ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಲೇ ಬರ್ಡಿಕ್‌... ಮರ್ರೆ ಮೋಡಿ

ಆಸ್ಟ್ರೇಲಿಯಾ ಓಪನ್ ಟೆನಿಸ್‌
Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸತತ 17 ಸಲ ವೈಫಲ್ಯ ಅನುಭವಿಸಿದ ಬಳಿಕ ಯಶಸ್ಸು ಲಭಿಸಿದರೆ ಆಗುವ ಸಂತಸ ಎಷ್ಟಿರಬಹುದು? ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆದ್ದಾಗ ಜೆಕ್‌ ಗಣರಾಜ್ಯದ ಆಟಗಾರ ಥಾಮಸ್‌ ಬರ್ಡಿಕ್‌  ಮುಖವನ್ನು ನೋಡಿದ್ದವರಿಗೆ ಈ ಸಂತಸ ಏನೆಂಬುದು ಸುಲಭದಲ್ಲಿ ತಿಳಿಯಬಹುದು.

ಋತುವಿನ ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಬರ್ಡಿಕ್‌ ಪ್ರಶಸ್ತಿ ಗೆಲ್ಲಲಿಲ್ಲ. ಆದರೆ ಸುದೀರ್ಘ ಅವಧಿಯಿಂದ ಕಾಡುತ್ತಿದ್ದ ನಿರಾಸೆಯಿಂದ ಹೊರಬರುವಲ್ಲಿ ಸಫಲರಾದರು. ಎಂಟರ ಘಟ್ಟದ ಪಂದ್ಯದಲ್ಲಿ ಅವರು ಸ್ಪೇನ್‌ನ ರಫೆಲ್‌ ನಡಾಲ್‌ ವಿರುದ್ಧ ಪಡೆದ ಗೆಲುವು ಈ ಬಾರಿಯ ಟೂರ್ನಿಯ ಪ್ರಮುಖ ಫಲಿತಾಂಶಗಳಲ್ಲೊಂದು.

ಏಕೆಂದರೆ ಬರ್ಡಿಕ್‌ ಅವರು ನಡಾಲ್‌ ವಿರುದ್ಧ ಕೊನೆಯದಾಗಿ ಆಡಿದ 17 ಪಂದ್ಯಗಳಲ್ಲಿ ಒಮ್ಮೆಯೂ ಗೆಲುವು ಪಡೆದಿರಲಿಲ್ಲ. 2006ರ ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ನಡಾಲ್‌ ವಿರುದ್ಧ ಕೊನೆಯದಾಗಿ ಅವರಿಗೆ ಜಯ ಲಭಿಸಿತ್ತು. ಆ ಬಳಿಕ ಸ್ಪೇನ್‌ನ ಆಟಗಾರನ ಗೆಲುವಿನ ಓಟಕ್ಕೆ ತಡೆಯೊಡ್ಡಲು ವಿಫಲವಾಗಿದ್ದರು. ಇದೀಗ ನಡಾಲ್‌ ವಿರುದ್ಧ  ಕೊನೆಗೂ ಗೆಲುವು ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ. ಆಕ್ರಮಣಕಾರಿ ಆಟದಿಂದ ಮಾತ್ರ ನಡಾಲ್‌ ವಿರುದ್ಧ ಜಯ ಸಾಧಿಸಬಹುದು ಎಂಬುದು ಬರ್ಡಿಕ್‌ಗೆ ತಿಳಿದಿತ್ತು. ಅದಕ್ಕೆ ತಕ್ಕಂತೆ ಆಡಿದ ಅವರು ವೃತ್ತಿಜೀವನದ ಸ್ಮರಣೀಯ ಗೆಲುವು ಒಲಿಸಿಕೊಂಡರು.

ಹೆಚ್ಚಿನ ಆಟಗಾರರು ‘ಎದುರಾಳಿ ತಪ್ಪು ಮಾಡಲಿ’ ಎಂದು ಕಾದು ನೋಡುವ ತಂತ್ರವನ್ನು ಅನುಸರಿಸುವವರು. ಆದರೆ ನಡಾಲ್‌ ವಿರುದ್ಧ ಆ ತಂತ್ರ ನಡೆಯುವುದಿಲ್ಲ ಎಂಬುದು ಹಲವು ಸಲ ಸಾಬೀತಾಗಿದೆ. ಪಂದ್ಯ ಮುಂದುವರಿದಂತೆ ಅವರ ಬಾಹುಬಲ ಹೆಚ್ಚುತ್ತದೇ ಹೊರತು ಕುಗ್ಗುವುದಿಲ್ಲ. ಈ ಕಾರಣ ಬರ್ಡಿಕ್‌ ಪಂದ್ಯದುದ್ದಕ್ಕೂ ಛಲದ ಆಟ ತೋರಿದರು. ಬರ್ಡಿಕ್‌ ಸೆಮಿಫೈನಲ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಕೈಯಲ್ಲಿ ಪರಾಭವಗೊಂಡರು. ಆದರೆ ನಡಾಲ್‌ ವಿರುದ್ಧದ ಗೆಲುವಿನಿಂದ ಈ ಟೂರ್ನಿ ಅವರಿಗೆ ಸ್ಮರಣೀಯ ಎನಿಸಿಕೊಂಡಿತು.

ಟೀಕಾಕಾರರ ಬಾಯಿ ಮುಚ್ಚಿದ ಮರ್ರೆ
ಆ್ಯಂಡಿ ಮರ್ರೆಗೆ ಋತುವಿನ ಮೊದಲ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿ ತುಂಬಾ ವಿಶೇಷ ಎನಿಸಿತು. ಮರ್ರೆ ಹೋದ ವರ್ಷ ಫ್ರಾನ್ಸ್‌ನ ಮಾಜಿ ಆಟಗಾರ್ತಿ ಅಮೇಲಿ ಮೌರೆಸ್ಮೊ ಅವರನ್ನು ಕೋಚ್‌ ಆಗಿ ನೇಮಿಸಿಕೊಂಡಿದ್ದರು. ಮಹಿಳಾ ಆಟಗಾರ್ತಿಯನ್ನು ಕೋಚ್‌ ಆಗಿ ನೇಮಿಸಿದ್ದಕ್ಕೆ ಮರ್ರೆ ಸಾಕಷ್ಟು ಟೀಕೆಯನ್ನು ಎದುರಿಸಿದ್ದರು.

ಆದರೆ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಬ್ರಿಟನ್‌ನ ಆಟಗಾರ 2013ರ ವಿಂಬಲ್ಡನ್‌ ಬಳಿಕ ಯಾವುದೇ ಗ್ರ್ಯಾಂಡ್‌್ ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿರಲಿಲ್ಲ. ಅವರ ಆಟದ ಶಕ್ತಿ ಕಡಿಮೆಯಾಗುತ್ತಿದೆ ಎಂದು ಟೆನಿಸ್‌ ಪಂಡಿತರು ಲೆಕ್ಕ ಹಾಕಿದ್ದರು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಲು ಮರ್ರೆ ಯಶಸ್ವಿಯಾದರು.

‘ಮಹಿಳೆಯರಿಗೂ ಉತ್ತಮ ಕೋಚ್‌ ಆಗಲು ಸಾಧ್ಯ ಎಂಬುದನ್ನು ನಾವಿಬ್ಬರು ತೋರಿಸಿಕೊಟ್ಟಿದ್ದೇವೆ’ ಎನ್ನುವ ಮೂಲಕ ಮರ್ರೆ ಇತರರ ಬಾಯಿ ಮುಚ್ಚಿಸಿದ್ದಾರೆ. ಮೌರೆಸ್ಮೊ ಮಾರ್ಗದರ್ಶನದಿಂದ ಅವರ ಆಟದಲ್ಲಿ ಸುಧಾರಣೆ ಕಂಡುಬಂದಿರುವುದು ಈ ಟೂರ್ನಿಯಲ್ಲಿ ಸಾಬೀತಾಗಿದೆ. 

ಮ್ಯಾಡಿಸನ್‌ ಮೋಡಿ
ಋತುವಿನ ಮೊದಲ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಬೆರಗು ಮೂಡಿಸುವಂತಹ ಅನಿರೀಕ್ಷಿತ ಫಲಿತಾಂಶ ಕಂಡುಬರಲಿಲ್ಲ. ರಷ್ಯಾದ ಮರಿಯಾ ಶರಪೋವಾ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್‌ ನಿರೀಕ್ಷೆಯಂತೆಯೇ ಪ್ರಭುತ್ವ ಮೆರೆದರು.
ಇದರ ನಡುವೆ ಅಲ್ಪ ಅಚ್ಚರಿ ಉಂಟುಮಾಡಿದ್ದು ಅಮೆರಿಕದ ಮ್ಯಾಡಿಸನ್‌ ಕೀಸ್‌. 19ರ ಹರೆಯದ ಈ ಯುವ ಆಟಗಾರ್ತಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

ವಿಶ್ವದ ಪ್ರಮುಖ ಆಟಗಾರ್ತಿಯರಿಗೆ ಪೈಪೋಟಿ ನೀಡಬಲ್ಲೆ ಎಂಬುದನ್ನು ಮ್ಯಾಡಿಸನ್‌ ತೋರಿಸಿಕೊಟ್ಟರು. ಸೆಮಿಯಲ್ಲಿ ಅವರು ಸೆರೆನಾ ವಿಲಿಯಮ್ಸ್‌ ಕೈಯಲ್ಲಿ ಪರಾಭವಗೊಂಡರು. ಆದರೆ ಇಲ್ಲಿ ನೀಡಿರುವ ಪ್ರದರ್ಶನ ಅವರ  ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ವೀನಸ್‌ ವಿಲಿಯಮ್ಸ್‌  ವಿರುದ್ಧ ಪಡೆದ ಗೆಲುವನ್ನು ಅವರು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಮ್ಯಾಡಿಸನ್‌ ಎಳೆಯದರಲ್ಲಿ ವೀನಸ್‌ ಆಟವನ್ನು ನೋಡಿ ‘ಅದೇ ಹಾದಿಯಲ್ಲಿ ಮುನ್ನಡೆಯಬೇಕು’ ಎಂಬ ಕನಸು ಕಂಡಿದ್ದರು.

1997 ರಲ್ಲಿ ವೀನಸ್‌ ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಗೆದ್ದಾಗ ಮ್ಯಾಡಿಸನ್‌ ಅವರಿಗೆ 2 ವರ್ಷ ವಯಸ್ಸು! ಇದೀಗ ತನ್ನ ‘ರೋಲ್‌ ಮಾಡೆಲ್‌’ ಎನಿಸಿದ್ದ ಆಟಗಾರ್ತಿಯನ್ನೇ ಮಣಿಸಿ ಮೆರೆದಾಡಿದ್ದಾರೆ. ಸೆರೆನಾ ಮತ್ತು ವೀನಸ್‌ ನಿವೃತ್ತಿಯ ಅಂಚಿನಲ್ಲಿದ್ದಾರೆ. ವಿಲಿಯಮ್ಸ್‌ ಸಹೋದರಿಯರ ‘ಯುಗ’ ಕೊನೆಗೊಂಡ ಬಳಿಕ ಅಮೆರಿಕದ ಟೆನಿಸ್‌ ಅನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದ್ದಿತ್ತು. ಮ್ಯಾಡಿಸನ್ ತೋರಿದ ಆಟ ಈ ಪ್ರಶ್ನೆಗೆ ಉತ್ತರ ನೀಡುವಂತಿದೆ.

ಫೆಡರರ್‌ ಆಟ ಮುಗಿಯಿತೇ?
ರೋಜರ್‌ ಫೆಡರರ್‌ ನಿವೃತ್ತಿಗೆ ಮುನ್ನ ಇನ್ನೊಂದು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವರೇ? ಜಗತ್ತಿನ ಕೋಟ್ಯಂತರ ಟೆನಿಸ್‌ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು. ಸ್ವಿಟ್ಜರ್‌ಲೆಂಡ್‌ನ ಈ ಟೆನಿಸ್‌ ದೈತ್ಯ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲದೆ ಎರಡೂವರೆ ವರ್ಷ ಕಳೆದಿದೆ. 2012ರ ವಿಂಬಲ್ಡನ್‌ ಬಳಿಕ ಸ್ವಿಸ್‌ ಆಟಗಾರ ಯಾವುದೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದುಕೊಂಡಿಲ್ಲ. ಈ ಅವಧಿಯಲ್ಲಿ ಒಟ್ಟು 10 ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳು ನಡೆದಿವೆ.

2010ರ ಬಳಿಕ ನಡೆದ 21 ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ಫೆಡರರ್‌ ಜಯಿಸಿದ್ದು ಕೇವಲ ಎರಡು ಪ್ರಶಸ್ತಿ ಮಾತ್ರ. 2003 ರಿಂದ 2009ರ ವರೆಗಿನ ಏಳು ವರ್ಷಗಳಲ್ಲಿ ಅವರು 15 ಪ್ರಶಸ್ತಿಗಳನ್ನು ಎತ್ತಿಹಿಡಿದಿದ್ದರು. ಮುಂದಿನ ಐದು ವರ್ಷಗಳಲ್ಲಿ ಈ ಆಟಗಾರ ಗೆದ್ದಿರುವುದು ಎರಡು ಟ್ರೋಫಿ. ಒಂದು ಕಾಲದಲ್ಲಿ ಟೆನಿಸ್‌ ಜಗತ್ತಿನಲ್ಲಿ ‘ಸೋಲಿಲ್ಲದ ಸರದಾರ’ ಎನಿಸಿದ್ದ ಫೆಡರರ್‌ ಬಾಹುಗಳಲ್ಲಿನ ಶಕ್ತಿ ಕಡಿಮೆಯಾಗುತ್ತಾ ಬಂದಿದೆ ಎಂಬುದನ್ನು ಇದರಿಂದ ತಿಳಿಯಬಹುದು.

ಪ್ರಶಸ್ತಿಯ ಬರ ನೀಗಿಸುವ ವಿಶ್ವಾಸದೊಂದಿಗೆ ಅವರು ಈ ಬಾರಿ ಮೆಲ್ಬರ್ನ್‌ ಪಾರ್ಕ್‌ಗೆ ಬಂದಿದ್ದರು. ಅದಕ್ಕಾಗಿ ತಕ್ಕ ತಯಾರಿಯನ್ನೂ ನಡೆಸಿದ್ದರು. ಆದರೆ ಮೂರನೇ ಸುತ್ತಿನಲ್ಲಿ ಇಟಲಿಯ ಆಂಡ್ರೆಸ್‌ ಸೆಪ್ಪಿ ಕೈಯಲ್ಲಿ ಪರಾಭವಗೊಂಡು ಹೊರಬಿದ್ದರು.  ಫೆಡರರ್‌  ಪ್ರಶಸ್ತಿಯ ಬರ ಎದುರಿಸುತ್ತಿರುವುದು ನಿಜ. ಆದರೆ 17 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಈ ಮಹಾನ್‌ ಆಟಗಾರನನ್ನು ಸಂಪೂರ್ಣವಾಗಿ ಕಡೆಗಣಿಸಲು ಯಾರೂ ಸಿದ್ಧರಿಲ್ಲ. ನಿವೃತ್ತಿಗೆ ಮುಂಚೆ ಇನ್ನೊಂದು ಗ್ರ್ಯಾಂಡ್‌ ಸ್ಲಾಮ್‌ ಗೆದ್ದೇ ಗೆಲ್ಲುವರು ಎಂಬ ವಿಶ್ವಾಸದಲ್ಲಿ ಅವರ ಅಭಿಮಾನಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT