ್ಸ್‌ 194  (78.5 ಓವರ್‌ಗಳಲ್ಲಿ)
(ಗುರುವಾರದ ಅಂತ್ಯಕ್ಕೆ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 21)
ಪಲ್ಲವಕುಮಾರ್ ದಾಸ್‌ ಎಲ್‌ಬಿಡಬ್ಲ್ಯು ಬಿ ಕರುಣ್‌ ನಾಯರ್‌  55
ಗೋಕುಲ್‌ ಶರ್ಮಾ ಸಿ ಸಿ.ಎಂ. ಗೌತಮ್‌ ಬಿ ಜೆ. ಸುಚಿತ್‌  30
ಅಮಿತ್‌ ವರ್ಮಾ ಎಲ್‌ಬಿಡಬ್ಲ್ಯು ಬಿ ಶ್ರೇಯಸ್ ಗೋಪಾಲ್‌  57
ಕೆ.ಬಿ. ಅರುಣ್‌ ಕಾರ್ತಿಕ್‌ ಎಲ್‌ಬಿಡಬ್ಲ್ಯು ಬಿ ವಿನಯ್‌ ಕುಮಾರ್‌  28
ತರ್ಜಿಂದರ್ ಸಿಂಗ್‌ ಬಿ ಎಚ್‌.ಎಸ್. ಶರತ್‌್  06
ಶಿವಶಂಕರ್ ರಾಯ್ ಎಲ್‌ಬಿಡಬ್ಲ್ಯು ಬಿ ಕರುಣ್‌ ನಾಯರ್‌  01
ಸೈಯದ್‌ ಮಹಮ್ಮದ್‌ ಸಿ ವಿನಯ್‌ ಕುಮಾರ್‌ ಬಿ ಆರ್. ಸಮರ್ಥ್‌್  04
ಅಬುನೇಚಿಮ್ ಅಹ್ಮದ್‌ ಬಿ ಶ್ರೇಯಸ್ ಗೋಪಾಲ್‌  06
ಅರೂಪ್‌ ದಾಸ್‌ ಔಟಾಗದೆ  00
ಕೃಷ್ಣದಾಸ್ ರನ್‌ ಔಟ್‌ (ಜೆ. ಸುಚಿತ್‌)  00
ಇತರೆ: (ಬೈ–2, ನೋ ಬಾಲ್‌–1, ವೈಡ್‌–1)  04

ವಿಕೆಟ್‌ ಪತನ: 2–91 (ಗೋಕುಲ್‌; 32.4), 3–91 (ಪಲ್ಲವ್‌; 33.2), 4–133 (ಅರುಣ್‌; 49.6), 5–160 (ತರ್ಜಿಂದರ್‌; 58.4), 6–161 (ಶಿವಶಂಕರ್‌; 59.1), 7–180 (ಮಹಮ್ಮದ್; 72.2), 8–191 (ಅಹ್ಮದ್‌; 75.4), 9–194 (ಅಮಿತ್‌; 77.4), 10–194 (ಕೃಷ್ಣದಾಸ್‌; 78.5).

ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 16.5–6–20–2, ಅಭಿಮನ್ಯು ಮಿಥುನ್‌ 12–5–28–0, ಎಚ್‌.ಎಸ್‌. ಶರತ್‌ 12–4–22–1, ಶ್ರೇಯಸ್ ಗೋಪಾಲ್‌ 12–1–43–2, ಜೆ. ಸುಚಿತ್‌ 16–1–58–1, ಕರುಣ್ ನಾಯರ್‌ 5–0–11–2, ಆರ್‌. ಸಮರ್ಥ್‌  5–2–10–1.

ಕರ್ನಾಟಕ ಎರಡನೇ ಇನಿಂಗ್ಸ್‌ ವಿಕೆಟ್‌ ಇಲ್ಲದೆ 77  (21 ಓ) ಆರ್‌. ಸಮರ್ಥ್‌ ಬ್ಯಾಟಿಂಗ್‌  33 ಮಯಂಕ್ ಅಗರವಾಲ್‌ ಬ್ಯಾಟಿಂಗ್‌  44.

ಬೌಲಿಂಗ್‌: ಅರೂಪ್‌ ದಾಸ್‌ 5–0–14–0, ಕೃಷ್ಣದಾಸ್‌ 4–1–24–0, ಸೈಯದ್‌ ಮಹಮ್ಮದ್‌ 7–1–17–0, ಅಬುನೇಚಿಮ್ ಅಹ್ಮದ್‌ 2–1–9–0, ಅಮಿತ್‌ ವರ್ಮಾ 3–0–13–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT