ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಬೆಳ್ಳುಳ್ಳಿ

ಹೊಸ ಹೆಜ್ಜೆ-5
Last Updated 23 ಮೇ 2016, 19:30 IST
ಅಕ್ಷರ ಗಾತ್ರ

ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗಾಗಿ ತಯಾರಿಸುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು.  ಅದರಲ್ಲೂ ಹೃದಯ ಸಮಸ್ಯೆಗೆ ಬೆಳ್ಳುಳ್ಳಿ ಸಂಜೀವಿನಿ. ಇಂಥ ಬೆಳ್ಳುಳ್ಳಿಯನ್ನು ಪ್ರಧಾನವಾಗಿ ಬೆಳೆದಿರುವ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಹೂವಿನಹಿಪ್ಪರಗಿ ಹೋಬಳಿಯ ಅಗಸಬಾಳ ಗ್ರಾಮದ ನಿವಾಸಿ ಮೋಹನಗೌಡ ಭೀಮನಗೌಡ ಪಾಟೀಲ 2 ವರ್ಷಗಳಲ್ಲಿ 14ಲಕ್ಷ ರೂಪಾಯಿ ಆದಾಯ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.

1992ರಿಂದ ನಿರಂತರವಾಗಿ ಎಂಟು ಎಕರೆಯಲ್ಲಿ ಜವಾರಿ ತಳಿ ಬೆಳ್ಳುಳ್ಳಿ ಬೆಳೆಯುತ್ತಿರುವ ಇವರು, ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದು ಹೀಗೆ: ‘ಈ ಬೆಳೆಯನ್ನು ವೈಜ್ಞಾನಿಕ ರೀತಿ ಬೆಳೆದರೆ ಲಾಭದ ಹಾದಿ ತುಳಿಯಬಹುದು. ಅದಕ್ಕಾಗಿ ಈ ಬೆಳೆಯನ್ನು ಯಾವಾಗಲೂ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ  ಹಾಗೂ ಆಗ್ನೇಯ ದಿಕ್ಕಿಗೆ ಬಿತ್ತಬೇಕು. ಹೀಗೆ ಮಾಡಿದರೆ ಬೆಳೆ ಗುಂಪಾಗಿ ಬೀಳುವುದಿಲ್ಲ. ಮೂರು ತಿಂಗಳಿನಲ್ಲಿ ಫಸಲು ಸಿಗುತ್ತದೆ’.

ಪ್ರತಿ ಸೆಪ್ಟೆಂಬರ್ ತಿಂಗಳಲ್ಲಿ ಭೂಮಿ ಹದ ಮಾಡಿ ಇದಕ್ಕೆ ಕುರಿಗಳ ಗೊಬ್ಬರ ಹಾಕುತ್ತಾರೆ.  ಕುರಿಗಳ ಗೊಬ್ಬರ ಸಿಗದೇ ಹೋದರೆ ಒಂದು ಎಕರೆ ಜಮೀನಿಗೆ ಮೂರು ಟ್ರಾಕ್ಟರ್‌ನಷ್ಟು ಸೆಗಣಿ ಗೊಬ್ಬರ ಹಾಕುತ್ತಾರೆ.  ಹೀಗೆ ಸಿದ್ಧಪಡಿಸಿಕೊಂಡ ಭೂಮಿಗೆ ಧಾರವಾಡದಿಂದ ತರುವ ಬೆಳ್ಳುಳ್ಳಿ ಬೀಜವನ್ನು  ಬಿತ್ತುತ್ತಾರೆ.

‘ಒಂದು ಎಕರೆಗೆ ಎರಡು ಕ್ವಿಂಟಾಲ್‌ನಂತೆ ಎಂಟು ಇಂಚು ಪ್ಲಾಸ್ಟಿಕ್ ಕೂರಿಗೆಯಿಂದ ಬಿತ್ತನೆ ಮಾಡುತ್ತೇನೆ. ಬಿತ್ತನೆಗೆ ಮುಂಚೆ ಒಂದು ಎಕರೆಗೆ ಒಂದು ಕ್ವಿಂಟಾಲ್ ಗೊಬ್ಬರ ಹಾಕುತ್ತೇನೆ. ನಾಟಿ ಬಂದ ನಂತರ ಮುಂದೆ ಎರಡು ಸಲ ಕಳೆ ತೆಗೆದು ಎಕರೆಗೆ ಒಂದು ಕ್ವಿಂಟಾಲ್‌ನಂತೆ ಯೂರಿಯಾ ಗೊಬ್ಬರ ಹಾಕುತ್ತೇನೆ’ ಎಂದು ಬಿತ್ತನೆಯ ಬಗ್ಗೆ ವಿವರಿಸುತ್ತಾರೆ.

ಸೀರ ರೋಗವೊಂದನ್ನು ಬಿಟ್ಟರೆ ಮತ್ತ್ಯಾವ ರೋಗಗಳೂ ತಾವು ಬೆಳೆಯುವ ಬೆಳ್ಳುಳ್ಳಿಗೆ ಬಾಧಿಸುವುದಿಲ್ಲ ಎನ್ನುವ ಅವರು, ಈ ರೋಗ ತಡೆಗೆ ಬಿತ್ತನೆ ಮಾಡಿದ ಒಂದು ತಿಂಗಳ ನಂತರ 15 ದಿನಗಳಿಗೊಮ್ಮೆ ಅಗತ್ಯಕ್ಕೆ ತಕ್ಕಂತೆ, ಅಂದರೆ ಒಂದು ಎಕರೆಗೆ 200 ಲೀಟರ್‌ ನೀರಿನಲ್ಲಿ ಔಷಧಿಯನ್ನು ಮೂರು ಸಲ ಸಿಂಪಡಿಸುತ್ತಾರೆ. ಈ ಎಲ್ಲ ಪ್ರಕ್ರಿಯೆ ಮುಗಿದ 90 ದಿನಗಳ ನಂತರ ಫಸಲು ಕಿತ್ತು ಸೂಡು ಕಟ್ಟಿ ಸೋಸಿ ಚೀಲ ತುಂಬಿ ನೇರ ಮಾರುಕಟ್ಟೆಗೆ ಮಾಲನ್ನು ಕಳುಹಿಸುತ್ತಾರೆ.

ಒಂದು ಕೊಳವೆ ಬಾವಿ ತೋಡಿಸಿಕೊಂಡಿದ್ದಾರೆ. ಅದರ ಮೂಲಕ ಕಾರಂಜಿ ಪದ್ಧತಿಯಲ್ಲಿ ಎಂಟು ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ. ನಾಟಿ ಮಾಡಿದ ಒಂದು ತಿಂಗಳಲ್ಲಿ ನೀರನ್ನು ಕಡಿಮೆ ಹರಿಸಿ ನಂತರ ಮುಂದಿನ ಎರಡು ತಿಂಗಳು ಜಾಸ್ತಿ ನೀರು ಹರಿಸುವುದು ಅವಶ್ಯಕ ಎನ್ನುವುದು ಅವರ ಅನುಭವದ ನುಡಿ.

1992ರಿಂದ ಇವರು ಇದೇ ಮಾದರಿಯಲ್ಲಿ ಬೆಳ್ಳುಳ್ಳಿ ಕೃಷಿ ಆರಂಭಿಸಿದ್ದಾರೆ. ಆರಂಭದಲ್ಲಿಯೇ ಒಂದು ಎಕರೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ.

ಎರಡು ವರ್ಷಗಳಿಂದ ಪ್ರತಿ ಎಕರೆಗೆ 20 –25 ಕ್ವಿಂಟಾಲ್‌ನಂತೆ ಇವರಲ್ಲಿ ಇರುವ ಎಂಟು ಎಕರೆ ಜಮೀನಿನಿಂದ 200ಕ್ವಿಂಟಾಲ್‌ ಫಸಲು ಇವರ ಕೈಸೇರಿದೆ. ಒಂದು ಕೆ.ಜಿಗೆ 8ಸಾವಿರ ರೂಪಾಯಿಗಳಂತೆ ಬೆಳ್ಳುಳ್ಳಿ ಮಾರಾಟ ಮಾಡಿದ್ದಾರೆ. ಗದಗ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ ಮಾರುಕಟ್ಟೆಗಳು ಇವರ ಪ್ರಮುಖ ಮಾರಾಟ ಕೇಂದ್ರಗಳು.

ಎಕರೆಗೆ 1.75ಲಕ್ಷ ರೂಪಾಯಿಗಳಂತೆ   ಎಂಟು ಎಕರೆಯಿಂದ 14ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪಾಟೀಲ್‌. ‘ ನನ್ನ ಮೂವರು ಮಕ್ಕಳು ಚೆನ್ನಾಗಿ ಕಲಿತಿದ್ದಾರೆ. ಅವರು ಸುಲಭದಲ್ಲಿ ಉದ್ಯೋಗ ಸಿಗುತ್ತಿತ್ತು. ಆದರೆ ಉದ್ಯೋಗಕ್ಕಿಂತ ಕೃಷಿಯಲ್ಲಿಯೇ ಸುಖ ಇದೆ ಎನ್ನುವುದನ್ನು ಅರಿತ ಅವರು ನನ್ನ ಜೊತೆ ಕೃಷಿಯಲ್ಲಿ ನೆರವಾಗುತ್ತಾರೆ. ಅವರ ಸಹಕಾರದಿಂದ ನಾನು ಇಷ್ಟೆಲ್ಲಾ ಬೆಳೆಯಲು ಸಾಧ್ಯವಾಯಿತು’ ಎನ್ನುತ್ತಾರೆ.

ಇವರ ಬಳಿ ಒಟ್ಟಾರೆ 50 ಎಕರೆ ಜಮೀನು ಇದ್ದು ಉಳಿದ ಜಮೀನಿನಲ್ಲಿ ಸೂರ್ಯಕಾಂತಿ, ದ್ರಾಕ್ಷಿ, ಜೋಳ ಹಾಗೂ ತೊಗರಿ ಬೆಳೆಯುತ್ತಿದ್ದಾರೆ. ಆದರೆ ಇವೆಲ್ಲಕ್ಕಿಂತ ಬೆಳ್ಳುಳ್ಳಿಯಲ್ಲಿಯೇ ಅಧಿಕ ಲಾಭ ಇದೆ ಎನ್ನುವುದು ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT