ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯನಿಧಿ ಮಾಹಿತಿ: 16ರಿಂದ ಅಂತರ್ಜಾಲದಲ್ಲಿ

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಲ್ಕು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವ ನೌಕರರ ಭವಿಷ್ಯನಿಧಿ  ಖಾತೆಯ ಮಾಹಿತಿಯನ್ನು ಅಂತರ್ಜಾಲದಲ್ಲಿ ಪರಿಶೀಲಿಸಲು ನೆರವಾಗುವ ಅಂತರ್ಜಾಲ ತಾಣ ಇದೇ 16ರಿಂದ ಆರಂಭವಾಗಲಿದೆ.

ಭವಿಷ್ಯನಿಧಿ ಸದಸ್ಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ತಾಣದಲ್ಲಿ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರ ‘ಸಾರ್ವತ್ರಿಕ ಖಾತೆ ಸಂಖ್ಯೆ’ಯನ್ನು  (ಯುಎಎನ್) ನಮೂದಿಸುವ ಮೂಲಕ ಖಾತೆಗೆ ಉದ್ಯೋಗದಾತರು ತಮ್ಮ ಪಾಲಿನ ಮೊತ್ತವನ್ನು ನಿಯಮಿತವಾಗಿ ಜಮಾ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದು. ಯುಎಎನ್ ಸದಸ್ಯರ ತಾಣಕ್ಕೆ ಇದೇ 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಸಾಧ್ಯತೆಯಿದೆ ಎಂದು ಇಪಿಎಫ್‌ಒನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜನರು ಉದ್ಯೋಗ ಬದಲಾಯಿಸಿದಾಗ ಭವಿಷ್ಯನಿಧಿ ಖಾತೆಯನ್ನು ವರ್ಗಾಯಿಸುವ ಸಮಸ್ಯೆಯನ್ನೂ ಯುಎಎನ್‌ ವ್ಯವಸ್ಥೆ ನಿವಾರಿಸಿದೆ. ಇನ್ನು ಮುಂದೆ ಖಾತೆ ವರ್ಗಾಯಿಸಲು ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ಪಿಎಫ್‌  ಹಿಂಪಡೆಯುವ ಹಾಗೂ 58 ವರ್ಷ ತುಂಬುತ್ತಲೇ ನಿವೃತ್ತಿ ವೇತನ ನಿಗದಿಪಡಿಸುವ ಸಂದರ್ಭದಲ್ಲಿ ಸದಸ್ಯರಿಗೆ ಕಾಗದರಹಿತ ಸೇವೆ ಒದಗಿಸುವ ಬಗ್ಗೆಯೂ  ಭವಿಷ್ಯನಿಧಿ ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂದು ಅವರು ವಿವರಿಸಿದರು.

ಮಾಹಿತಿ ಪ್ರಕಾರ, ದೇಶದಲ್ಲಿ 4.3 ಲಕ್ಷದಷ್ಟು ಸಂಸ್ಥೆಗಳಲ್ಲಿ ದುಡಿಯುತ್ತಿರುವ 4.18 ಕೋಟಿ ಸದಸ್ಯರು ಭವಿಷ್ಯನಿಧಿ ಪಾವತಿಸುತ್ತಿದ್ದಾರೆ. ಈ ಪೈಕಿ 2.04 ಕೋಟಿ ಸದಸ್ಯರ ಬ್ಯಾಂಕ್‌ ಖಾತೆಗಳ ವಿವರಗಳನ್ನು ಭವಿಷ್ಯನಿಧಿ ಸಂಸ್ಥೆ ಕಲೆಹಾಕಿದೆ. 92.24 ಲಕ್ಷ ನೌಕರರ ಪ್ಯಾನ್‌ ಸಂಖ್ಯೆಗಳನ್ನೂ 35.4 ಲಕ್ಷ ನೌಕರರ ಆಧಾರ್‌ ಸಂಖ್ಯೆಗಳನ್ನೂ ಕಲೆಹಾಕಲಾಗಿದೆ.

ಅಂತರ್ಜಾಲ ತಾಣ ಅನುಷ್ಠಾನಕ್ಕೆ ತರುವ ಸಲುವಾಗಿ ತಮ್ಮ ಉದ್ಯೋಗಿಗಳ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಬ್ಯಾಂಕ್‌ ಶಾಖೆಯ ಐಎಫ್‌ಎಸ್‌ಸಿ ಕೋಡ್‌ ಸಹಿತ ಕಡ್ಡಾಯವಾಗಿ ಒದಗಿಸುವಂತೆ ಉದ್ಯೋಗದಾತರಿಗೆ ಭವಿಷ್ಯನಿಧಿ ಸಂಸ್ಥೆ ಈಗಾಗಲೇ ಸೂಚನೆ ನೀಡಿದೆ. ಮಾತ್ರವಲ್ಲದೆ, ಹಾಲಿ ಸದಸ್ಯರ ಅನುಕೂಲಕ್ಕಾಗಿ ಕೋರ್‌ ಬ್ಯಾಂಕಿಂಗ್‌ ಮಾಹಿತಿ, ಖಾತೆಯಿರುವ ಬ್ಯಾಂಕ್‌ ಶಾಖೆಯ ಐಎಫ್‌ಎಸ್‌ಸಿ ಕೋಡನ್ನೂ ಇದೇ ತಿಂಗಳ 15ರೊಳಗೆ ಒದಗಿಸುವಂತೆಯೂ ಉದ್ಯೋಗದಾತರಿಗೆ ಸಂಸ್ಥೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT